ಗುರುವಾರ , ಮಾರ್ಚ್ 4, 2021
30 °C

ಸಂಗೀತ ಹೊರತಾಗಿ ಜೀವನ ಅಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗೀತ ಹೊರತಾಗಿ ಜೀವನ ಅಪೂರ್ಣ

ಬೆಂಗಳೂರು: `ಸಂಗೀತ ಒಂದು ಬಗೆಯ ಆಧ್ಯಾತ್ಮ ಇದ್ದಂತೆ. ಸಂಗೀತ ಇಲ್ಲದೇ ಹೋದರೆ ಜೀವನ ಅಪೂರ್ಣವಾಗುತ್ತದೆ~ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಬಣ್ಣಿಸಿದರು.ಭಾರತ ರತ್ನ ಪಂಡಿತ್ ಭೀಮಸೇನ್ ಜೋಶಿ ಅವರ ಸ್ಮರಣಾರ್ಥ ದೂರದರ್ಶನ ಕೇಂದ್ರ ಬೆಂಗಳೂರು ಹಾಗೂ ರಾಜಭವನದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಸಂಗೀತ ನೃತ್ಯ ಹಾಗೂ ಗೀತಾಂಜಲಿ~ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಬದುಕಿನಲ್ಲಿ ಎರಡು ಬಗೆಯ ಪ್ರಪಂಚಗಳಿರುತ್ತವೆ. ಒಂದು ಲೌಕಿಕ ಪ್ರಪಂಚ, ಮತ್ತೊಂದು ಅಲೌಕಿಕ ಪ್ರಪಂಚ. ಒಂದು ಹಂತದವರೆಗೆ ಮಾತ್ರ ಲೌಕಿಕ ಪ್ರಪಂಚದಲ್ಲಿ ಬದುಕಬಹುದು. ಆಮೇಲೆ ಆಧ್ಯಾತ್ಮ ಪ್ರಪಂಚವನ್ನು ಆಶ್ರಯಿಸಲೇ ಬೇಕು. ಸಂಗೀತ ಅಂತಹ ಆಧ್ಯಾತ್ಮ ಪ್ರಪಂಚವನ್ನು ಸೃಷ್ಟಿಸಬಲ್ಲದು~ ಎಂದರು.

`ವೇದಗಳಲ್ಲಿಯೇ ಸಂಗೀತದ ಉಲ್ಲೇಖವಿದೆ. ಸಾಮವೇದ ಸಂಗೀತಕ್ಕೆ ಮಹತ್ವ ನೀಡಿತು. ಸಾಮಾನ್ಯರು ಮೇಧಾವಿಗಳು ಎಂಬ ಭೇದವಿಲ್ಲದೇ ಸಂಗೀತ ಎಲ್ಲರನ್ನೂ ತಲುಪುತ್ತದೆ~ ಎಂದು ಹೇಳಿದರು.`ಆಧ್ಯಾತ್ಮ ಗುರುಗಳು ಹಾಗೂ ಸಂಗೀತಗಾರರಿಂದ ನಾನು ಅನೇಕ ವಿಚಾರಗಳನ್ನು ಅರಿತಿದ್ದೇನೆ. ಆದರೆ ಭೀಮಸೇನ್ ಅವರಷ್ಟು ಪ್ರಭಾವ ಬೀರಿದ ಮತ್ತೊಬ್ಬ ಸಂಗೀತಗಾರರನ್ನು ಕಂಡಿಲ್ಲ. ಅವರು ಸಂಗೀತದ ಮೂಲಕ ಆಧ್ಯಾತ್ಮವನ್ನು ಕಂಡುಕೊಂಡರು. ಎಲ್ಲ ಪದವಿಗಳನ್ನು ಮೀರಿದ ಪರಮಪದವಿಯನ್ನು ಅವರು ಸಂಗೀತದ ಮೂಲಕ ಪಡೆದರು~ ಎಂದು ವೆುಚ್ಚುಗೆ ವ್ಯಕ್ತಪಡಿಸಿದರು.`ಸಂಗೀತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕದ ದಿಗ್ಗಜರು ಮೂಡಿ ಬಂದಿದ್ದಾರೆ. ರಾಜ್ಯದಲ್ಲಿ ಒಂದು ವಿಶಿಷ್ಟ ಸಮಾಜ ನಿರ್ಮಾಣವಾಗಿದ್ದು ಇಲ್ಲಿ ಕಲಿಯಲು ಬೇಕಾದಷ್ಟು ಸಂಗತಿಗಳಿವೆ~ ಎಂದರು.ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ. ಮಹೇಶ್ ಜೋಶಿ ಮಾತನಾಡುತ್ತಾ `ಭೀಮಸೇನರು ಅವರು ದೇವ ಸಭೆಯಲ್ಲಿ ಮಾತ್ರ ಕೇಳಬಹುದಾದ ಸಂಗೀತವನ್ನು ಭೂಲೋಕಕ್ಕೆ ಕರೆತಂದರು. ಬಾಯಾರಿದ್ದ ಸಂಗೀತ ರಸಿಕರಿಗೆ ನಾದಗಂಗೆಯನ್ನು ಉಣಬಡಿಸಿದರು~ ಎಂದು ತಿಳಿಸಿದರು.`ಭೀಮಸೇನರು ಅಪ್ಪಟ ಕನ್ನಡಿಗ ಹಾಗೂ ಹೆಮ್ಮೆಯ ಭಾರತೀಯ. ಅವರು ಹಿಂದೂಸ್ತಾನಿ ಸಂಗೀತವನ್ನು ವಿಶ್ವದ ಎಲ್ಲೆಡೆಗೆ ಪಸರಿಸಿದ ಆಧುನಿಕ ತಾನ್‌ಸೇನ್~ ಎಂದು ಅಭಿಪ್ರಾಯಪಟ್ಟರು.ಎಚ್.ಆರ್.ಭಾರದ್ವಾಜ್ ಅವರ ಪತ್ನಿ ಪ್ರಫುಲ್ಲತಾ ಭಾರದ್ವಾಜ್, ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಂಗೀತ ಮತ್ತು ಲಲಿತಕಲೆ ವಿಶ್ವವಿದ್ಯಾಲಯದ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷ ಪಂಡಿತ್ ನರಸಿಂಹಲು ವಡವಾಟಿ, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಜಿ.ವಿ.ಕೃಷ್ಣ ರಾವು ಮತ್ತಿತರರು ಇದ್ದರು.ಸ್ವರ ಸೂರ್ಯನಿಗೆ ಪುತ್ರನ `ಗೀತಾಂಜಲಿ~

ಭೀಮಸೇನರೇ ಮೈವೆತ್ತಂತೆ ಅಲ್ಲಿ ಹಾಡುತ್ತಿದ್ದವರು ಅವರ ಪುತ್ರ, ಶಿಷ್ಯ ಶ್ರೀನಿವಾಸ ಜೋಶಿ. ತಂದೆ ಹಾಡಿದ್ದ `ತೀರ್ಥ ವಿಠಲ ಕ್ಷೇತ್ರ ವಿಠಲ...~ ಮರಾಠಿಯ ಪ್ರಸಿದ್ಧ ಅಭಂಗ್ ಅನ್ನು ಅವರು ಪ್ರಸ್ತುತ ಪಡಿಸಿದರು. ಹಲವು ನಿಮಿಷಗಳ ಕಾಲ ಅವರು ಪ್ರಸ್ತುತ ಪಡಿಸಿದ ಅಭಂಗ್ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿತು. ಅಭಂಗ್ ಮುಗಿಯುತ್ತಿದ್ದಂತೆ ಸಭಿಕರಿಂದ ಭಾರೀ ಕರತಾಡನ.ಸಂಗೀತಜ್ಞರಾದ ಅನಂತ ತೇರದಾಳ್, ಉಪೇಂದ್ರ ಭಟ್, ಜಯತೀರ್ಥ ಮೇವುಂಡಿ, ನಿಶಾಂತ್ ಅವರು ಸಂಗೀತ ಪ್ರಸ್ತುತಪಡಿಸಿದರು. ಉಡುಪಿಯ ನೃತ್ಯನಿಕೇತನ ಕೊಡವೂರು ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.