ಭಾನುವಾರ, ಜನವರಿ 19, 2020
20 °C
ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಜನಪದ ತಜ್ಞ ಮೀರಸಾಬಿಹಳ್ಳಿ ಶಿವಣ್ಣ ಅಭಿಮತ

ಸಂಸ್ಕೃತಿಗೆ ಗಡಿ ವಿಧಿಸುವುದು ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಭಾಷೆಗೆ ಗಡಿ ವಿಧಿಸಿದ ರೀತಿಯಲ್ಲಿ ಸಂಸ್ಕೃತಿಗೆ ಗಡಿ ವಿಧಿಸುವುದು ಸರಿಯಲ್ಲ ಎಂದು ಜನಪದ ತಜ್ಞ

ಡಾ.ಮೀರಸಾಬಿಹಳ್ಳಿ ಶಿವಣ್ಣ ಹೇಳಿದರು. ನೆರೆಯ ಆಂಧ್ರದ ರಾಯದುರ್ಗದಲ್ಲಿ ನಡೆಯಲಿರುವ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಇಲ್ಲಿನ ಕನ್ನಡ ಭವನದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಫೆ.15, 16ರಂದು ರಾಯದುರ್ಗ ದಲ್ಲಿ 4ನೇ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನ ಅಧ್ಯಕ್ಷರಾಗಿ ಶಿಕ್ಷಣತಜ್ಞ, ಡಾ.ಹುಡೆ ಪಿ.ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಗಡಿಭಾಗದ ಎಲ್ಲಾ ಕನ್ನಡ ಪ್ರೇಮಿಗಳು ಸಮ್ಮೇಳನ ಯಶಸ್ವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಹಲವು ಒತ್ತಡಗಳಿಗೆ ಮಣಿದು ಅನ್ಯರಾಜ್ಯದಲ್ಲಿ ಜೀವನ ನಡೆಸುವ ಕನ್ನಡಿಗರಿಗೆ ಗಡಿನಾಡ ಸಾಹಿತ್ಯ ಸಮ್ಮೇಳನಗಳ ಮೂಲಕ ನಾವು ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಬೇಕಿದೆ. ಆಚರಣೆ, ಸಂಸ್ಕೃತಿ, ಸಾಹಿತ್ಯ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಗಡಿಭಾಗದ ಜನರು ಹತ್ತಿರವಾಗಲು ಸಮ್ಮೇಳನಗಳು ಅನುಕೂಲವಾಗಿವೆ ಎಂದರು.ಆಂಧ್ರ ಗಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಶಿವಕುಮಾರ್‌ ಮಾತನಾಡಿ, ಸಮ್ಮೇಳನ ಅಂಗವಾಗಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ಉದ್ದೇಶಿಸ ಲಾಗಿದೆ. ಗಡಿಭಾಗದ ಇತಿಹಾಸ, ಪ್ರೇಕ್ಷಣೀಯ ಸ್ಥಳ, ಸಾಮಾಜಿಕ ಸಮಸ್ಯೆ, ಜನಜೀವನ ಬಗ್ಗೆ ಪುಸ್ತಕದಲ್ಲಿ ದಾಖಲು ಮಾಡಲಾಗುವುದು. ಸರ್ಕಾರಿ ನೌಕರರು ಭಾಗವಹಿಸಲು ಎರಡು ದಿನ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.ಕಸಾಪ ತಾಲ್ಲೂಕು ಅಧ್ಯಕ್ಷ ಟಿ.ರೇವಣ್ಣ ಮಾತನಾಡಿ, ಸ್ಥಳೀಯ ಕಸಾಪ ವತಿಯಿಂದ ಸಮ್ಮೇಳನಕ್ಕೆ ಸಹಕಾರವನ್ನು ಪ್ರಾಮಾಣಿಕವಾಗಿ ನೀಡಲಿದೆ ಎಂದು ಭರವಸೆ ನೀಡಿದರು. ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷರಾದ ಕೆ.ಜಿ.ಪಾರ್ಥಸಾರಥಿ, ಕೆ.ಜಿ.ವೆಂಕಟೇಶ್‌, ಲತೀಫ್‌ ಸಾಬ್‌, ಚುಟುಕು ಸಾಹಿತ್ಯ ಪರಿಷತ್‌ನ ಉಮಾಶಂಕರ್‌ ಉಪಸ್ಥಿತರಿದ್ದರು. ಶಿಕ್ಷಕ ಉಮೇಶ್‌ ಸ್ವಾಗತಿಸಿದರು. ವಿರೂಪಾಕ್ಷಪ್ಪ ವಂದಿಸಿದರು.

ಪ್ರತಿಕ್ರಿಯಿಸಿ (+)