ಬುಧವಾರ, ಮೇ 12, 2021
17 °C
ಥಳುಕು-ಬಳುಕು

ಸನ್ನಿಯ ಈ ದಿನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲಿಗೆ ಸ್ಪಷ್ಟನೆ- ಸನ್ನಿ ದೇವಲ್ ವಯಸ್ಸು ಐವತ್ತಾರು ಅಲ್ಲ; ಐವತ್ತನಾಲ್ಕು.`ಯಮ್ಲಾ ಪಗ್ಲಾ ದೀವಾನಾ 2' ಹಿಂದಿ ಚಿತ್ರ ಇತ್ತೀಚೆಗೆ ತೆರೆಕಂಡು, ಸಾಧಾರಣ ಪ್ರತಿಕ್ರಿಯೆ ಪಡೆದಿರುವುದು ಗೊತ್ತಿದೆಯಷ್ಟೆ. ಅದಕ್ಕೆ ಮುಂಚಿನ ಒಂದು ತಿಂಗಳು ಅಪ್ಪ ಧರ್ಮೇಂದ್ರ ಹಾಗೂ ಮಕ್ಕಳಾದ ಸನ್ನಿ, ಬಾಬಿ ಊರೂರು ಸುತ್ತಿದರು. ಚಿತ್ರದ ಪ್ರಚಾರದ ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸಿದರು.

ಎಲ್ಲೆಡೆ ಏಳುತ್ತಿದ್ದ ಏಕರೀತಿಯ ಪ್ರಶ್ನೆಗಳಿಗೆ ತುಸುವೂ ಬೇಸರವಿಲ್ಲದೆ ಉತ್ತರಿಸಿದರು. `ಇವೆಲ್ಲಾ ಸಮಯ, ಹಣ ಬೇಡುವ ವ್ಯರ್ಥ ಕಸರತ್ತು' ಎಂದು ಸನ್ನಿ ನಿಟ್ಟುಸಿರಿಟ್ಟು ಹೇಳಿದರೆ, `ತಾವೇ ದೇಶದ ನಂಬರ್ ಒನ್ ಡಾನ್ಸರ್' ಎಂದು ಧರ್ಮೇಂದ್ರ ಚಟಾಕಿ ಹಾರಿಸಿದರು. ನೃತ್ಯದ ಶೋ ಒಂದರಲ್ಲಿ ಧಾರಾವಾಹಿ ನಟಿ ತಮ್ಮ `ಹೀ ಮ್ಯಾನ್' ಧರ್ಮೇಂದ್ರ ಎಂದರಲ್ಲದೆ, ಅವರ ಜೊತೆ ಒಂದೆರಡು ಹೆಜ್ಜೆ ಹಾಕಿ ಕೃತಾರ್ಥರಾದರು.ಪ್ರಚಾರದ ಭರಾಟೆಯಲ್ಲಿ ವಯಸ್ಸು ಐವತ್ತಾರಾದರೂ ಸನ್ನಿ ಎಷ್ಟು ಫಿಟ್ ನೋಡಿ ಎಂದು ಟೀವಿ ವಾಹಿನಿಗಳು ವಿಶೇಷ ಸುದ್ದಿ ಎಂಬಂತೆ ಪ್ರಸಾರ ಮಾಡುತ್ತಿದ್ದವು. ಅವನ್ನೆಲ್ಲಾ ನೋಡಿ ಸನ್ನಿ ಮನಸ್ಸಿನಲ್ಲೇ ಸಂಕಟ ಪಡುತ್ತಿದ್ದರು. ಯಾಕೆಂದರೆ, ನಿಜಕ್ಕೂ ಅವರ ವಯಸ್ಸಿನ್ನೂ ಐವತ್ತನಾಲ್ಕು. ಬೆನ್ನಿನಲ್ಲಿ ನೋವು ಅಡಗಿ ಕುಳಿತಿದೆ. ಆಗೀಗ ನ್ಯೂಯಾರ್ಕ್‌ಗೆ ಹೋಗಿ ಅದಕ್ಕೆ ಚಿಕಿತ್ಸೆ ಪಡೆದು ಬರುತ್ತಾರೆ. ಶಸ್ತ್ರಚಿಕಿತ್ಸೆ ಅದಕ್ಕೆ ಪರಿಹಾರವಲ್ಲ ಎಂಬುದು ಅರ್ಥವಾಗಿದೆ.ಇನ್ನೊಂದು ಕಡೆ ಮಗ ಕರಣ್ ಸಿನಿಮಾ ನಾಯಕನಾಗುವ ಕನಸು ಕಾಣುತ್ತಿದ್ದು, ಅದಕ್ಕೆ ನೀರೆರೆಯುವ ತಂದೆಯಾಗಿ ನಿಂತಿದ್ದಾರೆ ಸನ್ನಿ. ಮಗನಿಗೆ ಅವರ ಕಿವಿಮಾತೇನೆಂದರೆ- `ಸಿಕ್ಸ್ ಪ್ಯಾಕ್ ಮಾಡುವುದೊಂದೇ ನಾಯಕನಾಗಲು ಸಿದ್ಧತೆಯಲ್ಲ. ಅಭಿನಯವನ್ನು ಶಾಲೆಯಲ್ಲಿ ಕಲಿಯಲು ಸಾಧ್ಯವಿಲ್ಲ.ಮಾಗಬೇಕು, ನಟಿಸುವುದನ್ನು ಕಲಿಯಬೇಕು. ದೇಹ ಸಾಮರ್ಥ್ಯ ಎಂಥ ಸವಾಲನ್ನೂ ಎದುರಿಸುವಂತೆ ಇರಬೇಕು.

ಬರೀ ಆಕಾರ, ಅಲಂಕಾರವಷ್ಟೇ ಸಾಲದು. ಬುದ್ಧಿಮಟ್ಟ ಸರಿ ಇರಬೇಕು. ಸ್ಕ್ರಿಪ್ಟ್‌ಗೆ ಆದ್ಯತೆ ನೀಡಬೇಕು. ಕ್ಯಾಮೆರಾ ಎದುರಿಸುವಾಗ ಆತ್ಮವಿಶ್ವಾಸ ಭರ್ತಿಯಾಗಿರಬೇಕು'.ಮಗನಿಗೆ ಕಿವಿಮಾತು ಹೇಳುವಾಗ ಸನ್ನಿ ತಾವು `ಬೇತಾಬ್' ಹಿಂದಿ ಚಿತ್ರದ ಮೂಲಕ ಎಂಟ್ರಿ ಕೊಟ್ಟ ದಿನಗಳನ್ನು ಮೆಲುಕು ಹಾಕಿದರು. ಆಗ ಧರ್ಮೇಂದ್ರ ಮಗನ ಕುರಿತು ತುಂಬಾ ತಲೆ ಕೆಡಿಸಿಕೊಂಡಿದ್ದರಂತೆ. ಅಭಿನಯದಲ್ಲಿ ಕೊಂಚ ಎಡವಟ್ಟಾದರೂ ಜನ ನಿರಾಕರಿಸಿ ಬಿಡುತ್ತಾರೆ ಎಂದು ಪದೇಪದೇ ಎಚ್ಚರಿಕೆ ಕೊಟ್ಟಿದ್ದರಂತೆ.`ಅಪ್ಪನಿಗೆ ಭಯವಿತ್ತು. ನನಗೆ ಆತ್ಮವಿಶ್ವಾಸವಿತ್ತು. ಬೇತಾಬ್ ಚಿತ್ರದಲ್ಲಿ ಒಂದು ಸ್ಟಂಟ್ ದೃಶ್ಯವಿತ್ತು. ದೂರದಿಂದ ಎಗರಿ ಕುದುರೆ ಮೇಲೆ ಹತ್ತಿ ಅದನ್ನು ಓಡಿಸಿಕೊಂಡು ಹೋಗುವ ಸನ್ನಿವೇಶ ಅದು. ನಾನು ಆಗ ನಿರಂತರವಾಗಿ ಆಟಗಳನ್ನು ಆಡುತ್ತಿದ್ದೆ. ಮನೆಯವರೆಲ್ಲಾ ನನ್ನನ್ನು ಸ್ಪೋರ್ಟ್ಸ್‌ಮನ್ ಎಂದೇ ಕರೆಯುತ್ತಿದ್ದರು. ಸ್ಟಂಟ್ ಮಾಡುವುದು ಅಸಹಜ ಎಂದು ಆಗ ಅನಿಸಲೇ ಇಲ್ಲ. ಈಗ ಅದೇ ದೃಶ್ಯವನ್ನು ನನ್ನ ಮಗ ಮಾಡುವ ಪರಿಸ್ಥಿತಿ ಬಂದರೆ ನಾನೂ ಅಪ್ಪನಂತೆ ಚಡಪಡಿಸುವೆನೋ ಏನೋ' ಎನ್ನುವ ಸನ್ನಿ ಬೆಂಬಲಕ್ಕೆ ಅವರ ಪತ್ನಿಯೂ ಇದ್ದಾರೆ.ಸನ್ನಿ ಪತ್ನಿಗೆ ಎರಡು ಹೆಸರು. ಒಂದು- ಲಿಂಡಾ, ಇನ್ನೊಂದು-ಪೂಜಾ. ಅವರು ಪೂಜಾ ಎಂದೇ ಕರೆಯುವುದು. `ಯಮ್ಲಾ ಪಗಲಾ ದೀವಾನಾ-2' ಚಿತ್ರಕ್ಕೆ ಕತೆ ಬರೆದುಕೊಟ್ಟಿದ್ದು ಅದೇ ಪೂಜಾ. ಇಂಗ್ಲೆಂಡ್‌ನ ಪರಿಸರದಲ್ಲಿ ಕತೆ ನಡೆಯುವುದರಿಂದ, ಪೂಜಾಗೆ ಅಲ್ಲಿನ ಸೂಕ್ಷ್ಮಗಳು ಗೊತ್ತಿದ್ದವು. ಹಾಗಾಗಿ ಕತೆಯನ್ನು ಅವರ ಇಚ್ಛೆಯಂತೆಯೇ ಬೆಳೆಸಲು ಬಿಟ್ಟದ್ದು. ಸಿನಿಮಾದ ಮೂರನೇ ಭಾಗವನ್ನು ಚಿತ್ರೀಕರಿಸುವ ಉದ್ದೇಶವೂ ಇದ್ದು, ಅದಕ್ಕೂ ಪೂಜಾ ಕತೆ ಬರೆಯುವ ಸಾಧ್ಯತೆ ಇದೆಯಂತೆ.`ಘಾಯಲ್' ಚಿತ್ರದ ಇನ್ನೊಂದು ಭಾಗ ತೆಗೆಯುವ ಬಯಕೆ ಇರುವ ಸನ್ನಿ ನಿತ್ಯವೂ ಟೆನಿಸ್ ಆಡುತ್ತಾರೆ. ಧೂಮಪಾನ, ಮದ್ಯಪಾನದಿಂದ ಅವರು ದೂರ. ಬೆನ್ನುನೋವನ್ನು ಗಮನದಲ್ಲಿಟ್ಟುಕೊಂಡೇ ನಿತ್ಯವೂ ತಪ್ಪದೆ ವ್ಯಾಯಾಮ ಮಾಡುತ್ತಾರೆ. ಮಗನಿಗೆ ಮಾದರಿ ಸಿನಿಮಾ ನಾಯಕ ಹೇಗಿರಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕವೇ ತಿಳಿಸಿಕೊಡುವುದು ಅವರ ಸದ್ಯದ ಉದ್ದೇಶ. ರಾಜ್‌ವೀರ್ ಎಂಬ ಇನ್ನೊಬ್ಬ ಮಗನಿದ್ದು, ಅವನೂ ಮುಂದೊಂದು ದಿನ `ಅಪ್ಪ, ನಾನು ಹೀರೊ ಆಗಬೇಕು' ಎನ್ನುತ್ತಾನೆ ಎಂದು ಸನ್ನಿ ಕನಸು ಕಾಣುತ್ತಿದ್ದಾರೆ. ತಮ್ಮ ಕುಟುಂಬದ ಅಷ್ಟೂ ಮಕ್ಕಳು ಚಿತ್ರರಂಗದ ಭಾಗವಾಗಬೇಕು ಎಂಬುದು ಅವರ ಮಹತ್ವಾಕಾಂಕ್ಷೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.