ಮಂಗಳವಾರ, ಡಿಸೆಂಬರ್ 10, 2019
26 °C

ಸಾಮಾನ್ಯರಿಗೂ ಕಾನೂನು ಜ್ಞಾನ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾನ್ಯರಿಗೂ ಕಾನೂನು ಜ್ಞಾನ: ಡಿಸಿ

ಪ್ರಜಾವಾಣಿ ವಾರ್ತೆ

ಚಾಮರಾಜನಗರ: ಸಮಾಜದ ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವು ಉಂಟಾಗಬೇಕಾಗಿದೆ ಎಂದು ಜಿಲ್ಲಾಧಿಕಾರಿ  ಕೆ.ಅಮರನಾರಾಯಣ್ ಬುಧವಾರ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಸತ್ರ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶ್ರೀಸಾಮಾನ್ಯನಿಗೂ ಕೂಡ ಕಾನೂನು ಜ್ಞಾನ ಪರಿಚಯಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಾನೂನು ಸೇವಾ ಪ್ರಾಧಿಕಾರ ಸಾರ್ವಜನಿಕರು, ರೈತರು, ಅಸಂಘಟಿತ ಜನರಿಗೆ ಕಾನೂನು ಅರಿವು ಉಂಟು ಮಾಡುವಂತಹ ಕೆಲಸ ಮಾಡುತ್ತಿದೆ. ಇದರಿಂದ ಓದು ಬರಹ ಬಾರದವರೂ ಕೂಡ ನ್ಯಾಯಾಲಯದ ವಿಚಾರ ತಿಳಿದುಕೊಳ್ಳಲು ಸಹಕಾರಿಯಾಗುತ್ತಿದೆ. ಜಿಲ್ಲೆ ಸಾಕ್ಷರತೆ ಶೇ.59ರಷ್ಟು ಇದೆ. ಅದು ಇನ್ನು ಉತ್ತಮವಾಗಬೇಕು ಎಂದು ಆಶಿಸಿದ ಅವರು, ಕೇರಳ ರಾಜ್ಯದ ರೀತಿ ಪ್ರತಿಯೊಬ್ಬರೂ ಕೂಡ ಸಾಕ್ಷರರಾಗಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಸತ್ರ ನ್ಯಾಯಾಧೀಶ ಎ.ಸಿ.ವಿದ್ಯಾಧರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾನೂನಿನ ಅರಿವಿನ ಬಗ್ಗೆ ಗ್ರಾಮಾಂತರ ಜನತೆಗೂ ಕೂಡ ಅರಿವು ಉಂಟು ಮಾಡಲಾಗುತ್ತಿದೆ. ಕಾನೂನು ರಥ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸಂಚರಿಸಲಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ನೆಮ್ಮದಿ ಬೇಕಾದರೆ ಪ್ರತಿಯೊ ಬ್ಬರಿಗೂ ಕಾನೂನು ಜ್ಞಾನ ಅವಶ್ಯಕ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ನಿಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಕೆ.ಎಚ್. ಮಲ್ಲಪ್ಪ, ಕೆ.ಎಸ್.ಗಂಗಣ್ಣನವರ್, ರಾಧಾಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಂದರನಾಯಕ್, ಡಿ.ವೈ.ಎಸ್.ಪಿ.ಬಸವರಾಜು, ವಕೀಲರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)