ಶುಕ್ರವಾರ, ಏಪ್ರಿಲ್ 16, 2021
23 °C

ಸಂವಿಧಾನದ 371 ಜೆ ಕಲಮ್ ಮತ್ತು ವಿಜಾಪುರ ಜ್ಲ್ಲಿಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗಾ ವಿಭಾಗದ ಆರು ಜಿಲ್ಲೆಗಳ ಹಿಂದುಳಿದಿರುವ ಸಂಗತಿಯನ್ನು ಗಮನಿಸಿ ಕೇಂದ್ರ ಸರ್ಕಾರವು ಸಂವಿಧಾನದ 371 ಕಲಮಿಗೆ ತಿದ್ದುಪಡಿ ತಂದು ಸದರಿ ಪ್ರದೇಶದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ನೀಡುವ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ. ಅನೇಕ ವರ್ಷಗಳಿಂದ ರಾಜ್ಯವು ಇದಕ್ಕಾಗಿ ಹೋರಾಟ ನಡೆಸಿತ್ತು.

 

ಈ ಕ್ರಮದ ಬೇಡಿಕೆಗೆ 2002ರಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ಅಧ್ಯಯನದ ಉನ್ನತಾಧಿಕಾರ ಸಮಿತಿಯು ನೀಡಿದ ಬೃಹತ್ ವರದಿಯು ಸೈದ್ಧಾಂತಿಕ ಆಧಾರವನ್ನು ಒದಗಿಸಿತ್ತು. ಈ ವಿಭಾಗದ ಆರು ಜಿಲ್ಲೆಗಳು ರಾಜ್ಯದ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿರುವುದು ಎಲ್ಲರಿಗೂ ತಿಳಿದಿದೆ.

 

ಈ ಆರು ಜಿಲ್ಲೆಗಳ ಹಿಂದುಳಿದಿರುವಿಕೆಗೆ ಬಹುಮುಖಗಳಿವೆ. ಅವು ಜನಸಂಖ್ಯೆಯ ಬೆಳವಣಿಗೆ, ವರಮಾನ ವರ್ಧನೆ, ಲಿಂಗ ಸಮಾನತೆ, ಮಾನವ ಅಭಿವೃದ್ಧಿ ಸೂಚ್ಯಂಕ, ಆಧುನೀಕರಣ, ಕೈಗಾರಿಕೀಕರಣ - ಹೀಗೆ ಎಲ್ಲ ದೃಷ್ಟಿಯಿಂದ ಹಿಂದುಳಿದಿವೆ. ಊಳಿಗಮಾನ್ಯ ವ್ಯವಸ್ಥೆಯು ಇಲ್ಲಿ ಇನ್ನೂ ಜೀವಂತವಿರುವುದು ಅವುಗಳ ಹಿಂದುಳಿದಿರುವಿಕೆಗೆ ಮತ್ತೊಂದು ಪುರಾವೆಯಾಗಿದೆ.ಇವೆಲ್ಲವೂ ಸರಿ. ಇಂತಹ ವಿಶೇಷ ಸ್ಥಾನಮಾನವನ್ನು ಬಹಳ ಹಿಂದೆಯೇ ಮಹಾರಾಷ್ಟ್ರಕ್ಕೆ ಮತ್ತು ಆಂಧ್ರಪ್ರದೇಶಕ್ಕೆ ನೀಡಿದ್ದ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಇದನ್ನು ವಿಸ್ತರಿಸಲು ತೀವ್ರ ತಡಮಾಡಿದ್ದು ಅನ್ಯಾಯ.ಈಗ ವಿಶೇಷ ಸ್ಥಾನಮಾನ ದೊರೆತಿದೆ. ಈಗ ನಮ್ಮ ಮುಂದಿರುವ ಸಮಸ್ಯೆಯೆಂದರೆ ಈ ವಿಶೇಷ ಕ್ರಮದಡಿಯಲ್ಲಿ ದೊರಕುವ ಸವಲತ್ತುಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದು ಹೇಗೆ ಎಂಬುದಾಗಿದೆ. ಇದಕ್ಕಿಂತ ಇಲ್ಲಿ ನಾನು ಎತ್ತುತ್ತಿರುವ ಪ್ರಶ್ನೆಯು ಭಿನ್ನವಾಗಿದೆ. ಇಲ್ಲಿರುವ ಪ್ರಶ್ನೆ ರಾಜ್ಯದಲ್ಲಿ 371ರ ವ್ಯಾಪ್ತಿಗೆ ಸಂಬಂಧಿಸಿದೆ.ವಿಜಾಪುರ ಜಿಲ್ಲೆಯ ಸ್ಥಿತಿಗತಿ:
ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯಲ್ಲಿ ರಾಜ್ಯದ 175 ತಾಲ್ಲೂಕುಗಳ ಅಭಿವೃದ್ಧಿಯನ್ನು ಮಾಪನ ಮಾಡಿದೆ. ಅದಕ್ಕಾಗಿ ಅದು `ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ~ ಎಂಬ ವಿನೂತನ ಮಾಪನವನ್ನು ರೂಪಿಸಿತ್ತು.ಆ ಸಮಿತಿಯು ರಾಜ್ಯದ 114 ತಾಲ್ಲೂಕುಗಳನ್ನು ಹಿಂದುಳಿದಿವೆಯೆಂದು ನಿರ್ಣಯಿಸಿತ್ತು. ಅದು 114 ತಾಲ್ಲೂಕುಗಳನ್ನು ದುಃಸ್ಥಿತಿಯ ತೀವ್ರತೆಗೆ ಅನುಗುಣವಾಗಿ ಹಿಂದುಳಿದ (35), ಅತಿ ಹಿಂದುಳಿದ(40) ಮತ್ತು ಅತ್ಯಂತ ಹಿಂದುಳಿದ(39) ಎಂದು ವರ್ಗೀಕರಿಸಿತ್ತು. ಇದರ ಜೊತೆಗೆ ಅದು ಜಿಲ್ಲೆಗಳ ಸಂಚಯಿತ ದುಃಸ್ಥಿತಿ ಸೂಚ್ಯಂಕವನ್ನು ರೂಪಿಸಿತ್ತು. ಸಂಚಯಿತ ದುಃಸ್ಥಿತಿ ಸೂಚ್ಯಂಕದ ಪ್ರಕಾರ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳೆಂದರೆ ಗುಲ್ಬರ್ಗ(3.38), ತುಮಕೂರು(1.77), ರಾಯಚೂರು(1.50), ವಿಜಾಪುರ(1.40), ಬೀದರ್(1.19) ಮತ್ತು ಬಳ್ಳಾರಿ(1.00).ನಮ್ಮ ರಾಜ್ಯದಲ್ಲಿ ಒಂದು ಜಿಲ್ಲೆಯ ಎಲ್ಲ ತಾಲ್ಲೂಕುಗಳು ಹಿಂದುಳಿದಿರುವ ಸ್ಥಿತಿಯಲ್ಲಿ ಐದು ಜಿಲ್ಲೆಗಳಿವೆ. ಅವು ಯಾವುವೆಂದರೆ ಗುಲ್ಬರ್ಗ(07), ಯಾದಗಿರಿ(03), ರಾಯಚೂರು(05), ಕೊಪ್ಪಳ(04) ಮತ್ತು ವಿಜಾಪುರ(05). ಸಂವಿಧಾನದ ವಿಶೇಷ 371 ಕಲಮಿನ ವ್ಯಾಪ್ತಿಗೆ ಗುಲ್ಬರ್ಗ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ(ಬೀದರ್ ಮತ್ತು ಬಳ್ಳಾರಿ) ಜಿಲ್ಲೆಗಳನ್ನು  ಸೇರಿಸಲಾಗಿದೆ. ಆದರೆ ವಿಜಾಪುರ ಜಿಲ್ಲೆಯು ಅದಕ್ಕೆ ಸೇರಿಲ್ಲ.ಯಾವುದೇ ಅಭಿವೃದ್ಧಿ ಸೂಚ್ಯಂಕವನ್ನು ತೆಗೆದುಕೊಂಡರೂ ವಿಜಾಪುರ ಜಿಲ್ಲೆ ಮತ್ತು ಅದರ ಐದು ತಾಲ್ಲೂಕುಗಳು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿರುವುದು ಸ್ಪಷ್ಟವಿದೆ. ಆದರೆ 371ರ ವ್ಯಾಪ್ತಿಯಲ್ಲಿ ವಿಜಾಪುರ ಜಿಲ್ಲೆ ಸೇರಿಲ್ಲ.

 

ಸಂವಿಧಾನದ 371 ವಿಶೇಷ ಕ್ರಮದ ವ್ಯಾಪ್ತಿಗೆ ಕೊಪ್ಪಳ, ಬಳ್ಳಾರಿ ಮತ್ತು ಬೀದರ್ ಸೇರುವುದಾದರೆ ಅವುಗಳಿಗಿಂತ ಅಭಿವೃದ್ಧಿಯಲ್ಲಿ ಕೆಳಮಟ್ಟದಲ್ಲಿರುವ ವಿಜಾಪುರ ಜಿಲ್ಲೆಯು ಅದರ ವ್ಯಾಪ್ತಿಗೆ ಯಾಕೆ ಸೇರಬಾರದು?ಆಂಧ್ರಪ್ರದೇಶದಲ್ಲಿ `371ಡಿ~ ನ ವ್ಯಾಪ್ತಿ: ಆಂಧ್ರಪ್ರದೇಶದಲ್ಲಿ `371ಡಿ~ ಕಲಮನ್ನು ಜಾರಿಗೊಳಿಸಿದಾಗ ಅದರ ವ್ಯಾಪ್ತಿಯಲ್ಲಿ ಕೇವಲ ತೆಲಂಗಾಣ ಪ್ರದೇಶವನ್ನು ಸೇರಿಸಲಾಗಿತ್ತು. ಆದರೆ ಮುಂದೆ ಉಳಿದ ಪ್ರದೇಶದ ಜನರು ಒತ್ತಾಯ ಮಾಡತೊಡಗಿದಾಗ `371ಡಿ~ ನ ವ್ಯಾಪ್ತಿಯನ್ನು ಇಡೀ ಆಂಧ್ರಪ್ರದೇಶಕ್ಕೆ ವಿಸ್ತರಿಸಲಾಯಿತು. ಈಗ ನಮ್ಮ ರಾಜ್ಯದಲ್ಲಿನ 371ರ ವ್ಯಾಪ್ತಿಯು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ.

 

ಚಾರಿತ್ರಿಕವಾಗಿ ಬಳ್ಳಾರಿಯು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರುವುದಿಲ್ಲ. ಅನೇಕ ಚಾರಿತ್ರಿಕ ಮತ್ತು ಆಡಳಿತ ಕಾರಣಗಳಿಗಾಗಿ ಅದು1956ರ ನಂತರ ಗುಲ್ಬರ್ಗ ವಿಭಾಗದಲ್ಲಿದೆ ಮತ್ತು ಅದರ ಕಾರಣವಾಗಿ ಅದನ್ನು 371ರ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ.ಸಂವಿಧಾನದ 371ರ ವಿಶೇಷ ಕಲಮಿಗೆ ವರ್ತಮಾನದ ಹಿಂದುಳಿದಿರುವಿಕೆಯು ಆಧಾರವಾಗಿದೆ ವಿನಾ ಚಾರಿತ್ರಿಕ ಸಂಗತಿಯಲ್ಲ. ಈ ದೃಷ್ಟಿಯಿಂದ 371 ಜೆ ಕಲಮಿಗೆ ಹಿಂದುಳಿದಿರುವಿಕೆಯು - ಅತ್ಯಂತ ಹಿಂದುಳಿದಿರುವಿಕೆಯು ಆಧಾರವಾಗುವುದಾದರೆ ಅದರ ವ್ಯಾಪ್ತಿಗೆ ವಿಜಾಪುರ ಜಿಲ್ಲೆಯನ್ನು ಸೇರಿಸಬೇಕು.

 

ಆ ಜಿಲ್ಲೆಯ ರಾಜಕೀಯ ಕಾರ್ಯಕರ್ತರು ಈ ಬಗ್ಗೆ ತಡವಾದರೂ ಈಗ ಎಚ್ಚರಗೊಂಡಿರುವುದು ಸಮಾಧಾನದ ಸಂಗತಿಯಾಗಿದೆ.ವಿಜಾಪುರ ಜಿಲ್ಲೆಯ ತಲಾ ವರಮಾನ (ಚಾಲ್ತಿ ಬೆಲೆಗಳಲ್ಲಿ) 1999-2000ರಲ್ಲಿ ರೂ 14885ರಷ್ಟಿತ್ತು. ಅದು 2008-2009ರಲ್ಲಿ ರೂ 29307ರಷ್ಟಾಗಿದೆ. ರಾಜ್ಯ ಸರಾಸರಿ ತಲಾ ವರಮಾನವು ಇದೇ ಅವಧಿಯಲ್ಲಿ ರೂ18561ರಿಂದ ರೂ 46285ರಷ್ಟಕ್ಕೆ ಏರಿಕೆಯಾಗಿದೆ.

 

ಕಳೆದ ಹತ್ತು ವರ್ಷಗಳಲ್ಲಿ ವಿಜಾಪುರ ಜಿಲ್ಲಾ ತಲಾ ವರಮಾನದ ಬೆಳವಣಿಗೆ ಪ್ರಮಾಣ ವಾರ್ಷಿಕ ಶೇ 9.69ರಷ್ಟಾದರೆ ಬಳ್ಳಾರಿ, ಬೀದರ್, ಗುಲ್ಬರ್ಗ ಜಿಲ್ಲೆಗಳ ಹಾಗೂ ರಾಜ್ಯಮಟ್ಟದ ತಲಾ ವರಮಾನದ ಬೆಳವಣಿಗೆ ಪ್ರಮಾಣ ವಾರ್ಷಿಕ ಕ್ರಮವಾಗಿ ಶೇ19.27, ಶೇ11.54. ಶೇ10.06 ಮತ್ತು ಶೇ14.93ರಷ್ಟಿದೆ.ಇದೇ ರೀತಿಯಲ್ಲಿ ವಿಜಾಪುರ ಜಿಲ್ಲೆಯ ಸಾಕ್ಷರತೆಯ ಪ್ರಮಾಣ 1991ರಿಂದ 2011ರ ನಡುವೆ ಶೇ 10.74 ಅಂಶಗಳಷ್ಟು ಏರಿಕೆಯಾಗಿದ್ದರೆ ರಾಜ್ಯಮಟ್ಟದಲ್ಲಿ ಅದು ಶೇ 19.56ರಷ್ಟು ಏರಿಕೆಯಾಗಿದೆ.ಗುಲ್ಬರ್ಗ, ಬೀದರ್, ಬಳ್ಳಾರಿ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಕ್ಷರತೆಯು 1991 ರಿಂದ 2011ರ ನಡುವೆ ಶೇ20ಕ್ಕಿಂತ ಅಧಿಕ ಅಂಶಗಳಷ್ಟು ಏರಿಕೆಯಾಗಿದೆ. ಹೀಗೆ ಯಾವುದೇ ಸೂಚಿಯನ್ನು ತೆಗೆದುಕೊಂಡರೂ ವಿಜಾಪುರ ಜಿಲ್ಲೆಯು ಗುಲ್ಬರ್ಗ ವಿಭಾಗದ ಜಿಲ್ಲೆಗಳಿಗಿಂತ ಹಿಂದುಳಿದಿರುವುದು ನಿಚ್ಚಳವಾಗಿ ಕಂಡು ಬರುತ್ತದೆ.ಚಾರಿತ್ರಿಕವಾಗಿ, ಭೂಗೋಳಿಕವಾಗಿ, ಹವಾಮಾನದ ದೃಷ್ಟಿಯಿಂದ ವಿಜಾಪುರ ಜಿಲ್ಲೆಯು ಗುಲ್ಬರ್ಗ ವಿಭಾಗದ ಜಿಲ್ಲೆಗಳಿಗೆ ಹೆಚ್ಚು ಹೊಂದಾಣಿಕೆಯಾಗುತ್ತದೆ. ಗುಲ್ಬರ್ಗ ವಿಭಾಗದಂತೆ ವಿಜಾಪುರ ಜಿಲ್ಲೆಯು ಭಾರತದ `ಸೆಮಿ ಅರಿಡ್~ ವಲಯ ದ ವ್ಯಾಪ್ತಿಯಲ್ಲಿ ಬರುತ್ತದೆ. ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಇವೆರಡೂ ಪ್ರದೇಶಗಳ ನಡುವೆ ಕೊಡುಕೊಳೆಯ ಸಂಬಂಧವಿದೆ.ಲಿಂಗ ಸಂಬಂಧಗಳ ದೃಷ್ಟಿಯಿಂದ ಇವೆರಡೂ ಪ್ರದೇಶಗಳು ತೀವ್ರ ಲಿಂಗ ಅಸಮಾನತೆಯಿಂದ ನರಳುತ್ತಿವೆ. ರಾಜ್ಯದಲ್ಲಿ ಲಿಂಗ ಅನುಪಾತ ಅತ್ಯಂತ ಕಡಿಮೆ ಇರುವ ಮೂರು ಜಿಲ್ಲೆಗಳ ಪೈಕಿ ವಿಜಾಪುರ (954) ಜಿಲ್ಲೆಯೂ ಒಂದು.ರಾಜ್ಯದ 30 ಜಿಲ್ಲೆಗಳ ಪೈಕಿ 26 ಜಿಲ್ಲೆಗಳಲ್ಲಿ 2001 ರಿಂದ 2011ರ ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಕಡಿಮೆಯಾಗುತ್ತಿದ್ದರೆ ವಿಜಾಪುರ, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಅದು ಏರಿಕೆಯಾಗುತ್ತಿದೆ. ಈ ಕಾರಣದಿಂದಾಗಿ ವಿಜಾಪುರ ಜಿಲ್ಲೆಯನ್ನು ಜನಸಂಖ್ಯಾಶಾಸ್ತ್ರೀಯ ದೃಷ್ಟಿಯಿಂದ ಹಿಂದುಳಿದಿದೆ ಎಂದು ಹೇಳಲಾಗಿದೆ.ಸಂವಿಧಾನದ 371 ಜೆ ಕಲಮಿನಡಿಯಲ್ಲಿ ರಾಜ್ಯದ ಆರು ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ಲಭ್ಯವಾಗುತ್ತಿದೆ. ಇದು ಪ್ರಾದೇಶಿಕ ಅಸಮಾನತೆಯನ್ನು ನಿವಾರಣೆ ಮಾಡುವ ದೃಷ್ಟಿಯಿಂದ ಮತ್ತು `ಜನರನ್ನು ಒಳಗೊಳ್ಳುವ ಅಭಿವೃದ್ಧಿ~ಯನ್ನು ಸಾಧಿಸಿಕೊಳ್ಳುವ ದಿಶೆಯಲ್ಲಿ ಅತ್ಯಂತ ಸೂಕ್ತವಾದ ಕ್ರಮವಾಗಿದೆ. ಆದರೆ ಕೇಂದ್ರ ಸರ್ಕಾರದ ಈ ಬಗೆಯ ನೆರವನ್ನು ಪಡೆಯುವಾಗ ನಾವು 371ರ ವ್ಯಾಪ್ತಿಯ ಬಗ್ಗೆ ವಿವರವಾದ ಸಂವಾದ-ಚರ್ಚೆಯನ್ನು ರಾಜ್ಯದಲ್ಲಿ ನಡೆಸಬೇಕಾಗಿತ್ತು.ಕೇಂದ್ರದ ನೆರವು ಆರಕ್ಕೆ ಪ್ರತಿಯಾಗಿ ಏಳು ಜಿಲ್ಲೆಗಳಿಗೆ ದೊರೆತಿದ್ದರೆ ಅದರಿಂದ ನಾವು ಕಳೆದುಕೊಳ್ಳುವುದೇನಿರಲಿಲ್ಲ. ಅದರಿಂದ ಹೆಚ್ಚು ಪಡೆಯಬಹುದಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಸರ್ಕಾರ ಮತ್ತು ವಿಜಾಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದಲ್ಲಿರುವ ನಮ್ಮ ಮಂತ್ರಿಗಳು ಇದಕ್ಕಾಗಿ ಹೆಚ್ಚಿನ ಪ್ರಯತ್ನ ನಡೆಸಬೇಕು.ಸಂವಿಧಾನದ 371 ಜೆ ತಿದ್ದುಪಡಿ ಮಸೂದೆಯು ಅಂತಿಮವಾಗಿ ಸಂಸತ್ತಿನ ಮುಂದೆ ಬರುವಷ್ಟರಲ್ಲಿ ವಿಜಾಪುರ ಜಿಲ್ಲೆಯನ್ನು ಅದರ ವ್ಯಾಪ್ತಿಯಲ್ಲಿ ಸೇರಿಸುವ ಕ್ರಮ ತೆಗೆದುಕೊಳ್ಳಬೇಕು. ವಿಜಾಪುರ ಜಿಲ್ಲೆಯನ್ನು 371ರ ವ್ಯಾಪ್ತಿಗೆ ಸೇರಿಸುವುದ ಬಗ್ಗೆ ಗುಲ್ಬರ್ಗ ವಿಭಾಗದ ಜನರು ವಿರೋಧಿಸುವುದಕ್ಕೆ ಕಾರಣವಿಲ್ಲ.

 

ಈ ಬಗೆಯ ವಿಸ್ತರಣೆಯಿಂದ ಗುಲ್ಬರ್ಗ ವಿಭಾಗದ ಜಿಲ್ಲೆಗಳು 371ರಡಿಯಲ್ಲಿ ಪಡೆದುಕೊಳ್ಳುವ ನೆರವಿನಲ್ಲಿ ಕಡಿತ ಉಂಟಾಗುವುದಿಲ್ಲ.  ಕೇಂದ್ರದಿಂದ ಹೆಚ್ಚು ಹೆಚ್ಚು ಅನುಕೂಲಗಳನ್ನು ಪಡೆದುಕೊಳ್ಳುವ ದಿಶೆಯಲ್ಲಿ ನಾವು ಸಂಘಟಿತವಾಗಿ ಪ್ರಯತ್ನಿಸಬೇಕು.ನಿಜ, 371ರ ಜಾರಿಗೊಳಿಸುವ ಬಗ್ಗೆ ನಡೆದ ಹೋರಾಟದಲ್ಲಿ ವಿಜಾಪುರದ ಜನತೆ ಮತ್ತು ಜನನಾಯಕರು ಭಾಗವಹಿಸಿಲ್ಲ. ಅದು ತಪ್ಪು. ಆದರೆ ಅದನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಗೆ ಸಂಬಂಧಿಸಿದಂತೆ ಕಿತ್ತಾಡುವುದು ಸಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.