ಶನಿವಾರ, ಮೇ 28, 2022
26 °C

ಸಂಸತ್ ಭವನದಿಂದ ಸಂದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ತ ಭಾರತದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಕ್ತಿಗಳ ಕೇಂದ್ರವಾದ ದೆಹಲಿಯ ಸಂಸತ್ ಭವನದ ಬೇರೆ ಬೇರೆ ಪ್ರಮುಖ ಭಾಗಗಳಲ್ಲಿ ಸುವರ್ಣ ಲೇಪಿತ ಸಿಮೆಂಟ್ ಅಕ್ಷರಗಳ ಶಾಸನಗಳನ್ನು ಬರೆಸಲಾಗಿದ್ದು, ಅವು ಹಿಂದಿನ ಭಾರತೀಯ ಸಂಸ್ಕೃತಿಯು ಭಾರತೀಯರಿಗೆ (ಒಟ್ಟು ಜಗತ್ತಿಗೆ) ನೀಡಿದ, ನೀಡುತ್ತಿರುವ ಉದಾತ್ತ ಸಂದೇಶವೇನು? ಎಂಬುದನ್ನು ಕುರಿತು ರಾಜ್ಯ ಸಭಾ ಸದಸ್ಯರಾದ ನ್ಯಾಯಮೂರ್ತಿ ಡಾ. ಮ. ರಾಮಾ ಜೋಯಿಸ್ ರಚಿಸಿರುವ `Message from Parliament House Bharat’  ಎಂಬ ಅಪೂರ್ವ ಕಿರುಕೃತಿ ಎಲ್ಲರೂ ಗಂಭೀರವಾಗಿ ಗಮನಿಸಬೇಕಾದ್ದು.(ಪ್ರಕಾಶಕರು: ವಿಜ್ಞಾನೇಶ್ವರ ಸಂಶೋಧನಾ ಕೇಂದ್ರ ವರ್ತೂರು, ಕಲಬುರ್ಗಿ) ನಾನೂ ಸೇರಿದಂತೆ ಹಲವರು ಸಂಸತ್ ಭವನವನ್ನು ನೋಡಿದ್ದರೂ, ಬಹುತೇಕರಿಗೆ ಅಂತಹ ಬರಹಗಳು ಅಲ್ಲಿವೆಯೆಂಬುದು ತಿಳಿದೇ ಇಲ್ಲ. ಆ ಉಕ್ತಿಗಳನ್ನು ಇಂಗ್ಲಿಷ್ ಅನುವಾದದ ಸಮೇತ, ವಿವರಣೆ ಸಹಿತ ಉಲ್ಲೇಖಿಸಿ ರಚಿಸಿರುವ ಈ ಕೃತಿಯ ಸ್ಥೂಲಪರಿಚಯವೇ ಈ ಕಿರು ಲೇಖನ. ಇಲ್ಲಿಯ ಬರಹದ ಎಲ್ಲ ಅಭಿಪ್ರಾಯಗಳೂ ನ್ಯಾಯಮೂರ್ತಿ ಡಾ. ಮ. ರಾಮಾ ಜೋಯಿಸ್ ಅವರವು. ನನ್ನ ಮಾತುಗಳು ವಿರಳವಾಗಿದ್ದು ಅವು ಕಂಸದಲ್ಲಿರುತ್ತವೆ. (1) “ಧರ್ಮಚಕ್ರ ಪ್ರವರ್ತನಾಯ” (ಲಲಿತವಿಸ್ತರ - ಅಧ್ಯಾಯ 26) = “ಧರ್ಮಚಕ್ರ ಪ್ರವರ್ತನಕ್ಕೆ ಅಥವಾ ತಿರುಗುವಿಕೆಗಾಗಿ” - ಪ್ರಾಚೀನ ಭಾರತದ ಆಡಳಿತಗಾರರು `ಧರ್ಮ~ಕ್ಕೆ ಬದ್ಧರಾಗಿದ್ದರು. ಧರ್ಮ ಚಕ್ರವು ಬೌದ್ಧ ಪರಿಕಲ್ಪನೆಯಾಗಿದ್ದು, ಅದನ್ನು ಭಾರತವು ತನ್ನ ರಾಷ್ಟ್ರಧ್ವಜದಲ್ಲಿ ರಾಷ್ಟ್ರ ಚಿಹ್ನೆಯಾಗಿ ಬಳಸಿಕೊಂಡಿದೆ. `ಧರ್ಮ~ ಎಂದರೆ ಶುದ್ಧ ರೀತಿಯ ಬದುಕು. `ಮತ~ ಎಂದರೆ ಉಪಾಸನಾ ವಿಧಾನ. ಇರುವ ಮತಗಳು ಹಲವಾರು, ಆದರೆ ಧರ್ಮ ಒಂದೇ ಮತ್ತು ವಿಶ್ವಾನ್ವಯ. (ಜೈನ ಕವಿ ಪಂಪನ ಧರ್ಮದ ಬಗೆಗಿನ ಈ ಅಭಿಪ್ರಾಯವೂ ಅದನ್ನೇ ಸೂಚಿಸುತ್ತದೆ) “ಭವವಾರಾಶಿ ನಿಮಗ್ನರಂ ದಯೆ ದಾನಂ ತಪದಿ ಶೀಲಂ ಎಂಬಿವೆ ಮೆಯ್ಯಾಗಿರೆ ಸಂದ ಧರ್ಮವೆ ವಲಂ ಪೊತ್ತು ಎತ್ತುಗುಂ ಮುಕ್ತಿ ಪರ‌್ಯವಸಾನಂಬರಂ” = ದಯೆ, ದಾನ, ತಪಸ್ಸು, ಶೀಲ ಇವೇ ಧರ್ಮದ ದೇಹ, ಅಂತಹ ಧರ್ಮದಿಂದ ಮನುಷ್ಯನಿಗೆ ಮುಕ್ತಿ ದೊರಕುತ್ತದೆ.(2) ಅಹಿಂಸಾ ಪರಮೋಧರ್ಮಃ - (ಮಹಾಭಾರತ - ವನಪರ್ವ, 207-74) = “ಅಹಿಂಸೆಯೇ ಸರ್ವಶ್ರೇಷ್ಠವಾದ ಧರ್ಮ” - ಹಿಂದೂ ಧರ್ಮದಂತೆಯೇ ಜೈನ, ಬೌದ್ಧ ಧರ್ಮಗಳೂ ಅಹಿಂಸೆಗೆ ಪರಮ ಸ್ಥಾನವನ್ನು ನೀಡಿವೆ. ಆಧುನಿಕ ಕಾಲದಲ್ಲಿ ಗಾಂಧೀಜಿ ಕೂಡ ಅಷ್ಟೇ, ಅಹಿಂಸೆಯೆ ಭಾರತೀಯ ಸಂಸ್ಕೃತಿಯ ಜೀವ ಜೀವಾಳ,  (ಗಮನಿಸಿ, `ದಯವೇ ಧರ್ಮದ ಮೂಲವಯ್ಯಾ - ಬಸವಣ್ಣ  ಇಂತಹ ಘೋಷಣೆ ಭಾರತದಿಂದ ಮಾತ್ರ ಸಾಧ್ಯ. ಅಶೋಕನು ಅಹಿಂಸೆಯನ್ನು ಪ್ರತಿಪಾದಿಸಿದರೂ, ದುಷ್ಟರನ್ನು ಶಿಕ್ಷಿಸಲು ತನ್ನ ಬಳಿ ದೊಡ್ಡ ಶಕ್ತಿಯಿದೆ ಎಂದೇ ಹೇಳಿದ್ದಾನೆ. ಗಮನಿಸಿ A Nation should love peace, but keep its powder dry always’- will durant-story or Civilization.(3)”ಅಯೆಂ ನಿಜಃ ಪರೋ ವೇತಿ/ ಗಣಾನಾ ಲಘು ಚೇತಸಾಮ್/ ಉದಾರಚರಿತಾನಂ ತು ವಸುಧೈವ ಕುಟುಂಬಕಂ~ (ಪಂಚತಂತ್ರ, 5-21) = “ನಾನು, ನನ್ನವರಲ್ಲದವರು ಎಂದು ಮಾನವರನ್ನು ವರ್ಗೀಕರಿಸುವುದು ಲಘು ಮನುಷ್ಯರ ಸ್ವಭಾವ, ಉದಾರ ಸ್ವಭಾವದ ಮನುಷ್ಯರಿಗೆ ಇಡೀ ಲೋಕವೇ ಒಂದು ಕುಟುಂಬ”. ಭಾರತೀಯ ಮನಸ್ಸಿನ ಉದಾತ್ತತೆಯನ್ನು ಇದು ಸಂಕೇತಿಸುತ್ತದೆ. ವಿಶ್ವಸಂಸ್ಥೆಯ ಪರಿಕಲ್ಪನೆ ಇದೇ (ಎಲ್ಲಾ ಮನುಷ್ಯರೂ ಒಂದೇ, ಒಂದೇ ಕುಟುಂಬಕ್ಕೆ ಸೇರಿದವರು ಎಂಬುದು ಭಾರತೀಯ ಸಾಮೂಹಿಕ ಮನಸ್ಸಿನ ಏಕಾಭಿಪ್ರಾಯ. ಗಮನಿಸಿ, ಪಂಪ:-”ಮನುಷ್ಯ ಜಾತಿ ತಾನೊಂದೆ ವಲಂ~.(4) `ಸತ್ಯಂ ವದ ಧರ್ಮಂ ಚರ~ (ತೈತ್ತರೀಯ ಉಪನಿಷತ್) - “ಸತ್ಯವನ್ನು ಹೇಳು, ಧರ್ಮವನ್ನು ಅನುಸರಿಸು” - ಕೃಷ್ಣ ಯಜುರ್ವೇದದ ತೈತ್ತರೀಯ ಉಪನಿಷತ್ತಿನ ಶಿಕ್ಷಾವಲ್ಲೆಯಲ್ಲಿ ಗುರುಕುಲದ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಮನೆಗೆ ವಾಪಸ್ಸಾಗುವಾಗ ನೀಡುತ್ತಿದ್ದ ಘಟಿಕೋತ್ಸವ ಭಾಷಣದ ಒಂದು ಭಾಗ ಇದು. (ಬಾಯಲ್ಲಿ ಆಡುವುದು, ವಾಸ್ತವವಾಗಿ ಬದುಕುವುದು ಇವೆರಡನ್ನೂ ಮೇಲಿನ ಉಕ್ತಿ ಒಳಗೊಂಡಿದೆ. ನಾವು ಆಡುವ ಮಾತು ಸದಾ ಸತ್ಯವಾಗಿರಬೇಕು. ಸತ್ಯವಾಕ್ಯದಂತೆ ನಮ್ಮ ಜೀವನ ನಡೆಯೂ ಧರ್ಮ ಆಗಿರಬೇಕು. ನುಡಿ, ನಡೆ ಒಂದೇ ಆಗಿದ್ದರೆ, ಪರಮಾತ್ಮ ಮೆಚ್ಚುತ್ತಾನೆ ಎಂಬ ಬಸವನ ಮಾತು ಅದನ್ನೇ ಹೇಳುತ್ತದೆ).(5) “ಸ್ವೇ ಸ್ವೇ ಕರ್ಮಣ್ಯಭಿರತಃ/ ಸಂಸಿದ್ಧಿ ಲಭತೇ ನರಃ “- (ಭಗವದ್ಗೀತಾ 18-45) - “ತಾನು ನಿರ್ವಹಿಸುವ ಕರ್ತವ್ಯಗಳಿಗನುಗುಣವಾಗಿ ಪ್ರತಿಯೊಬ್ಬ ವ್ಯಕ್ತಿ ಪ್ರತಿಫಲ, ಕೀರ್ತಿಗಳನ್ನು ಪಡೆಯುತ್ತಾನೆ” - ಭಗವದ್ಗೀತೆಯ ಈ ಸಂದೇಶ ನಿಜವಾಗಿಯೂ ವಿಶ್ವ ಸತ್ಯ, ಶಾಶ್ವತ ಸತ್ಯ. (ಒಬ್ಬ ವ್ಯಕ್ತಿ ಏನನ್ನು ಮಾಡುತ್ತಾನೋ ಅದರ ಫಲಗಳನ್ನು ಈ ಜನ್ಮದಲ್ಲೇ ಪಡೆಯುತ್ತಾನೆ. ಒಳ್ಳೆಯದನ್ನು ಮಾಡಿದ್ದರೆ ಒಳ್ಳೆಯ, ಕೆಟ್ಟದ್ದನ್ನು ಮಾಡಿದ್ದರೆ ಕೆಟ್ಟ ಪ್ರತಿಫಲಗಳು ಲಭಿಸುತ್ತವೆ.)(6)”ನ ಸಾ ಸಭಾ ಯತ್ರ ನ ಸಂತಿ ವೃದ್ಧಾಃ/ ವೃದ್ಧಾ ನ ತೇ ಯೇ ನ ವದಂತಿ ಧರ್ಮಮ್/ ಧರ್ಮಃ ಸ ನೋ ಯತ್ರ ನ ಸತ್ಯಮಸ್ತಿ) ಸತ್ಯಂ ನ ತತ್ ಯತ್ ಛಲಮಭ್ಯುಪೈತಿ” - (ಮಹಾಭಾರತ/ 5-35-53) = `ಹಿರಿಯರು ಇಲ್ಲದ್ದು ಸಭಾ ಅಲ್ಲ. ಧರ್ಮವನ್ನು ನುಡಿಯದವರು ಹಿರಿಯರೇ ಅಲ್ಲ. ಸತ್ಯವಲ್ಲದ್ದು ಧರ್ಮವೇ ಅಲ್ಲ. ಮೋಸವನ್ನೊಳಗೊಂಡಿರುವುದು ಸತ್ಯವೇ ಅಲ್ಲ” (ಸಭೆಯಲ್ಲಿ ಭಾಗಿಗಳಾಗುವ ಯಾರೇ ಆಗಲಿ ಸತ್ಯವಂತರೇ ಆಗಿರಬೇಕು).(7) “ಏಕಂ ಸತ್ ವಿಪ್ರಾ ಬಹುಧಾ ವದಂತಿ” - (ಋಗ್ವೇದ 1-164-46) = “ವ್ಯಾಖ್ಯಾನಕಾರರು ಬೇರೆ ಬೇರೆ ಅರ್ಥಗಳನ್ನು ನೀಡಿದ್ದರೂ ಸತ್ಯ ಒಂದೇ” `ಭಿನ್ನಾಭಿಪ್ರಾಯ~ದ ತತ್ವದ ಮೇಲೆ ಋಗ್ವೇದದ ಈ ಮಂತ್ರ ಬೆಳಕನ್ನು ಚೆಲ್ಲುತ್ತದೆ. ಭಿನ್ನಾಭಿಪ್ರಾಯಗಳಿದ್ದರೂ ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ಒಂದು ಸರ್ವಸಮ್ಮತ ನಿರ್ಣಯಕ್ಕೆ ಬರಬೇಕು. (ಮೇಲಿನ ಮಂತ್ರಕ್ಕೆ ಕೆಲವರು, ಇರುವ ದೈವೀ ಶಕ್ತಿ ಒಂದೇ, ಅದಕ್ಕೆ ಶಿವ, ವಿಷ್ಣು, ಕಾಳಿ, ಸೂರ್ಯ ಇತ್ಯಾದಿ ಹೆಸರುಗಳಿವೆ ಎಂಬ ವ್ಯಾಖ್ಯಾನವನ್ನು ಮಾಡಿದ್ದಾರೆ. ಎಲ್ಲ ದೈವಗಳೂ ಎಲ್ಲ ಮತಗಳೂ ಸಮಾನ ಎಂಬರ್ಥ ಅಲ್ಲಿದೆ).(8) `ಸಭಾ ವಾ ನ ಪ್ರವೇಷ್ಟವ್ಯಾ/ ವಕ್ತವ್ಯಂ ವಾ ಸಮಂಜಸಂ/ ಅಬ್ರುವಾನ್ ವಿಬ್ರುವನ್ ವಾ ಪಿ/ ... ನರೋ ಭವತಿ ಕಿಲ್ಬಿಷೀ~ - (ಮನುಸ್ಮುೃತಿ, 8-13) = “ಸಭೆಯನ್ನು ಪ್ರವೇಶಿಸಿದವನು ಸತ್ಯವನ್ನು ಸಮಂಜಸವಾಗಿ ಹೇಳಲೇಬೇಕು. ಸತ್ಯವನ್ನು ಹೇಳದವನು, ಸುಳ್ಳು ಹೇಳುವವನು ಪಾಪಿಷ್ಠರು~ ನಮ್ಮ ಸಂಸದರು ನಡೆದುಕೊಳ್ಳಬೇಕಾದುದರ ಬಗ್ಗೆ ಮನುಸ್ಮೃತಿ ನೀಡುವ ಸ್ಪಷ್ಟ ನಿರ್ದೇಶನ ಇದು (ಇಂದು ಸಮಾಜದಲ್ಲಿ ಹಲವರು ಸುಳ್ಳು ಹೇಳದಿದ್ದರೂ ಸತ್ಯವನ್ನು ಹೇಳಲು ಹಿಂಜರಿಯುತ್ತಾರೆ. ಸುಳ್ಳು ಹೇಳುವುದು, ಸತ್ಯವನ್ನು ಹೇಳದೇ ಇರುವುದು ಇವೆರಡೂ ಸ್ಪಷ್ಟವಾಗಿ ಸರಿಯಲ್ಲ).(9) “ಇನ್ನಲಾಹೋ ಲಾ ಯುಗಯ್ ಯರೋ ಮಾ ಬಿಕೌ ಮಿನ್/ ಹತ್ತಾ ಯುಗಯ್ ಯರೋ ವಾ ಬಿನ್ ಕ್ತಸೇ ಹುಮ್~ (ಅರೇಬಿಕ್ ಉಕ್ತಿ) = “ಯಾವುದೇ ಮನುಷ್ಯರು ತಮ್ಮನ್ನು ತಾವು ಬದಲಾಯಿಸಿಕೊಳ್ಳದಿದ್ದರೆ, ಭಗವಂತನು ಅವರನ್ನು ಬದಲಾಯಿಸುವುದಿಲ್ಲ~ ಇದು ಭಗವದ್ಗೀತೆಯ “ಉದ್ಧರೇದಾತ್ಮನಾತ್ಮಾನಂ” ಎಂಬ ಉಕ್ತಿಯನ್ನು ನೆನಪಿಸುತ್ತದೆ. ವ್ಯಕ್ತಿ ತನ್ನನ್ನು ತಾನೇ, ತನ್ನ ಯತ್ನಗಳಿಂದ ಉದ್ಧರಿಸಿಕೊಳ್ಳಬೇಕು. (ವಚನಕಾರ ಸಕಲೇಶಮಾದರಸನ ಪ್ರಕಾರ ವ್ಯಕ್ತಿಯ ವಿಚಾರವೇ ಅವನ ಶಕ್ತಿ).(10) “ಸತ್ಯಮೇವ ಜಯತೇ”- (ಮುಂಡಕೋಪನಿಷದ್, 3-1) - ಸತ್ಯವೊಂದೇ ಯಾವಾಗಲೂ ಜಯಿಸುತ್ತದೆ. (ಎಲ್ಲ ಧರ್ಮ ಗ್ರಂಥಗಳೂ ಧಾರ್ಮಿಕ ಮುಖಂಡರೂ ಹೇಳಿರುವುದು ಇದನ್ನೇ).(11)”ಸರ್ವದಾ ಸ್ಯಾನ್ನೃಪಃ ಪ್ರಾಜ್ಞಃ/ ಸ್ವಮತೇ ನ ಕದಾಚನ/ ಸಭ್ಯಾಧಿಕಾರಿ ಪ್ರಕೃತಿ/ ಸಭಾಸತ್ ಸುಮತೇ ಸ್ಥಿತಃ~ (ರಾಜಧರ್ಮ, ಶುಕ್ರನೀತಿ, 2-3) - “ಆಳುವವನು ಸದಾ ವಿವೇಕಿಯೂ, ಬುದ್ಧಿವಂತನೂ ಆಗಿರಬೇಕು ಎಂದೂ ಅವನು ತನ್ನ ಸ್ವಂತ ಅಭಿಪ್ರಾಯಗಳನ್ನು ಮಾತ್ರವೇ ಅವಲಂಬಿಸಿರಕೂಡದು. ಸಭಾಸದರ, ಅಧಿಕಾರಿಗಳ, ಇತರ ಜನರ ಅಭಿಪ್ರಾಯಗಳನ್ನು ಗಮನಿಸಿ ನಿರ್ಣಯ ತೆಗೆದುಕೊಳ್ಳಬೇಕು” (ಇದೇ ಅಲ್ಲವೆ ನಿಜವಾದ ಪ್ರಜಾಪ್ರಭುತ್ವ).ಲೇಖಕನ ಮಾತುಗಳು: ಈ ಪರಿಚಯ ಲೇಖನ ಬರೆಯುವಲ್ಲಿ ನ್ಯಾಯಮೂರ್ತಿ ಡಾ. ಮ. ರಾಮಾ ಜೋಯಿಸರ ಒಪ್ಪಿಗೆ ಪಡೆದಿದ್ದೆನೆ. ಸಂಸತ್ ಭವನದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸುವ ಉಕ್ತಿಗಳು ಭಾರತದ ಪರಂಪರೆಯ ಸಾರಾಂಶದ ಒಂದು ಸ್ಥೂಲ ಪರಿಚಯವನ್ನು ಮಾಡಿಕೊಡುತ್ತವೆಯಲ್ಲದೆ, ರಾಷ್ಟ್ರದ ಆಗು ಹೋಗುಗಳನ್ನು ನೋಡಿಕೊಳ್ಳುವ ಕೇಂದ್ರದ ಮಂತ್ರಿಗಳು, ಸಂಸದರಲ್ಲಿ ಇರಬೇಕಾದ ಅರ್ಹತೆ, ಅವರ ಕರ್ತವ್ಯ, ನಡತೆ ಇವುಗಳ ಬಗ್ಗೆ ಮಾರ್ಗದರ್ಶನ ನೀಡುತ್ತವೆ. “ಯಥೋ ರಾಜ ತಥಾ ಪ್ರಜಾಃ” ಅದನ್ನೇ ಇಂದಿನ ಕಾಲಕ್ಕೆ ಅನುಗುಣವಾಗಿ ಹೇಳುವುದಾದರೆ,” ಯಥೋ ಪ್ರಜಾಃ ತಥೋ ರಾಜಃ” - ಹಿಂದೆ ರಾಜ ಆಳುತ್ತಿದ್ದ. ಈಗ ಪ್ರಜೆಗಳು ತಮ್ಮನ್ನು ತಾವೇ ಆಳಿಕೊಳ್ಳುತ್ತಿದ್ದಾರೆ. ರಾಜ ಶ್ರೇಷ್ಠನಾಗಿರುವಂತೆ ಪ್ರಜೆಗಳೂ ಈಗ ಶ್ರೇಷ್ಠರಾಗಿ ಬಾಳುತ್ತಾ ಅರ್ಹರನ್ನು ಆರಿಸಬೇಕು. ಸಂಸತ್ ಭವನದ ಘೋಷಣಾ ವಾಕ್ಯಗಳು ಸರ್ವಕಾಲಕ್ಕೂ ಸರ್ವ ದೇಶಗಳಿಗೂ ಆದರ್ಶವೆಂಬುದನ್ನು ಒತ್ತಿ ಹೇಳಬೇಕಾಗಿಲ್ಲ. ಅವು ವಿಶ್ವಸಂಸ್ಥೆಯ ಕಟ್ಟಡದಲ್ಲಿ ದಾಖಲಾಗಲು ಅರ್ಹವಾದ ವಾಕ್ಯಗಳು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.