ಬುಧವಾರ, ಜೂನ್ 23, 2021
29 °C

ಸಹಕಾರ ಬ್ಯಾಂಕ್ ಮೂಲಕ ರೈತರಿಗೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಪಟ್ಟಣ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರಿಗೆ ನೇರವಾಗಿ ಕೃಷಿ ಸಾಲ ನೀಡುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದು ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್ ಮಹಾಮಂಡಳಿ ಅಧ್ಯಕ್ಷ ಎಚ್.ಕೆ.  ಪಾಟೀಲ್ ಹೇಳಿದರು.ಪೊನ್ನಂಪೇಟೆ ಪಟ್ಟಣ ಸಹಕಾರ  ಬ್ಯಾಂಕಿನ ವತಿಯಿಂದ ರೂ.1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ  ಅವರು ಮಾತನಾಡಿದರು.ಪಟ್ಟಣ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ನೇರವಾಗಿ ಕೃಷಿ ಸಾಲ ನೀಡದಿದ್ದರೂ ಕೃಷಿಗೆ ಪೂರಕವಾದ ವ್ಯವಸ್ಥೆ ಅಡಿಯಲ್ಲಿ ಸಾಲ ಒದಗಿಸಿ ಅವರನ್ನು ಆರ್ಥಿಕವಾಗಿ ಮೇಲುತ್ತುವ ಕೆಲಸ ಮಾಡುತ್ತಿವೆ. ರೈತರನ್ನು ಸಹಕಾರ ಬ್ಯಾಂಕ್ ಎಂದೂ ಕೈಬಿಟ್ಟಿಲ್ಲ ಎಂದು ತಿಳಿಸಿದರು. ರಾಜಕೀಯದ ಮೊದಲ ಮೆಟ್ಟಿಲು ಸಹಕಾರಿ ಕ್ಷೇತ್ರ. ಈ ಕ್ಷೇತ್ರವನ್ನು ಬೆನ್ನುಲುಬಾಗಿಸಿಕೊಂಡ ವ್ಯಕ್ತಿಗಳು ಇಂದು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ರಾಜ್ಯ ರಾಜಕೀಯಕ್ಕೆ ತನ್ನದೇ ಕೊಡುಗೆ ನೀಡಿದ ಸಹಕಾರ ಕ್ಷೇತ್ರವನ್ನು ಯಾರೂ ಉಪೇಕ್ಷೆ ಮಾಡಬಾರದು. ತಮ್ಮ ಸಹಕಾರಿ ಸಂಘಗಳನ್ನು ಯಾರಿಗೂ ಭೋಗ್ಯಕ್ಕೆ ನೀಡದೆ ತಾವೇ   ಮುನ್ನಡೆಸಿಕೊಂಡು ಹೋಗಬೇಕು ಎಂದರು.ನಾಡಿನ ಸಹಕಾರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಜಿಲ್ಲೆ ಗದಗ, ಅಷ್ಟೇ ಕೊಡುಗೆಯನ್ನು ಕೊಡಗು ಸಹ ನೀಡಿದೆ. ಇಲ್ಲಿನ ಹಿರಿಯ ಸಹಕಾರಿ ಧುರೀಣರ ದೂರದೃಷ್ಟಿ ಮತ್ತು ಬದ್ಧತೆಯಿಂದ ಕೊಡಗಿನ ಸಹಕಾರಿ ಕ್ಷೇತ್ರ ಎತ್ತರಕ್ಕೆ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ವಿಧಾನಸಭಾ ಅಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗು ಭೌಗೋಳಿಕವಾಗಿ ಪುಟ್ಟ ಜಿಲ್ಲೆಯಾದರೂ ಸಹಕಾರಿ ಕ್ಷೇತ್ರದಲ್ಲಿ  ಹೆಮ್ಮರವಾಗಿ ಬೆಳೆದಿದೆ ಎಂದರು.ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಮಾತನಾಡಿ, ಕೊಡಗಿನಲ್ಲಿ ಸಹಕಾರಿ ಸಂಘಗಳು ನಿರೀಕ್ಷೆಗೂ ಮೀರಿ ಪ್ರಗತಿ ಹೊಂದಿವೆ. ಹಿರಿಯರ ದೂರದೃಷ್ಟಿಯ ಫಲವಾಗಿ ಪ್ರತಿ ಗ್ರಾಮದಲ್ಲಿಯೂ ಹಿಂದೆ  ಧಾನ್ಯ           ಭಂಡಾರಗಳು ರೈತರ ಆಶಾ ಕಿರಣಗಳಾಗಿದ್ದವು. ಆದರೆ ಇದೀಗ ಆ  ಭಂಡಾರಗಳು ಅವನತಿಯಲ್ಲಿವೆ. ಇವುಗಳ ಹಿಂದಿನ ಘನತೆಯನ್ನು ಮತ್ತೆ ಎತ್ತಿಹಿಡಿಯುವ ಅಗತ್ಯವಿದೆ ಎಂದು ಹೇಳಿದರು.ಸ್ಥಳೀಯ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪಟ್ಟಣ ಬ್ಯಾಂಕ್ ಮಹಾಮಂಡಳಿ  ನಿರ್ದೇಶಕರಾದ ಪ್ರಶಾಂತ್, ಹರೀಶ್, ಕೊಡಗು ಸಹಕಾರ ಸಂಘಗಳ      ಸಹಾಯಕ ಪ್ರಬಂಧಕ ಜಿ. ಜಗದೀಶ್, ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರಾದ ಚೆಪ್ಪುಡೀರ ಪೊನ್ನಪ್ಪ, ಪಿ.ಬಿ. ಪೂಣಚ್ಚ, ಐನಂಡ  ಬೋಪಣ್ಣ, ಸಿದ್ದಯ್ಯ, ಎಂ.ಪಿ.ಅಪ್ಪಚ್ಚು, ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುಜಾ ಕುಶಾಲಪ್ಪ, ತಾ.ಪಂ.ಸದಸ್ಯ ದಯಾ ಚಂಗಪ್ಪ ಮುಂತಾದವರು ಹಾಜರಿದ್ದರು.ವ್ಯವಸ್ಥಾಪಕಿ ಗಂಗಮ್ಮ ವರದಿ ವಾಚಿಸಿದರು. ಉಪಾಧ್ಯಕ್ಷೆ ದೇವಕಿ ಪ್ರಾರ್ಥಿಸಿದರು. ನಿರ್ದೇಶಕ ಎಂ.ಎಸ್.ಕುಶಾಲಪ್ಪ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.