ಶುಕ್ರವಾರ, ಮೇ 14, 2021
30 °C

ಸಾವಯವ ಕೃಷಿ ಸಾಧಕರ ಯಶೋಗಾಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ರಾತ್ರಿ ಕ್ವಾರ್ಟರ್ ಸಾರಾಯಿ ಕುಡಿಯದ ಮನುಷ್ಯರಿಗೆ ಬೆಳಿಗ್ಗೆ ಎದ್ದಾಗ ಕೈ ನಡುಗುವ ಪರಿಸ್ಥಿತಿಯೇ, ರಸಗೊಬ್ಬರ ಹಾಕದ ಭೂಮಿಯ ಸ್ಥಿತಿ ಆಗಿದೆ~ ಎಂದು ರೈತ ಬಲದೇವ ರಾಮಚಂದ್ರ ಅಲಗೂರು ಹೇಳಿದ ಮಾತು ಭಾನುವಾರ ಕೃಷಿ ಮೇಳದಲ್ಲಿ ನಡೆದ `ರೈತರಿಂದ ರೈತರಿಗಾಗಿ~ ಕಾರ್ಯಕ್ರಮದಲ್ಲಿ ಗಂಭೀರ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು.ಇರುವ ಒಂದು ಎಕರೆ ಭೂಮಿಯಲ್ಲಿ ನಾಲ್ಕು ಎಮ್ಮೆಕಟ್ಟಿಕೊಂಡು ಸಾವಯವ ಕೃಷಿ ಕೈಗೊಂಡಿರುವ ಬಲದೇವ ಸೇರಿದಂತೆ ಐವರು ರೈತರಿಗೆ ವಿವಿಯಿಂದ ಮಾದರಿ ಸಾವಯವ ಕೃಷಿಕರು ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾಗಿನೆಲೆ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಲದೇವ ಅಲಗೂರು, ಇಷ್ಟೊಂದು ಕಡಿಮೆ ಜಮೀನಿನಲ್ಲಿಯೇ ಮನೆಯ ಖರ್ಚು ವೆಚ್ಚ ಕಳೆದು ವಾರ್ಷಿಕ ರೂ.50 ಸಾವಿರ ಉಳಿಸುತ್ತಿರುವುದಾಗಿ ಹೇಳಿದರು. ರಸಗೊಬ್ಬರ ಬಳಸಿ ಕೃಷಿ ಮಾಡುವಾಗ ತಾವೂ ನಷ್ಟ ಅನುಭವಿಸಿದ್ದು, ಸಾವಯವ ಕೃಷಿಗಾಗಿಯೇ ಹೈನುಗಾರಿಕೆ ಅವಲಂಬಿಸಿ ಇಂದು ಅದರಲ್ಲಿ ಯಶಸ್ವಿಯಾಗಿದ್ದೇನೆ. ನಿತ್ಯ 10 ಲೀಟರ್ ಹಾಲು ಮಾರಾಟ ಮಾಡುತ್ತಾ, ಸಾವಯವ ಪದ್ಧತಿಯಲ್ಲಿ 15 ಗುಂಟೆಯಲ್ಲಿ 20 ಟನ್ ಕಬ್ಬು ಬೆಳೆದಿರುವ ತಮ್ಮ ಯಶೋಗಾಥೆಯನ್ನು ಸಮಾರಂಭದಲ್ಲಿ ಹಂಚಿಕೊಂಡರು.

9ನೇ ತರಗತಿ ಓದಿ ಇಡೀ ಗ್ರಾಮಕ್ಕೆ ಎರೆಹುಳು ತಯಾರಿಕೆಯ ಕುರಿತು ಪಾಠ ಹೇಳಿರುವ ಹಾನಗಲ್ ತಾಲ್ಲೂಕು ಬದಾಮಗಟ್ಟೆಯ ರಾಜೇಶ್ವರಿ ಹಿರೇಮಠ, ಬಾದಾಮಗಟ್ಟೆಯನ್ನು ಸಾವಯವ ಗ್ರಾಮವಾಗಿ ರೂಪಿಸಲು ತಾವು ಪಟ್ಟ ಶ್ರಮ ವಿವರಿಸಿದರು. ಜಲಸಂವರ್ಧನೆ ಯೋಜನೆಯಡಿ ಸಾವಯವ ಕೃಷಿ ಉತ್ತೇಜನಕ್ಕೆ ಗ್ರಾಮಕ್ಕೆ ಬಂದ ಧಾರವಾಡದ ಕೃಷಿ ವಿವಿ ಅಧಿಕಾರಿ, ಎರೆಹುಳುಗಳನ್ನು ಕೊಟ್ಟಾಗ ಅವುಗಳನ್ನು ಕೈಯಲ್ಲಿ ಹಿಡಿಯಲು ಅಸಹ್ಯಪಟ್ಟಿದ್ದು, ಈಗ ಎರೆಹುಳುಗಳೇ ಮನೆಯ ಆದಾಯದ ಮೂಲವಾಗಿವೆ ಎಂದು ರಾಜೇಶ್ವರಿ ಹೇಳಿದರು.ಶಿರಸಿಯ ರೈತ ವಿಶ್ವೇಶ್ವರ ಹೆಗಡೆ ಮಾತನಾಡಿ, 1982ರಲ್ಲಿ ಇಡೀ ರಾಜ್ಯದಲ್ಲಿ ಬರಗಾಲ ಛಾಯೆ ಆವರಿದ್ದಾಗ ಮಲೆನಾಡು ಪ್ರದೇಶವಾದ ಶಿರಸಿಯಲ್ಲಿಯೂ ನೀರಿನ ಸಮಸ್ಯೆ ಎದುರಾಗಿದ್ದು, ಆಗ ತಾವು ನೀರು ಪಡೆಯಲು ನಡೆಸಿದ ಹೋರಾಟ ಅದರಿಂದ ತೋಟ ಅಭಿವೃದ್ಧಿಪಡಿಸಲು ಸಾಧ್ಯವಾದ ಬಗ್ಗೆ ಹೇಳಿದರು.ನೀರು ಉಳಿಸುವುದರಿಂದ ಕೇವಲ ಮನುಷ್ಯರಿಗೆ ಅಲ್ಲದೇ ಗಿಡ,ಮರ, ಪ್ರಾಣಿ-ಪಕ್ಷಿ, ಜಲಚರಗಳಿಗೂ ಅನುಕೂಲವಾಗುತ್ತದೆ ಎಂದು ಹೆಗಡೆ ರೈತಮಿತ್ರರಿಗೆ ಕಿವಿಮಾತು ಹೇಳಿದರು.ರೈತರು ಇನ್ನೊಬ್ಬರ ಬಳಿ ಕೇಳುವುದು ಸಲ್ಲ. ಬದಲಿಗೆ ಇನ್ನೊಬ್ಬರಿಗೆ ಕೊಡುವ ಸ್ವಾವಲಂಬನೆ ಬೆಳೆಸಿಕೊಳ್ಳಬೇಕಿದೆ. ಅದು ಸಾವಯವ ಕೃಷಿಯಿಂದ ಮಾತ್ರ ಸಾಧ್ಯ. ಸಾವಯವ ಪದ್ಧತಿಯಿಂದ ಒಂದು ಎಕರೆ ಜಮೀನಿನಲ್ಲಿ 70 ಟನ್ ಕಬ್ಬು ಬೆಳೆದಿರುವುದಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿಯ ಮಹಾಂತಯ್ಯ ಸಂಗಯ್ಯಮಠ ಹೇಳಿದರು. ಅದೇ ತಾಲ್ಲೂಕಿನ ಪ್ರಕಾಶ ಕಮಲಪ್ಪಗೌಡರ್ ಕೂಡ ತಮ್ಮ ಸಾವಯವ ಯಶೋಗಾಥೆ ಹೇಳಿಕೊಂಡರು.ಹಳೆಯ ವಿದ್ಯಾರ್ಥಿಯ ಸಾಧನೆ: ಹುಣಸೆಬೀಜ ಖರೀದಿಸಿ ಅದನ್ನು ಸಂಸ್ಕರಿಸಿ ರಫ್ತು ಮಾಡುತ್ತಿರುವ ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಬಿಜಾಪುರದ ಆನಂದ ಮಂಗಳವೇಡೆ ಯಶಸ್ಸಿನ ಕಥೆ ಕೇಳಿ ರೈತರಿಂದ ಚಪ್ಪಾಳೆಯ ಗೌರವ.ಕೃಷಿ ವಿಶ್ವವಿದ್ಯಾಲಯದಲ್ಲಿ 1985ರಿಂದ 1991ರವರೆಗೆ ಕೃಷಿ ಪದವಿ ವ್ಯಾಸಂಗ ಮಾಡಿರುವ ಆನಂದ, 8 ವರ್ಷಗಳ ಹಿಂದೆ ಹುಣಸೆಬೀಜ ವ್ಯಾಪಾರಕ್ಕಿಳಿದರು. ರೈತರಿಂದ ಹುಣಸೆಬೀಜ ಖರೀದಿಸಿ ಹುರಿದು ಪುಡಿ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಅವರು, ಕಳೆದ ಐದು ವರ್ಷಗಳಿಂದ ವಿಜಾಪುರ ಜಿಲ್ಲೆಯ ಯಶಸ್ವಿ ರಫ್ತು ಉದ್ಯಮಿಯಾಗಿ ಕೇಂದ್ರ ಸರ್ಕಾರದಿಂದ ಪ್ರಶಸ್ತಿ ಪಡೆದಿದ್ದಾರೆ. ಒಂದು ಕೆ.ಜಿಯಿಂದ ಹಿಡಿದು ಟನ್‌ವರೆಗೆ ಎಷ್ಟೇ ಹುಣಸೆ ಬೀಜ ಇದ್ದರೂ ತಾವು ಖರೀದಿಸುವುದಾಗಿ ಹೇಳಿದಾಗ ಸಮಾರಂಭದಲ್ಲಿ ಇದ್ದ ರೈತರು ಆನಂದ ಅವರ ಮೊಬೈಲ್ ಸಂಖ್ಯೆ ಕೇಳಿ ಪಡೆದರು.  ರೈತರ ಯಶೋಗಾಥೆಯ ಹಂಚಿಕೆಯ ನಡುವೆಯೇ ತತ್ವಪದ ಹಾಗೂ ಗೀಗೀಪದಗಳ ಮೂಲಕ ನೆರೆದವರನ್ನು ರಂಜಿಸಿದ ನವಲಗುಂದ ತಾಲ್ಲೂಕು ನಾಗನೂರಿನ ಇಮಾಂಸಾಬ್ ಮತ್ತು ತಂಡಕ್ಕೆ ರೈತರು ಆಗಾಗ ಹಣ (ಆಯರ) ನೀಡುವ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.