ಮಂಗಳವಾರ, ಮೇ 11, 2021
24 °C
ಗಂಧರ್ವ ಮಹಾವಿದ್ಯಾಲಯದಿಂದ ಪದವಿ ಪ್ರದಾನ

`ಸಂಗೀತದಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ಇತ್ತೀಚಿನ ದಿನಗಳಲ್ಲಿ ಯುವಕರು ಸಂಗೀತ ಕ್ಷೇತ್ರದತ್ತ ಹೆಚ್ಚಿನ ಒಲವು ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ' ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಮೌಲ್ಯಮಾಪನ) ಕುಲಸಚಿವ ಜನಾರ್ದನ ನಾಯ್ಕ ಹೇಳಿದರು.ಇಲ್ಲಿನ ಸಂಗೀತ ಕಲಾ ಮಂಚ್‌ನ ಆಶ್ರಯದಲ್ಲಿ ನಗರದ ಹಿಂದವಾಡಿಯ ಮಹಾವೀರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳದ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ಸಂಗೀತ ಕಲಿಯುವುದರಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿಯಾಗಿ ಯುವಕರು ಶೈಕ್ಷಣಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗುತ್ತದೆ. ಸಂಗೀತ ಹಾಗೂ ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಗೀತವು ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ. ಆದ್ದರಿಂದ ಯುವಕರು ಹಾಗೂ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸಂಗೀತವನ್ನು ಕಲಿಯುವ ಮೂಲಕ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕು' ಎಂದು ಸಲಹೆ ನೀಡಿದರು.`ಸಂಗೀತಕ್ಕೆ ಗಡಿ, ಎಲ್ಲೆ, ಮಿತಿ ಎಂಬುದು ಇಲ್ಲ. ಸಂಗೀತ ಯಾವುದೇ ಭಾಷೆಗೆ ಸೀಮಿತವಾಗಿಲ್ಲ. ಇದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಸಂಗೀತದಿಂದ ಪ್ರತಿಯೊಬ್ಬರಿಗೆ ನೆಮ್ಮದಿ ಹಾಗೂ ಆಹ್ಲಾದಕರ ಅನುಭವಗಳು ದೊರೆಯುತ್ತವೆ. ಸಂಗೀತವು ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರು ಇಂದಿನ ಒತ್ತಡದ ಜೀವನದಲ್ಲಿಯೂ ಕೆಲ ಸಮಯವನ್ನು ಸಂಗೀತಕ್ಕಾಗಿ ಮೀಸಲಿಡಬೇಕು' ಎಂದು ತಿಳಿಸಿದರು.`ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿಯು ಭಾರತ ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಸಂಗೀತ ಶಿಕ್ಷಣವನ್ನು ನೀಡುತ್ತಿದೆ. ಈ ಮಂಡಳಿಯಲ್ಲಿ ಸಂಗೀತವನ್ನು ಕಲಿತ ಹಲವರು ಇಂದು ಪ್ರಸಿದ್ಧ ಸಂಗೀತಗಾರರಾಗಿ ಹೊರಹೊಮ್ಮಿದ್ದಾರೆ. ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಮಂಡಳಿಯ ಕೊಡುಗೆ ಅಪಾರವಾದುದು. ಮುಂಬರುವ ದಿನಗಳಲ್ಲಿ ಮಂಡಳಿಯು ಇನ್ನೂ ಹೆಚ್ಚಿನ ಯಶಸ್ಸು ಗಳಿಸಲಿ' ಎಂದು ಆಶಿಸಿದರು.ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳದ ಕುಲಸಚಿವ ಮಧುಸೂದನ ಆಪ್ಟೆ ಅವರು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 250 ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಪದವಿ ಪ್ರದಾನ ಮಾಡಿದರು.ಬೆಳಗಾವಿಯ ಸಂಗೀತ ಕಲಾ ಮಂಚ್‌ನ ಅಧ್ಯಕ್ಷ ಪ್ರಕಾಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಸಂಗಮಕರ, ಪ್ರಕಾಶ ಕುಲಕರ್ಣಿ, ದಿಗ್ವಿಜಯ ವೈದ್ಯ, ಅರುಣಾ ನಾಯ್ಕ, ಗೋಪಾಲ ಗರಗ, ವಿಜಯ ದೇಶಪಾಂಡೆ, ಪಿ.ಜಿ. ಕುಲಕರ್ಣಿ, ನಂದನ ಹೆರ್ಲೇಕರ, ಸುಧೀರ ಜೋಶಿ, ಯಶವಂತ ಬೊಂದ್ರೆ, ಮೀನಾಕ್ಷಿ ಕುಲಕರ್ಣಿ ಉಪಸ್ಥಿತರಿದ್ದರು.ಕಾರ್ಯಕ್ರಮದ ನಂತರ ರ‌್ಯಾಂಕ್ ಗಳಿಸಿದ ವಿದ್ಯಾರ್ಥಿಗಳಾದ ಅಂಜಲಿ ದಾಣಿ (ಗಾಯನ), ಸಚಿನ್ ಕಾಸೋಟೆ (ತಬಲಾ), ಸ್ವೀಕಾರ ಕಟ್ಟಿ (ಸಿತಾರ), ಆಸಾವರಿ ಪಾಟಣಕರ (ಕಥಕ್ ನೃತ್ಯ), ಸಾರಂಗ ಭಾಂಡಾರೆ (ತಬಲಾ) ಹಾಗೂ ಸುಧೀರ ಪೋಟೆ (ಗಾಯನ) ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.