ಗುರುವಾರ , ಮೇ 13, 2021
16 °C

ಸಮ್ಮೇಳನಾಧ್ಯಕ್ಷರಾಗಿ ಪೂಜಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಕ್ಕಳ ಸಾಹಿತಿ ಹ.ಮ. ಪೂಜಾರ ಸರ್ವಾನುಮತದಿಂದ ಆಯ್ಕೆ ಯಾಗಿದ್ದಾರೆ. ಜೂನ್ 15ರಂದು ಸಿಂದಗಿ ತಾಲ್ಲೂಕಿನ ಬೋರಗಿ-ಪುರದಾಳ ಗ್ರಾಮದಲ್ಲಿ ಸಮ್ಮೇಳನ ನಡೆಯಲಿದೆ.ಹ.ಮ.ಪೂಜಾರ ಅವರ ಪೂರ್ಣ ಹೆಸರು ಹನುಮಂತ್ರಾಯ ಮನ್ನಪ್ಪ ಪೂಜಾರ. 1943, ಮಾರ್ಚ್ 13 ರಂದು ಸಿಂದಗಿಯಲ್ಲಿ ಜನನ. ವಿದ್ಯಾರ್ಹತೆ ಬಿ.ಎ.,ಬಿ.ಇಡಿ. ಇವರು 39 ವರ್ಷಗಳ ಕಾಲ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಮಕ್ಕಳ ಬಳಗ ಸ್ಥಾಪಿಸಿ ತನ್ಮೂಲಕ ಮಕ್ಕಳ ಹಬ್ಬ, ಅಂತರರಾಷ್ಟ್ರೀಯ ಮಕ್ಕಳ ವರ್ಷ, ಅರಳುವ ಗುಲಾಬಿಗಳ ಮೇಳ, ಬಾಲ ಮೇಳ, ಬಿಡುವಿನ ಮನೆ, ಮಕ್ಕಳ ಸಾಹಿತ್ಯೋತ್ಸವ, ಮನೆಯಂಗಳದಲ್ಲಿ ಚಿಲಿಪಿಲಿ, ಶಾಲೆಯ ಆವರಣದಲ್ಲಿ ಮಕ್ಕಳ ಕಲರವ, ಓದಿ ಕಲಿ ಹಾಡಿ ನಲಿ ಎಂಬಿತ್ಯಾದಿ  ರಚನಾತ್ಮಕ ಮಕ್ಕಳ ಕಾರ್ಯಕ್ರಮ ರೂಪಿಸಿ ಯಶಸ್ವಿಯಾಗಿದ್ದಾರೆ. ಇವರನ್ನು ಮಕ್ಕಳು `ಮಕ್ಕಳ ಚಾಚಾ' ಎಂದೇ ಕರೆಯುವುದುಂಟು.ಮಕ್ಕಳಿಗಾಗಿ ಇವರು ನೀತಿಯ ಬದುಕು, ಪರಿಸರ, ತುಂಟ ಮಂಗ, ಪರೋಪಕಾರ ಹಲವಾರು ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೇ ಮಕ್ಕಳಿಗಾಗಿ ಹಲವಾರು ಸಂಪಾದಿತ ಕೃತಿಗಳು ಹೊರ ಬಂದಿವೆ. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಶಿಕ್ಷಕರ ವೇದಿಕೆಯಿಂದ ರಾಜ್ಯ ಮಟ್ಟದ ಪ್ರಶಸ್ತಿ ಕರ್ನಾಟಕ ಶಿಕ್ಷಕ ಪ್ರಶಸ್ತಿ, ರಾಜ್ಯ ಸರ್ಕಾರದ ಆದರ್ಶ ಶಿಕ್ಷಕ ಪ್ರಶಸ್ತಿ, ರಾಷ್ಟ್ರ ಮಟ್ಟದ ಕೇಂದ್ರ ಸರ್ಕಾರದ ಆದರ್ಶ ಶಿಕ್ಷಕ ಪ್ರಶಸ್ತಿ, ಚಿಲಿಪಿಲಿ ಧಾರವಾದ ಅವರಿಂದ ಶಿಕ್ಷಣ ಸಿರಿ, ಬೆಳಗಾವಿ ಕಾರಂಜಿಮಠದಿಂದ ಡೆಪ್ಯೂಟಿ ಚೆನ್ನಬಸಪ್ಪ ಪ್ರಶಸ್ತಿ, ಉಜ್ವಲಾ ಸಂಸ್ಥೆ ವಿಜಾಪುರ ಅವರಿಂದ ಮಕ್ಕಳ ಮಿತ್ರ ಪ್ರಶಸ್ತಿ, ಹುಬ್ಬಳ್ಳಿ ಮೂರುಸಾವಿರಮಠದಿಂದ ಸಾಹಿತ್ಯ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.ಇವರು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯ ಗೌರವ ವನ್ಯಜೀವಿ ಪರಿಪಾಲಕ ಎಂದು ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾಗಿಯೂ ವಿಶೇಷ ಸೇವೆ ಸಲ್ಲಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.