ಶುಕ್ರವಾರ, ಮೇ 20, 2022
19 °C

ಸಹ ಶಿಕ್ಷಕರಿಗೆ ಬಡ್ತಿ: ದೊರೆಯದ ಭರವಸೆ .ಸದಸ್ಯರ ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹ-ಶಿಕ್ಷಕರಿಗೆ ಬಡ್ತಿ ನೀಡುವ ಮೂಲಕ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂಬ ಬೇಡಿಕೆ ಬಗ್ಗೆ ಸರ್ಕಾರದಿಂದ ಯಾವುದೇ ರೀತಿಯ ಭರವಸೆ ಸಿಗದಿದ್ದರಿಂದ ನಿರಾಸೆಗೊಂಡ ಜೆಡಿಎಸ್‌ನ ಪುಟ್ಟಣ್ಣ ಹಾಗೂ ಪಕ್ಷೇತರ ಸದಸ್ಯ ಮರಿತಿಬ್ಬೇಗೌಡ ಅವರು ವಿಧಾನ ಪರಿಷತ್ತಿನಲ್ಲಿ ಗುರುವಾರ ಸಭಾತ್ಯಾಗ ಮಾಡಿದ ಪ್ರಸಂಗ ನಡೆಯಿತು.ಪರಿಷತ್ತಿನಲ್ಲಿ ನಡೆದ ಚರ್ಚೆ ವೇಳೆ ಸಹ ಶಿಕ್ಷಕರಿಗೆ ಬಡ್ತಿ ನೀಡುವ ವಿಷಯವನ್ನು ಈ ಸದಸ್ಯರು ಎತ್ತಿದರು. ‘ಸದ್ಯ ಮುಖ್ಯಶಿಕ್ಷಕರ ಹುದ್ದೆಗಳಲ್ಲಿ ಶೇ 75ರಷ್ಟು ಹುದ್ದೆಗಳನ್ನು ಬಡ್ತಿ ನೀಡುವ ಮೂಲಕ ಹಾಗೂ ಶೇ 25ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಇದರಿಂದಾಗಿ ಸಹ ಶಿಕ್ಷಕರಿಗೆ ವೃತ್ತಿ ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಬಡ್ತಿ ಅವಕಾಶಗಳು ಕ್ಷೀಣಿಸುತ್ತಿವೆ.ಈ ನಿಯಮಾವಳಿಯನ್ನು ತೆಗೆದುಹಾಕಿ ನೂರಕ್ಕೆ ನೂರಷ್ಟು ಎಲ್ಲ ಹುದ್ದೆಗಳನ್ನೂ ಬಡ್ತಿ ಮೂಲಕವೇ ಭರ್ತಿ ಮಾಡಬೇಕು’ ಎಂದು ಪುಟ್ಟಣ್ಣ ಹಾಗೂ ಮರಿತಿಬ್ಬೇಗೌಡ ಅವರು ಒತ್ತಾಯಿಸಿದರು. ಇದಕ್ಕೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ಧ್ವನಿಗೂಡಿಸಿದರು.‘1967ರಿಂದ ಜಾರಿಯಲ್ಲಿದ್ದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ)(ನೇಮಕಾತಿ) ನಿಯಮಗಳ ಪ್ರಕಾರ 50:50ರ ಅನುಪಾತದಲ್ಲಿ ನೇರ ನೇಮಕಾತಿ ಹಾಗೂ ಬಡ್ತಿ ನೀಡುವ ಮೂಲಕ ಮುಖ್ಯಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿತ್ತು. ದಶಕಗಳ ಹೋರಾಟದ ನಂತರ ನಮ್ಮ ಸರ್ಕಾರ 2006ರಲ್ಲಿ ಈ ನಿಯಮಾವಳಿಗೆ ತಿದ್ದುಪಡಿ ತಂದು ಶೇ 75ರಷ್ಟು ಹುದ್ದೆಗಳನ್ನು ಬಡ್ತಿ ಮೂಲಕ ಹಾಗೂ ಶೇ 25ರಷ್ಟ ನೇರ ನೇಮಕಾತಿ ಮೂಲಕ ತುಂಬಲು ನಿರ್ಣಯ ಕೈಗೊಂಡಿತು. ಈಗ ಇದನ್ನು ನೂರಕ್ಕೆ ನೂರರಷ್ಟು ಬಡ್ತಿ ಮೂಲಕ ಭರ್ತಿ ಮಾಡಲು ಕ್ರಮಕೈಗೊಳ್ಳಿ’ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಸಲಹೆ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಶಿಕ್ಷಣ ರಂಗದ ಚೇತರಿಕೆಗೆ ಹೊಸ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ನೇರ ನೇಮಕಾತಿ ಬೇಕಾಗುತ್ತದೆ. ಎಲ್ಲ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ಸಾಧ್ಯವಿಲ್ಲ. ಆದರೆ, ಈಗಾಗಲೇ ನಿರ್ಧರಿಸುವಂತೆ 75:25ರ ಅನುಪಾತವನ್ನು ಚಾಚೂತಪ್ಪದೆ ಮುಂದುವರಿಸಿಕೊಂಡು ಹೋಗಲಾಗುವುದು. ಬಡ್ತಿ ಶಿಕ್ಷಕರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುವ ಭರವಸೆ ನೀಡಬಲ್ಲೆ’ ಎಂದರು.ಸಚಿವರ ಉತ್ತರದಿಂದ ಮರಿತಿಬ್ಬೇಗೌಡ ಆಕ್ರೋಶಗೊಂಡರು. ‘ಪ್ರಕರಣವು ಹೈಕೋರ್ಟ್‌ನಲ್ಲಿ ಇರುವುದರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ತೀರ್ಪಿನ ನಂತರ ಮುಂದಿನ ಕ್ರಮಗಳ ಬಗ್ಗೆ ಯೋಚಿಸಲಾಗುವುದು’ ಎಂದು ಕಾಗೇರಿ ಮಾರುತ್ತರ ನೀಡಿದರು. ಜೆಡಿಎಸ್‌ನ ಎಂ.ಸಿ. ನಾಣಯ್ಯ ಮಾತನಾಡಿ, ‘ಸರ್ಕಾರಕ್ಕೆ ನಿಜವಾಗಿಯೂ ಮನಸ್ಸಿದ್ದರೆ ಸಚಿವ ಸಂಪುಟದಲ್ಲಿ ಹೊಸ ಕಾನೂನು ರೂಪಿಸಲಿ. ಆಗ ಯಾವ ನ್ಯಾಯಲಯವೂ ನಿಮ್ಮ ದಾರಿಗೆ ಅಡ್ಡಬರುವುದಿಲ್ಲ’ ಎಂದು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.