ಗುರುವಾರ , ಮೇ 19, 2022
21 °C

ಸಾರ್ಕ್ ಶೃಂಗಸಭೆ: ಸಫ್ಟಾ ಅಳವಡಿಕೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಥಿಂಪು (ಪಿಟಿಐ): ಸಾರ್ಕ್ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟನ್ನು ವೃದ್ಧಿಸುವ ಸಂಬಂಧ ಭಾರತ ದಕ್ಷಿಣ ಏಷ್ಯಾ ಉಚಿತ ವ್ಯಾಪಾರ ಒಪ್ಪಂದ (ಸಫ್ಟಾ)ದ ತಾತ್ವಿಕವಾದ ಅಳವಡಿಕೆಯ ಅಗತ್ಯವನ್ನು ಒತ್ತಿ ಹೇಳಿದೆ. ಸಾರ್ಕ್ ರಾಷ್ಟ್ರಗಳ ಮಧ್ಯೆ ಮುಕ್ತ ವಹಿವಾಟು ನಡೆಸಲು ಅನುವು ಮಾಡಿಕೊಡುವ ಸಫ್ಟಾವನ್ನು ತಾತ್ವಿಕವಾಗಿ ಅನುಷ್ಠಾನಕ್ಕೆ ತರಲು ಎಲ್ಲಾ ಸದಸ್ಯ ರಾಷ್ಟ್ರಗಳು ಅನುಮೋದಿಸಿದರೆ ಅಂತರ್ ಪ್ರಾದೇಶಿಕ ವಾಣಿಜ್ಯ ವಹಿವಾಟನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅದು ಪ್ರಮುಖ ಪಾತ್ರವಹಿಸಲಿದೆ ಎಂದು ವಿದೇಶಾಂಗ ಸಚಿವೆ ನಿರುಪಮಾ ರಾವ್ ಭಾನುವಾರ ಸಾರ್ಕ್ ಶೃಂಗಸಭೆಯ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಹೇಳಿದರು.ಸಫ್ಟಾದ ಜಾರಿಗೆ ಪಾಕಿಸ್ತಾನ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಬಿದ್ದಿದ್ದರೂ ಅವರು ಯಾವುದೇ ರಾಷ್ಟ್ರವನ್ನು ಪ್ರಸ್ತಾಪಿಸಲಿಲ್ಲ. ಭಾರತದಿಂದ ಆಮದಾಗುವ ಸರಕುಗಳ ಮೇಲೆ ನಿರ್ಬಂಧ ವಿಧಿಸಿರುವ ಪಾಕ್‌ನ ಕ್ರಮ ಸಫ್ಟಾದ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ರಾವ್ ಸಾರ್ಕ್ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ಭೂತಾನ್‌ನಲ್ಲಿ ನಡೆದ ಹಿಂದಿನ ಸಾರ್ಕ್ ಸಮ್ಮೇಳನದಲ್ಲಿ ನಡೆದ ವ್ಯಾಪಾರ ಸೇವೆಗಳ ಒಪ್ಪಂದವನ್ನು ಶೀಘ್ರವೇ ಜಾರಿಗೆ ತರುವಂತೆ ಸಹ ರಾವ್ ಒತ್ತಾಯಿಸಿದರು.  ‘ಭಾರತ ಈಗಾಗಲೇ ವಲಯ ನಿಗದಿತ ಸೇವೆಗಳ ಕೋರಿಕೆ ಪಟ್ಟಿಯನ್ನು ವಿವಿಧ ಸದಸ್ಯರಿಗೆ ನೀಡಿದೆ. ಮಾರ್ಚ್‌ನಲ್ಲಿ ನಡೆಯಲಿರುವ ಪರಿಣಿತರ ಸಮೂಹದ ಸಭೆಯಲ್ಲಿ  ‘ಕೋರಿಕೆ -ಆಹ್ವಾನ ಪ್ರಕ್ರಿಯೆ’ ಚರ್ಚೆಗೆ ಬರುವ ವಿಶ್ವಾಸವಿದೆ’ ಎಂದು ರಾವ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.