ಭಾನುವಾರ, ಮೇ 22, 2022
21 °C

ಸಂಗೀತಗಾರ ಇಡೀ ವಿಶ್ವದ ಆಸ್ತಿ-ಗುಹಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಂಗೀತಗಾರರಿಗೆ ಯಾವುದೇ ಭಾಷೆ, ನೆಲ, ಗಡಿಯ ಚೌಕಟ್ಟು ಇರುವುದಿಲ್ಲ. ಅವರು ಇಡೀ ವಿಶ್ವ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ’ ಎಂದು ಇತಿಹಾಸಕಾರ ಡಾ. ರಾಮಚಂದ್ರ ಗುಹಾ ಅಭಿಪ್ರಾಯಪಟ್ಟರು.ವಸಂತ ಪ್ರಕಾಶನವು ನಗರದ ಕೆ.ಆರ್. ರಸ್ತೆಯ ಗಾಯನ ಸಮಾಜದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಥೆಗಾರ ಎಸ್. ದಿವಾಕರ್ ಅವರ ‘ಪಂಡಿತ್ ಭೀಮಸೇನ ಜೋಶಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.‘ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಭಾಷೆ, ಪ್ರಾದೇಶಿಕ ನೆಲೆ, ನಾಡು, ದೇಶಕ್ಕೆ ಸೀಮಿತಗೊಳಿಸುವುದು ನಡೆದೇ ಇದೆ. ಜಗತ್ತಿನ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದ ಎಡ್ಮಂಡ್ ಹಿಲರಿ ಸಹ ತಮ್ಮವನೆಂದು ಚೀನಾ, ಟಿಬೆಟ್, ನೇಪಾಳ ಹಾಗೂ ಭಾರತೀಯರು ಹೇಳಿಕೊಂಡಿದ್ದನ್ನು ನಾವು ಕಾಣಬಹುದು’ ಎಂದರು.‘ಹಾಗೆಯೇ ಪಂಡಿತ್ ಭೀಮಸೇನ ಜೋಶಿ ಅವರು ಕರ್ನಾಟಕದವರೋ ಅಥವಾ ಮಹಾರಾಷ್ಟ್ರಕ್ಕೆ ಸೇರಿದವರೋ ಎಂಬ  ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಸಂಗೀತಗಾರರು ಎಂದಿಗೂ ವಿಶ್ವ ಸಮುದಾಯಕ್ಕೆ ಸೇರಿದವರು’ ಎಂದು ಹೇಳಿದರು.ಹಿಂದುಸ್ತಾನಿ ಗಾಯಕ ಪಂಡಿತ್ ಪರಮೇಶ್ವರ ಹೆಗಡೆ ಮಾತನಾಡಿ, ‘ಪಂಡಿತ್ ಭೀಮಸೇನ ಜೋಶಿ ಅವರು ಅಪ್ರತಿಮ ಸಾಧಕರಾಗಿದ್ದು, ಅವರ ಸಂಗೀತವನ್ನು ಕೇಳಿ ಬೆಳೆದವನು ನಾನು. ಅವರು ಧ್ವನಿ ಸಂಸ್ಕಾರ ಪಡೆದುಕೊಳ್ಳಲು ಸಾಕಷ್ಟು ಶ್ರಮ ವಹಿಸಿದ್ದರು. ದಿನಕ್ಕೆ 10ರಿಂದ 12 ಗಂಟೆ ಕಾಲ ತಾಲೀಮು ನಡೆಸುತ್ತಿದ್ದರು. ಒಂದು ಹಂತ ದಾಟಿದ ಬಳಿಕ ಅವರು ಮನಸ್ಸಿನಲ್ಲಿಯೇ ತಾಲೀಮು ಮುಂದುವರೆಸಿದರು. ಅವರು ಅಂತರ್ಮುಖಿಯಾಗಿದ್ದು ಸಹ ಸಾಧನೆಗೆ ನೆರವಾಯಿತು’ ಎಂದು ಹೇಳಿದರು.‘ಯಾವುದೇ ಸಂಗೀತಗಾರರಿಗೆ ಮನಸ್ಸಿನಲ್ಲಿ ಮನನ ಮಾಡಿಕೊಳ್ಳುವ ಕಲೆ ಬಹಳ ಮುಖ್ಯವಾದುದು. ಒಂದು ರಾಗದ ಬಗ್ಗೆ ಯೋಚಿಸುತ್ತಾ ವೈವಿಧ್ಯವಾಗಿ ನಿರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರು. ತಾವೊಬ್ಬ ಅಪ್ರತಿಮ ಕಲಾವಿದರಾಗಿದ್ದುಕೊಂಡು ಇತರೆ ಕಲಾವಿದರ ಕುಟುಂಬದವರಿಗೂ ನೆರವು ನೀಡುವ ಸೇವಾ ಮನೋಭಾವ ಅವರಿಗಿತ್ತು’ ಎಂದರು.‘ನನ್ನ ಗುರುಗಳಾದ ಬಸವರಾಜ ರಾಜ ಗುರು ಅವರ ಕುಟುಂಬದವರಿಗೆ ನೆರವು ನೀಡುವ ಸಲುವಾಗಿ ಧಾರವಾಡದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸಂಗೀತ ಕ್ಷೇತ್ರದಲ್ಲಿ ಉತ್ತುಂಗ ಶಿಖರಕ್ಕೆ ಏರಿದರೂ ಮಾನವೀಯತೆ ಮೆರೆದ ಮಹಾನ್ ಚೇತನ ಅವರು’ ಎಂದು ಬಣ್ಣಿಸಿದರು.ಇದೇ ಸಂದರ್ಭದಲ್ಲಿ ಪಂಡಿತ್ ಭೀಮಸೇನ ಜೋಶಿ ಅವರ ಸಂಗೀತ ಕಾರ್ಯಕ್ರಮಗಳ ವಿಡಿಯೊ ಚಿತ್ರೀಕರಣದ ಆಡಿಯೊ-ವಿಡಿಯೊ ಪ್ರದರ್ಶನ ಗಮನ ಸೆಳೆಯಿತು. ‘ಪ್ರಜಾವಾಣಿ’ ಸಂಪಾದಕ ಕೆ.ಎನ್. ಶಾಂತಕುಮಾರ್, ಕಥೆಗಾರ ಎಸ್. ದಿವಾಕರ್ ಉಪಸ್ಥಿತರಿದ್ದರು. ಕೃತಿಯ ಬೆಲೆ- ರೂ 30.ಜೋಶಿ ಹಾಡಿದ್ದು...

1995ರ ಸಂದರ್ಭ. ಅಮೆರಿದ ಬರ್ಕ್ಲಿಯಲ್ಲಿನ ಕ್ಯಾಲಿಫೋರ್ನಿಯಾ ವಿ.ವಿಯ ಗ್ರಂಥಾಲಯದಲ್ಲಿದ್ದೆ. ಗ್ರಂಥಾಲಯದ ಬಳಿ ನಿಂತು ಅಲ್ಲಿನ ರಸ್ತೆಯೊಂದರ ಸೊಬಗನ್ನು ಸವಿಯುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಸುಶ್ರಾವ್ಯ ಸಂಗೀತವೊಂದು ಕೇಳಿಬಂತು.ಕುತೂಹಲದಿಂದ ಸ್ವರ ತೇಲಿಬಂದ ಸ್ಥಳ ಅರಸಿ ಹೊರಟೆ. ಅಲ್ಲಿನ ಟ್ರಕ್‌ವೊಂದರಿಂದ ಈ ಅದ್ಭುತ ಸಂಗೀತ ಕೇಳಿಬರುತ್ತಿತ್ತು. ಹತ್ತಿರ ಹೋಗಿ ನಿಂತೆ. ಆಗ ಟ್ರಕ್‌ನ ಕೆಂಪು ಮೀಸೆಯ ಚಾಲಕ ಇದು ‘ಭೀಮಸೇನ ಜೋಶಿ ಹಾಡಿದ್ದು...’ ಎನ್ನುತ್ತಾ ವಾಹನದಲ್ಲಿದ್ದ ಟೇಪ್‌ರೆಕಾರ್ಡರ್ ತೋರಿದ. ಇದು ಜೋಶಿ ಅವರ ಹಿರಿಮೆ. ಅಂದಿನಿಂದ ಅವರ ಅಭಿಮಾನಿಯಾದೆ.-ಪಂಡಿತ್ ಭೀಮಸೇನ ಜೋಶಿ ಅವರ ಕುರಿತು ರಾಮಚಂದ್ರ ಗುಹಾ ಹೇಳಿದ ಮಾತಿದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.