ಸೋಮವಾರ, ಏಪ್ರಿಲ್ 19, 2021
31 °C

ಸಚಿವ ಸಂಪುಟ ತೀರ್ಮಾನವೇ ತಪ್ಪೇ: ಡಾ. ಶರ್ಮ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೆಂಗಳೂರು ಮಹಾನಗರ ಕಾರ್ಯಪಡೆಯನ್ನು (ಬಿಎಂಟಿಎಫ್) ಕೇವಲ ಸರ್ಕಾರದ ಒಂದು ಆದೇಶದ ಮೇರೆಗೆ ರಚಿಸಿಲ್ಲ. ಸಚಿವ ಸಂಪುಟದ ತೀರ್ಮಾನದ ಮೇರೆಗೆ ನಿಯಮಾವಳಿಯನ್ವಯ ರಚಿಸಲಾಗಿದೆ. ಬಿಎಂಟಿಎಫ್‌ಗೆ ಪೊಲೀಸ್ ಠಾಣೆ ಅಧಿಕಾರ ನೀಡಿರುವುದನ್ನು ಪ್ರಶ್ನಿಸುವವರು ಸಚಿವ ಸಂಪುಟದ ತೀರ್ಮಾನವೇ ತಪ್ಪು ಎಂದು ಹೇಳಲು ಸಾಧ್ಯವೇ?~ಬಿಎಂಟಿಎಫ್‌ನಿಂದ ಮಂಗಳವಾರವಷ್ಟೇ ವರ್ಗಾವಣೆಗೊಂಡಿರುವ ಎಡಿಜಿಪಿ ಡಾ.ಆರ್.ಪಿ. ಶರ್ಮ, ಕಾರ್ಯಪಡೆ ಬಗ್ಗೆ ಟೀಕೆ ಮಾಡುವವರ ಮುಂದಿಟ್ಟಿರುವ ಪ್ರಶ್ನೆ ಇದು.ಬಿಎಂಟಿಎಫ್‌ನಿಂದ ವರ್ಗಾವಣೆಗೊಂಡ ನಂತರ ಡಾ. ಶರ್ಮ`ಪ್ರಜಾವಾಣಿ~ಯೊಂದಿಗೆ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.`ಬೆಂಗಳೂರು ಮಹಾನಗರ ಕಾರ್ಯಪಡೆಯನ್ನು ನಿಯಮಾವಳಿಯನ್ವಯ ರಚಿಸಿಲ್ಲ ಎಂಬುದು 16 ವರ್ಷಗಳ ನಂತರ ಮನವರಿಕೆಯಾಗಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಬಿಎಂಟಿಎಫ್‌ಗೆ ನೀಡಿರುವ ಪೊಲೀಸ್ ಅಧಿಕಾರವನ್ನು ವಾಪಸು ತೆಗೆದುಕೊಳ್ಳುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಸರ್ಕಾರ ಯಾವುದೇ ಆದೇಶ ಹೊರಡಿಸುವ ಮುನ್ನ ತನ್ನದೇ ಆದ ನೀತಿ-ನಿಯಮಗಳನ್ನು ಪಾಲಿಸಬೇಕಿತ್ತು~ ಎಂದು ಅವರು ಬೇಸರದಿಂದ ನುಡಿದರು.`ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ನಿಯಮ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಿರುವುದು ಗಂಭೀರ ಸಮಸ್ಯೆಯಾಗಿದೆ. ಇದು ಬೆಳಕಿಗೆ ಬಂದ ನಂತರ ನಾನು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು, ಈ ಸಂಬಂಧ ಕಾರ್ಯಾಗಾರ ಏರ್ಪಡಿಸುವಂತೆ ಕೋರಿದೆ.ಅಲ್ಲದೆ, ತಮ್ಮ ಸಿಬ್ಬಂದಿಯ ಜತೆಗೆ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಆಯುಕ್ತರಲ್ಲಿ ಮನವಿ ಮಾಡಿದೆ. ಆದರೆ, ಆಯುಕ್ತರ ಬದಲಿಗೆ ಹೆಚ್ಚುವರಿ ಆಯುಕ್ತರಾಗಿದ್ದ ನಂದಕುಮಾರ್ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ನಗರದಲ್ಲಿ ಕಾನೂನನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ ಎಲ್ಲವನ್ನೂ ಅವರ ಗಮನಕ್ಕೆ ತಂದಿದ್ದೆ~ ಎಂದು ಅವರು ಹೇಳಿದರು.ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕಾದ ಬಿಎಂಟಿಎಫ್, ನಕ್ಷೆ ಮಂಜೂರಾತಿ ಉಲ್ಲಂಘನೆಯಂತಹ ಸಣ್ಣ ಪುಟ್ಟ ಸಮಸ್ಯೆಗಳಿಗೆ ಕೈ ಹಾಕಿದ್ದು ಏಕೆ ಎಂಬ ಪ್ರಶ್ನೆಗೆ, ಶರ್ಮ ವಿವರವಾದ ಉತ್ತರ ನೀಡಿದರು.ಬಿಎಂಟಿಎಫ್‌ಗೆ ಮೂರು ಬಗೆಯ ಜವಾಬ್ದಾರಿಗಳನ್ನು ವಹಿಸಲಾಗಿದೆ. ಅದರಲ್ಲಿ ಮೊದಲನೆಯದು ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸುವುದು. ಈ ಸಂಬಂಧ ನಾನು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸರ್ಕಾರಿ ಆಸ್ತಿಗಳ ಪಟ್ಟಿಯನ್ನು ಬಿಎಂಟಿಎಫ್‌ಗೆ ಸಲ್ಲಿಸಲು ಸೂಚಿಸಿ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಕಳಿಸುವಂತೆ ಕೋರಿದೆ. ಅದರಂತೆ, ಈ ವರ್ಷದ ಜೂನ್ ತಿಂಗಳಲ್ಲಿ ಸುತ್ತೋಲೆ ಹೊರಡಿಸಲಾಯಿತು.

 

ಆನಂತರ ಸರ್ಕಾರಿ ಆಸ್ತಿಗಳನ್ನು ಒತ್ತುವರಿ ಮಾಡಿದ ಆರೋಪದ ಮೇರೆಗೆ 19 ಪ್ರಕರಣಗಳನ್ನು ದಾಖಲಿಸಲಾಯಿತು.ಎರಡನೇ ಹಂತದ ಹೊಣೆ ಸಾಮಾನ್ಯ ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ಪತ್ತೆ ಮಾಡಿ ತನಿಖೆ ನಡೆಸುವುದು. ನಿಯಮ ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಿಸಿರುವುದು ಕೂಡ ಎರಡನೇ ವಿಭಾಗ ವ್ಯಾಪ್ತಿಯಡಿ ಬರುತ್ತದೆ.ಇನ್ನು, ಮೂರನೆಯದು ನಿಯಮ ಉಲ್ಲಂಘನೆಯಲ್ಲಿ ಅಧಿಕಾರಿಗಳ ಪಾತ್ರಕ್ಕೆ ಸಂಬಂಧಿಸಿದ್ದು. ಈ ವಿಚಾರದಲ್ಲಿ ಬಿಎಂಟಿಎಫ್ ಪೊಲೀಸ್ ಠಾಣೆಯಾಗಿ ಕೆಲಸ ನಿರ್ವಹಿಸಲಿದೆ. ಇದರಿಂದಲೇ ಸಮಸ್ಯೆ ಸೃಷ್ಟಿಯಾದದ್ದು.ಬಿಎಂಟಿಎಫ್ ದೊಡ್ಡ ಪ್ರಕರಣಗಳ ಬಗ್ಗೆ ಗಮನಹರಿಸದೆ ಕೇವಲ ಸಣ್ಣ ಪುಟ್ಟ ಪ್ರಕರಣಗಳಿಗೂ ಕೈ ಹಾಕಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, `ನೀವು ಸಣ್ಣ ಪ್ರಕರಣಗಳನ್ನು ತಡೆದಾಗ ದೊಡ್ಡ ಪ್ರಕರಣಗಳನ್ನು ತಡೆಯಬಹುದು ಎಂಬುದು ಕಟು ಸತ್ಯ.

 

ಯಾವುದೇ ಒಬ್ಬ ಪೊಲೀಸ್ ಅಧಿಕಾರಿ ಸಣ್ಣ ವಿಷಯವನ್ನು ನಿರ್ಲಕ್ಷಿಸಿದಾಗ ಮುಂದೆ ದೊಡ್ಡ ಸವಾಲನ್ನು ಎದುರಿಸಬೇಕಾಗುತ್ತದೆ. ಇತ್ತೀಚೆಗೆ ದಾಖಲಿಸಿದ ಪ್ರಕರಣಗಳಲ್ಲಿ ಮೊಕದ್ದಮೆ ಎದುರಿಸುತ್ತಿರುವವರು ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲ ಜನ ನಾವು ತಪ್ಪು ಮಾಡಿದ್ದೇವೆ ಎಂಬುದನ್ನು ಒಪ್ಪಿಕೊಳ್ಳಲೇ ಇಲ್ಲ~.ನೀವು ಕೆಲವರನ್ನು ಗುರಿಯಾಗಿಟ್ಟುಕೊಂಡು ಪ್ರಕರಣಗಳನ್ನು ದಾಖಲಿಸಿರುವ ಆರೋಪಗಳಿವೆಯಲ್ಲಾ ಎಂಬ ಪ್ರಶ್ನೆಗೆ, `ಇದು ಸತ್ಯಕ್ಕೆ ದೂರವಾದುದು. ನಮ್ಮದು ದೂರು ಆಧಾರಿತ ವ್ಯವಸ್ಥೆ. ನಮ್ಮದೇನಿದ್ದರೂ ದೂರಿನ ಮೇರೆಗೆ ಕ್ರಮ. ಕೆಲವು ವ್ಯಕ್ತಿಗಳ ವಿರುದ್ಧ ಅಂತಹ ದೂರುಗಳು ದಾಖಲಾಗಿದ್ದರೆ ಅದಕ್ಕೆ ನಾವು ಜವಾಬ್ದಾರಿಯಲ್ಲ. ನಮ್ಮಲ್ಲಿ ಪರಿಣಾಮಕಾರಿಯಾಗಿ ದೂರು ಸಲ್ಲಿಸುವ ವ್ಯವಸ್ಥೆ ಇದೆ. ಈ ರೀತಿಯ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.ದೊಡ್ಡಗುಬ್ಬಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಮನೆ ನಿರ್ಮಾಣ ಮಾಡುತ್ತಿರುವ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ, `ರಾಜ್ಯ ಸರ್ಕಾರ ನನಗೆ ಮನೆ ನಿರ್ಮಿಸಲು ಅನುಮತಿ ನೀಡಿದ ನಂತರ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಪರವಾನಗಿ ಪಡೆದಿದ್ದೇನೆ. ಬಿಡಿಎ ಅಥವಾ ಬಿಎಂಆರ್‌ಡಿಎ ವ್ಯಾಪ್ತಿಗೆ ಒಳಪಡುವ ಯಾವುದೇ ಗ್ರಾಮವನ್ನು ನೋಟಿಫೈ ಮಾಡಲಾಗುತ್ತದೆ.ಹಾಗೆಯೇ ದೊಡ್ಡಗುಬ್ಬಿ ಗ್ರಾಮ ಕೂಡ ಬಿಎಂಆರ್‌ಡಿಎ ವ್ಯಾಪ್ತಿಗೆ ಒಳಪಡುತ್ತದೆಯೇ ಹೊರತು ಬಿಡಿಎ ವ್ಯಾಪ್ತಿಗೆ ಅಲ್ಲ. ಬಿಡಿಎ ರೀತಿ ಬಿಎಂಆರ್‌ಡಿಎ ನಗರ ಯೋಜನೆ ಪ್ರಾಧಿಕಾರ ಅಲ್ಲ. ಇದನ್ನು ಅರಿಯದ ಜನ ಬಿಡಿಎ ನೋಟಿಫೈ ಮಾಡಿದ ಜಾಗದಲ್ಲಿ ಮನೆ ಕಟ್ಟಲು ಆ ಪ್ರಾಧಿಕಾರದಿಂದ ಅನುಮತಿ ಪಡೆದ್ದೇನೆ ಎನ್ನುವ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ~ ಎಂದು ಪ್ರತಿಕ್ರಿಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.