ಭಾನುವಾರ, ಏಪ್ರಿಲ್ 18, 2021
33 °C

ಸಬಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಮಹಿಳೆಯರ ಸ್ಥಾನಮಾನವನ್ನು ಮೇಲೆತ್ತಬೇಕೆಂಬ ಪ್ರಯತ್ನ ಸ್ವಾತಂತ್ರ್ಯಪೂರ್ವದಿಂದಲೂ, ಅಂದರೆ ಸುಮಾರು ಏಳೆಂಟು ದಶಕಗಳಿಂದಲೂ ನಡೆಯುತ್ತಲೇ ಬಂದಿದೆ. ಸ್ವಾತಂತ್ರ್ಯಾನಂತರ ಸಂವಿಧಾನದಲ್ಲಿ ಸಮಾನ ಹಕ್ಕು ಹಾಗೂ ವಿಶೇಷ ರಕ್ಷಣೆ ನೀಡುವುದರಿಂದ ಪ್ರಾರಂಭವಾದ ಈ ಕಾರ್ಯ ಇಂದಿಗೂ ಮುಂದುವರಿದಿದೆ.

ಮಹಿಳೆಯರನ್ನು ಜೀವನದ ನಾನಾ ಘಟ್ಟಗಳಲ್ಲಿ ರಕ್ಷಿಸುವುದಕ್ಕಾಗಿ ಸುಮಾರು 50ಕ್ಕೂ ಹೆಚ್ಚು ಕಾಯ್ದೆಗಳು ರಚನೆಯಾಗಿವೆ. ಆದರೂ ಮಹಿಳೆಯರ ವಿರುದ್ಧ ದೌರ್ಜನ್ಯಗಳೇನೂ ಕಡಿಮೆಯಾಗಿಲ್ಲ.ಹೆಚ್ಚು ಹೆಚ್ಚು ಕಾನೂನುಗಳನ್ನು ರಚಿಸಿದರೆ ಮಹಿಳೆಯರು ಸಬಲರಾಗುತ್ತಾರೆ, ಅವರ ವಿರುದ್ಧದ ದೌರ್ಜನ್ಯಗಳನ್ನು ತಡೆಗಟ್ಟಬಹುದು ಎಂಬ ನಂಬಿಕೆ ಸುಳ್ಳಾಗುತ್ತಿದೆ. ವರದಕ್ಷಿಣೆ ಪಿಡುಗು ನಿವಾರಣೆಗೆಂದು ರಚನೆಯಾದ ಕಾನೂನು ಜಾರಿಗೆ ಬಂದು ಅನೇಕ ವರ್ಷಗಳಾದರೂ ಈಗಲೂ ವರದಕ್ಷಿಣೆ ಹಿಂಸೆ, ವರದಕ್ಷಿಣೆ ಸಾವುಗಳು ನಡೆಯುತ್ತಲೇ ಇರುವುದು ಈ ಮಾತಿಗೆ ಸಾಕ್ಷಿ. ಇದಕ್ಕೆಲ್ಲ ಪ್ರಮುಖ ಕಾರಣ ಏನು?, ಹಾಗಿದ್ದರೆ ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆಯುವ ಬಗೆ ಹೇಗೆ?ಪ್ರತಿಯೊಬ್ಬರೂ ಕಾನೂನುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅಂಗೀಕರಿಸಿ, ಅಳವಡಿಸಿಕೊಳ್ಳಬೇಕು ಎಂಬುದೇ ಇದಕ್ಕೆ ತಕ್ಕ ಉತ್ತರ. ಹಾಗಾದಾಗ ಮಾತ್ರ ಮಹಿಳಾ ಪರ ಕಾನೂನುಗಳು ಸಾರ್ಥಕವಾಗುತ್ತವೆ. ಸಮಾಜದಲ್ಲಿ ಶೋಷಣೆ ನಡೆಯುತ್ತಿರುವವರೆಗೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಹಿಳೆಯರು ಆಂತರಿಕ ಶಕ್ತಿ ಹೊಂದುವವರೆಗೆ ಅವರಿಗೆ ಕಾನೂನಿನ ಸಹಾಯ ಅನಿವಾರ್ಯ. ಸಾಮಾನ್ಯವಾಗಿ ಮಹಿಳೆಯರಿಗೆ ಎದುರಾಗುವ ಮಾದರಿ ಪ್ರಶ್ನೆಗಳು ಮತ್ತು ಉತ್ತರ ಇಲ್ಲಿದೆ.

ಹೆಸರು ಬೇಡ, ಊರು ಮೊಂಟರಗಿ

ಪ್ರಶ್ನೆ: ನನಗೆ ಮದುವೆಯಾದಾಗ 15 ವರ್ಷ ಮಾತ್ರ. ಈಗ 25 ವರ್ಷ. ನಾನು ಮೆಜಾರಿಟಿಗೆ ಬರುವ ಮೊದಲೇ ಮದುವೆ ಆಗಿರುವುದು ಕಾನೂನುಬಾಹಿರ, ಆದ್ದರಿಂದ ನನಗೆ ವಿಚ್ಛೇದನ ಕೊಡುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇದರಿಂದ ನನಗೆ ಬಹಳ ಭಯ ಆಗುತ್ತಿದೆ. ನನಗೆ ಈಗ ಎರಡು ಮಕ್ಕಳೂ ಇವೆ. ಏನು ಮಾಡಲಿ ಸೂಕ್ತ ಸಲಹೆ ಕೊಡಿ.

ಉತ್ತರ: ನೀವು ಭಯಪಡಬೇಕಾಗಿಲ್ಲ. ನೀವು ಹಿಂದೂ ಇರಬಹುದೆಂದು ನಾನು ಊಹಿಸಿಕೊಳ್ಳುತ್ತೇನೆ. ಹಿಂದೂ ವಿವಾಹ ಕಾಯ್ದೆಯ ಅನ್ವಯ ಅಪ್ರಾಪ್ತ ವಯಸ್ಸಿನಲ್ಲಿ ವಿವಾಹ ನಿಷಿದ್ಧ. ಆದರೂ ಅಂತಹ ವಿವಾಹವನ್ನು ಸಿಂಧುವಾಗಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಅಷ್ಟೇ ಅಲ್ಲದೆ ಇಂತಹ ಸಂದರ್ಭಗಳಲ್ಲಿ, ವಿವಾಹವಾದ ಒಂದು ವರ್ಷದೊಳಗಾಗಿ ಅಥವಾ ನೀವು ಮೆಜಾರಿಟಿಗೆ ಬಂದ ಕೂಡಲೇ ಈ ವಿವಾಹವನ್ನು ರದ್ದು ಮಾಡಿಕೊಳ್ಳಲು ಅವಕಾಶ ಇದ್ದರೂ ನೀವಾಗಲಿ, ನಿಮ್ಮ ಪತಿರಾಯರೇ ಆಗಲಿ ಈ ತಕರಾರನ್ನು ತೆಗೆಯದೇ ಸುಖವಾಗಿ ಸಂಸಾರ ಮಾಡುತ್ತಿದ್ದು, ಮಕ್ಕಳನ್ನೂ ಪಡೆದಿದ್ದೀರಿ. ಈ ಹಿನ್ನೆಲೆಯಲ್ಲಿ, ಮದುವೆಯಾಗುವಾಗ ನಡೆದ ಕಾನೂನಿನ ಲೋಪ ಈಗ ಉಳಿದಿಲ್ಲ, ಅದು ಕೊನೆಗೊಂಡಿದೆ.

ಹೆಸರು ಬೇಡ, ರಾಮೇಶ್ವರ

ನಾನು ಕಾಲೇಜಿನಲ್ಲಿ ಓದುತ್ತಾ ಇದ್ದೇನೆ. ನಮ್ಮ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡುತ್ತಾರೆ. ನಾನು ಈ ವಿಷಯದಲ್ಲಿ ಅವರಿಗೆ ನೆರವಾಗದಿದ್ದರೆ ನನಗೇ ರ‌್ಯಾಗಿಂಗ್ ಮಾಡುತ್ತೇವೆ ಎಂದು ಹೆದರಿಸುತ್ತಾರೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ?

ರ‌್ಯಾಗಿಂಗ್ ಎಂಬ ದುಷ್ಟ ನಡತೆ ಪದ್ಧತಿಯಾಗಿ ಬೆಳೆದು ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ತಪ್ಪಿಸಲು, ಅದನ್ನು ನಿಷೇಧಿಸಿ ಸರ್ಕಾರ ಒಂದು ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಪಿಡುಗು ಶಿಕ್ಷಾರ್ಹವಾದ ಅಪರಾಧ ಆಗಿರುವುದರಿಂದ ಅದನ್ನು ಪ್ರತಿಭಟಿಸಬಹುದು. ಕಾಲೇಜಿನ ಪ್ರಾಂಶುಪಾಲರಿಗೆ ದೂರು ಕೊಡಬಹುದು. ಪೋಲೀಸರಿಗೂ ದೂರಿತ್ತು ದುಷ್ಟರಿಗೆ ಬುದ್ಧಿ ಕಲಿಸಬಹುದು.               

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.