ಗುರುವಾರ , ಮೇ 13, 2021
16 °C

ಸಾಹಸಮಯ ಪೂಜಾ ಕುಣಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಂದಿನಲ್ಲಿ ದೇವರ ಉತ್ಸವದ ಮುಂದೆ ತಮಟೆ ವಾದ್ಯಗಳ ಸಮಕ್ಕೆ ಹೆಜ್ಜೆ ಹಾಕುತ್ತಾ ಪೂಜಾ ಕುಣಿತದಿಂದ ಆಕರ್ಷಿತನಾಗಿ ತಾನೂ ಕಲಿಯಬೇಕೆಂಬ ಹಟಕ್ಕೆ ಬಿದ್ದು, ಪರಿಶ್ರಮದಿಂದ ಕಲಿತ ಹಳೆವೂರು ಮಹೇಶ್ ಇಂದು ತಾಲ್ಲೂಕಿನಲ್ಲಿ ಬೇಡಿಕೆಯಲ್ಲಿರುವ ಪೂಜಾ ಕುಣಿತದ ಕಲಾವಿದ.ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿ ಹಳೆವೂರು ಗ್ರಾಮದ ಹಳೆವೂರಮ್ಮ ದೇವಸ್ಥಾನದ ಹಿಂಭಾಗದ ಗಲ್ಲಿಯೊಂದರಲ್ಲಿ ವಾಸ. ತನ್ನ 13ನೇ ವಯಸ್ಸಿನಲ್ಲಿ ಗ್ರಾಮದ ಹಳೆವೂರಮ್ಮ ಹಾಗೂ ಹುಲಿಯೂರಮ್ಮ ದೇವರ ಜಾತ್ರಾ ಮಹೋತ್ಸವದಲ್ಲಿ ಪೂಜಾ ಕುಣಿತದಿಂದ ಆಕರ್ಷಿತನಾಗಿ, ಈ ಜಾನಪದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.ತಲೆಯ ಮೇಲೆ ಕಲ್ಲು ಹೊತ್ತು ವಿಗ್ರಹಗಳೆಂದು ಭ್ರಮಿಸಿ ಕುಣಿಯುತ್ತಿದ್ದ ಮಗನನ್ನು ಕಂಡ ತಂದೆ ನಂಜುಂಡಪ್ಪ ಹಾಗೂ ಅರ್ಚಕ ನಾಗಣ್ಣ ಈತನ ಕಲೆಯನ್ನು ಗುರುತಿಸಿ ತರಬೇತಿ ಕೊಡಿಸಿದ್ದರು. ಸತತ ಮೂರು ತಿಂಗಳ ತರಬೇತಿ, ಪರಿಶ್ರಮದಿಂದ ಶಾಸ್ತ್ರಬದ್ಧವಾಗಿ ಪೂಜಾ ಕುಣಿತ ಕಲಿತರು. ಇಂದು ಊರಿನ ಸುತ್ತಮುತ್ತ ಯಾವುದೇ ಕಾರ್ಯಕ್ರಮವಿರಲಿ ಮಹೇಶ್ ಪೂಜಾ ಕುಣಿತವಿರುತ್ತದೆ.ಇದುವರೆಗೆ ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಬಾಗೇಪಲ್ಲಿ, ಕೋಲಾರ ಜಿಲ್ಲೆ ಸೇರಿದಂತೆ ವಿವಿಧೆಡೆ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ಕೆಲವೆಡೆ ಜನ ಮಕ್ಕಳನ್ನು ಎತ್ತಿಕೊಂಡು ಕುಣಿಯುವಂತೆ, ನೆಲದ ಮೇಲೆ ನೋಟು ಹಾಕಿ ಎತ್ತಿಕೊಳ್ಳುವಂತೆ, ಮಡಕೆ ಮೇಲೆ, ಏಣಿ ಮೇಲೆ, ಸೈಕಲ್ ಸವಾರಿ ಮಾಡುತ್ತಾ ಪೂಜಾ ಕುಣಿತ ನಡೆಸು ವಂತೆ ಹುರಿದುಂಬಿಸಿದ್ದು, ಏಕಾಗ್ರತೆ ಪರಿಶ್ರಮದಿಂದ ಎಲ್ಲ ಕಡೆ ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟಿರುವುದಾಗಿ ಮಹೇಶ್ ತಿಳಿಸುತ್ತಾರೆ.ಕಲೆಯ ಮೇಲಿನ ಪ್ರೀತಿಯಿಂದಾಗಿ ಇದನ್ನು ಮಾಡುತ್ತಿದ್ದು, ಕಾರ್ಯಕ್ರಮ ನೀಡುವುದರಿಂದ ಹೆಚ್ಚಿನ ಆದಾಯ ದೊರೆಯುವುದಿಲ್ಲ. ಬೇರೆ ಊರುಗಳಲ್ಲಿ ಕಾರ್ಯಕ್ರಮ ನೀಡಲು ಆಹ್ವಾನ ಬರುತ್ತದೆ. ಆದರೆ ಸಂಘಟಕರು ಕೊಡುವ ಹಣ ತಮ್ಮ ತಂಡ ಓಡಾಡಲು, ತಯಾರಿಗಾಗಿ ಖರ್ಚಾಗುತ್ತದೆ. ತಮ್ಮದೇ ಆದ ತಮಟೆ ಭಾರಿಸುವ ಹತ್ತು ಮಂದಿ ತಂಡ ಇದೆ. ಮುಂದಿನ ದಿನಗಳಲ್ಲಿ ಈ ಜನಪದ ಕಲೆಯನ್ನು ಉಳಿಸಿ ಬೆಳೆಸುವುದಕ್ಕೋಸ್ಕರ ತಂಡದ ರವಿ, ಸೀನ, ಲೊಕೇಶ್, ಗೋವಿಂದರಾಜು, ಕೌಡ್ಲೆ ಶ್ರೀನಿವಾಸ್ ಅವರಿಗೂ ಸಹ ಪೂಜಾ ಕುಣಿತದ ತರಬೇತಿ ನೀಡುವುದಾಗಿ ಮಹೇಶ್ ಹೇಳಿದರು.ಪೂಜಾ ಕುಣಿತ.....

ಪೂಜಾ ಕುಣಿತಕ್ಕೆ ವಾದ್ಯಗಳ ಹಿಮ್ಮೇಳ ಅವಶ್ಯಕ. ಪೂಜಾ ಕುಣಿತದ ಪೂರ್ವ ಸಿದ್ಧತೆ ಬಹಳ ವಿಶಿಷ್ಟ. ಸಮಾನಾಂತರ ಬಿದಿರಿನ ಕಡ್ಡಿಗಳಿಂದ ತಡಿಕೆಯನ್ನು ಸಿದ್ಧಪಡಿಸಬೇಕಾಗುತ್ತದೆ. ನಂತರ, ಮೇಲ್ಭಾಗದಲ್ಲಿ ಕಳಸ ಸ್ಥಾಪಿಸಿ, ಬಣ್ಣದ ವಸ್ತ್ರ, ಹೂವುಗಳಿಂದ ತಳಿಯನ್ನು ಸಿಂಗರಿಸಿ, ಮಧ್ಯಭಾಗಕ್ಕೆ ಮಾರಮ್ಮದೇವಿ ಮುಖವಾಡ ಅಳವಡಿಸಲಾಗುತ್ತದೆ.ನಂತರ, ಸಿಂಗರಿಸಿದ ತಳಿಯನ್ನು ಗಿಂಡಿಯ ಮೇಲ್ಭಾಗಕ್ಕೆ ಆಳವಡಿಸಿಲಾಗುತ್ತದೆ.ಹೀಗೆ ಪೂಜಾ ಕುಣಿತದ ತಡಿಕೆಯನ್ನು ತಯಾರಿಸಲಾಗುತ್ತದೆ. ನಂತರ ತಡಿಕೆಗೆ ಪೂಜೆ ಸಲ್ಲಿಸಿ ತಲೆಯ ಮೇಲೆ ಸಮಾನಾಂತರವಾಗಿ ಸಿಂಬೆ ಕಟ್ಟಿಕೊಂಡು ಕಾರ್ಯಕ್ರಮ ನೀಡಲಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.