ಶನಿವಾರ, ಮೇ 15, 2021
25 °C

ಸಾಮಾಜಿಕ ಪೊಲೀಸರು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಮೀರಿದ್ದರೂ ಭಾರತೀಯ ಸಮಾಜದಲ್ಲಿ ಬೇರುಬಿಟ್ಟಿರುವ ಅಸಮಾನತೆಯ ಅಂಶಗಳನ್ನು ನಿವಾರಿಸಲು ಇನ್ನೂ ಸಾಧ್ಯವಾಗಿಲ್ಲ. ರಾಷ್ಟ್ರಕ್ಕೆ ಸಂವಿಧಾನವನ್ನು ರೂಪಿಸುವಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ವರ್ಣ ವ್ಯವಸ್ಥೆಯ ಶ್ರೇಣೀಕೃತ ಸಮಾಜದಲ್ಲಿ ಸರ್ವ ಸಮಾನತೆಯನ್ನು ಸಾಧಿಸಲು ಸ್ವಾತಂತ್ರ್ಯ, ಸಮಾನತೆ ಮತ್ತು ಸೌಹಾರ್ದದ ಆಶಯಗಳನ್ನು ಅದರಲ್ಲಿ ಅಡಕಗೊಳಿಸಿದ್ದರು.ಆದರೆ ಸಂಪ್ರದಾಯ ಜಡಮನಃಸ್ಥಿತಿಯ ಭಾರತೀಯ ಸಮಾಜದಲ್ಲಿ ಈ ಆಶಯಗಳನ್ನು ಸಾಕಾರಗೊಳ್ಳುತ್ತಿಲ್ಲ. ಮೇಲು ಕೀಳಿನ ಸಮಾಜ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಹುನ್ನಾರ ಎಲ್ಲ ರಂಗಗಳಲ್ಲಿ ಉಳಿದುಕೊಂಡಿದೆ.

 

ಶತಮಾನಗಳಿಂದ ಅಕ್ಷರವಂಚಿತರಾಗಿದ್ದ ದಲಿತರು ಮತ್ತು ಹಿಂದುಳಿದ ವರ್ಗದ ಜನಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕಲ್ಪಿಸಿದ್ದ ಮೀಸಲಾತಿಯ ಅವಕಾಶವೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಅದರಲ್ಲಿಯೂ ದಲಿತರ ಕುರಿತಾಗಿ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಅಸಹನೆ, ಕಟ್ಟುನಿಟ್ಟಿನ ಕಾನೂನುಗಳಿಂದಲೂ ನಿವಾರಣೆಯಾಗಿಲ್ಲ.ಭಾರತೀಯ ಸಮಾಜಕ್ಕೆ ಕಳಂಕದಂತೆ ಅಂಟಿದ ಅಸ್ಪೃಶ್ಯತೆ ಆಚರಣೆ ವಿರುದ್ಧ ಸರ್ಕಾರ ಹಲವು ಕಠಿಣ ಕಾಯ್ದೆಗಳನ್ನು ರೂಪಿಸಿದೆ. ಆದರೂ ದಲಿತ ವರ್ಗ ಎಲ್ಲ ರೀತಿಯ ದೌರ್ಜನ್ಯಗಳಿಗೂ ಗುರಿಯಾಗುತ್ತಿದೆ. ದೇವಾಲಯ ಪ್ರವೇಶಕ್ಕೆ ಹೋರಾಟ ಮಾಡಬೇಕಾದ ಸ್ಥಿತಿ ಉಳಿದುಕೊಂಡಿದೆ. ಹೋಟಲುಗಳಲ್ಲಿ ಪಂಕ್ತಿಭೇದ.ದಲಿತ ಯುವಕ ಯುವತಿಯರೊಂದಿಗೆ ಅಂತರಜಾತಿ ಪ್ರೇಮ ವಿವಾಹಕ್ಕೆ ಆಸ್ಪದವೇ ಆಗದಂತಹ ಕರ್ಮಠ ನಡವಳಿಕೆ. ಇದು ಹಲವು ಮುಗ್ಧ ಜೀವಿಗಳ ಹತ್ಯೆಗೂ ಕಾರಣವಾಗಿದೆ. ಅಮಾನವೀಯವೂ, ಅನಾಗರಿಕವೂ ಆದ ಇಂಥ ನಡವಳಿಕೆಗಳನ್ನು ಸಂಘರ್ಷಕ್ಕೆ ಆಸ್ಪದವಿಲ್ಲದಂತೆ ನಿವಾರಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ನಾಗರಿಕ ಸಮಾಜ ಕಂಡುಕೊಳ್ಳಬೇಕಿದೆ.ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ, ಕೋಮುವಾದ ಮೊದಲಾದ ಅನಿಷ್ಟಗಳ ನಿವಾರಣೆಗೆ ಶಾಂತಿ ಸಂಧಾನ ಮಾರ್ಗಗಳಿಂದ ಪರಿಹಾರ ಕಂಡುಕೊಳ್ಳುವ ವೈಚಾರಿಕ ಮನಃಸ್ಥಿತಿಯ ವ್ಯಕ್ತಿಗಳಿಗೆ ನಾಡಿನಲ್ಲಿ ಕೊರತೆ ಇಲ್ಲ. ಇಂಥವರು ಪೊಲೀಸ್ ಸೇರಿದಂತೆ ಸರ್ಕಾರದ ನಾನಾ ಇಲಾಖೆಗಳಲ್ಲಿಯೂ ಇದ್ದಾರೆ.ದಲಿತರಿಗೆ ಸಂಬಂಧಿಸಿದಂತೆ ಉದ್ಭವವಾಗುವ ಯಾವುದೇ ಪ್ರಕರಣದ ಬಗ್ಗೆ ಪೂರ್ವ ಮಾಹಿತಿಯನ್ನು ಪಡೆದು ಅದನ್ನು ಶಾಂತಿಯುತ ಸಂಧಾನದ ಮೂಲಕ ಇತ್ಯರ್ಥಪಡಿಸುವಂಥ ಸಾಮಾಜಿಕ ನ್ಯಾಯ ಪದ್ಧತಿಯನ್ನು ಜಿಲ್ಲಾಮಟ್ಟದಲ್ಲಿ ಒಂದು ಘಟಕವಾಗಿ ಅಸ್ತಿತ್ವಕ್ಕೆ ತರುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸಬೇಕಿದೆ.ಸಾಮಾಜಿಕ ಸೇವಾ ಭಾವನೆಯಿಂದ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬಲ್ಲ ಸರ್ಕಾರಿ ಸಿಬ್ಬಂದಿ ಮತ್ತು ಸಾಮಾಜಿಕ ಕಾರ್ಯಕರ್ತರು ಒಳಗೊಂಡ ಸ್ಥಳೀಯ ಸಮಿತಿಗಳನ್ನು ಅಧಿಕೃತ ನೆಲೆಯಲ್ಲಿ ರಚಿಸಿದರೆ ಯಾವುದೇ ಘರ್ಷಣೆಯನ್ನು ನಿವಾರಿಸಿ ಸಾಮಾಜಿಕ ಆರೋಗ್ಯವನ್ನು ಕಾಪಾಡುವುದು ಸಾಧ್ಯವಾಗಬಹುದು.ದೂರು ಬಂದಾಗ ಅದನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿ ಸಾಕ್ಷ್ಯಗಳ ಕೊರತೆಯಿಂದ ಹೆಚ್ಚಿನ ಪ್ರಕರಣಗಳನ್ನು ಕೈಬಿಡುವಂಥ ವ್ಯವಸ್ಥೆ ಈಗ ಅಸ್ತಿತ್ವದಲ್ಲಿದೆ. ಆದರೆ, ಸಂಘರ್ಷಕ್ಕೆ ಅವಕಾಶವೇ ಆಗದಂತೆ ಅದನ್ನು ಮುಂಜಾಗ್ರತೆಯಿಂದ ನಿವಾರಿಸಬಲ್ಲ ಸಾಮಾಜಿಕ ಪೊಲೀಸ್ ವ್ಯವಸ್ಥೆಯನ್ನು ತಂದರೆ ಹೆಚ್ಚು ಪ್ರಯೋಜನವಾಗುವ ನಿರೀಕ್ಷೆ ಇದೆ.ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯೋನ್ಮುಖವಾಗಲಿ. ದಲಿತರಷ್ಟೇ ಅಲ್ಲದೆ, ಎಲ್ಲ ವರ್ಗದ ಜನತೆ ಸಂಘರ್ಷರಹಿತ ಶಾಂತಿಯುತ ಸಹಬಾಳ್ವೆ ನಡೆಸುವಂತಹ ವಾತಾವರಣ ಕಲ್ಪಿಸುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.