ಶನಿವಾರ, ಫೆಬ್ರವರಿ 27, 2021
27 °C
ಶೈಕ್ಷಣಿಕ ಅಂಗಳ - ಮಾದಿನೂರು: ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕವಾಗಿ ವಿದ್ಯಾರ್ಥಿಗಳ ಸಾಧನೆ

ಸಮಗ್ರ ಬೆಳವಣಿಗೆ ಹಾದಿಯಲ್ಲಿ ಸರ್ಕಾರಿ ಶಾಲೆ

ಪ್ರಜಾವಾಣಿ ವಾರ್ತೆ / ಮಂಜಪ್ಪ ಕೆ. ಅಗಸಿಮುಂದಿನ Updated:

ಅಕ್ಷರ ಗಾತ್ರ : | |

ಸಮಗ್ರ ಬೆಳವಣಿಗೆ ಹಾದಿಯಲ್ಲಿ ಸರ್ಕಾರಿ ಶಾಲೆ

ಕೊಪ್ಪಳ: ಶಾಲೆಯ ಅಂಗಳದಲ್ಲಿ ಹಸಿರು ಹುಲ್ಲಿನ ಹಾಸು, ಜ್ಞಾನ ಭಂಡಾರ ತುಂಬಿದ ಗೋಡೆಗಳು, ಸುಂದರ ಶಾಲಾ ಕಟ್ಟಡ, ಮಕ್ಕಳನ್ನು ಆಕರ್ಷಿಸುವ ನಲಿಕಲಿ ಚಪ್ಪರ... ಇದು ತಾಲ್ಲೂಕಿನ ಮಾದಿನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ.‘1947ರಲ್ಲಿ ಶಾಲೆ ಆರಂಭವಾಯಿತು. ಶಿಕ್ಷಣದಲ್ಲಿ ಗ್ರಾಮಸ್ಥರು ಹೆಚ್ಚಿನ ಆಸಕ್ತಿ ಹೊಂದಿದ್ದು, ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 238 ದಾಖಲಾತಿ ಇದೆ. ಸರ್ಕಾರದ ವಿವಿಧ ಯೋಜನೆಗಳು, ನುರಿತ ಶಿಕ್ಷಕರ ವಿಭಿನ್ನ ಚಟುವಟಿಕೆಗಳಿಂದ ಕೂಡಿದ ಬೋಧನೆ, ಶಾಲೆಯ ಹಸಿರು ವಾತಾವರಣ ಮುಂತಾದ ಕಾರಣಗಳಿಂದ ಶಾಲೆಯಲ್ಲಿ ಸಂಪೂರ್ಣ ಹಾಜರಾತಿ ಇರುತ್ತದೆ. ಶಾಲೆಯಲ್ಲಿ ಒಟ್ಟು 10 ಶಿಕ್ಷಕರು ಇದ್ದಾರೆ.ಒಂದು ವರ್ಷದಿಂದ ಶಿಕ್ಷಕರ ಕೊರತೆ ನೀಗಿದ್ದು, ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆದಿದೆ. ಗ್ರಾಮಸ್ಥರು, ಗ್ರಾಮಪಂಚಾಯಿತಿ ಮತ್ತು ಎಸ್‌ಡಿಎಂಸಿ ಸದಸ್ಯರು ಹಾಗೂ ಸಹ ಶಿಕ್ಷಕರ ಸಹಕಾರದಿಂದ ಈ ಎಲ್ಲ ಅಭಿವೃದ್ಧಿ ಕಾರ್ಯಗಳು ಸಾಧ್ಯ.ಪ್ರತಿದಿನ ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಗೆ ಭೇಟಿ ನೀಡಿ ಶಾಲಾ ನಿರ್ವಹಣೆ ಹಾಗೂ ಪಾಠ ಬೋಧನೆಗಳನ್ನು ವೀಕ್ಷಿಸುತ್ತಿದ್ದಾರೆ. ಶಾಲೆಯಲ್ಲಿ ಕಂಪ್ಯೂಟರ್‌ ಕೊರತೆ ಇದ್ದು, ಇನ್ಫೋಸಿಸ್‌ ಕಂಪೆನಿಯು 4 ಕಂಪ್ಯೂಟರ್‌ ಪೂರೈಸುವುದಾಗಿ ಭರವಸೆ ನೀಡಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ನಾರಾಯಣ ಚಿತ್ರಗಾರ.‘ಪ್ರತಿ ವರ್ಷ ವಿದ್ಯಾರ್ಥಿಗಳು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾಮಟ್ಟದವರೆಗೆ ಭಾಗವಹಿಸಿದ್ದಾರೆ. ಪ್ರಸಕ್ತ ಸಾಲಿನ ವಲಯಮಟ್ಟದ ಕ್ರೀಡಾಕೂಟದಲ್ಲಿ ವಾಲಿಬಾಲ್‌, ಥ್ರೋಬಾಲ್‌, ಗುಂಡು ಎಸೆತಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಒಟ್ಟು 48 ಪ್ರಶಸ್ತಿಗಳು ಹಾಗೂ 4 ಫಲಕಗಳು ಲಭಿಸಿವೆ. ಹಸಿರು ಮತ್ತು ಹೂಗಳು ಮಕ್ಕಳನ್ನು ಬೇಗ ಆಕರ್ಷಿಸಿಸುವುದರಿಂದ ಶಾಲೆಯಲ್ಲಿ ಹಸಿರೀಕರಣ ಕಾರ್ಯಕೈಗೊಳ್ಳಲಾಗಿದೆ. ಸ್ಥಳೀಯವಾಗಿ ಲಭ್ಯವಿರುವ ಹೂವಿನ ಗಿಡಗಳನ್ನು ಇಲ್ಲಿ ನೆಡಲಾಗುತ್ತಿದೆ. ಅವುಗಳನ್ನು ಉಳಿಸಿ ಬೆಳೆಸಲು ಗ್ರಾಮಸ್ಥರ ಸಹಕಾರ ಅವಶ್ಯ’ ಎನ್ನುತ್ತಾರೆ ದೈಹಿಕ ಶಿಕ್ಷಕ ಮಂಜುನಾಥ.‘ಶಾಲೆಯಲ್ಲಿ ನುರಿತ ಶಿಕ್ಷಕರಿದ್ದು ಹೊಸ ಹೊಸ ಶೈಕ್ಷಣಿಕ ಪ್ರಯೋಗಗಳನ್ನು ಮಾಡುತ್ತಾರೆ. ಗ್ರಾಮ ಪಂಚಾಯಿತಿ ಸಹಕಾರದಿಂದ ಉದ್ಯಾನ ನಿರ್ಮಿಸಲಾಗಿದೆ. ಶಾಲೆಗೆ ಎರಡು ಕೊಠಡಿಗಳ ಅವಶ್ಯಕತೆಯಿದೆ. ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ’ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಭೀಮಸೇನಾಚಾರ್‌ ಅಡವಿ.

*

2022ರ ವೇಳೆಗೆ ಶಾಲೆ ಆವರಣವನ್ನು ಸಂಪೂರ್ಣ  ಹಸಿರು  ಮಾಡಲು ಹಾಗೂ ಕಂಪ್ಯೂಟರ್‌  ಮೂಲಕ ಶಿಕ್ಷಣ  ನೀಡುವ ಗುರಿ ಹಾಕಿಕೊಳ್ಳಲಾಗಿದೆ.

-ನಾರಾಯಣ ಚಿತ್ರಗಾರ

ಮುಖ್ಯ ಶಿಕ್ಷಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.