ಬುಧವಾರ, ಮಾರ್ಚ್ 3, 2021
22 °C

ಸಾಗರದಾಚೆಯ ಪ್ರೇಮಿಗಳಿಗೆ ಹಳ್ಳಿ ಗುಲಾಬಿ

ಪ್ರಜಾವಾಣಿ ವಾರ್ತೆ/ ಎಚ್‌.ಎಸ್‌.ಶ್ರೀಹರಪ್ರಸಾದ್‌ Updated:

ಅಕ್ಷರ ಗಾತ್ರ : | |

ಸಾಗರದಾಚೆಯ ಪ್ರೇಮಿಗಳಿಗೆ ಹಳ್ಳಿ ಗುಲಾಬಿ

ಮರಿಯಮ್ಮನಹಳ್ಳಿ: ಇಂದು ಪ್ರೇಮಿಗಳ ದಿನ. ವಿಶ್ವದಾದ್ಯಂತ ಪ್ರೇಮಿಗಳು ತಮ್ಮ ಪ್ರೀತಿಯನ್ನು ನಿವೇದಿಸಿಕೊಳ್ಳಲು ಉಡುಗೊರೆ, ಗುಲಾಬಿ ಹೂ ಕೊಡುವುದು ವಾಡಿಕೆ. ಹೀಗಾಗಿ ಸಾವಿರಾರು ಮೈಲಿಗಳ ದೂರದ ಸಾಗರದಾಚೆಯ ದೇಶಗಳ ಪ್ರೇಮಿಗಳು ಹಾಗೂ ಸ್ವದೇಶಿ ಪ್ರೇಮಿಗಳಿಗೆ ಇಲ್ಲಿಗೆ ಸಮೀಪದ ಲೋಕಪ್ಪನಹೊಲದಿಂದ ಗುಲಾಬಿ ಪೂರೈಸಲಾಯಿತು.‘ನಮ್ಮಲ್ಲಿಯ ಗುಲಾಬಿ ವಿದೆೇಶಕ್ಕೆ ಹೋಗುವುದು ಸಂತಸದ ಸಂಗತಿ. ಲಂಡನ್‌ಗೆ ಈ ಬಾರಿ ಅತಿ ಹೆಚ್ಚು ಹೂ ರಫ್ತಾಗಿದೆ. ಅಲ್ಲದೇ ಲೆಬನಾನ್‌, ಇಟಲಿ, ಯುನೈಟೆಡ್‌ ಕಿಂಗ್‌ಡಮ್‌, ಜಪಾನ್‌, ಸೌದಿ ಅರೇಬಿಯಾ ದೇಶಗಳಿಗೂ ಇಲ್ಲಿನ ಗುಲಾಬಿ ಪರಿಮಳ ಪಸರಿಸಿದೆ. ಜತೆಗೆ ಬೆಂಗಳೂರು ಸೇರಿದಂತೆ ಹೈದರಾಬಾದ್‌, ಮುಂಬೈ, ಗೋವಾ, ಒಡಿಶಾ ಇತರ ಕಡೆಗಳಿಗೂ ಲೋಕಪ್ಪನಹೊಲದ ಗುಲಾಬಿ ಸರಬರಾಜಾಗಿದೆ.ಇಲ್ಲಿಗೆ 5 ಕಿ.ಮೀ ದೂರದ ಲೋಕಪ್ಪನಹೊಲದಲ್ಲಿ 2007ರಲ್ಲಿ ಆರಂಭವಾದ ಗ್ರೀನ್‌ಹೌಸ್‌ನ ಒಂದು ಎಕರೆಯಲ್ಲಿ ಒಂದು ಶೆಡ್‌ನಂತೆ 29 ಶೆಡ್‌ಗಳಲ್ಲಿ ಕೆಂಪು ಬಣ್ಣದ 5 ತಳಿ, ಗುಲಾಬಿ ವರ್ಣದ 3, ಕಿತ್ತಳೆ ವರ್ಣದ 2, ಹಳದಿ ವರ್ಣದ 2, ಬಿಳಿ ವರ್ಣದ 2 ಸೇರಿದಂತೆ 14 ನಮೂನೆಯ ಹೂಗಳನ್ನು ಬೆಳೆಯಲಾಗಿದೆ.ಈ ವರ್ಷವೂ ಸಾಕಷ್ಟು ಬೇಡಿಕೆಯಿದ್ದು ಈಗಾಗಲೇ 5 ಲಕ್ಷ ಹೂಗಳನ್ನು ವಿದೇಶಕ್ಕೆ ರಪ್ತು ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದ ಗ್ರೀನ್‌ಹೌಸ್‌ನ ಶೀತಲೀಕರಣ ಘಟಕದಲ್ಲಿ ಇಟ್ಟು ಈಗ ಕಳಿಸಲಾಗಿದೆ ಎಂದು ವ್ಯವಸ್ಥಾಪಕ ಎಚ್‌.ಮಲ್ಲಿಕಾರ್ಜುನ ತಿಳಿಸಿದರು.‘2007ರಲ್ಲಿ ಆರಂಭವಾದಾಗ ಹೈಡ್ರೋಫೋನಿಕ್‌ ಪದ್ಧತಿಯಲ್ಲಿ 15 ಲಕ್ಷ ಗುಲಾಬಿ ಬೆಳೆಯಲಾಗಿತ್ತು. ಈಗ ಹನಿ ನೀರಾವರಿ ಅಳವಡಿಸಲಾಗಿದ್ದು ಇದರಿಂದ ಇಳುವರಿ ಹೆಚ್ಚು ಬರುತ್ತಿರುವ ಜತೆಗೆ ಖರ್ಚೂ ಕಡಿಮೆ ಎಂದು ವಿಎಸ್‌ಎಲ್‌ ಆಗ್ರೋ ಟೆಕ್‌ ಕಂಪೆನಿಯ ವ್ಯವಸ್ಥಾಪಕ ಸಂದೀಪ ಪಾಟೀಲ್ ತಿಳಿಸಿದರು.ಈ ಬೆಳೆಯುವ ಪದ್ಧತಿಯ ಖರ್ಚು ಹೆಚ್ಚು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಗುಲಾಬಿ ಬೆಳೆಯನ್ನು ಹನಿ ನೀರಾವರಿಯೊಂದಿಗೆ ಭೂಮಿಯಲ್ಲಿ ನಾಟಿ ಮಾಡಿ ಬೆಳೆಯುವ ಪದ್ಧತಿ ಅನುಸರಿಸುತ್ತಿದ್ದು, ಆ ಪದ್ಧತಿಗಿಂತ ಖರ್ಚು ಕಡಿಮೆ. ಕಳೆದ ವರ್ಷ ಈ ದಿನಕ್ಕೆ 5 ಲಕ್ಷ ಹೂವುಗಳನ್ನು ಮಾರಾಟ ಮಾಡಿದ್ದೇವೆ. ಈ ವರ್ಷ ಬೇಡಿಕೆಯು ಹೆಚ್ಚಿದ್ದು, ಈ ದಿನಕ್ಕಾಗಿ ಕಳೆದ 50ದಿನದಿಂದ ಸರಬರಾಜಿಗಾಗಿ ತಯಾರಿ ನಡೆಸಿದ್ದೇವೆ. ಸದ್ಯ, ಜಪಾನ್‌, ಯೂರೋಪ್‌ನ ಲಂಡನ್‌ದಿಂದ ಬೇಡಿಕೆ ಹೆಚ್ಚಿದೆ. ಮುಂದಿನ ವರ್ಷ 7 ಲಕ್ಷ ಹೂವುಗಳನ್ನು ಬೆಳೆಯುವ ಗುರಿಯಿದ್ದು, ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದರು.ಶೀತಲೀಕರಣ ಘಟಕದಲ್ಲಿ ಸಂಗ್ರಹಿಸಿದ್ದ ಹೂವುಗಳನ್ನು ಬೇಡಿಕೆಗೆ ಅನುಗುಣವಾಗಿ 20, 12 10 ಹೀಗೆ ವಿವಿಧ ಗುಚ್ಛಗಳನ್ನಾಗಿ ಮಾಡಿ ಇಡಲಾಗುತ್ತದೆ. ವಿದೇಶಗಳಿಗೆ ಹೋಗುವ ಗುಲಾಬಿಗಳಿಗೆ ಸಾಗಾಣಿಕೆ ವೆಚ್ಚ ಸೇರಿ ಒಂದು ಗುಲಾಬಿಗೆ 10 ರೂಪಾಯಿ ಖರ್ಚಾಗುತ್ತದೆ. ಈ ಘಟಕದಲ್ಲಿ ಸುಮಾರು 200 ಪುರುಷ ಮತ್ತು ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.