ಬುಧವಾರ, ಜೂನ್ 23, 2021
30 °C

ಸರ್ಕಾರಿ ನೌಕರಿಯೊಂದೇ ಸಾಕೆ? ಬೇರೇನೂ ಬೇಡವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ ಯುವಕ ನೋಡಲು ಚೆನ್ನಾಗಿದ್ದಾನೆ. ಮದುವೆ ವಯಸ್ಸು; ಅವನ ಕಣ್ಣಲ್ಲಿ ನೂರಾರು ಕನಸುಗಳಿವೆ. ಸಾಕಷ್ಟು ಓದಿಕೊಂಡಿದ್ದಾನೆ. ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸ. ಗೌರವಯುತವಾಗಿ ಜೀವನ ನಡೆಸಲು ಸಾಕಾಗುವಷ್ಟು ಸಂಬಳವಿದೆ. ಊರಲ್ಲಿ 2-3 ಎಕರೆ ನೀರಾವರಿ ಜಮೀನಿದೆ. ಅವನ ಅಪ್ಪ ರೈತರು. ಬತ್ತ, ಕಬ್ಬು ಬೆಳೆಯುತ್ತಾರೆ.ಮನೆಯಲ್ಲಿ ದನಕರುಗಳಿವೆ. ಹೈನುಗಾರಿಕೆಯಿಂದಲೂ ಆದಾಯವಿದೆ. ಜೀವನ ನಡೆಸುವುದಕ್ಕೆ ಸಮಸ್ಯೆಗಳೇನಿಲ್ಲ. ಒಳ್ಳೆಯ ಮನೆಯೂ ಇದೆ. ಊರಲ್ಲಿ  ಮಾತ್ರವಲ್ಲ, ಸುತ್ತಮುತ್ತಲ ಊರುಗಳಲ್ಲೂ ಅವನ ಹಾಗೂ ಅವನ ಕುಟುಂಬದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯಗಳಿವೆ. ಆದರೂ ಈ ಹುಡುಗ ಇಷ್ಟಪಟ್ಟ ಯುವತಿಯ ಮನೆಯವರಿಗೆ ಅವನು ಇಷ್ಟವಾಗಲಿಲ್ಲ. ಕಾರಣ: ಅವನಿಗೆ ಸರ್ಕಾರಿ ನೌಕರಿ ಇಲ್ಲ!`ಹುಡುಗನ ಮನೆತನ ಚೆನ್ನಾಗಿದೆ. ಜಾತಕ ಆಮೇಲೆ ನೋಡಿದರಾಯಿತು. ಆದರೆ ಸರ್ಕಾರಿ ಕೆಲಸ ಇಲ್ವವಲ್ಲ? ಜವಾನನೋ, ಗುಮಾಸ್ತನೋ... ಏನೋ...ಒಂದು  ಸರ್ಕಾರಿ ಕೆಲಸ ಇರಬೇಕಿತ್ತು. ಎಷ್ಟು `ಕೇಳಿದರೂ~ ಕೊಡುವುದಕ್ಕೆ ಸಿದ್ಧವಿದ್ದೇವೆ. ಎಲ್ಲ ಸರಿ... ಆದರೆ...~ ಎಂದು ಯುವತಿಯ ಪೋಷಕರು ರಾಗ ಎಳೆಯುತ್ತಾರೆ. ಅಲ್ಲಿಗೆ ಆ ಮದುವೆಯ ಮಾತುಕತೆ ಮುಗಿಯಿತು. ಯಾವುದೋ ಮದುವೆ ಮನೆಯಲ್ಲಿ ಕಂಡ ಆ ಯುವತಿಯನ್ನು ಇಷ್ಟಪಟ್ಟ ಆ ಯುವಕ ಅವಳ ಬಗ್ಗೆ ಕಟ್ಟಿಕೊಂಡಿದ್ದ `ಕನಸಿನಸೌಧ~ ಮುರಿದು ಬಿತ್ತು ಮನಸ್ಸಿಗೆ ಬೇಸರ. ಅವಳದೇ ನೆನಪಿನಲ್ಲಿ ಜೀವನ ಕಳೆಯುತ್ತಿದ್ದಾನೆ. ಆದರೆ ಅವನಿಗೆ ಅವನ ಬಗ್ಗೆಯೇ ಜಿಗುಪ್ಸೆಯ ಭಾವ ಬೆಳೆದಿದೆ.- ಇದು ಒಬ್ಬನ ಅನುಭವ ಅಲ್ಲ. ಬಹುತೇಕ ಹಳ್ಳಿಗಳ ಯುವಕರ ಅನುಭವ ಇಂಥದೇ. ಪಟ್ಟಣಗಳಲ್ಲೂ ಇಂತಹ ಯುವಕರು ಸಿಗುತ್ತಾರೆ. ಯುವಕ ಹೇಗಿದ್ದರೂ ಪರವಾಗಿಲ್ಲ; ಅವನಿಗೆ ಸರ್ಕಾರಿ ಕೆಲಸ ಇದ್ದರೆ ಸಾಕು. ನಮ್ಮ ಮಗಳನ್ನು ಅವನಿಗೆ ಕೊಟ್ಟು ಮದುವೆ ಮಾಡುತ್ತೇವೆ ಎಂದು ಹೇಳುವ ಹೆಣ್ಣಿನ ತಂದೆ ತಾಯಿಗಳೇ ಎಲ್ಲೆಡೆ ಕಾಣುತ್ತಾರೆ.ಹುಡುಗನ ವೈಯಕ್ತಿಕ ಜೀವನಕ್ಕಿಂತ ಅವನ ಗಳಿಕೆ, ಜೀವನದ ಭದ್ರತೆ ಹಾಗೂ ಸರ್ಕಾರಿ ಕೆಲಸದ `ಮಾಯೆ~ ಪೋಷಕರನ್ನು ಆವರಿಸಿದೆ. ಇದರಿಂದಾಗಿ ಎಷ್ಟೋ ಯುವಕರು ಸರಿಯಾದ ಸಂಗಾತಿ ಸಿಗದೆ ನೊಂದುಕೊಳ್ಳುತ್ತಿದ್ದಾರೆ.

 

ಇಷ್ಟಪಟ್ಟ ಹುಡುಗಿಯನ್ನು ಮದುವೆಯಾಗಲು ಸರ್ಕಾರಿ ನೌಕರಿ ಇಲ್ಲ ಎಂಬ ಕೊರತೆಯೇ ದೊಡ್ಡ ಅಡ್ಡಿ. ಸರ್ಕಾರಿ ನೌಕರಿಯಲ್ಲಿರುವ ಹುಡುಗನಿಗೆ ಎಷ್ಟು ಬೇಕಾದರೂ ವರದಕ್ಷಿಣೆ ಕೊಡುವುದಕ್ಕೆ ಬಹುತೇಕ ಹೆಣ್ಣಿನ ತಂದೆ-ತಾಯಿ ಸಿದ್ಧರಿದ್ದಾರೆ. ಈ ಮನಃಸ್ಥಿತಿಯಿಂದಾಗಿ ಸರ್ಕಾರಿ ನೌಕರಿಯಲ್ಲಿರುವ ಯುವಕರಿಗೆ ಎಲ್ಲಿಲ್ಲದ ಬೇಡಿಕೆ. ಯಾವ ಹುದ್ದೆಯಲ್ಲಿದ್ದಾನೆ ಎಂಬುದರ ಮೇಲೆ ಅವನ `ಬೆಲೆ~ ನಿರ್ಧಾರವಾಗುತ್ತದೆ. ನಗದು, ಚಿನ್ನ, ನಿವೇಶನ, ಮನೆ, ವಾಹನ ಇತ್ಯಾದಿ ರೂಪದಲ್ಲಿ ಬೆಲೆ ಸಂದಾಯವಾಗುತ್ತದೆ. ಹುಡುಗನ ವೈಯಕ್ತಿಕ ಬದುಕು ಹೇಗಿದೆ. ಅವನ ಅಭ್ಯಾಸಗಳೇನು? ಅವನ ಗೆಳೆಯರ ಹಿನ್ನೆಲೆ ಏನು. ಅವನ ಆಸಕ್ತಿ- ಅಭಿರುಚಿಗಳೇನು ಎಂಬ ಬಗ್ಗೆ ಹೆಣ್ಣಿನ ತಂದೆ ತಾಯಿಗಳಿಗೆ ಕಿಂಚಿತ್ತೂ ಆಸಕ್ತಿ ಇಲ್ಲ!ಹುಡುಗನ ಬಗ್ಗೆ ಯಾರಾದರೂ ಅಪ್ರಿಯ ವಿಷಯಗಳನ್ನು ಹೇಳಿದರೂ ಅವರು ಅತ್ತ ಗಮನ ಕೊಡುವುದಿಲ್ಲ. ಸರ್ಕಾರಿ ನೌಕರಿ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ. ಸರ್ಕಾರಿ ನೌಕರಿಯಲ್ಲಿ ಇರುವ ಹುಡುಗನಿಗೆ ಮಗಳನ್ನು   ಮದುವೆ ಮಾಡಿಕೊಟ್ಟೆವು ಎಂಬುದಷ್ಟೇ ಅವರ ನೆಮ್ಮದಿ ಮತ್ತು ಪ್ರತಿಷ್ಠೆ.ತಮ್ಮ ಮಗಳು ಸುಖವಾಗಿರಬೇಕು ಎಂದು ಪೋಷಕರು ಬಯಸುವುದರಲ್ಲಿ ತಪ್ಪೇನಿಲ್ಲ. ಆದರೆ, ಅಳಿಯನಿಗೆ ಹೇಗಿದ್ದರೂ ಪರವಾಗಿಲ್ಲ ಸರ್ಕಾರಿ ನೌಕರಿಯಲ್ಲಿದ್ದರೆ ಸಾಕು ಎಂದು ಬಯಸುವುದು ಸರಿಯಲ್ಲ.ಹುಡುಗ ವಿಕೃತ ಮನಸ್ಸಿನ ವ್ಯಕ್ತಿ ಆಗಿದ್ದರೆ? ಅವನಿಗೆ ಹತ್ತಾರು ಚಟಗಳಿದ್ದರೆ? ಧನ ಪಿಶಾಚಿ ಆಗಿದ್ದರೆ? ಮತ್ತೆ ಮತ್ತೆ ಹಣ ತರುವಂತೆ ಹೆಂಡತಿಯನ್ನು ತೌರಿಗೆ ಕಳುಹಿಸಿದರೆ? ಅವನು ಹೆಣ್ಣು ಬಾಕನಾಗಿದ್ದರೆ? ಹೆಂಡತಿಯನ್ನು ವಿನಾ ಕಾರಣ ಪೀಡಿಸುವ ಸ್ವಭಾವದವನಾಗಿದ್ದರೆ? ಮಗಳ ಗತಿ ಏನು ಎಂದು ಅನೇಕ ಪಾಲಕರು ಮದುವೆಗೆ ಮೊದಲು ಯೋಚಿಸುವುದಿಲ್ಲ. ನೌಕರಿ ಇರುವ ಹುಡುಗನನ್ನು ಹುಡುಕಿ ಮಗಳನ್ನು ಮದುವೆ ಮಾಡಿಕೊಟ್ಟು ನಮ್ಮ ಜವಾಬ್ದಾರಿ ಕಳೆದುಕೊಳ್ಳಬೇಕು ಎಂದೇ ಅನೇಕ  ಪಾಲಕರು ಯೋಚಿಸುತ್ತಾರೆ.ಹುಡುಗ ಗುಣವಂತನಾಗಿದ್ದರೆ ಸಾಕು, ಅವನಿಗೆ ದುಡಿಯುವ ಶಕ್ತಿ ಇದ್ದರೆ ಸಾಕು. ಅವನಲ್ಲಿ ಉತ್ತಮ ಗುಣಗಳಿದ್ದರೆ ಸಾಕು. ಸಮಾಜ ಅವನನ್ನು ಗೌರವಿಸುವಂತಿದ್ದರೆ ಸಾಕು ಎಂದು ಯೋಚಿಸುವ ಪಾಲಕರು ಈಗ ವಿರಳ.ರಾಷ್ಟ್ರಕವಿ ಕುವೆಂಪು ಸೇರಿದಂತೆ ಎಲ್ಲ ದಾರ್ಶನಿಕರು ಸರಳ ವಿವಾಹ ಪ್ರೋತ್ಸಾಹಿಸಿದರು. ಸರಳ ವಿವಾಹ ಮಾಡಿಕೊಳ್ಳುವಂತೆ ಜನರಿಗೆ ಕರೆ ನೀಡಿದರು.ಆದರೆ ಈಗ ಆಗಿರುವುದಾದರೂ ಏನು? ಬಹುತೇಕ ಪೋಷಕರು ಸರ್ಕಾರಿ ನೌಕರ ವರಗಳ ಹಿಂದೆ ಬಿದ್ದು ಉಳಿದೆಲ್ಲವನ್ನೂ ಮರೆತಿದ್ದಾರೆ. ವರದಕ್ಷಿಣೆ ಕೊಡಲು  ಸಾಲ ಮಾಡಿ ಅದನ್ನು ತೀರಿಸಲು ಆಗದೆ ಬೀದಿ ಪಾಲಾದವರಿದ್ದಾರೆ. ಅನೇಕ ಪಾಲಕರು ಜೀವನ ದುಃಖಮಯ. ಇಂತಹ ಹೆಣ್ಣು ಹೆತ್ತವರು ಹಳ್ಳಿಗಳಲ್ಲಿ ಕಾಣಸಿಗುತ್ತಾರೆ. ಅದೇ ಈ ಕಾಲದ ದುರಂತ.ಸರ್ಕಾರಿ ನೌಕರರೆಲ್ಲ ಕೆಟ್ಟವರಲ್ಲ. ಅವರಲ್ಲಿಯೂ ಒಳ್ಳೆಯವರಿದ್ದಾರೆ. ಖಾಸಗಿ ಕಂಪೆನಿಗಳಲ್ಲಿ ದುಡಿಯುತ್ತಿರುವವರಲ್ಲಿ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿರುವ ಗುಣವಂತರಿದ್ದಾರೆ. ಗೌರವಯುತವಾಗಿ ಜೀವನ ನಡೆಸುವಂತಿರಬೇಕು. ಅಂಥ ವರನಿಗೆ ನಮ್ಮ ಮಗಳನ್ನು ಕೊಡುತ್ತೇವೆ.

 

ವರದಕ್ಷಿಣೆ ಕೊಡುವುದಿಲ್ಲ. ಸರಳವಾಗಿ ಮದುವೆ ಮಾಡಿಕೊಡುತ್ತೇವೆ ಎಂದು ಧೈರ್ಯವಾಗಿ ಹೇಳುವ ಪಾಲಕರು ಎಷ್ಟು ಮಂದಿ ಇದ್ದಾರೆ?  ವರ ಮಹಾಶಯನ ಹುದ್ದೆ ಮುಖ್ಯವಲ್ಲ. ಅವನ ಗುಣ ಮುಖ್ಯ ಎಂಬ ಭಾವನೆ ಪಾಲಕರಲ್ಲಿ ಬೆಳೆಯಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.