ಗುರುವಾರ , ಮೇ 19, 2022
23 °C

ಸಿಗರೇಟ್ ಕೊಡುತ್ತಿದ್ದ ಕೈ ಪ್ರಶಸ್ತಿ ನೀಡಿದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ತಂದೆ ಸಮಾನರಾದ ಮಾಸ್ಟರ್ ಹಿರಣ್ಣಯ್ಯನವರಿಗೆ ನಾನು ಚಿಕ್ಕವಳಿದ್ದಾಗ ಸಿಗರೇಟ್ ಸಪ್ಲೈ ಮಾಡುತ್ತಿದ್ದೆ. ಇವತ್ತು ಅದೇ ಕೈಗಳಿಂದ ಅವರಿಗೆ ಅ.ನ.ಕೃಷ್ಣರಾವ್ ಹೆಸರಿನ ಪ್ರಶಸ್ತಿ ಪ್ರದಾನ ಮಾಡುವ ಸೌಭಾಗ್ಯ ಸಿಕ್ಕಿದೆ' ಎಂದು ಸಚಿವೆ ಉಮಾಶ್ರೀ ಹರ್ಷ ವ್ಯಕ್ತಪಡಿಸಿದರು.ಅನಕೃ-ನಿರ್ಮಾಣ್ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹಿರಿಯ ನಾಟಕಕಾರ ಮಾಸ್ಟರ್ ಹಿರಣ್ಣಯ್ಯ ಮತ್ತು ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರಿಗೆ `ಅನಕೃ-ನಿರ್ಮಾಣ್-2013' ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.`ಹಿರಣ್ಣಯ್ಯನವರ ನಾಟಕ ಪ್ರದರ್ಶನ ಆಗುತ್ತಿದ್ದ ಟೆಂಟ್ ಹತ್ತಿರದಲ್ಲೇ ನಮ್ಮದೊಂದು ಪೆಟ್ಟಿಗೆ ಅಂಗಡಿ ಇತ್ತು. ನಿತ್ಯ ನಮ್ಮ ಅಂಗಡಿಯಿಂದ ಅವರಿಗೆ ಸಿಗರೇಟ್ ಸರಬರಾಜು ಆಗುತ್ತಿತ್ತು. ಅದನ್ನು ನಾನೇ ಒಯ್ದು ಕೊಡುತ್ತಿದ್ದೆ. ಅವರ ನಾಟಕಗಳನ್ನು ನೋಡುತ್ತಲೇ ನಾನೂ ಕಲಾವಿದೆಯಾಗಿ ಬೆಳೆದೆ' ಎಂದು ಸ್ಮರಿಸಿಕೊಂಡರು.`ಸರ್ಕಾರದಿಂದ ನೋಟಿಸ್ ಬಂದು ನಾಟಕ ಪ್ರದರ್ಶನ ಸ್ಥಗಿತಗೊಂಡಾಗ ನಮ್ಮ ಪೆಟ್ಟಿಗೆ ಅಂಗಡಿ ಕಳ್ಳೆಕಾಯಿ ಮಾರಾಟವಾಗದೆ ನಮಗೂ ನಷ್ಟ ಉಂಟಾಗಿತ್ತು' ಎಂದು ಉಮಾಶ್ರೀ ಚಟಾಕಿ ಹಾರಿಸಿದರು. `ಸಮಾಜದ ಪ್ರೇರಣೆಯೇ ಹಿರಣ್ಣಯ್ಯನವರ ನಿರ್ದೇಶಕನ ಸ್ಥಾನ ಅಲಂಕರಿಸಿತ್ತು. ಪ್ರೇಕ್ಷಕರು ಬೆಳೆಸಿದ ಕಲಾವಿದ ಅವರು' ಎಂದು ಕೊಂಡಾಡಿದರು.`ಪ್ರಜಾವಾಣಿ ಪತ್ರಿಕೆಯಲ್ಲಿ ಜಿ.ಎನ್. ರಂಗನಾಥರಾವ್ ಅವರು ಬರೆಯುತ್ತಿದ್ದ ರಂಗ ವಿಮರ್ಶೆ ಲೇಖನಗಳಿಂದ ನಮ್ಮಂತಹ ಕಲಾವಿದರು ನಾಡಿಗೆಲ್ಲ ಪರಿಚಯವಾದೆವು' ಎಂದು ಸ್ಮರಿಸಿದರು. `ಅನಕೃ ಸ್ಮಾರಕ ಭವನ ನಿರ್ಮಾಣಕ್ಕೆ ಬಿಡಿಎಯಿಂದ ನಿವೇಶನ ಕೊಡಿಸುತ್ತೇನೆ' ಎಂದು ಭರವಸೆ ನೀಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ, `ಸಮಾಜಕ್ಕೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಂಡು ಸೇವೆ ಸಲ್ಲಿಸುವ ಮೂಲಕ ಅದರ ಋಣ ತೀರಿಸಬೇಕು. ಅಂತಹ ಕೆಲಸ ಮಾಡಿದ ಇಬ್ಬರು ಮಹನೀಯರಿಗೆ ಅನಕೃ ಹೆಸರಿನ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ' ಎಂದರು.`ಅರವತ್ತು ವರ್ಷಗಳ ಹಿಂದೆ ಜೀವನವೇ ಬೇಡವಾಗಿ ಸಾಯಲು ಹೊರಟ ನನ್ನನ್ನು ಬದುಕಿಸಿದವರು ಅನಕೃ. ಅವರು 5,000 ರೂಪಾಯಿ ಕೊಟ್ಟು ಮತ್ತೆ ರಂಗಭೂಮಿ ಏರಲು ಅವಕಾಶ ಮಾಡಿಕೊಡದಿದ್ದರೆ ನಾನು ಬದುಕುತ್ತಿರಲಿಲ್ಲ' ಎಂದು ಹಿರಣ್ಣಯ್ಯ ಭಾವುಕರಾಗಿ ನುಡಿದರು.

`ಸೊಗಸಾಗಿ ಬದುಕಿದರೆ ಸಾವು ಸುಂದರ ಆಗಿರುತ್ತದೆ ಎಂದೊಮ್ಮೆ ಬೀಚಿ ಹೇಳಿದ್ದರು. ಜೀವನೋತ್ಸಾಹದಿಂದ ಬದುಕಲು ನನಗೆ ಅವರ ಮಾತೇ ಪ್ರೇರಣೆಯಾಗಿದೆ' ಎಂದ ಅವರು, `ಊಟ ಮಾಡುವಾಗ ನಾನು ಅನಕೃ ಅವರನ್ನು ನೆನೆಯುತ್ತೇನೆ. ಬಣ್ಣ ಹಚ್ಚುವಾಗ ಗುಬ್ಬಿ ವೀರಣ್ಣ ಅವರನ್ನು ನೆನೆಯುತ್ತೇನೆ' ಎಂದು ಹೇಳಿದರು.`ಸರ್ಕಾರಕ್ಕೆ ಹಿರಿಯ ಸಾಹಿತಿಗಳು, ಕಲಾವಿದರ ಮೇಲೆ ಗೌರವವೇ ಇಲ್ಲ. ಆದ್ದರಿಂದಲೇ ಅವರ ಸ್ಮರಣೆಗೆ ಅವಕಾಶ ನೀಡುವಂತಹ ಯಾವುದೇ ವಿಧಾಯಕ ಕಾರ್ಯಕ್ರಮ ಹಾಕಿಕೊಳ್ಳುತ್ತಿಲ್ಲ. ನಾವೂ ಇಲ್ಲದಿದ್ದರೆ ಎಲ್ಲಿ ಇಂತಹ ಮಹನೀಯರನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೇನೊ ಎಂಬ ಭಯ ಹೆಚ್ಚಾಗಿದೆ. ಹೀಗಾಗಿ ಸಾಯಲು ಧೈರ್ಯ ಸಾಲುತ್ತಿಲ್ಲ' ಎಂದು ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.

`ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅನಕೃ ಅವರದೇ ಒಂದು ವಿಶಿಷ್ಟ ಪರಂಪರೆ. ಅವರಷ್ಟು ಬರಹಗಾರರನ್ನು ಬೆಳೆಸಿದ ಮತ್ತೊಬ್ಬ ಸಾಹಿತಿ ಇಲ್ಲ' ಎಂದು ರಂಗನಾಥರಾವ್ ಹೇಳಿದರು. `ಪ್ರಜಾವಾಣಿ ವಹಿಸಿದ ಜವಾಬ್ದಾರಿಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಒಡನಾಟ ಹೆಚ್ಚಿತು' ಎಂದು ನೆನೆದರು.ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ರಂಗಕರ್ಮಿ ಬಿ.ವಿ. ಜಯರಾಮ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರೊ.ಜಿ. ಅಶ್ವತ್ಥ ನಾರಾಯಣ, ಲಲಿತಾ ಕೃಷ್ಣಮೂರ್ತಿ, ವಿ. ಲಕ್ಷ್ಮಿನಾರಾಯಣ, ಅಶೋಕ ಹಾರನಹಳ್ಳಿ ಹಾಗೂ ಗೌತಮ್ ಅನಕೃ ವೇದಿಕೆ ಮೇಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.