ಶುಕ್ರವಾರ, ಮೇ 27, 2022
27 °C

ಸಾಲವೇ ಹಿಂದಿನ ಸರ್ಕಾರದ ಸಾಧನೆ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಆರ್ಥಿಕ ಅಶಿಸ್ತು ತೋರಿದ ಹಿಂದಿನ ಸರ್ಕಾರ ಹಣಕಾಸಿನ ಸಂಕಷ್ಟವನ್ನು ಬಳುವಳಿಯಾಗಿ ಕೊಟ್ಟು ಹೋಗಿದೆ. ಜನರ ಕನಿಷ್ಠ ಅಗತ್ಯಗಳನ್ನು ಪೂರೈಸಲೂ ಅದಕ್ಕೆ ಸಾಧ್ಯವಾಗಲಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.ಶುಕ್ರವಾರ 2013-14ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ ಅವರು, ತಮ್ಮ ಭಾಷಣದ ಆರಂಭಿಕ ಸಮಯವನ್ನು ಹಿಂದಿನ ಸರ್ಕಾರದ ಟೀಕೆಗೆ ಮೀಸಲಿಟ್ಟರು.`ಕಳೆದ ಐದು ವರ್ಷಗಳ ಅವಧಿಯಲ್ಲಿ ಆದಾಯ ಸ್ವೀಕೃತಿಗಳು ತುಂಬಾ ಕಡಿಮೆಯಾಗಿದ್ದವು. ರಾಜಸ್ವದ ಪ್ರಮಾಣವೂ ಇಳಿಕೆ ಕಂಡಿತ್ತು. ಸಾಲದ ಎತ್ತುವಳಿ ಹೆಚ್ಚಾಗಿತ್ತು. ಬಾಕಿ ಪಾವತಿ ಬಿಲ್ಲುಗಳು ಅಧಿಕವಾಗಿದ್ದವು. ಆರ್ಥಿಕ ಬೆಳವಣಿಗೆ ಕುಂಠಿತವಾಗಿತ್ತು. ಒಟ್ಟಾರೆ ರಾಜ್ಯದ ಅಭಿವೃದ್ಧಿ ಫಲಿತಾಂಶಗಳ ನೋಟ ನಿರಾಶಾದಾಯಕವಾಗಿತ್ತು' ಎಂದು ಅಭಿಪ್ರಾಯಪಟ್ಟರು.`ಮಾಹಿತಿ ತಂತ್ರಜ್ಞಾನ ನಗರ ಎನ್ನುವ ಬೆಂಗಳೂರಿನ ಹೆಗ್ಗಳಿಕೆಗೆ ಮಂಕು ಕವಿದಿತ್ತು. ನಗರದ ಮೂಲ ಸೌಕರ್ಯಗಳು ಕೂಡ ಮುಕ್ಕಾಗಿ ಕುಳಿತಿದ್ದವು. ಶಿಶು ಮರಣ ಪ್ರಮಾಣ, ಮಕ್ಕಳ ಅಪೌಷ್ಟಿಕತೆಯಂತಹ ಮಾನವ ಅಭಿವೃದ್ಧಿ ಸೂಚ್ಯಂಕಗಳು ಸಹ ಆಶಾದಾಯಕ ಬೆಳವಣಿಗೆ ತೋರಲಿಲ್ಲ. ಕೇಂದ್ರ ಸರ್ಕಾರದ ಅನುದಾನದ ಬಳಕೆಯಲ್ಲೂ ಹಿಂದೆ ಬೀಳಲಾಗಿತ್ತು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗಣನೀಯ ಪ್ರಮಾಣದ ಉದ್ಯೋಗಗಳು ಸೃಷ್ಟಿ ಆಗಲಿಲ್ಲ' ಎಂದು ವಿವರಿಸಿದರು.`2006-07ರಲ್ಲಿ ಶೇ 25.10ರಷ್ಟು ಬೆಳವಣಿಗೆ ದರದಲ್ಲಿದ್ದ ರಾಜಸ್ವ ಸಂಗ್ರಹ, 2008-09ರಲ್ಲಿ ಶೇ 6.4, 2009-10ರಲ್ಲಿ ಶೇ 10.6ಕ್ಕೆ ಕುಸಿದಿತ್ತು. 2006-07ರಿಂದ 2012-13ರ ಅವಧಿಯಲ್ಲಿ ಸಾಲದ ಹೊರೆ ್ಙ 62,519 ಕೋಟಿಯಿಂದ ್ಙ 1,17,501 ಕೋಟಿಗೆ ಹೆಚ್ಚಿದೆ. ನೋಂದಣಿ ಮತ್ತು ಮುದ್ರಾಂಕದ ಸಂಗ್ರಹಣೆ 2006ರಿಂದ 2013ರ ಅವಧಿವರೆಗೆ ಹೆಚ್ಚು-ಕಡಿಮೆ ಸ್ಥಗಿತಗೊಂಡಿತ್ತು' ಎಂದು ತಿಳಿಸಿದರು.`ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ, ತೆರಿಗೆ ಸೋರಿಕೆ ನಿಯಂತ್ರಣ ಮತ್ತು ತೆರಿಗೆ ತಪ್ಪಿಸುವಿಕೆ ತಡೆಗಟ್ಟಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದರೆ ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ತಾನೇ ರಚಿಸಿದ್ದ ವೆಚ್ಚ ಸುಧಾರಣಾ ಆಯೋಗದ ಶಿಫಾರಸುಗಳನ್ನು ಕೂಡ ಹಿಂದಿನ ಸರ್ಕಾರ ಪೂರ್ಣವಾಗಿ ಅನುಷ್ಠಾನಕ್ಕೆ ತರಲಿಲ್ಲ' ಎಂದು ಹೇಳಿದರು.`ಕೃಷಿ ಆಯ-ವ್ಯಯ ಮಂಡಿಸಿದರೂ ಅದರಿಂದ ನಮ್ಮ ಕೃಷಿ ಬೆಳವಣಿಗೆಯಲ್ಲಿ ಏರಿಕೆ ಆಗಿಲ್ಲ. ಇದಕ್ಕೆ ಬದಲಾಗಿ 2007-08ರಲ್ಲಿ ಶೇ 12.4ರಷ್ಟಿದ್ದ ಬೆಳವಣಿಗೆ ದರ 2012-13ರಲ್ಲಿ ಶೇ 1.8ಕ್ಕೆ ಇಳಿಕೆಯಾಗಿದೆ. ಎರಡು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿದ್ದರೂ ಕೈಗಾರಿಕಾ ಬೆಳವಣಿಗೆ ಶೇ 10.8ರಿಂದ ಶೇ 2.4ಕ್ಕೆ ಕುಸಿದಿದೆ. ಸೇವಾ ವಲಯದ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ' ಎಂದು ವಿವರಿಸಿದರು.`ಹಿಂದಿನ ಸರ್ಕಾರ ತಾನು ಘೋಷಿಸಿದ್ದ ಹಲವಾರು ಯೋಜನೆಗಳಿಗೆ ಅಗತ್ಯವಾದಷ್ಟು ಅನುದಾನ ಒದಗಿಸಿಲ್ಲ. ನಾನು ಈ ಎಲ್ಲ ಯೋಜನೆಗಳಿಗೆ ಹಣ ಒದಗಿಸಬೇಕಿದೆ' ಎಂದು ಹೇಳಿದರು.`ತಲೆಯ ಮೇಲೊಂದು ಸೂರು, ಕುಡಿಯಲು ಸ್ವಚ್ಛ ನೀರು, ಮಾರುಕಟ್ಟೆ ಸಂಪರ್ಕಕ್ಕೆ ಉತ್ತಮ ರಸ್ತೆ, ಮನೆ ಬೆಳಗಲು ವಿದ್ಯುತ್, ಆರೋಗ್ಯ ರಕ್ಷಣೆ ಸವಲತ್ತು, ಮಕ್ಕಳ ಬದುಕಿಗೊಂದು ಶಿಕ್ಷಣ, ನೆಮ್ಮದಿ ಜೀವನಕ್ಕಾಗಿ ಕಾನೂನು ಸುವ್ಯವಸ್ಥೆ ಪಾಲನೆ -ಇಷ್ಟನ್ನೇ ನಮ್ಮ ಸಂಯಮಶೀಲ ಜನ ಬಯಸಿದ್ದು. ಆದರೆ, ಹಿಂದಿನ ಸರ್ಕಾರ ಅವರ ಬೇಡಿಕೆಗಳನ್ನು ಅಲಕ್ಷಿಸಿತು' ಎಂದು ದೂರಿದರು.`ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದ್ದು, ಸರಿದಾರಿಗೆ ತರಬೇಕಿದೆ. ಇದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ನಡೆಸಲಾಗುವುದು. ರಾಜ್ಯವನ್ನು ಕಾಡುತ್ತಿರುವ ವಿತ್ತೀಯ ಬಿಕ್ಕಟ್ಟಿನ ಸುಧಾರಣೆಗಾಗಿ ಸಾಂಸ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವ ಮಧ್ಯಮಾವಧಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ' ಎಂದು ತಿಳಿಸಿದರು.ಅನ್ನ ದೇವರ ಮುಂದೆ...

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ಪ್ರಾಸಂಗಿಕವಾಗಿ ಕವಿಗಳ ಸಾಲುಗಳನ್ನು ಉದ್ಧರಿಸಿ ಗಮನ ಸೆಳೆದರು.

  ಕೃಷಿ ಯೋಜನೆಗಳನ್ನು ಪ್ರಕಟಿಸುವಾಗ ಕುವೆಂಪು ಅವರ

`ಯಾರೂ ಅರಿಯದ ನೇಗಿಲ ಯೋಗಿಯೆ

ಲೋಕಕೆ ಅನ್ನವನೀಯುವನು'

ಸಾಲನ್ನು ಹೇಳಿದರು.  ಶಿಕ್ಷಣದ ವಿಷಯ ಪ್ರಸ್ತಾಪಿಸಿದ ಅವರು, ದೇವನೂರ ಮಹಾದೇವ ಅವರ

`ಭೂಮಿಗೆ ಬಿದ್ದ ಬೀಜ

ಎದೆಗೆ ಬಿದ್ದ ಅಕ್ಷರ

ಇಂದಲ್ಲ ನಾಳೆ ಫಲ ಕೊಡುವುದು'

ಸಾಲನ್ನು ನೆನೆದರು.  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಕಾರ್ಯಕ್ರಮವನ್ನು ಪ್ರಕಟಿಸುವಾಗ ಅಕ್ಕ ಮಹದೇವಿ ಅವರ

`ನೊಂದವರ ನೋವ ನೋಯದವರೆತ್ತ ಬಲ್ಲರೊ'

ಸಾಲನ್ನು ಉದ್ಗರಿಸಿದರು.ಆಹಾರ ಯೋಜನೆಯನ್ನು ತಿಳಿಸುವಾಗ

`ಅನ್ನ ದೇವರ ಮುಂದೆ

ಇನ್ನು ದೇವರು ಇಲ್ಲ'

ಎಂಬ ಸರ್ವಜ್ಞನ ಸಾಲನ್ನು ನೆನಪು ಮಾಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.