ಶನಿವಾರ, ಜನವರಿ 18, 2020
19 °C

ಸಾಹಿತಿ ಪ್ರಭುಶಂಕರ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಸತ್ವ ಮತ್ತು ಗಾತ್ರದಲ್ಲಿ ರಾಮಾಯಣ ದರ್ಶನಂಗೆ ಸಮನಾದ ಕೃತಿಯನ್ನು ಕುವೆಂಪು ಬಿಟ್ಟರೆ ಬೇರೆ ಯಾರೂ ರಚಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಬರಬೇಕಾಗಿತ್ತು. ಆದರೆ, ಯಾರೂ ಆ ಬಗ್ಗೆ ಗಮನ ಹರಿಸಲಿಲ್ಲ~ ಎಂದು ಸಾಹಿತಿ ಪ್ರಭುಶಂಕರ್ ವಿಷಾದಿಸಿದರು.ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಜಯಲಕ್ಷ್ಮೀಪುರಂನ ಮಹಾಜನ ಕಾಲೇಜಿನಲ್ಲಿ ಭಾನುವಾರ ಏರ್ಪಡಿಸಿದ್ದ ಕುವೆಂಪು ವಿಚಾರಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಕನ್ನಡದ ಕೃತಿಗಳಿಗೆ ನೊಬೆಲ್ ಪ್ರಶಸ್ತಿ ಬರಬೇಕು ಎಂದರೆ ಆ ಕೃತಿಗಳು ಇಂಗ್ಲಿಷ್‌ಗೆ ಭಾಷಾಂತರವಾಗಿರಬೇಕು.

 

ಸಾಕಷ್ಟು ಮಂದಿ ವಿಮರ್ಶೆ ಮಾಡಿರಬೇಕು ಎಂಬ ಅಲಿಖಿತ ನಿಯಮವಿದೆ. ಅದಕ್ಕೆಂದೇ ಕುವೆಂಪು ಅವರ ಸಾಹಿತ್ಯವನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಲಾಗಿತ್ತು. ಆದಾಗ್ಯೂ, ನೊಬೆಲ್ ದೊರಕಲಿಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.`ಮೊಟ್ಟ ಮೊದಲ ಬಾರಿಗೆ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಯಾರು ಉತ್ಕೃಷ್ಟ ಸಾಧನೆ ಮಾಡಿದ್ದಾರೆಯೋ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ವಿ.ಕೃ.ಗೋಕಾಕರು ಹೇಳಿದ್ದರು. ಆದರೆ, ಇಂದು ಜ್ಞಾನಪೀಠ ಎರಡು ರೀತಿಯಲ್ಲಿ ದೊರಕುತ್ತಿದೆ.

ಒಂದು ಸಿಗುವುದು, ಇನ್ನೊಂದು ಪಡೆಯುವುದು. ಅತ್ತು, ಕರೆದು, ಕೂಗಿ, ರಂಪಾಟ ಮಾಡಿ ಜ್ಞಾನಪೀಠ ಪಡೆಯುವ ಸಂಸ್ಕೃತಿ ಬೆಳೆಯುತ್ತಿದೆ~ ಎಂದು ಕಟುವಾಗಿ ಹೇಳಿದರು.ತಾರಿಣಿ ಚಿದಾನಂದಗೌಡ ಮಾತನಾಡಿ, `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ನನ್ನ ತಂದೆ ಯಾವಾಗಲೂ ಹೇಳುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ತಮ್ಮ ಮಾತಿನಿಂದ ಕಷ್ಟ ಎದುರಿಸಿದ್ದ ಅವರು ನುಡಿದಂತೆ ನಡೆಯುತ್ತಿದ್ದರು. ನಾವೆಲ್ಲ ಹುಟ್ಟುತ್ತ ವಿಶ್ವಮಾನವರು, ಬೆಳೆಯುತ್ತ ಅಲ್ಪಮಾನವರು ಎಂದು ಸದಾ ಬೇಸರಿಸುತ್ತಿದ್ದರು. ಸ್ವತಂತ್ರವಾಗಿ ಯೋಚಿಸಬೇಕು, ಶಿಸ್ತಿನ ಜೀವನ ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ಯಾವಾಗಲೂ ಸಲಹೆ ನೀಡುತ್ತಿದ್ದರು~ ಎಂದು ತಂದೆಯನ್ನು ನೆನಪಿಸಿಕೊಂಡರು.ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಬಿ.ಹರೀಶ್ (ಪ್ರಥಮ), ಎಸ್.ಅನಂತು (ದ್ವಿತೀಯ), ಸಹನಾ (ತೃತೀಯ), ಸಿ.ಎಂ.ಕಿರಣಕುಮಾರ್, ನವೀನ್, ಎ.ಬಿ.ಪ್ರಥಮ (ಸಮಾಧಾನಕರ ಬಹುಮಾನ) ನೀಡಲಾಯಿತು.ರಂಗಾಯಣ ನಿರ್ದೇಶಕ ಡಾ. ಬಿ.ವಿ.ರಾಜಾರಾಂ  ಮಾತನಾಡಿದರು. ಮಹಾಜನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.ವಾಸುದೇವಮೂರ್ತಿ, ಕಾರ್ಯದರ್ಶಿ ಜಿ.ಎಸ್.ಸುಬ್ರಹ್ಮಣ್ಯ, ಮಹಾಜನ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ.ಪ್ರಭಾಕರ ಹಾಜರಿದ್ದರು.

ಪ್ರತಿಕ್ರಿಯಿಸಿ (+)