ಭಾನುವಾರ, ಫೆಬ್ರವರಿ 28, 2021
23 °C
ಧಾರವಾಡ ಕೃಷಿ ವಿ.ವಿ.ಯ 27ನೇ ಘಟಿಕೋತ್ಸವ

ಸಾಗರದ ಮಲ್ಲಿಕ್‌ಗೆ 12 ಚಿನ್ನದ ಪದಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರದ ಮಲ್ಲಿಕ್‌ಗೆ 12 ಚಿನ್ನದ ಪದಕಗಳು

ಧಾರವಾಡ: ಗುರುವಾರ ಇಲ್ಲಿ ನಡೆದ ಕೃಷಿ ವಿ.ವಿ 27ನೇ ಘಟಿಕೋತ್ಸವದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಮಲ್ಲಿಕ್‌ ಮಂಜುನಾಥ ಬಿ.ಎಸ್ಸಿ ಅಗ್ರಿಯಲ್ಲಿ ಒಟ್ಟು 12 ಚಿನ್ನದ ಪದಕ ಪಡೆದುಕೊಂಡರೆ ಬಿಹಾರದ ಮಧು­ಬನಿ ಜಿಲ್ಲೆಯ ನಿಶಾ ಕುಮಾರಿ ಒಟ್ಟು 10 ಚಿನ್ನದ ಪದಕ ಗಳಿಸಿದರು.ಕೃಷಿ ವಿ.ವಿ. ಇದೇ ಮೊದಲ ಬಾರಿಗೆ ಎರಡೂ ವರ್ಷಗಳ ಚಿನ್ನದ ಪದಕ­ಗಳನ್ನು ಪ್ರದಾನ ಮಾಡಿತು. ಕಳೆದ ವರ್ಷ ಪ್ರಭಾರ ಕುಲಪತಿಗಳ ಮೇಲೆಯೇ ಕಾರ್ಯಭಾರ ಇದ್ದುದ­ರಿಂದ ಘಟಿ­ಕೋತ್ಸವ ನಡೆದಿರಲಿಲ್ಲ. 2011–12 ಹಾಗೂ 2012–13ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪಿಎಚ್.ಡಿ ಪದವೀಧರರಿಗೆ ಇದೇ ಸಂದರ್ಭದಲ್ಲಿ ಪದಕಗಳನ್ನು ಪ್ರದಾನ ಮಾಡ­ಲಾಯಿತು. ‘ನಾನು ಏನು ಓದಬೇಕು ಎಂಬ ದಾರಿ ಸ್ಪಷ್ಟವಿತ್ತು. ಅದಕ್ಕಾ­ಗಿಯೇ ಕೃಷಿ ಬಿ.ಎಸ್ಸಿ ಮಾಡಿದೆ. ಇದೀಗ ಐಎಎಸ್‌ಗೆ ಸಿದ್ಧತೆ ನಡೆಸಿದ್ದೇನೆ’ ಎಂದು ಮಲ್ಲಿಕ್‌ ಹೇಳಿದರು.‘ಇದೇ ಕೋರ್ಸ್‌ ಓದಬೇಕು ಎಂದು ದುಂಬಾಲು ಬೀಳಲಿಲ್ಲ. ಅವನ ಓದನ್ನು ಅವನ ಆಯ್ಕೆಗೇ ಬಿಟ್ಟಿದ್ದೆವು. ಏನೇ ಓದಿದರೂ ಉತ್ತಮ ಅಂಕಗಳನ್ನೇ ಪಡೆಯುತ್ತಾನೆ ಎಂಬ ವಿಶ್ವಾಸ ನಮಗಿತ್ತು’ ಎಂದು ಮಲ್ಲಿಕ ಅವರ ತಂದೆ–ತಾಯಿ ಮಂಜುನಾಥ್‌–ಲಕ್ಷ್ಮಿ ಪ್ರತಿಕ್ರಿಯಿಸಿದರು.

ಸಿಇಟಿಯಲ್ಲಿ ಉತ್ತಮ ರ್‍್ಯಾಂಕಿಂಗ್‌ ಪಡೆದಿದ್ದ ಮಲ್ಲಿಕ್‌ಗೆ ವೈದ್ಯಕೀಯ ಸೀಟು ಸಿಕ್ಕಿತ್ತು. ಆದರೆ ಅವರಿಗೆ ಕೃಷಿ ಬಿ.ಎಸ್ಸಿ ಬಗ್ಗೆ ಒಲವು ಇತ್ತು.2011–12ರಲ್ಲಿ ಬಿ.ಎಸ್ಸಿ ಅಗ್ರಿಯಲ್ಲಿ ವಿ.ವಿ.ಗೇ ಪ್ರಥಮ ಸ್ಥಾನ ಪಡೆದಿದ್ದ  ನಿಶಾ ಕುಮಾರಿ, ‘ನನ್ನ ತಂದೆ–ತಾಯಿಯ ಪ್ರೋತ್ಸಾಹವೇ ನನ್ನ ಸಾಧನೆಗೆ ಕಾರಣ. ಶಿಕ್ಷಕರಾದರೂ ನಮಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಐಸಿಎಆರ್‌ ಸ್ಕಾಲರ್‌ಷಿಪ್‌ ಮೂಲಕ ನಾನು ಇಲ್ಲಿ ಅಧ್ಯಯನ ಮಾಡಿದೆ. ಬಿಹಾರದಿಂದ ಬಂದ ನನಗೆ ಧಾರ­ವಾಡದ ವಾತಾವರಣ ಬಹಳ ಇಷ್ಟ. ನನ್ನ ಸಾಧನೆಗೆ ಪ್ರಾಧ್ಯಾಪಕರೂ ಕಾರಣ. ಎಂ.ಎಸ್ಸಿಯನ್ನೂ ಪೂರೈ­ಸಿದ್ದು, ಬರುವ ತಿಂಗಳು ಮುಂಬೈನ ರಿಲಯನ್ಸ್‌ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕಿ­ಯಾಗಿ ಕೆಲಸಕ್ಕೆ ಸೇರಿಕೊಳ್ಳಲಿದ್ದೇನೆ’ ಎಂದರು.ವಿಜಾಪುರ ಜಿಲ್ಲೆ ಇಂಡಿ ತಾಲ್ಲೂಕಿನ ಬಾಬಾಗೌಡ ಪಾಟೀಲ ಸಾಧನೆಯೂ ಕಡಿಮೆಯೇನಿಲ್ಲ. ಪ್ರಾಥಮಿಕ ಶಿಕ್ಷಣ­ವನ್ನಷ್ಟೇ ಪೂರೈಸಿದ್ದ ಬಾಬಾಗೌಡ ಅವರ ತಂದೆ–ತಾಯಿ ಪುತ್ರನಿಗೆ ವಿಜಾಪುರ ಕ್ಯಾಂಪಸ್‌ನಲ್ಲಿಯೇ ಬಿ.ಎಸ್ಸಿ ಅಗ್ರಿ ಮಾಡಲು ಪ್ರೋತ್ಸಾಹ ನೀಡಿದ್ದರು. ಚೆನ್ನಾಗಿ ಓದಿದ ಗೌಡರಿಗೆ ಒಟ್ಟು 6 ಚಿನ್ನದ ಪದಕಗಳು ಹಾಗೂ ಒಂದು ನಗದು ಬಹುಮಾನ ಬಂದಿದೆ.‘ಇಷ್ಟೊಂದು ಅಂಕಗಳನ್ನು ಪಡೆ­ಯು­­­ತ್ತೇನೆ ಎಂದು ನಿರೀಕ್ಷೆ ಮಾಡಿರ­ಲಿಲ್ಲ. ಇದೀಗ ಹೈದರಾಬಾದ್‌ನ ಆಚಾರ್ಯ ಎನ್‌.ಜಿ.ರಂಗಾ ಕೃಷಿ ವಿ.ವಿ.ಯಲ್ಲಿ ಎಂ.ಎಸ್ಸಿ ಮಾಡುತ್ತಿ­ದ್ದೇನೆ. ಮುಂದೆ ಕೃಷಿ ವಿಜ್ಞಾನಿ­ಯಾಗುವ ಹಂಬಲವಿದೆ’ ಎಂದರು. ಘಟಿಕೋತ್ಸವದಲ್ಲಿ ಒಟ್ಟು 845 ಅಭ್ಯರ್ಥಿಗಳಿಗೆ ವಿವಿಧ ಪದವಿ ಹಾಗೂ ಚಿನ್ನದ ಪದಕಗಳನ್ನು ಪ್ರದಾನ ಮಾಡ­ಲಾಯಿತು. 697 ಅಭ್ಯರ್ಥಿಗಳು ಖುದ್ದು ಹಾಜರಾಗಿ ಪದವಿ ಸ್ವೀಕರಿಸಿ­ದರು. 51 ಪಿಎಚ್‌.ಡಿ., 218 ಸ್ನಾತ­ಕೋತ್ತರ ಹಾಗೂ 576 ಸ್ನಾತಕ ವಿದ್ಯಾರ್ಥಿಗಳು ಪದವಿಗಳನ್ನು ಪಡೆದರು. ಸಹ ಕುಲಾಧಿಪತಿಯೂ ಆದ ಕೃಷಿ ಸಚಿವ ಕೃಷ್ಣ ಬೈರೇಗೌಡ ಪದವಿಗಳನ್ನು ಪ್ರದಾನ ಮಾಡಿದರು. ಕುಲಪತಿ ಡಾ.ಡಿ.ಪಿ.ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.