ಭಾನುವಾರ, ಜನವರಿ 19, 2020
28 °C
ವೃತ್ತಿ ಶಿಕ್ಷಣ ಕಾಯ್ದೆ– 2006 ಜಾರಿಗೆ ವಿರೋಧ

ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ– 2006 ಜಾರಿಗೆ ವಿರೋಧಿಸಿ ಮತ್ತು ಈಚೆಗೆ ವೈದ್ಯಕೀಯ ಶಿಕ್ಷಣ ಸಚಿವರು ನೀಡಿರುವ ಬೇಜವಾಬ್ದಾರಿ ಹೇಳಿಕೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಘಟಕದ ಕಾರ್ಯ­ಕರ್ತರು ಶುಕ್ರವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟ­ನಾಕಾರರು ಎನ್‌.ಆರ್‌. ವೃತ್ತ, ಆರ್‌.ಸಿ. ರಸ್ತೆ ಹಾಗೂ ಎ.ವಿ.ಕೆ. ಮಹಿಳಾ ಕಾಲೇಜು ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.‘2013–14ನೇ ಸಾಲಿನಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನ ವೈದ್ಯಕೀಯ ಸೀಟಿಗೆ 46 ಸಾವಿರ, ದಂತ ವೈದ್ಯಕೀಯಕ್ಕೆ 35 ಸಾವಿರ ಹಾಗೂ ಎಂಜನಿಯರಿಂಗ್‌ ಕೋರ್ಸ್‌ಗೆ 38 ಸಾವಿರ ಶುಲ್ ಪಾವತಿಸಿದ್ದಾರೆ. ಹೊಸ ಕಾಯ್ದೆ ಜಾರಿಯಾದ ನಂತರ 2014–15ನೇ ಸಾಲಿನಲ್ಲಿ ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾದ ಸೀಟುಗಳೇ ಇಲ್ಲದಂತಾಗುತ್ತವೆ.ಕಾಲೇಜಿನ ಸೌಲಭ್ಯಗಳ ಆಧಾರದಲ್ಲಿ  ಶುಲ್ಕ ನಿಗದಿಯಾ­ಗಲಿದ್ದು, ಇದರಿಂದ ಇವರು ಮೂರು ಪಟ್ಟು ಹಚ್ಚು ಶುಲ್ಕ ನೀಡಬೇಕಾ­ಗುವ ಸಾಧ್ಯತೆ ಇದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.ಎಂಜಿನಿಯರಿಂಗ್‌, ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪಥಿ, ಆಯುರ್ವೇದ ಕೋರ್ಸ್‌ಗಳಿಗೆ ಪ್ರತಿ ವರ್ಷ ಸುಮಾರು 70 ಸಾವಿರ ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕಕ್ಕೆ ಪ್ರವೇಶಾತಿ ನೀಡಲಾಗುತ್ತಿತ್ತು. ಹೊಸ ಕಾಯ್ದೆ ಜಾರಿಯಿಂದಾಗಿ ಕೇವಲ ಎಲ್ಲಾ ಕೋರ್ಸ್‌ ಸೇರಿ 10 ಸಾವಿರ ಸೀಟುಗಳಿಗೆ ಸರ್ಕಾರ ಪ್ರವೇಶ ಪರೀಕ್ಷೆ ನಡೆಸಬೇಕಾಗುತ್ತದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದ್ದು, ವೃತ್ತಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕನಸಿಗೆ ಸರ್ಕಾರ ಅಡ್ಡಿ ಪಡಿಸಿದಂತಾಗುತ್ತದೆ. ಸರ್ಕಾರ ಕೂಡಲೇ ವಿದ್ಯಾರ್ಥಿ ವಿರೋಧಿ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಎ.ಬಿ.ವಿ.ಪಿ. ನಗರ ಕಾರ್ಯದರ್ಶಿ ಲಕ್ಷ್ಮೀಕೇಶವ್‌ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.

ದಲಿತ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ: ನೂತನ ಕಾಯ್ದೆಯನ್ನು ವಿರೋಧಿಸಿ ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿಯ ಕಾರ್ಯಕರ್ತರು ಸಹ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಈ ಕಾಯ್ದೆ­ಯಿಂದ ದಲಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗು­ವುದು. ವೃತ್ತಿ ಶಿಕ್ಷಣದಲ್ಲೂ ಸಾಮಾಜಿಕ ನ್ಯಾಯ ಒದಗಿಸಬೇಕೆಂಬ ಉದ್ದೇಶದಿಂದ ಹಿಂದೆ ಸಿ.ಇ.ಟಿ. ಆರಂಭಿಸಲಾಗಿತ್ತು. ಹೊಸ ಕಾಯ್ದೆ ಜಾರಿ ಮಾಡಿದರೆ ಸಿ.ಇ.ಟಿ ಪರೀಕ್ಷೆಗೆ ಔಚಿತ್ಯವೇ ಇರುವುದಿಲ್ಲ’ ಎಂದು ಅವರು ವಾದಿಸಿದರು.ಒಕ್ಕೂಟದ ಸಂಚಾಲಕರಾದ ಜಯರಾಮು, ಚೆಲುವ­ರಾಜ್‌, ಮಲ್ಲೇಶ್‌, ಲೋಕೇಶ್‌, ಗೀತಾ, ತ್ರೀವೇಣಿ, ವಿಜೇಯೇಂದ್ರ ಹಾಗೂ ಇತರರು ಹಾಜರಿದ್ದರು.ಹೊಳೆನರಸೀಪುರ ವರದಿ:  ಶಿಕ್ಷಣ ಕಾಯ್ದೆ– 2006ರ ಜಾರಿಗೆ ವಿರೋಧಿಸಿ ಇಲ್ಲಿನ ಕಾಲೇಜುಗಳು ವಿದ್ಯಾರ್ಥಿನಿಯರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಸರ್ಕಾರದ ನೀತಿಗೆ ಧಿಕ್ಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿನಿಯರು ಗಾಂಧಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ನಂತರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.ಈ ಕಾಯ್ದೆ ಜಾರಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಸರ್ಕಾರಿ ಕೋಟಾದಲ್ಲಿ­ರುವ ಎಂಜಿನಿಯರಿಂಗ್‌ನ ಶೇ 45, ವೈದ್ಯಕೀಯ ಶಿಕ್ಷಣದ ಶೇ 40 ಹಾಗೂ ದಂತ ವೈದ್ಯಕೀಯದ ಶೇ 35ರಷ್ಟು ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ.ಯಾವುದೇ ಸರ್ಕಾರಿ ಹಾಗೂ ಅನುದಾನಿತ ಕಾಲೇಜು­ಗಳಲ್ಲಿ ಸರ್ಕಾರಿ ಸೀಟುಗಳೇ ಇಲ್ಲದಂತಾಗುತ್ತವೆ. ಎಲ್ಲವೂ ಕಾಮೆಡ್‌– ಕೆ ಮೂಲಕವೇ ವಿತರಣೆಯಾಗು­ವುದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಆದ್ದರಿಂದ, ಈ 2006ರ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿದರು.ವಿದ್ಯಾರ್ಥಿಗಳಾದ ಅಮಿತ್‌, ಯೋಗಾ­ನರಸಿಂಹ, ಅಭಿಷೇಕ್, ರಮ್ಯಾ, ಸಹನಾ, ಅಶ್ವಿನಿ, ಲಿಖಿತಾ, ಕಾವ್ಯ ದೀಕ್ಷಿತ್‌, ರಾಜೇಂದ್ರ, ಶೋಭಾ, ರಂಗಸ್ವಾಮಿ, ಚೈತಾಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಸಕಲೇಶಪುರ ವರದಿ: 2006ರ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಸದಸ್ಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ಹಳೆ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಹಳೆ ಬಸ್ ನಿಲ್ದಾಣ ಮುಂಭಾಗ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿ, ರಾಜ್ಯ ಕಾಂಗ್ರೆಸ್‌ ಸರ್ಕಾರದ ಪ್ರತಿಕೃತಿ ದಹಿಸಿ ನಂತರ ಮಿನಿ ವಿಧಾನ ಸೌಧಕ್ಕೆ ತೆರಳಿ ತಾಲ್ಲೂಕು ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.ಕಾಯ್ದೆ ಜಾರಿಗೊಳಿಸುವುದರಿಂದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶಿಕ್ಷಣ ಗಗನ ಕುಸುಮ ಆಗಲಿದೆ. ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟದಲ್ಲಿ ಒಂದೇ ಒಂದು ಅಭ್ಯರ್ಥಿಯ ಪ್ರವೇಶಕ್ಕೆ ಅವಕಾಶ ಇಲ್ಲವಾಗುತ್ತದೆ. ಕಾಮೆಡ್‌– ಕೆ ಖಾಸಗಿ ಕಾಲೇಜುಗಳ ಆಡಳಿತಕ್ಕೆ ಒಳಪಟ್ಟಿರುವುದರಿಂದ ಹಣ ಇದ್ದವರು ಮಾತ್ರ ಕಾಮೆಡ್‌– ಕೆ ಪರೀಕ್ಷೆಯಲ್ಲಿ ಸೀಟು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲಿಯೂ ಬಡ ವಿದ್ಯಾರ್ಥಿಗಳು ವಂಚನೆಗೆ ಒಳಗಾಗಬೇಕಾಗುತ್ತದೆ ಎಂದು ಎಬಿವಿಪಿ ನಗರ ಮಾಜಿ ಕಾರ್ಯದರ್ಶಿ ಎಸ್‌.ಎಸ್‌. ವಿಕ್ರಂ ಹೇಳಿದರು.ಸರ್ಕಾರಿ ಪದವಿಪೂರ್ವ ಕಾಲೇಜು, ಸೆಂಟ್‌ ಆ್ಯಗ್ನೇಸ್‌, ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)