ಶುಕ್ರವಾರ, ಮೇ 20, 2022
21 °C

ಸಾಕ್ಷರತೆ ನಾಡಲ್ಲಿ ರಕ್ತ ಚರಿತ್ರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ (ಐಎಎನ್‌ಎಸ್): ಕೇರಳ `ರಾಜಕೀಯ ಹತ್ಯಾಕಾಂಡ~ಗಳ ರಾಜ್ಯವಾಗಿ ಮಾರ್ಪಟ್ಟಿದೆಯೇ?

ಮಾಹಿತಿ ಹಕ್ಕು ಆಯೋಗ ನಡೆಸಿದ ತನಿಖೆ ಗಮನಿಸಿದರೆ ಹಾಗೆ ಅನ್ನಿಸದೇ ಇರದು.  ಸಾಕ್ಷರತೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಈ ರಾಜ್ಯಕ್ಕೆ  ವಿವಿಧ ರಾಜಕೀಯ ಪಕ್ಷಗಳು ನಡೆಸಿದ ರಾಜಕೀಯ ಹತ್ಯೆಯ ರಕ್ತಸಿಕ್ತ ಚರಿತ್ರೆಯೂ ಇದೆ ಎನ್ನುವುದು ವಿರೋಧಾಭಾಸದ ಸಂಗತಿಯಾಗಿದೆ.1997ರ ಜನವರಿಯಿಂದ 2008ರ ಮಾರ್ಚ್ ಅವಧಿಯಲ್ಲಿ ಕಣ್ಣೂರು ಜಿಲ್ಲೆಯೊಂದರಲ್ಲೇ ನಡೆದ ರಾಜಕೀಯ ಹಿಂಸಾಚಾರದಲ್ಲಿ 56 ಮಂದಿ ಹತರಾಗಿದ್ದರು ಎಂಬ ವಿಷಯವನ್ನು ಆಯೋಗದ ಅಂಕಿ ಅಂಶ ಸ್ಪಷ್ಟಪಡಿಸುತ್ತದೆ. ಅದೆಷ್ಟೋ ನಿರಪರಾಧಿಗಳೂ ಇವರಲ್ಲಿ ಸೇರಿದ್ದಾರೆ ಎನ್ನುವುದು  ಎಲ್ಲರನ್ನೂ ಗಂಭೀರ ಚಿಂತನೆಗೆ ಈಡು ಮಾಡುತ್ತದೆ.ರೇಜಿಗೆ ಹುಟ್ಟಿಸುವ ರಾಜಕೀಯದಾಟಕ್ಕೆ ಎಡಪಂಥೀಯ ಕಮ್ಯುನಿಸ್ಟ್ ಪಕ್ಷ ಹಾಗೂ ಬಲಪಂಥೀಯ ಹಿಂದೂ ಸಂಘಟನೆಗಳೇ ಕಾರಣ ಎಂದು ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. ಸತ್ತವರಲ್ಲಿ ಹೆಚ್ಚಿನವರನ್ನು ಖಡ್ಗ ಮತ್ತು ನಾಡಬಾಂಬ್‌ಗಳನ್ನು ಬಳಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ.`ಕಮ್ಯುನಿಸ್ಟ್ ಚಳವಳಿಯ ತೊಟ್ಟಿಲು~ ಎಂದೇ ಕರೆಯಲಾಗುವ ಕೇರಳದ ಉತ್ತರದಲ್ಲಿರುವ ಕಣ್ಣೂರು ಜಿಲ್ಲೆಯಲ್ಲಿ `ಏಟಿಗೆ ಎದಿರೇಟು~ ನೀತಿಗೆ ಅನುಗುಣವಾಗಿಯೇ ಹೆಚ್ಚಿನ ಹತ್ಯೆಗಳು ನಡೆದಿವೆ. ಅದಕ್ಕೆ ರೆವಲ್ಯೂಷನರಿ ಮಾರ್ಕ್ಸಿಸ್ಟ್ ಪಕ್ಷದ ಮುಖಂಡ ಟಿ.ಪಿ.ಚಂದ್ರಶೇಖರನ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕಾರ್ಯಕರ್ತ ಶುಕೂರ್ ಅವರ ಹತ್ಯೆ ತೀರಾ ಇತ್ತೀಚಿನ ಸೇರ್ಪಡೆಯಾಗಿದೆ.ಕಳೆದ ಫೆಬ್ರುವರಿಯಲ್ಲಿ ಐಯುಎಂಎಲ್ ಯುವ ಘಟಕದ ಕಾರ್ಯಕರ್ತ, 22ರ ಹರೆಯದ ಶುಕೂರ್ ಅವರನ್ನು ಸಿಪಿಎಂ ಬಹಿರಂಗವಾಗಿಯೇ ಹತ್ಯೆ ಮಾಡಿ ರಕ್ತಸಿಕ್ತ ಚಿತ್ರವನ್ನು ಐಯುಎಂಎಲ್ ಮುಖಂಡರಿಗೆ ಕಳುಹಿಸುವ ಮೂಲಕ ಪ್ರತೀಕಾರದ ದಾಹ ತೀರಿಸಿಕೊಂಡಿತ್ತು ಎನ್ನಲಾಗಿದೆ.`ಎಲ್ಲಾ ರಾಜಕೀಯ ಹತ್ಯೆಗಳ ಬಗ್ಗೆ  ಕೇಂದ್ರ ಸಂಸ್ಥೆಯಿಂದ ಸೂಕ್ತ ತನಿಖೆ ನಡೆಯಬೇಕಾದ ಅಗತ್ಯವಿದ್ದು ಗೂಂಡಾಗಳು, ರಾಜಕಾರಣಿಗಳು ಮತ್ತು ಪೊಲೀಸರ ನಡುವಿನ ನಂಟನ್ನು ಬಯಲಿಗೆಳೆಯಬೇಕಾಗಿದೆ~ ಎಂದು ಐಯುಎಂಎಲ್ ಶಾಸಕ ಕೆ.ಎಂ.ಶಾಜಿ ಹೇಳಿದ್ದಾರೆ.ನಿಗೂಢ ಹತ್ಯೆಗಳು: ಹಾಗೆ ನೋಡಿದರೆ, ಒಂದು ಕಾಲದಲ್ಲಿ ಸಿಪಿಎಂನ ಬೆಂಕಿ ಚೆಂಡಾಗಿದ್ದ ಟಿ.ಪಿ.ಚಂದ್ರಶೇಖರನ್ ಅವರ ಕ್ರೂರ ಹತ್ಯೆಯ ಬಳಿಕವೇ ಕೇರಳದ ರಾಜಕೀಯ ಪಕ್ಷಗಳು ನಡೆಸಿದ್ದ ನಿಗೂಢ ಹತ್ಯೆಗಳು ಬೆಳಕಿಗೆ ಬಂದವು ಎನ್ನಬಹುದು. ಚಂದ್ರಶೇಖರನ್ ಹತ್ಯೆ ಬಳಿಕ ಅವರ ಮನೆಗೆ ತೆರಳಿದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್, ಹತ್ಯೆಯನ್ನು ಖಂಡಿಸಿ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತಿಯಾಗಿ ಅಚ್ಯುತಾನಂದನ್ ಅವರ ವಿರೋಧಿ ಪಾಳಯದ ಮುಖಂಡ ಹಾಗೂ ಇಡುಕ್ಕಿ ಜಿಲ್ಲಾ ಸಿಪಿಎಂ ಕಾರ್ಯದರ್ಶಿ ಎಂ.ಎಂ.ಮಣಿ ಅವರ ಇತ್ತೀಚಿನ ಹೇಳಿಕೆ, ಪಕ್ಷ ಈ ಹಿಂದೆ ಜಿಲ್ಲೆಯಲ್ಲಿ ನಡೆಸಿದ್ದ ಕ್ರೂರ ಹತ್ಯೆಗಳ ಸುರುಳಿ ಬಿಚ್ಚಲು ಕಾರಣವಾಗಿದೆ. `ಏಟಿಗೆ ಎದಿರೇಟು ನೀಡುವುದು ಪಕ್ಷದ ನೀತಿಯಾಗಿದ್ದು, ಪಟ್ಟಿ ತಯಾರಿಸಿ ಪಕ್ಷ ತನ್ನ ಎದುರಾಳಿಗಳಲ್ಲಿ ಒಬ್ಬರನ್ನು ಗುಂಡಿಟ್ಟು, ಇನ್ನೊಬ್ಬರನ್ನು ಇರಿದು, ಮತ್ತೊಬ್ಬರನ್ನು ಹೊಡೆದು ಸಾಯಿಸಿತ್ತು~ ಎಂಬ ಮಣಿ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.ಬಹಿರಂಗವಾಗಿಯೇ ಇಂಥ ಹೇಳಿಕೆ ನೀಡಿದ ಮಣಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ, ಅವರು ನಾಪತ್ತೆಯಾಗಿದ್ದಾರೆ. ಸಿಪಿಎಂ ಕೂಡ ಮಣಿ ಹೇಳಿಕೆಯನ್ನು ಖಂಡಿಸಿತ್ತು.ಸರಣಿ ಹತ್ಯೆ: 1978ರಲ್ಲಿ ಚಂದ್ರನ್ ಎಂಬುವವರು ಕಣ್ಣೂರಿನಲ್ಲಿ ಆರ್‌ಎಸ್‌ಎಸ್ ಘಟಕವನ್ನು ಆರಂಭಿಸಿದಾಗ ಕಮ್ಯುನಿಸ್ಟರು ಅವರನ್ನು ಹತ್ಯೆ ಮಾಡಿದ್ದರು ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಕ್ರಿಮಿನಲ್ ನ್ಯಾಯವಾದಿ ಪಿ.ಎಸ್.ಶ್ರೀಧರನ್ ಪಿಳ್ಳೆ ನೆನಪಿಸಿಕೊಳ್ಳುತ್ತಾರೆ. ಅಂದಿನಿಂದ ಸರಣಿಯಾಗಿ ಸುಮಾರು 150 ಮಂದಿ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಹಾಗೂ ಅಷ್ಟೇ ಸಂಖ್ಯೆಯಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ಹತ್ಯೆಗೊಳಗಾಗಿದ್ದಾರೆ ಎಂದು ಅವರು ಹೇಳುತ್ತಾರೆ.ರಾಜ್ಯದಲ್ಲಿ ತಾಂಡವವಾಡುತ್ತಿರುವ ದ್ವೇಷದ ಹತ್ಯಾಕಾಂಡಕ್ಕೆ ಇತರರೂ ಬಲಿಪಶುಗಳಾಗಿದ್ದಾರೆ ಎನ್ನುವುದಕ್ಕೆ ಪ್ರೊ. ಟಿ.ಜೆ.ಜೋಸೆಫ್ ಉತ್ತಮ ಉದಾಹರಣೆಯಾಗಿದ್ದಾರೆ. 2010ರಲ್ಲಿ ಪ್ರಶ್ನೆಪತ್ರಿಕೆಯೊಂದರಲ್ಲಿ ಪ್ರವಾದಿ ಮೊಹಮದ್ ಅವರ ಬಗ್ಗೆ ಪ್ರಶ್ನೆ ಕೇಳಿದ್ದ ಹಿನ್ನೆಲೆಯಲ್ಲಿ, ಮುಸ್ಲಿಂ ಮೂಲಭೂತವಾದಿಗಳು ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕರಾದ ಜೋಸೆಫ್ ಅವರ ಬಲ ಹಸ್ತವನ್ನು ಕತ್ತರಿಸಿ ಹಾಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.