ಕೊಲೆ ಮಾಡಿದ್ದಕ್ಕೆ ಜೀವಾವಧಿ ಶಿಕ್ಷೆಗೆ ಒಳಗಾಗಿ ಜೈಲಿನಲ್ಲಿರುವ ಕೈದಿಗಳಿಗೆ ಅವಧಿಗೆ ಮುನ್ನ ಬಿಡುಗಡೆಯಾಗಲು ಇರುವ ಏಕೈಕ ದಾರಿ – ಸನ್ನಡತೆ.
ಅಪರಾಧಿ ಎಂದು ಸಾಬೀತಾಗುವ ಮುನ್ನವೇ, ವಿಚಾರಣಾಧೀನ ಕೈದಿಗಳಾಗಿ ಜೈಲು ಸೇರುವ ಮೊದಲ ದಿನದಿಂದಲೂ ಸನ್ನಡತೆ ಎಂಬುದು ಎಲ್ಲರನ್ನೂ ನೆರಳಿನಂತೆ ಹಿಂಬಾಲಿಸುತ್ತದೆ. ‘ಬೇಗ ಬಿಡುಗಡೆಯಾಗಬೇಕು’ ಎಂಬ ಕನಸು ಹೊತ್ತವರಿಗೆ ಮಾತ್ರ ಇದು ನಿತ್ಯ ಪರೀಕ್ಷೆ. ವ್ರತದಂಥ ನಿಷ್ಠೆ, ದಮ್ಮಡಿ ಕಚ್ಚಿ ಸಂಕಟ ನುಂಗುವ ತಾಳ್ಮೆ ಇಲ್ಲದಿದ್ದರೆ ಸನ್ನಡತೆ ಒಲಿಯುವುದಿಲ್ಲ.

ಅಪರಾಧವನ್ನೇ ಅಭ್ಯಾಸ ಮಾಡಿಕೊಂಡವರಿಗೆ ಜೈಲುವಾಸ ನೋವು ತರುವ ಸಂಗತಿ ಏನಲ್ಲ. ಸನ್ನಡತೆ ಮತ್ತು ದುರ್ನಡತೆಗಳ ವ್ಯತ್ಯಾಸ ಅರಿಯುವುದೇ ಅವರಿಗೆ ಅಸಂಗತವಾಗಿ ತೋರುತ್ತದೆ. ಅಂಥವರಿಗೆ ನೀತಿ ಪಾಠ ಹೇಳುವುದು ಜೈಲು ಸಿಬ್ಬಂದಿಗೆ ನಿಜವಾದ ಸವಾಲು. ಆಗ ಅವರು ಅನುಸರಿಸುವ ದಾರಿ ಒಂದೇ: ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆಪೆಟ್ಟು.

ಸನ್ನಡತೆ ಎಂಬುದು ಎಲ್ಲ ಧರ್ಮಗಳೂ ಸಂತರೂ ಪ್ರತಿಪಾದಿಸುವ ಪ್ರಮುಖ ಜೀವನ ಮೌಲ್ಯ. ಎಲ್ಲರಿಗೆ ಒಳಿತನ್ನೇ ಬಯಸು. ಒಳಿತನ್ನೇ ಬಯಸದಿದ್ದರೂ, ಬಯಸಿದಂತೆ ನಟಿಸು. ಕೆಡುಕನ್ನು ಮಾಡುವುದರಿಂದ ಸದಾ ದೂರವೇ ಉಳಿದಿರು. ಅದು ಸನ್ನಡತೆಗೆ ಸನಿಹ. ಅಷ್ಟಿದ್ದರೆ ಸಾಕು. ಕ್ಷೇಮ. ಆದರೆ, ಜೈಲಿನೊಳಕ್ಕೆ ಬರುವವರೆಗೂ ಅದರ ಮಹತ್ವ ಅರಿತವರು ಕಡಿಮೆ.

ಒಳಿತು ಕೆಡುಕುಗಳಿಗೆ ಸಂಬಂಧಿಸಿದ ನಮ್ಮ ನಡವಳಿಕೆಗಳನ್ನು ಕೈದಿಗಳು ಧರ್ಮದ, ಅಧ್ಯಾತ್ಮದ ನೆಲೆಯಲ್ಲಿ ನೋಡುವುದೇ ಇಲ್ಲ ಎಂಬುದು ವಿಶೇಷ. ಈ ಅರಿವು ಬರುವುದು, ಮುಂದುವರಿಯುವುದು ಎಲ್ಲವೂ ಲೌಕಿಕದ ನೆಲೆಯಲ್ಲೇ. ಧರ್ಮಗಳು ಹೇಳುವ ಸಹಿಷ್ಣುತೆ, ಇಲ್ಲಿ ಸಮುದಾಯ ಕೇಂದ್ರಿತವಲ್ಲ; ಅದು ಸ್ವಕೇಂದ್ರಿತ, ಧರ್ಮಾತೀತ.

ಸನ್ನಡತೆ ಎಂದರೆ ಅದೊಂದು ಕಠಿಣ ಆಚರಣೆ ಎಂದು ಭಾವಿಸಬೇಕಿಲ್ಲ. ಅದೊಂದು ಸರಳವಾದ ಜೀವನಶೈಲಿ. ತಡೆಯಲಾಗದ ಕೋಪ ಬಂದು, ಎದುರಿಗೆ ಇದ್ದವರಿಗೆ ಬೈಯಬೇಕೆನಿಸಿದಾಗ, ಒದೆಯಬೇಕೆನಿಸಿದಾಗ, ಒಮ್ಮೆಗೇ ಕೊಚ್ಚಿ ಕೊಲ್ಲಬೇಕೆನಿಸಿದಾಗ, ಹಾಗೆ ಮಾಡದೇ ಸುಮ್ಮನಿದ್ದುಬಿಡುವುದು. ಒರಟು ಭಾಷೆ, ಕೆಟ್ಟ ಪದಗಳನ್ನು ನಾಲಿಗೆಯಿಂದ ತೆಗೆದುಬಿಡುವುದು. ಇನ್ನೊಬ್ಬರ ತಂಟೆಗೆ ಹೋಗದೇ ಇರುವುದು. ಹಾಗೆ ಮಾಡದೇ ಹೋದುದಕ್ಕೇ ಅಲ್ಲವೇ ಶಿಕ್ಷೆಗೆ ಮೈಮನ ಕೊಡುವಂತಾಗಿದ್ದು.

ಸುಮ್ಮನಿದ್ದರೆ ಸಾಕು, ಚಳಿಯೂ ನಡುಗುವುದು ಎಂಬ ಮಾತು ಇಲ್ಲಿ ನೆನಪಾಗುತ್ತಿದೆ. ಆದರೆ, ಸುಮ್ಮನಿರುವುದು ಎಷ್ಟು ಕಷ್ಟ? ಪ್ರತಿ ಕೈದಿಯದ್ದೂ ಒಂದೊಂದು ಬಗೆಯ ಕಷ್ಟದ ಕತೆ.

ಜೈಲಿನೊಳಗೆ ವಿಧೇಯತೆಯೇ ಪರಮ ಸನ್ನಡತೆ. ಅಧಿಕಾರಿ, ಶಿಕ್ಷಕರು, ಹಿರಿಯರು ಹೇಳಿದ್ದನ್ನು ಬಾಯಿ ಮುಚ್ಚಿ, ಕಿವಿತೆರೆದು ಕೇಳುವುದು. ತೋರಿಸಿದ್ದನ್ನು ಎದುರು ಮಾತನಾಡದೇ ಮಾಡುವುದು. ಕೊಟ್ಟಿದ್ದನ್ನು ತಕರಾರಿಲ್ಲದೆ ಪಡೆಯುವುದು.

ನಿಂತಿರುವ, ನಡೆಯುತ್ತಿರುವ ದೇಶ–ಕಾಲದಲ್ಲಿ ಯಾರಿಗೂ ತೊಂದರೆ ಮಾಡದ ಮನಸ್ಥಿತಿ. ಅಂದರೆ ಸ್ವಕೇಂದ್ರಿತ ನೆಲೆಯಿಂದ ಪರಕೇಂದ್ರಿತ ನೆಲೆಗೆ ಸರಿದು ಜಗತ್ತನ್ನು ಗ್ರಹಿಸುವ, ಅದರೊಂದಿಗೆ ಒಡನಾಡುವ, ಒಡನಾಡದಿದ್ದರೂ ಸುಮ್ಮನಿರುವ ವರ್ತನೆ. ಹಗೆಗಳ ಮುಂದೆ ನಗೆಗೆ ಈಡಾದರೂ ಪರವಾಗಿಲ್ಲ ಎಂಬ ಸಮ್ಮತಿಯ ಮನಸ್ಥಿತಿ.

ಒಪ್ಪಿಕೋ, ಸನ್ನಡತೆಯ ಮೊದಲ ಪಾಠ. ಒಪ್ಪಿಸಿಕೋ, ಎರಡನೇ ಪಾಠ. ಏನನ್ನೂ ನಿರೀಕ್ಷಿಸದಿರು, ಮೂರನೇ ಪಾಠ. ಇದು ಭಗವದ್ಗೀತೆಯಲ್ಲಿ ಕೃಷ್ಣ ಹೇಳುವ ಮಾತೂ ಹೌದು. ಈ ಮಾತುಗಳನ್ನು ಕೇಳಿಸಿಕೊಳ್ಳುವಾಗ – ಅರ್ಜುನ ಯುದ್ಧಭೂಮಿಯಲ್ಲಿರುತ್ತಾನೆ, ತನ್ನನ್ನು ಎತ್ತಿ ಆಡಿಸಿದವರನ್ನೇ ಕೊಲ್ಲಬೇಕಾದ ತನ್ನ ಪರಿಸ್ಥಿತಿಗೆ ಆತ ಸ್ವಯಂಮರುಕ ಹೊಂದಿರುತ್ತಾನೆ. ಹಿಡಿತಕ್ಕೆ ಸಿಗದ ಹಿಂಜರಿಕೆ ಇರುತ್ತದೆ.

ಕೃಷ್ಣ ‘ಏನೂ ಯೋಚಿಸದೆ ಎದುರಿಗಿರುವವರನ್ನು ಕೊಲ್ಲು’ ಎನ್ನುತ್ತಾನೆ. ‘ಫಲಿತಾಂಶವನ್ನು ನನಗೆ ಬಿಡು’ ಎನ್ನುತ್ತಾನೆ. ಆದರೆ ನಿಜ ಜೀವನದಲ್ಲಿ ಯಾರನ್ನಾದರೂ ಕೊಲ್ಲುವಾಗ, ಕೊಲ್ಲುವ ಮನಸ್ಥಿತಿಯಿಂದ ಪಾರು ಮಾಡುವವರು ಯಾರೂ ಇರುವುದಿಲ್ಲ. ಕೊಂದ ಬಳಿಕವೂ ಅಷ್ಟೇ; ಶಿಕ್ಷೆಯಿಂದ ಪಾರಾಗುವುದು ಕಷ್ಟ.

‘ನಿನ್ನನ್ನು ನೀನೇ ಕಾಪಾಡಿಕೋ. ಅದಕ್ಕೆ ಸನ್ನಡತೆಯೊಂದೇ ದಾರಿ’. ಇದು ಎಲ್ಲ ಜೈಲಿನ ಗೋಡೆಗಳ ಮೇಲೆ ಬರೆದ ಎಲ್ಲ ನೀತಿ ವಾಕ್ಯಗಳ ಸಾರ.
ಸನ್ನಡತೆ ಎಂದರೆ ತೋರಿಕೆಯ ವರ್ತನೆ ಅಲ್ಲ. ಅದು ವ್ಯಕ್ತಿತ್ವ ವಿಕಾಸದ ಗಟ್ಟಿ ಕುರುಹು. ಅರ್ಧಕ್ಕೇ ನಿಂತ ಓದನ್ನು ಮುಂದುವರಿಸಬೇಕು. ಜೈಲಿನಲ್ಲಿ ಕುಳಿತೇ ಮುಕ್ತ ವಿಶ್ವವಿದ್ಯಾಲಯಗಳ ಪದವಿ ಪರೀಕ್ಷೆ ಕಟ್ಟಿ ಪಾಸಾಗಬೇಕು.

ಯೋಗಾಭ್ಯಾಸ, ರಂಗ ತರಬೇತಿ ಶಿಬಿರಗಳಲ್ಲಿ, ಆಟೋಟಗಳಲ್ಲಿ ನಿರಂತರ ಪಾಲ್ಗೊಳ್ಳಬೇಕು. ಉತ್ತಮ ಪ್ರದರ್ಶನ ನೀಡಬೇಕು. ನಾಯಕತ್ವದ ಗುಣ ಪ್ರದರ್ಶಿಸಿ, ಸಹಕೈದಿಗಳನ್ನು ಒಳ್ಳೆಯತನದಿಂದ ನಿರ್ವಹಣೆ ಮಾಡುತ್ತಾ ಸನ್ನಡತೆಯ ಕಡೆಗೆ ಕರೆದೊಯ್ಯಬೇಕು, ಯಾವ ಭದ್ರತೆಯೂ ಇಲ್ಲದೆ, ಜೈಲಿನ ಹೊರಗೆ ಕೆಲಸಕ್ಕೆ ಹಚ್ಚಿದಾಗ, ಮನೆಗೆ ವಾಪಸು ಬಂದಂತೆ, ಜೈಲಿಗೆ ವಾಪಸು ಬರಬೇಕು, ಪರಾರಿಯಾಗಬಾರದು – ಇದು ಸನ್ನಡತೆಯ ವಿಶೇಷ ಲಕ್ಷಣ.

ಸನ್ನಡತೆ ಕುರಿತಂತೆ ಮತ್ತಷ್ಟು ಲಕ್ಷಣಗಳನ್ನೂ ಪಟ್ಟಿ ಮಾಡಬಹುದು. ಪೆರೋಲ್ ಮೇಲೆ ರಜೆ ಪಡೆದು ಹೊರಗೆ ಹೋದವರು, ಯಾರೊಂದಿಗೂ ಜಗಳವಾಡದೆ ಒಳ್ಳೆಯ ರೀತಿಯಲ್ಲೇ ಮತ್ತೆ ವಾಪಸು ಬರಬೇಕು. ಊರಿನ ಠಾಣೆಗೆ ಪ್ರತಿದಿನ ಹೋಗಿ ರಿಜಿಸ್ಟರಿನಲ್ಲಿ ಸಹಿ ಮಾಡಿ ಬರಬೇಕು. ರಜೆ ಅವಧಿಯಲ್ಲಿ ಕೈದಿಯ ವರ್ತನೆ ಕುರಿತು ಪೊಲೀಸು ಠಾಣೆಯವರು ವರದಿ ನೀಡಿ ಖಚಿತಪಡಿಸಬೇಕು.

ಜೈಲಲ್ಲೇ ಆತ್ಮಹತ್ಯೆ ಯತ್ನ ಮಾಡಿ ಬದುಕುಳಿದವರು, ಗೋಡೆ ಹಾರಿ, ಕನ್ನ ಕೊರೆದು ಪರಾರಿಯಾಗಲು ವಿಫಲ ಯತ್ನ ಮಾಡುವವರು, ಜೈಲಿನ ಕಾವಲು ಸಿಬ್ಬಂದಿಯನ್ನೇ ಕೊಲೆ ಮಾಡಿದವರು ಸನ್ನಡತೆಯ ಚೌಕಟ್ಟಿನೊಳಗೆ ಬರಲು ಸಾಧ್ಯವೇ ಇಲ್ಲ. ಸನ್ನಡತೆಗೆ ತಮ್ಮನ್ನು ಒಪ್ಪಿಸಿಕೊಳ್ಳದವರು ಒಳಗೂ ಹೊರಗೂ ಸಲ್ಲುವುದಿಲ್ಲ. ಹೊರಗೆ ಬಂದರೂ ಮತ್ತೆ ಒಳಗಿನ ದಾರಿಯ ಬಾಗಿಲಲ್ಲೇ ನಿಲ್ಲಬೇಕು. ಒಪ್ಪಿಸಿಕೊಂಡವರಿಗೆ ಮಾತ್ರ ಹೊಸ ನೀತಿಪಾಠಗಳಿವೆ.

ನಿಜವಾದ ಶಕ್ತಿಗೂ ಹುಂಬತನಕ್ಕೂ ಇರುವ ವ್ಯತ್ಯಾಸವನ್ನು ಜೈಲು ಖಚಿತಪಡಿಸಿಕೊಡುತ್ತದೆ. ಜೈಲಿಗೆ ಬಂದ ಕೂಡಲೇ ಕೈದಿಗೆ ಒಂದು ಸಂಖ್ಯೆ ನಿಗದಿಯಾಗುತ್ತದೆ. ಅಪರಾಧಿಯು ಕೈದಿಯಾಗಿ, ಸಂಖ್ಯೆಯಾಗಿ, ತನ್ನಂತೆಯೇ ಸಂಖ್ಯೆಗಳಾದ ಕೈದಿಗಳೊಡನೆ ಸಹಜೀವನ ಆರಂಭಿಸಿದಾಗ ಕಣ್ಣೀರ ಸಾಂಗತ್ಯ ಶುರು.

ಅದೇ ಕ್ಷಣ, ‘ಸೂರ್ಯ ಮುಳುಗಿದನೆಂದು ಕಣ್ಣೀರಿಡುತ್ತಾ ಕೂತರೆ, ನಿನಗೆ ನಕ್ಷತ್ರಗಳನ್ನು ಕಾಣುವ ಭಾಗ್ಯವೂ ಇಲ್ಲವಾಗುವುದು’ ಎಂಬ ಜೈಲುಗೋಡೆಯ ಮೇಲೆ ಬರೆದ ಸಾಲಿನಲ್ಲಿ ಹೊಸ ಹೊಳಹೊಂದು ಮಿಂಚುತ್ತದೆ.

ಈಗ ಜೈಲಿನೊಳಗಿನ ಜನರೊಡನೆ ಸಹಜೀವನ, ಇಲ್ಲಿಗೆ ಬರುವ ಮುನ್ನ ಜೈಲಿನ ಹೊರಗಿನ ಜನರೊಡನೆ ಸಹಜೀವನ ಅಲ್ಲಿ ಎಲ್ಲರೊಡನೆ ಅಸಹನೆಯ ಠೇಂಕಾರ... ಇಲ್ಲಿ ಎಲ್ಲರೊಡನೆ ಸಹನೆ ಬೆರೆತ ಸನ್ನಡತೆ.

ಒಬ್ಬನೇ ವ್ಯಕ್ತಿಯ ನಡವಳಿಕೆಯಲ್ಲಿ ಎಷ್ಟೊಂದು ವ್ಯತ್ಯಾಸ? ಈ ವ್ಯತ್ಯಾಸದ ನಡುವಿನ ಗೆರೆ ಬಲು ತೆಳ್ಳಗಿನದು, ಬಲು ದಪ್ಪ ಎಂದೂ ಎನಿಸುತ್ತದೆ. ಅಲ್ಲಿ ಅದೇ ಜೀವನ ಶೈಲಿ, ತಾನು ಬಯಸಿದ್ದು – ದಕ್ಕಿಸಿಕೊಂಡಿದ್ದು. ಇಲ್ಲಿ ಮಾತ್ರ ಇದೇ ನಿಯಮ, ಬಯಸದಿದ್ದರೂ ಒಪ್ಪಿಕೊಳ್ಳಲೇಬೇಕಾದ್ದು.

ಬಿಡುಗಡೆ ಎಲ್ಲಿಗೆ?
ಜೈಲಿನಿಂದ ಬಿಡುಗಡೆ ಸರಿ. ಅಲ್ಲಿಂದ ಎಲ್ಲಿಗೆ? ಎಲ್ಲಿಂದ ಬಂದರೋ ಮತ್ತೆ ಅಲ್ಲಿಗೇ. ಒಳಗಿನಿಂದ ಹೊರಕ್ಕೆ. ಯಾವ ಸಮಾಜವು ಜೈಲಿನ ಒಳಗೆ ಕಳಿಸಿತೋ ಅದೇ ಸಮಾಜದ ತೆಕ್ಕೆಗೆ. ಅದೇ ಊರು, ಹಳ್ಳಿ, ಓಣಿ, ಮನೆ, ಕುಟುಂಬಕ್ಕೆ.

ಇಲ್ಲ. ಬಹಳ ಮಂದಿಗೆ ಅದು ಆಗುವುದಿಲ್ಲ. ಒಬ್ಬ ಮಡದಿಯನ್ನೇ ಕೊಂದು ಬಂದವ. ಮತ್ತೊಬ್ಬ ಮಡದಿಯನ್ನು ಕೊಲ್ಲಲು ಹೋಗಿ ಮಗುವನ್ನೂ ಕೊಂದು, ಎರಡು ಕೊಲೆಯ ಆರೋಪ ಹೊತ್ತವ. ಜಮೀನು ಜಗಳದಲ್ಲಿ ನೆರೆಯ ರೈತನನ್ನು ಕೊಂದವ. ಜಗಳ ಬಿಡಿಸಲು ಬಂದವರನ್ನು ಕೊಂದವ. ಹಣಕ್ಕಾಗಿ ಯಾರೋ ಒಬ್ಬನನ್ನು ಕೊಲ್ಲುವ ಆತುರದಲ್ಲಿ, ಅಡ್ಡ ಬಂದ ಇನ್ನಿಬ್ಬರನ್ನು ಕೊಂದವ. ಕೊಲೆಯ ಹರಹು ದೊಡ್ಡದು.

ಕೊಲೆಗಾಗಿ ಶಿಕ್ಷೆ ಅನುಭವಿಸಿದ್ದಾಗಿದೆ. ಪಶ್ಚಾತ್ತಾಪವೂ ಎದೆ ತುಂಬಿದೆ. ಕೊಲೆಯ ನೆನಪು ಮಾತ್ರ ಹಾಗೇ ಉಳಿದಿದೆ. ಅದೇ ಅಕ್ಕರೆಯಲ್ಲಿ ಮನೆ ಮಂದಿ, ನೆರೆ–ಹೊರೆಯ ಮಂದಿ ಒಳಗೆ ಕರೆದುಕೊಳ್ಳಬಹುದೇ? ಅನುಮಾನ. ಮತ್ತೆ ಎಲ್ಲಿಂದ ಎಲ್ಲಿಗೆ ಬಿಡುಗಡೆ? ಬಿಡುಗಡೆ ಪದಕ್ಕೆ ಅರ್ಥ ಇದೆಯೇ? ಬಿಡುಗಡೆಯಾದವರನ್ನು ಕೇಳಿದರೆ ಅರ್ಥಗಳ ಸರಣಿಯನ್ನೇ ಮುಂದಿಡುತ್ತಾರೆ.

ಬದುಕು ಏನೆಂಬುದನ್ನು ಜೈಲು ಕಲಿಸುತ್ತದೆ. ಅಲ್ಲಿಯವರೆಗೂ ನಮ್ಮ ಹಮ್ಮುಬಿಮ್ಮು, ತೋಳ್ಬಲ, ಹಣಬಲ, ಜನಬಲಗಳ ನೆಚ್ಚಿಕೆಯೇ ಹೆಚ್ಚಾಗಿರುತ್ತದೆ. ಇಲ್ಲಿ ಒಂಟಿತನವೇ ಸಂಗಾತಿ. ಆದರೆ ಹಾಗೇ ಇರುವಂತಿಲ್ಲ, ಹಲವು ಬಗೆಯ ಅಪರಾಧಗಳನ್ನು ಮಾಡಿ ಬಂದವರೊಂದಿಗೇ ನೆಲ, ನೀರು, ಊಟ, ಗಾಳಿ, ಆಟ–ಪಾಠಗಳನ್ನು ಹಂಚಿಕೊಳ್ಳಬೇಕು. ಆತ್ಮನಿರೀಕ್ಷೆಗೆ ಜೈಲು ಹೇಳಿ ಮಾಡಿಸಿದ ಜಾಗ. ಮನಪರಿವರ್ತನೆ ಎಂಬುದರ ಅರ್ಥ ಬೇಕಾದವರು ಒಂದಷ್ಟು ದಿನ ಜೈಲಿನಲ್ಲಿ ಕೈದಿಗಳಾಗಿ ಕಾಲ ಕಳೆಯಬೇಕು!

ಹಾಗೆ ನೋಡಿದರೆ ಕೊಲೆ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವ ಅನೇಕರಿಗೆ ಕೊಲ್ಲುವ ಉದ್ದೇಶವೇ ಇರುವುದಿಲ್ಲ! ‘ಅರೆ ಏನಾಯಿತು?’ ಎಂದುಕೊಳ್ಳುವಷ್ಟರಲೇ ಎದುರಿಗಿದ್ದವನು ಕೆಳಗೆ ಉರುಳಿದ್ದಾನೆ. ಪ್ರಾಣ ಹೋಗಿದೆ. ‘ಯಾರನ್ನೂ ಕೊಲ್ಲುವ ಉದ್ದೇಶವೇ ಇಲ್ಲದೆ ಕೊಲೆ ಮಾಡಿದವರೇ ಹೆಚ್ಚು. ಆದರೆ ಕೊಲೆ ಕೊಲೆಯೇ’ ಎನ್ನುತ್ತಾರೆ ಕಾರಾಗೃಹವೊಂದರ ಅಧಿಕಾರಿಯೊಬ್ಬರು.

ಅಂದರೆ ಜೈಲು ಶಿಕ್ಷೆಯನ್ನು ಅನುಭವಿಸುವ ಕುರಿತು ಕನಸನ್ನೂ ಕಾಣದವರಿಗೆ ಹದಿನಾಲ್ಕು ವರ್ಷ ಜೈಲಿನಲ್ಲೇ ಜೀವನ ಕಳೆಯಬೇಕಾದ ಅನಿವಾರ್ಯ ಪರಿಸ್ಥಿತಿ. ಆ ದುರ್ಘಟನೆ ಸಂಭವಿಸುವವರೆಗೆ ಅವರೇನೂ ಕೆಟ್ಟವರಲ್ಲ. ಸನ್ನಡತೆಯ ವ್ಯಕ್ತಿಯೇ ಆಗಿದ್ದವರು. ಆದರೆ ಒಂದು ಕ್ಷಣ ಮೈಮರೆತಿದ್ದಕ್ಕೆ, ಕೋಪ–ಆವೇಶಕ್ಕೆ ಒಳಗಾದುದಕ್ಕೆ, ಪ್ರತಿಕ್ಷಣವೂ ಸನ್ನಡತೆ ಅನಿವಾರ್ಯವಾದ ಬದುಕಿನ ಮುಂದೆ ನಿಲ್ಲಬೇಕು. ಕೋಪದ ಕೈಗೆ ಬುದ್ಧಿ ಕೊಟ್ಟರೆ ಏನಾಗುತ್ತದೆ? ಎಂಬ ದೊಡ್ಡ ಪಾಠವನ್ನು ಜೈಲು ಕಲಿಸುತ್ತಲೇ ಇದೆ.

ಕವಿವಾಣಿ ಹೇಳುತ್ತದೆ: ‘ನಾಳೆಯ ಬಾಗಿಲು ನಂದನವಾಗಲಿ’. ಜೈಲಿನ ಗೋಡೆ ಮೇಲಿನ ಬರಹ ಹೊಳೆಯುತ್ತದೆ: ‘ನೆರೆಹೊರೆಯವರನ್ನು ಪ್ರೀತಿಸಿರಿ, ಸೆರೆಮನೆಯಿಂದ ದೂರವಿರಿ’.

ಸನ್ನಡತೆಯ ಮೇಲೆ ಬಿಡುಗಡೆಯಾಗುವವರನ್ನು ಮತ್ತೆ ಪ್ರೀತಿಯ ಪಾಠಗಳು ಆವರಿಸಲಿ. ಮನೆಯವರು, ನೆರೆ–ಹೊರೆಯವರು ಅಂತಃಕರಣದ ಎದೆಯ ಕದ ತೆರೆದು ಒಳಗು ಮಾಡಿಕೊಳ್ಳಲಿ. ಆ ಒಳಗಿನಿಂದ ಈ ಒಳಗಿಗೆ ಬದುಕಿನ ಹೊಸ ಪಯಣ ಶುರುವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.