ಮಂಗಳವಾರ, ಮೇ 18, 2021
30 °C

ಸಾಂಕ್ರಾಮಿಕ ರೋಗದ ಭೀತಿ: ಶುದ್ಧ ನೀರು ಪೂರೈಸಲು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ಚವನಬಾವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಸಿಗದೇ ಹಬ್ಬಿರುವ ಸಾಂಕ್ರಾಮಿಕ ರೋಗಗಳಿಂದಾಗಿ ಜನತೆ ತತ್ತರಿಸಿದ್ದು, ಚಿಕೂನ್ ಗುನ್ಯ, ಮಲೇರಿಯಾದಿಂದ ಜನ ಹಾಸಿಗೆ ಹಿಡಿದಿದ್ದಾರೆ.  ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಕನಿಷ್ಠ ಕುಡಿಯುವ ನೀರು ಪೂರೈಸಬೇಕಿದ್ದ ಗ್ರಾಮ ಪಂಚಾ ಯಿತಿಗಳು ನಿರ್ಲಕ್ಷ್ಯ ಧೋರಣೆ ತಾಳಿವೆ. ಅಡವಿ ಸೋಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚವನಭಾವಿ ಗ್ರಾಮದಲ್ಲಿನ ಸ್ಥಿತಿ ತೀರಾ ಗಂಭೀರವಾಗಿದೆ.  ಇಲ್ಲಿನ ಪ್ರತಿ ಮನೆಯಲ್ಲಿ ವೃದ್ಧರು, ಮಕ್ಕಳು ಮತ್ತು ಮಹಿಳೆಯರು ರೋಗದಿಂದ ಬಳಲುತ್ತಿದ್ದು, ಜೀವನೋ ಪಾಯಕ್ಕಾಗಿ ಕೆಲಸ ಸಹ ಮಾಡದಷ್ಟು ನಿತ್ರಾಣ ರಾಗಿದ್ದಾರೆ. ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆಯ ಏಕೈಕ ಕೊಳವೆ ಬಾವಿ ಇದೆ. ಸಾರ್ವಜನಿಕ ನೀರು ಪೂರೈಕೆ ಟ್ಯಾಂಕ್ ಸುತ್ತಲಿನ ವಾತಾವರಣ ಹದಗೆಟ್ಟಿದೆ. ಆ ಪ್ರದೇಶ ರೋಗ ಹರಡುವ ತಾಣವಾಗಿಬಿಟ್ಟಿದೆ. ಇಂಥ ಕಲುಷಿತ ಪ್ರದೇಶದ ನೀರು ಕುಡಿದು ಜನ ಅನಾರೋಗ್ಯದಿಂದ ಬಳಲುವಂತಾಗಿದೆ.ತಹಸೀಲ್ದಾರ ಭೇಟಿ: ಗ್ರಾಮದಲ್ಲಿನ ದುಃಸ್ಥಿತಿ ಅರಿಯಲು ಭೇಟಿ ನೀಡಿದ್ದ ತಹಸೀಲ್ದಾರ ಸೋಮಲಿಂಗಪ್ಪ ಗೆಣ್ಣೂರ, ಅಲ್ಲಿನ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ, ನೈರ್ಮಲ್ಯದ ಕುರಿತು ಕೂಡಲೇ ಕ್ರಮ ಜರುಗಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ  ಎಸ್.ಜಿ. ಕಕ್ಕಳಮೇಲಿ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.ಸದ್ಯ ಗ್ರಾಮದಲ್ಲಿ ಸಿಗುತ್ತಿರುವ ನೀರು ಕುಡಿಯಲು ಅಯೋಗ್ಯವಾಗಿದೆ ಎಂದು ವೈದ್ಯಕೀಯ ವರದಿ ಬಂದಿ ರುವುದರಿಂದ ಶುದ್ಧ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲು ಹಾಗೂ ಸ್ವಚ್ಛತೆಗೆ ಸಂಬಂಧಿಸಿ ಮತ್ತಷ್ಟು ಕ್ರಮ ಜರುಗಿಸುವಂತೆ ಸಹ ಸೂಚಿಸಿದರು.ವಾರದಿಂದ ಬೀಡು ಬಿಟ್ಟಿರುವ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಹ ಭೇಟಿ ಅವರು ಕೂಡಲೇ ಹೆಚ್ಚಿನ ಸಿಬ್ಬಂದಿ ಕರೆಯಿಸಿ ಚಿಕಿತ್ಸೆ ನೀಡುವಂತೆ ಆದೇಶಿಸಿದರು.ನಿಯೋಗದಲ್ಲಿ  ಶಿರಸ್ತೇದಾರ ಉದಯ ಕುಂಬಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎ.ಎನ್. ಪಟ್ಟಣಶೆಟ್ಟಿ, ನಾಲತವಾಡದ ವೈದ್ಯಾಧಿಕಾರಿ ಡಾ.ಎಸ್.ಎಸ್. ತಿವಾರಿ, ಕೆ.ಬಿ. ಮಾಸ್ತಿ, ಗ್ರಾಮ ಲೆಕ್ಕಾಧಿಕಾರಿ ನಿಂಗಪ್ಪ, ಗ್ರಾ.ಪಂ. ಸದಸ್ಯ ಹನುಮಂತ ಕುಂಬಾರ ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.