ಸಿಂಗರೇಣಿ: ಕಲ್ಲಿದ್ದಲು ಉತ್ಪಾದನೆ , ಶಾಲಾ- ಕಾಲೇಜು ಪುನರಾರಂಭ

7

ಸಿಂಗರೇಣಿ: ಕಲ್ಲಿದ್ದಲು ಉತ್ಪಾದನೆ , ಶಾಲಾ- ಕಾಲೇಜು ಪುನರಾರಂಭ

Published:
Updated:

ಹೈದರಾಬಾದ್ (ಐಎಎನ್‌ಎಸ್): ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ರಾಜ್ಯದ ಸಿಂಗರೇಣಿ ಕಲ್ಲಿದ್ದಲು ಉತ್ಪಾದನೆ ಮಂಗಳವಾರ ಪುನರಾರಂಭವಾಗಿದೆ. ಇದಲ್ಲದೆ ಪ್ರತ್ಯೇಕ ತೆಲಂಗಾಣ ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದ್ ಆಚರಿಸಿದ್ದ  ಶಾಲಾ ಕಾಲೇಜುಗಳು ಕೂಡ ಎಂದಿನಂತೆ ಪುನರಾರಂಭವಾಗಿವೆ.ಕಲ್ಲಿದ್ದಲು ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದ, ಕಲ್ಲಿದ್ದಲು ಉತ್ಪಾದನಾ ಘಟಕ ಸಂಘಟನೆಗಳು ತಾತ್ಕಾಲಿಕವಾಗಿ  ಮುಷ್ಕರ ನಿಲ್ಲಿಸುವಂತೆ ಸೋಮವಾರ ತಡರಾತ್ರಿ ತೆಗೆದುಕೊಂಡ ನಿರ್ಣಯದ ಹಿನ್ನೆಲೆಯಲ್ಲಿ ತೆಲಂಗಾಣ ಪ್ರಾಂತದಲ್ಲಿನ ನಾಲ್ಕು ಜಿಲ್ಲೆಯ 50 ಕಲ್ಲಿದ್ದಲು ಉತ್ಪಾದನಾ ಗಣಿಗಳ ಕಾರ್ಮಿಕರು ಕೆಲಸಕ್ಕೆ ಮರಳಿದರು.ಸಂಘಟನೆಗಳ  ಪರವಾಗಿ ಗಣಿ ಕಂಪೆನಿಯ ಆಡಳಿತ ಮಂಡಳಿಯೊಂದಿಗೆ ತೆಲಂಗಾಣ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸಂಚಾಲಕ ಎಂ.ಕೊದಂಡರಾಮ್ ಅವರು ಚರ್ಚೆ ನಡೆಸಿದ ಬಳಿಕ ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಮರಳುವಂತೆ ಕಾರ್ಮಿಕರಿಗೆ ಕರೆ ನೀಡಿದರು.ಇದರೊಂದಿಗೆ ಮುಷ್ಕರದ ಅವಧಿಯನ್ನು ವಿಶೇಷ ರಜೆ ಎಂದು ಪರಿಗಣಿಸಲು ಹಾಗೂ ಹಬ್ಬದ ಮುಂಗಡ ಹಣ ನೀಡಲು ಮತ್ತು ಮುಷ್ಕರ ನಿರತ ಕಾರ್ಮಿಕರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಆಡಳಿತ ಮಂಡಳಿ ಒಪ್ಪಿಕೊಂಡಿದೆ.35 ದಿನಗಳ ನಂತರ ಕಲ್ಲಿದ್ದಲು ಉತ್ಪಾದನಾ ಘಟಕಗಳ ಪುನರಾರಂಭದಿಂದ ತೀವ್ರ ವಿದ್ಯುತ್ ಕೊರತೆಯನ್ನು ಅನುಭವಿಸುತ್ತಿದ್ದ ಕರ್ನಾಟಕ, ಆಂಧ್ರಪದೇಶ, ಮಹಾರಾಷ್ಟ್ರ ಸೇರಿದಂತೆ ಆರು ರಾಜ್ಯಗಳು  ಸ್ವಲ್ಪ ಮಟ್ಟಿಗೆ ನಿರಾಳವಾಗುವಂತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry