ಶನಿವಾರ, ಏಪ್ರಿಲ್ 17, 2021
32 °C

ಸಾಹಿತ್ಯದ ಸಂಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಮೃತಮತಿಯ ಸ್ವಗತ~ ಕಾವ್ಯ ಸಂಕಲನದಿಂದ ಹೆಸರು ಗಳಿಸಿದ ಎಚ್.ಎಲ್. ಪುಷ್ಪ ಅವರು ಮಹಿಳಾ ಕಾವ್ಯ ಪರಿಭಾಷೆಗೆ ಹೊಸ ಕಸುವು ತುಂಬಿದವರು. ತಳಸಮುದಾಯದಿಂದ ಬಂದಂತಹ ಲೇಖಕಿಯರು ವಿಭಿನ್ನ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.

 

ಒಂದು ಕಡೆ ಪುರುಷರು, ಮತ್ತೊಂದು ಕಡೆ ಜಾತಿ, ಇನ್ನೊಂದು ಕಡೆ ಹೊಸದಾಗಿ ಬರೆಯುವವರ ಬಗೆಗಿನ ನಿರ್ಲಕ್ಷ್ಯ - ಈ ಮಿತಿಗಳೇ ಆಂತರಿಕವಾಗಿ ಕವಿಗೆ ಹೆಚ್ಚು ಸತ್ವ ತುಂಬಿಸುತ್ತವೆ ಎನ್ನುವ ಎಚ್.ಎಲ್. ಪುಷ್ಪ ಅವರು ಸಾಹಿತ್ಯದೊಂದಿಗಿನ ತಮ್ಮ ಸಂಬಂಧವನ್ನು ಕುರಿತು ಇಲ್ಲಿ ಬರೆದಿದ್ದಾರೆ.
   

___________________________________________________ನಾನು ತುಂಬ ಇಷ್ಟಪಡುವ ಕವಿತೆ ಹಾಗೂ ಜೀವನ ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿದ್ದು ಬಿಡಿಸಿ ಮಾತನಾಡುವುದು ಕಷ್ಟವೇ ಸರಿ. ಕವಿತೆಯನ್ನೇ ನಾನು ಯಾಕೆ ಆರಿಸಿಕೊಂಡೆ ಎಂಬುದಕ್ಕೆ ತಕ್ಷಣ ಉತ್ತರ ಕೊಡಲು ಸಾಧ್ಯವಿಲ್ಲ. ಒಂದೇ ಸಮನೆ ನಿಲ್ಲದೆ ಮೊರೆವ ಕಡಲಿನ ಅಲೆಗಳು ಒಂದು ಕಡೆಯಾದರೆ ಕಿತ್ತಷ್ಟೂ ಒಳಗೊಳಗೆ ಸರಿಯುವ ಮುರಿದ ಮುಳ್ಳಿನಂತಹ ಭಾವಗಳು ಮಾತಿನ ವರ್ಣನೆಗೆ ನಿಲುಕುವಂತಹವಲ್ಲ.ಬಹುತೇಕ ನನ್ನ ಓದು, ಆಲೋಚನೆ ನನ್ನ ತಾಯಿಯ ವ್ಯಕ್ತಿತ್ವದಿಂದಲೇ ರೂಪುಗೊಂಡಿದ್ದು. ಆ ಕಾಲದಲ್ಲಿ ಒಂಬತ್ತನೇ ತರಗತಿ ಓದಿದ್ದ ಆಕೆ ಭೈರಪ್ಪನವರ ಹಾಗೂ ಶಿವರಾಮಕಾರಂತರ ಕಾದಂಬರಿಗಳ ಓದುಗರಾಗಿದ್ದರು. ಇಂಜಿನಿಯರ್ ಆಗಿದ್ದ ತಂದೆ ಹಾಗೂ ತಾಯಿ ಇಬ್ಬರೂ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದರೂ ನಗರ ಸಂಪರ್ಕಗಳಲ್ಲೇ ಮಕ್ಕಳಾದ ನಮ್ಮನ್ನು ಬೆಳೆಸಿದವರು.ಮನೆ ಭಾಷೆ ತೆಲುಗು ಆಗಿದ್ದರೂ ಅದು ಕೇವಲ ಅವರಿಬ್ಬರ ಸಂವಹನದ ಭಾಷೆಯಾಗಿ ನಮ್ಮಿಂದ ದೂರವೇ ಉಳಿದುಬಿಟ್ಟಿತ್ತು. ಈಗಲೂ ದಕ್ಕದೆ ಹೋದ ತೆಲುಗು ಭಾಷೆಯ ಬಗ್ಗೆ ಮೋಹವಿನ್ನೂ ನನ್ನಲ್ಲಿ ಉಳಿದಿದೆ.ನಾನು ಕವಿತೆಯನ್ನು ಬರೆಯಲು ಆರಂಭಿಸಿದಾಗ ನವ್ಯ ಸಾಹಿತ್ಯ ಇಳಿಗಾಲದಲ್ಲಿದ್ದು ಬಂಡಾಯ ಸಾಹಿತ್ಯ ಏರುಗಾಲದಲ್ಲಿತ್ತು. ನಮ್ಮ ಸುತ್ತಲೂ ಚ.ಸರ್ವಮಂಗಳ, ಸ.ಉಷಾ, ಹೇಮಾಪಟ್ಟಣಶೆಟ್ಟಿ, ಶಶಿಕಲಾ ವೀರಯ್ಯಸ್ವಾಮಿ, ಪ್ರತಿಭಾ ನಂದಕುಮಾರ್ ಅವರ ಕಾವ್ಯದ ಚರ್ಚೆ ನಡೆಯುತ್ತಲಿತ್ತು. ಎಂಬತ್ತರ ತಲೆಮಾರಿನ ಅರ್ಧಭಾಗದಲ್ಲಿ ಬರೆಯಲಾರಂಭಿಸಿದ ನಮ್ಮ ಮುಂದೆ ಸ್ಪಷ್ಟ ಮಾರ್ಗಗಳಿದ್ದವು.

 

ನಳಿನಿ ದೇಶಪಾಂಡೆ ಹಾಗೂ ಲೀಲಾರಾವ್ ಕವಿತೆಗಳು ಸ್ತ್ರೀ ವೇಷದಲ್ಲಿ ಸವಾಲೆಸೆಯುತ್ತಿದ್ದರೆ ಅದಕ್ಕೆ ಉತ್ತರವೆಂಬಂತೆ ಕವಯತ್ರಿಯರು ಪುರುಷ ಜಗತ್ತಿನಲ್ಲಿ ಮರೆಯಾಗುತ್ತಿರುವ ಹೆಣ್ಣಿನ ಚಹರೆ ಹಾಗೂ ಅಸ್ತಿತ್ವವನ್ನು ಕವಿತೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಿದ್ದರು.

ತಳಸಮುದಾಯದಿಂದ ಬಂದವರಿಗೆ ದಲಿತ ಕವಿ ಸಿದ್ಧಲಿಂಗಯ್ಯನವರ ಕವಿತೆಗಳಲ್ಲಿ ಕಾಡುವ ಅಸಮಾನತೆ ಹಾಗೂ ತೆಂಗು ತಾರೆಗಳ ಸಂಗಮವಿಲ್ಲದ ವಿಫಲ ಪ್ರೇಮದ ಎಳೆಗಳು ಆಕರ್ಷಿಸುತ್ತಿದ್ದವು. ಹೆಚ್ಚೂ ಕಡಿಮೆ ಈ ಸಂದರ್ಭದಲ್ಲಿ ನನ್ನ ಕವಿತೆಗಳು ಆಕಾರ ತಳೆಯಲಾರಂಭಿಸಿದ್ದವು.80ರ ದಶಕದ ಕವಯತ್ರಿಯರ ಕವಿತೆಗಳು ನವ್ಯ ಕಾವ್ಯದ ಆಕರ್ಷಕ ಪರಿಕರಗಳಾದ ಪ್ರತಿಮೆ, ಪ್ರತೀಕ, ವಸ್ತು, ಶೈಲಿಗಳನ್ನು ಮತ್ತೆ ಮತ್ತೆ ಗೊಂದಲಕ್ಕೆ ಈಡು ಮಾಡುತ್ತಿದ್ದ `ಪರಕೀಯ ಪ್ರಜ್ಞೆಯೊಂದಿಗೆ~ ಪ್ರಜ್ಞಾಪೂರ್ವಕವಾಗಿಯೇ ಸ್ವೀಕರಿಸಿವೆ. ಸರ್ವಮಂಗಳ, ಎನ್.ವಿ. ಭಾಗ್ಯಲಕ್ಷ್ಮಿ, ಸ. ಉಷಾ, ಶಶಿಕಲಾ ವೀರಯ್ಯಸ್ವಾಮಿ ಈ ತಂತ್ರಗಳನ್ನು ಕಾವ್ಯದಲ್ಲಿ ಬಳಸಿಕೊಂಡು ಉಲ್ಲೇಖಿಸಲ್ಪಡುವ ಕವಿತೆಗಳನ್ನು ಬರೆದರು.

 

ಈ ಸಂದರ್ಭದಲ್ಲೇ ಪುರಾಣದ ಸ್ತ್ರೀತ್ವದ ಮಾದರಿಗಳಾಗಿದ್ದ ಸೀತೆ, ಸಾವಿತ್ರಿ, ದ್ರೌಪದಿ, ಶಕುಂತಲೆ, ಅಹಲ್ಯೆ, ಊರ್ಮಿಳೆ, ಅಮೃತಮತಿಯರು ತಮ್ಮ ಪೊರೆಗಳನ್ನು ಕಳಚಿ ತಮ್ಮಲ್ಲಿನ ನಿರ್ವಾತದ ಬಗ್ಗೆ, ಅಸಹಾಯಕತೆಯ ಬಗ್ಗೆ, ಪುರುಷ ದೌರ್ಜನ್ಯದ ಬಗ್ಗೆ ಮಾತನಾಡಲಾರಂಭಿಸಿದರು. ಹೀಗೆ ಪೌರಾಣಿಕ ಪ್ರತಿಮೆಗಳಲ್ಲಿ ಅಡಗಿದ್ದ ಸ್ತ್ರೀ ಚಹರೆಗಳು ಸ್ಫೋಟಗೊಂಡು ಬಂಡಾಯದ ಧ್ವನಿಯಲ್ಲಿ ಬಳಕೆಯಾಗಲಾರಂಭಿಸಿದವು.ಪಾವಿತ್ರ್ಯತೆಗಳ ಮುಖವಾಡದಲ್ಲಿ ಅಡಗಿದ್ದ ಈ ಪಾತ್ರಗಳನ್ನು ಮಾನವೀಕರಣಗೊಳಿಸಿ ಜನರ ಮಧ್ಯೆ ತರುವ ಪ್ರಯತ್ನ ನಡೆಯಿತು. ಒಂದು ರೀತಿಯ ಆವೇಶ, ಹುಮ್ಮಸ್ಸು ಸಹಜವಾಗಿಯೇ ಈ ಪಾತ್ರಗಳನ್ನು ಕುರಿತು ಬರೆಯುವಾಗ ನಮ್ಮನ್ನು ಆವರಿಸುತ್ತಿತ್ತು.

ಈ ಘಟ್ಟದಲ್ಲಿಯೇ ನನ್ನ `ಅಮೃತಮತಿಯ ಸ್ವಗತ~ ಸಂಕಲನ ಪ್ರಕವಾಯಿತು.ಇಲ್ಲಿ ನಾನು ಜನ್ನನ `ಅಮೃತಮತಿ~ ಅರಸೊತ್ತಿಗೆಯಿಂದ ಇಳಿದು ಬೇಡವಾದುದನ್ನು ಧಿಕ್ಕರಿಸಿ, ಆತ್ಮದ ಕರೆಗೆ ಓಗೊಟ್ಟು ಬೇಕಾದುದನ್ನು ಆರಿಸಿಕೊಂಡು ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿದಳು ಎಂಬ ಅರ್ಥದಲ್ಲಿ ಕವಿತೆಯನ್ನು ರೂಪಿಸಿದ್ದೆ. ಈ ನಿಲುವು ಬಂಡಾಯದ ಧ್ವನಿ ಹಾಗೂ ಎತ್ತಿ ಹಿಡಿಯಲು ಯತ್ನಿಸುತ್ತಿದ್ದ ಮಹಿಳಾ ಸ್ವಾತಂತ್ರ್ಯಕ್ಕೆ ಅನುಗುಣವಾಗಿತ್ತು.ಮುಂದೆ ಇದೇ ಅಮೃತಮತಿಯ ಬೆನ್ನು ಹಿಡಿದು `ಭೂಮಿಯಲ್ಲ  ಇವಳು~ ಎಂಬ ನಾಟಕವನ್ನು ಸಹ ಬರೆದೆ. ಒಮ್ಮಮ್ಮೆ ನಾವು ಬೆನ್ನಟ್ಟಿದ ಪಾತ್ರಗಳು ನಮ್ಮ ಬೆನ್ನನ್ನೂ ಹಿಡಿಯುವುದುಂಟು. ಈ ಸಂಬಂಧದಲ್ಲಿ ನನ್ನ ಉಳಿದ ಉತ್ತಮ ಕವಿತೆಗಳಿಗಿಂತ `ಅಮೃತ ಸ್ವರ್ಗ~ ಮತ್ತೆ ಮತ್ತೆ ಚರ್ಚೆಗೆ ಒಳಗಾಗುತ್ತಿರುವುದು ಸೋಜಿಗವನ್ನುಂಟುಮಾಡಿದೆ. ಇದೇ ವಸ್ತುವನ್ನು ಈ ತಲೆಮಾರಿನವರು ಆಯ್ದುಕೊಂಡರೆ ಶಿಥಿಲವಾಗುತ್ತಿರುವ ಹೆಣ್ಣು- ಗಂಡಿನ ಸಂಬಂಧ ಹಾಗೂ ಸಮಾಜದಲ್ಲಿ ಮತ್ತೊಂದು ಸ್ತ್ರೀ ಮಾದರಿಯನ್ನಾಗಿ ರೂಪಿಸಬಹುದಾಗಿದೆ.ವಿಶೇಷವಾಗಿ ನನ್ನ ಕಾವ್ಯವನ್ನು ರೂಪಿಸಿದ್ದು ನಾನು ಅಪಾರವಾಗಿ ಗೌರವಿಸುತ್ತಿದ್ದ ನನ್ನಂತವಳಿಗೆ ಮಾದರಿ ಎನಿಸಿದ್ದ ಗುರುಪರಂಪರೆ. ಜಿ.ಎಸ್. ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಕಿ.ರಂ. ನಾಗರಾಜ್ ಕಲಿಯುವವರ ಪಾಲಿನ ಕಾಮಧೇನುವೆನಿಸಿದ್ದರು.

 

ನನ್ನ ಓದು ಮತ್ತು ಓದಿನ ವ್ಯಾಪ್ತಿಯನ್ನು ಹಿಗ್ಗಿಸಿದವರು ಪ್ರೀತಿಯ ಗುರುಗಳಾದ ಕಿ.ರಂ. ನಾಗರಾಜುರವರು, ಆಲ್ಬರ್ಟ್ ಕಾಮು, ಗಂಗಾಧರ ಚಿತ್ತಾಲ, ಎಚ್.ಎಸ್. ಶಿವಪ್ರಕಾಶ್- ಈ ಮಹತ್ವದ ಲೇಖಕರನ್ನು ನಾನು ಅರಿಯಲಾರಂಭಿಸಿದ್ದು ಕಿ.ರಂ. ಮೂಲಕವೇ. ಹೊಸ ಓದು, ಹೊಸ ಚರ್ಚೆಗಳೊಂದಿಗೆ ಗುರುವೊಬ್ಬ ಶಿಷ್ಯನನ್ನು ಬೆಳೆಸಬಲ್ಲ ಮುಕ್ತ ವಿಶ್ವವಿದ್ಯಾಲಯವೆಂಬಂತೆಯೇ ನನಗೆ ಭಾಸವಾಗುತ್ತಿತ್ತು.ನನ್ನ ಕಾವ್ಯಕ್ಕೆ ಮಾದರಿ ಎಂದು ಆರಂಭದಲ್ಲಿ ಗುರುತಿಸಿಕೊಂಡಿದ್ದು ಮಾರ್ಗ-ನಿರ್ಮಾಪಕ ಕವಿಯೆಂದೇ ಗುರುತಿಸಲ್ಪಟ್ಟಿರುವ ಎಚ್.ಎಸ್. ಶಿವಪ್ರಕಾಶ್‌ರವರ ಕಾವ್ಯವನ್ನು. ಕಾವ್ಯ ಮತ್ತು ನಾಟಕಗಳ ಮೂಲಕ `ಸಾಂಸ್ಕೃತಿಕ ಬಂಡುಕೋರತನ~ವನ್ನು ಕಟ್ಟಿಕೊಟ್ಟ ಶಿವಪ್ರಕಾಶ್ ಮಾಡಿದಂತಹ ನಿರಂತರ ಪ್ರಯೋಗವನ್ನು ಬಹುಶಃ ನಮ್ಮಲ್ಲಿ ಬೇರೆ ಯಾವ ಕವಿಯೂ ಮಾಡಲಾಗಿಲ್ಲ.ಮಲಿನಗೊಂಡ ಪ್ರಪಂಚದಲ್ಲೇ ಮೊಳೆಯಬೇಕಾದ, ಜೀವವನ್ನು ಪೊರೆಯಬೇಕಾದ ಜೀವಪರವಾದ ನಿಲುವನ್ನು ತಮ್ಮ ಕೃತಿಗಳ ಮೂಲಕ ಪ್ರಕಟಿಸಿದರು. ನನ್ನ ಪೊರೆಯಬೇಕಾದ ಜೀವಪರವಾದ ನಿಲುವನ್ನು ತಮ್ಮ ಕೃತಿಗಳ ಮೂಲಕ ಪ್ರಕಟಿಸಿದರು. ನನ್ನ ಎರಡೂ ಮೊದಲ ಕವನ ಸಂಕಲನಕ್ಕೆ ತಾವಾಗಿಯೇ ಕೇಳಿ, ಇಷ್ಟಪಟ್ಟು ಮುನ್ನುಡಿ ಬರೆದ ವಿಶಿಷ್ಟ ಕವಿ ಎಚ್.ಎಸ್. ಶಿವಪ್ರಕಾಶ್ ನನ್ನ ಕವಿತೆಯ ಬಗ್ಗೆ ನನಗಿರಬೇಕಾದ ಆತ್ಮವಿಶ್ವಾಸವನ್ನು ಎಚ್ಚರಿಸಿದವರು.ಪ್ರಸಿದ್ಧ ರಂಗಕರ್ಮಿ ಪ್ರೊ. ಸಿ.ಜಿ.ಕೆ. ನನ್ನ ಬದುಕಿನಲ್ಲಿ ಮರೆಯಲಾಗದ ವಿಶಿಷ್ಟ ವ್ಯಕ್ತಿ. ಅವರನ್ನು ಸರಿಯಾಗಿ ಗುರ್ತಿಸುವ ಪದವೆಂದರೆ ರೆಕ್ಕೆಪುಕ್ಕಗಳೊಳಗೆ ತನ್ನ ಮರಿಗಳನ್ನು ಕಾಪಿಡುವ, ತುತ್ತನುಣಿಸಿದ `ಹೆಂಟೆಕೋಳಿ~ ಎಂಬ ಚಿತ್ರ ಮಾತ್ರ. ಈ ರೂಪಕವನ್ನೇ ಕವಿತೆಯನ್ನಾಗಿಸಿದ `ಏಕಲವ್ಯನೆಂಬ ಗುರುವಿಗೆ~ ಎಂಬ ಕವಿತೆಯನ್ನು ಅವರಿಗೆ ಅರ್ಪಿಸಿದ್ದೇನೆ.ಇವರ ಮಾರ್ಗದರ್ಶನದಲ್ಲಿ ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್ ಹಾಗೂ ಲಂಕೇಶ್‌ರ ನಾಟಕಗಳನ್ನು ಕುರಿತಾದ ತೌಲನಿಕ ಅಧ್ಯಯನ `ನವ್ಯೋತ್ತರ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ~ ಎಂಬ ವಿಷಯ ಕುರಿತು ಸಂಪ್ರಬಂಧವನ್ನು ರಚಿಸಿದ್ದೇನೆ. ನನ್ನೊಬ್ಬಳಿಗೆ ಮಾತ್ರ ಮಾರ್ಗದರ್ಶಕರಾಗಿದ್ದ ಸಿ.ಜಿ.ಕೆ. ಬದುಕು, ಸಾಹಿತ್ಯ, ಸಂಘಟನೆಗಳನ್ನು ನೋಡುವ, ಗ್ರಹಿಸುವ ಬಗೆಯೊಂದನ್ನು ಕಲಿಸಿದರು.ಹಳೆಯ ಆಲೋಚನಾಕ್ರಮಗಳನ್ನು ಮುರಿದ ಮರುಕ್ಷಣವೇ ರೂಪಿಸುತ್ತಿದ್ದ ಮತ್ತೊಂದು ಸಮರ್ಪಕ ಕ್ರಮ ಅಚ್ಚರಿಯನ್ನು ಹುಟ್ಟಿಸುತ್ತಿತ್ತು. ಬದುಕಿನ ಕೊನೆಗಾಲದ ದಿನಗಳಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ನನ್ನ ಸಂಪ್ರಬಂಧವನ್ನು ಹೊಸದಾಗಿ ರೂಪಿಸಬೇಕೆಂದು ಆರಿಸಿಕೊಂಡಿದ್ದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರ ಕಾರ್ಯಕ್ಷೇತ್ರ ಸಾಣೆಹಳ್ಳಿಯ ಪ್ರಶಾಂತ ವಾತಾವರಣವನ್ನು.ಆದರೆ ಕಾಲನ ಕರೆಗೆ ಓಗೊಟ್ಟ ಪ್ರೊ. ಸಿ.ಜಿ.ಕೆ. ಸಾಣೆಹಳ್ಳಿಯ ಮಣ್ಣಿನಲ್ಲಿ ಮಣ್ಣಾಗಿ ಹೋದದ್ದು ಪ್ರಸಿದ್ಧ ರಂಗಕರ್ಮಿಯ ಬದುಕು, ನಂಬಿಕೆ, ಮಾರ್ಪಾಟಾದ ವಿಚಾರಗಳಿಗೆ ಸಾಕ್ಷಿಯಾಗಿಯೇ ಉಳಿದಿದೆ. ಈ ರಂಗಜಂಗಮ ಗುರುವಿಗೆ ನನ್ನ ನಾಟಕ `ಭೂಮಿಯ್ಲ್ಲಲ ಇವಳು~ ಕೃತಿಯನ್ನು ಗೌರವದಿಂದ ಅರ್ಪಿಸಿದ್ದೇನೆ.ಬಂಡಾಯ ಸಂಘಟನೆಯಲ್ಲಿದ್ದ `ಅನ್ವೇಷಣೆ~ ಸಾಹಿತ್ಯ ಪತ್ರಿಕೆಯ ಸಂಪಾದಕ ಆರ್.ಜಿ. ಹಳ್ಳಿ ನಾಗರಾಜ್‌ರೊಂದಿಗಿನ ನನ್ನ ಮದುವೆ ಬದುಕಿನ ದಿಕ್ಕನ್ನೇ ಬದಲಿಸಿದೆ. ವಿಶೇಷವಾಗಿ ಬಂಡಾಯ ಸಂಘಟನೆಗಿಂತ ಸಂಘಟಕರ ನಡುವಿನ ವ್ಯಕ್ತಿ ಸಂಬಂಧಗಳು, ಮನುಷ್ಯ ಪ್ರೀತಿ, ಸಮಾಜದ ಬಗೆಗಿನ ಅವರ ನಿಲುವುಗಳು ನನಗೆ ಆದರ್ಶಪ್ರಾಯವೆನಿಸಿದ್ದವು. ವಿಮರ್ಶೆ, ಪ್ರತಿಕ್ರಿಯೆ, ಕೃತಿಗಳಿಗೆ ಸಂದ ಗೌರವಗಳು ನನಗೆ ಸಂತಸ ತಂದಿವೆ.ವಿಮರ್ಶೆ, ನಾಟಕ, ಕಾವ್ಯ, ನಾನು ಬರೆದ ಪ್ರಕಾರಗಳಾದರೂ ಕಾವ್ಯ ನನಗೆ ಪ್ರಿಯವಾದದ್ದು. ಕಾವ್ಯ ಹಿಡಿಯಬೇಕಾದ ಹೊಸ ದಾರಿಗಳ ಬಗ್ಗೆ ಮತ್ತೆ ಮತ್ತೆ ಚಿಂತಿಸುತ್ತಿರುತ್ತೇನೆ. ಕಾವ್ಯ ಲೋಕಾತೀತವಲ್ಲ. ಬದುಕೂ ನಮ್ಮಳಗೆ, ಕಾವ್ಯವೂ ನಮ್ಮಳಗೆ. ನನ್ನ ಬರವಣಿಗೆ ತೃಪ್ತಿ ಕೊಡದಿದ್ದಾಗ ಬರಹದಿಂದ ದೂರವೇ ಉಳಿಯುತ್ತೇನೆ.

 

`ಮತ್ತದೇ ಪದ, ಮತ್ತದೇ ರೂಪಕ, ಮತ್ತದೇ ಕಾವ್ಯ ಸಲಕರಣೆಗಳು~ ಎನಿಸಿದಾಗ ಬರೆಯುವುದನ್ನು ನಿಲ್ಲಿಸಿ ಒಂದಷ್ಟು ಕಾಲ ಸುಮ್ಮನಾಗುತ್ತೇನೆ. ವಿಶೇಷವಾಗಿ ಆಧುನಿಕ ಕಾವ್ಯದ ಮೊದಲ ಹಾಗೂ ಎರಡನೆ ತಲೆಮಾರಿನ ಪ್ರಧಾನ ಧಾರೆಯಲ್ಲಿ ಬರೆದವರು ಮೇಲ್ವರ್ಗಕ್ಕೆ ಸೇರಿದ ಕವಯತ್ರಿಯರೇ.ಇಂತಹ ಸಂದರ್ಭದಲ್ಲಿ ತಳಸಮುದಾಯದಿಂದ ಬಂದಂತಹವರಿಗೆ ಸವಾಲುಗಳು ಇನ್ನೂ ಹೆಚ್ಚಿನದಾಗಿರುತ್ತವೆ. ಒಂದು ಕಡೆ ಪುರುಷರು, ಮತ್ತೊಂದು ಕಡೆ ಜಾತಿ, ಇನ್ನೊಂದು ಕಡೆ ಹೊಸದಾಗಿ ಬರೆಯುವವರ ಬಗೆಗಿನ ನಿರ್ಲಕ್ಷ್ಯ - ಈ ಮಿತಿಗಳೇ ಆಂತರಿಕವಾಗಿ ಕವಿಗೆ ಹೆಚ್ಚು ಸತ್ವ ತುಂಬಲಾರಂಭಿಸುತ್ತವೆ.ನನ್ನ ಮೊದಲ ಸಂಕಲನದ “ಅಮೃತಮತಿಯ ಸ್ವಗತ, ಆಕೆ ಅವನು ಮತ್ತು ನದಿ, ತೆರೆದ ಬಾಗಿಲುಗಳು, ರಾತ್ರಿ ರಾಣಿ” ಈ ಕವಿತೆಗಳು ಹೆಣ್ಣು ದೇಹಕ್ಕಿರುವ ಇತಿಮಿತಿಗಳನ್ನು ಪೂರ್ವಕಲ್ಪಿತ ಸಂಕೋಚಗಳನ್ನು ಮೀರಲು ಮಾಡಿದ ಪ್ರಯತ್ನಗಳಾಗಿದ್ದವು.

 

ಈ ಮಿತಿ ಹಾಗೂ ಸಂಕೋಚಗಳನ್ನು ಮೀರುವ ಪ್ರಯತ್ನಗಳಾಗಿ ನನ್ನ ಮೂರನೆಯ ಸಂಕಲನ `ಲೋಹದ ಕಣ್ಣಿನ~ ಕವಿತೆಗಳಾದ “ಆತ್ಮಸಂಗಾತಕ್ಕೆ ನೀನುಂಟು, ನದೀಮುಖ” ಎಂಬ ದೀರ್ಘ ಕವಿತೆಗಳನ್ನು ಪ್ರಾಯೋಗಿಕವಾಗಿ ಬರೆದಿದ್ದು ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ. ಹೆಣ್ಣಿನ ದೇಹದ ಬಗೆಗಿನ ಸಂಕುಚಿತ ಲೋಕಗ್ರಹಿಕೆಗಳಿಗಿಂತ ಅದಕ್ಕಿರುವ ಸರ್ವಶಕ್ತಿ, ಜೀವಂತಿಕೆಯನ್ನು ಅಭಿಮಾನದ ಸಂಕೇತವೆಂದೇ ನಾನು ಭಾವಿಸಿದ್ದೇನೆ.

 

ವೈಯಕ್ತಿಕ ಚಹರೆ ಮುದ್ರೆಗಳು ಆ ಕ್ಷಣಕ್ಕೆ ಸಂಕೋಚವನ್ನುಂಟು ಮಾಡಿದರೂ ಅಭಿವ್ಯಕ್ತಗೊಂಡ ನಂತರ ಏಕಾಂತದಿಂದ ಲೋಕಾಂತದ ಕಡೆಗೆ ಚಲಿಸುವುದರ ಮೂಲಕ ತಮ್ಮ ಮಿತಿಯನ್ನು ತಾವೇ ದಾಟುತ್ತವೆ. ವಿಶೇಷವಾಗಿ ಕವಯತ್ರಿಗೆ ಗಂಡಸಿಗಿಂತ ಹೆಚ್ಚು ಕಾವ್ಯಪರಿಕರಗಳು ತಾನಾಗಿಯೇ ಒದಗಿಬರುತ್ತವೆ.

 

ಅವಳ ಋತುಚಕ್ರ, ತಾಯ್ತನ, ಧಾರಣಶಕ್ತಿ, ಕುಟುಂಬ ಈ ಹೊಣೆಗಾರಿಕೆಗಳು ಅವಳ ದೃಢತೆಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಹೇಳಲಾಗದ, ಹೇಳಲು ಬರುವ ದೇಹ ಮತ್ತು ಮನಸ್ಸಿನ ಪಿಸುಮಾತುಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕಷ್ಟೇ. ಈ ಗ್ರಹಿಕೆಯನ್ನು ಅಭಿವ್ಯಕ್ತಿಸುವಲ್ಲಿ ಅವಳು ಬಳಸುವ ಕಸುಬುಗಾರಿಕೆ ಹಾಗೂ ಅನುಭವದ ಪ್ರಾಮಾಣಿಕತೆ ಸಹಜವಾಗಿಯೇ ಕವಿತೆಯನ್ನು ಗೆಲ್ಲಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.