ಸೋಮವಾರ, ಮೇ 17, 2021
23 °C

ಸಮಗ್ರ ತನಿಖೆ ನಡೆಯಲಿ-ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದಲ್ಲಿ ತಮ್ಮ ಅವಧಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ವಿಚಾರದಲ್ಲಿ ಯಾವ ತನಿಖೆಗೂ ನಾವಿಬ್ಬರು ಸಿದ್ಧ. ಅದೇ ರೀತಿ ಈಗಿನ ಅಧ್ಯಕ್ಷರ ಅವಧಿಯಲ್ಲಾದ ವಿಚಾರಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಸಂಘದ ಮಾಜಿ ಅಧ್ಯಕ್ಷ ಬಿ.ಟಿ.ನಾರಾಯಣ ಭಟ್ ತಿಳಿಸಿದ್ದಾರೆ. ದ.ಕ.ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದಲ್ಲಿ ಮಾಜಿ ಅಧ್ಯಕ್ಷರಾದ ಬಿ.ಟಿ.ನಾರಾಯಣ ಭಟ್ ಮತ್ತು ಭಾಸ್ಕರ ರೈ ಕಂಟ್ರಮಜಲು ಅವರ ಅಧ್ಯಕ್ಷಾವಧಿಯಲ್ಲಿ ವಂಚನೆ, ಹಣ ದುರುಪಯೋಗ ಮತ್ತು ಅವ್ಯವಹಾರ ನಡೆದಿದೆ ಎಂದು ನರಿಮೊಗ್ರುವಿನ ಎ.ಎನ್. ಶಶಿಧರ್ ಎಂಬವರು ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಬಿ.ಟಿ.ನಾರಾಯಣ ಭಟ್ ಅವರು ರಾಜ್ಯಪಾಲರಿಗೆ ನೀಡಿರುವ ಸ್ಪಷ್ಟನೆಯಲ್ಲಿ ತನಿಖೆಗೆ ಆಗ್ರಹಿಸಿದ್ದಾರೆ.ತಾವು ಸಂಘದಲ್ಲಿ 9 ವರ್ಷ ಕಾಲ ಅಧ್ಯಕ್ಷನಾಗಿ ದುಡಿದಿದ್ದು, ಯಾವ ವಂಚನೆಯನ್ನೂ ಮಾಡಿಲ್ಲ. ತಮ್ಮ ಅವಧಿಯಲ್ಲಿ ಸಂಘ ಉನ್ನತ ಸ್ಥಿತಿಗೆ ಹೋಗಿದ್ದು, ಆ ಸಂದರ್ಭದಲ್ಲಿ ಭಾರಿ ಲಾಭ ಬಂದಿತ್ತು. ಸದಸ್ಯರಿಗೆ ಶೇ.25ರಷ್ಟು ಲಾಭಾಂಶ ನೀಡಲಾಗಿತ್ತು. ಜೇನು ಸಾಕಿದವರಿಗೆ ರೂ.10 ಬೋನಸ್ ನೀಡಲಾಗಿತ್ತು. ನಿವ್ವಳ ಲಾಭದ ವಿನಿಯೋಗ ಕಲಂ ಪ್ರಕಾರ ಮಹಾಸಭೆಯಲ್ಲಿಟ್ಟು ಅಧ್ಯಕ್ಷರಿಗೆ ಗೌರವ ಧನ ನೀಡಿದೆ ಎಂದು ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಸ್ಪಷ್ಟೀಕರಣದಲ್ಲಿ ಮನವರಿಕೆ ಮಾಡಿದ್ದಾರೆ.ಇದೀಗ ಬರ್ಖಾಸ್ತುಗೊಂಡಿರುವ ಸಮಿತಿಯ ಅಧ್ಯಕ್ಷರು ಸಂಘದ ಕಚೇರಿಯನ್ನು ಜನತಾದಳದ ಕಚೇರಿಯಂತೆ ಉಪಯೋಗಿಸುತ್ತಿದ್ದು, ಅದಕ್ಕೆ ಅಡ್ಡಿಯಾಯಿತೆಂಬ ಕಾರಣಕ್ಕಾಗಿ ಇಲ್ಲ ಸಲ್ಲದ ಆರೋಪ ಮಾಡಲು ಹೊರಟಿದ್ದಾರೆ. ದೂರುದಾರರಾದ ವಿ.ಎನ್.ಶಶಿಧರ್ ಅವರ ನೆಂಟರಾಗಿದ್ದು, ಈ ಮೊದಲು ತಮ್ಮ ಅವಧಿಯಲ್ಲಿ 14 ಡಬ್ಬ ಕಲಬೆರಕೆ ಜೇನನ್ನು ಮಾರಾಟ ಮಾಡಲು ಸಂಘಕ್ಕೆ ಬಂದಿದ್ದರು. ಆ ಜೇನನ್ನು ಪುಣೆಯ ಕೆ.ವಿ.ಐ.ಸಿ. ಲ್ಯಾಬಿನಲ್ಲಿ ಪರೀಕ್ಷಿಸಿ ತಿರಸ್ಕರಿಸಲಾಗಿತ್ತು. ಈ ದ್ವೇಷದಿಂದ ಅವರು ಮತ್ತೆ ಸಂಘದ ಆಡಳಿತ ಮಂಡಳಿ ಚುನಾವಣೆಗೆ ನಮ್ಮ ವಿರುದ್ಧ ಗುಂಪುಕಟ್ಟಿ ಸ್ಪರ್ಧಿಸಿ ಸೋತಿದ್ದರು.  ಈ ಸೇಡಿನಿಂದಾಗಿಯೇ ಇದೀಗ ಈ ರೀತಿಯ ಆರೋಪ ಮಾಡಿ ದೂರು ನೀಡಿದ್ದಾರೆ ಎಂದು ನಾರಾಯಣ ಭಟ್ ತಿಳಿಸಿದ್ದಾರೆ.`ನನ್ನ ಮತ್ತು ಭಾಸ್ಕರ ರೈ ಅವರ ಬಳಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಐ.ಸಿ.ಕೈಲಾಸ್ ಅವರು 5 ಸಾವಿರ ಕೆಜಿ ಬೆಲ್ಲ ಪಾಕದ ಜೇನು ಖರೀದಿಸಲು ಪ್ರಯತ್ನಿಸಿದ್ದ ವೇಳೆ ಆಗಿನ ವ್ಯವಸ್ಥಾಪಕ ನಿರ್ದೇಶಕರು ಆ ಜೇನನ್ನು ಪರೀಕ್ಷಿಸಿ ಆ ಜೇನು ಬೇಡ ಎಂದು ತಿಳಿಸಿದ್ದರು. ಅವರ ನಿವೃತ್ತಿಯ ಬಳಿಕ ಪ್ರಭಾರ ವ್ಯವಸ್ಥಾಪಕರಾದ ಶ್ರೀಧರ ಗೌಡ ಮತ್ತು ಐ.ಸಿ.ಕೈಲಾಸ ಅವರು ಸೇರಿಕೊಂಡು ಆ ಜೇನನ್ನು ಖರೀದಿಸಿ ಈಗ ಹಣ ಪಾವತಿ ಮಾಡಿದ್ದಾರೆ. ಬೇರೆ ಉತ್ತಮ ಜೇನಿಗೆ ಕಲಬೆರಕೆ ಮಾಡಿ ಅದನ್ನು ಮಾರಾಟ ಮಾಡಿದ್ದಾರೆ.ನಮ್ಮ ಆಕ್ಷೇಪವನ್ನು ಗಣನೆಗೆ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ನಾವು ರಾಜೀನಾಮೆ ನೀಡಬೇಕಾಯಿತು~ ಎಂದು ಹೇಳಿದ್ದಾರೆ.ಸಂಘದೊಳಗಿನ ಆಂತರಿಕ ಕಲಹ. ಪರ-ವಿರೋಧ ಆರೋಪದಿಂದಾಗಿ  ಸಂಘದ ಬಗ್ಗೆ ಜೇನು ವ್ಯವಸಾಯಗಾರರು ವಿಶ್ವಾಸ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂಬ ಮಾತು ಕೇಳಿಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.