ಭಾನುವಾರ, ಏಪ್ರಿಲ್ 18, 2021
31 °C

ಸಿದ್ದನಕೊಪ್ಪಲು ಮಧ್ಯೆ ತಿಪ್ಪೆ ಗುಂಡಿಗಳು!

ಪ್ರಜಾವಾಣಿ ವಾರ್ತೆ ಪಂಡಿತ್ ನಾಟೀಕರ್ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ: ಎಲ್ಲೆಂದರಲ್ಲಿ ಕಸ ಕಡ್ಡಿ, ಕೊಳೆತ ತ್ಯಾಜ್ಯ, ದುರ್ವಾಸನೆ ಬೀರುವ ಚರಂಡಿಗಳು, ಗ್ರಾಮದ ಮಧ್ಯದಲ್ಲೇ ತಿಪ್ಪೆಗುಂಡಿಗಳು, ಬಯಲು ಮಲ ವಿಸರ್ಜನೆ, ಹದಗೆಟ್ಟ ರಸ್ತೆಗಳು, ಮನೆ ಮುಂದೆ ಜಾನುವಾರುಗಳ ಠಿಕಾಣಿ, ಮಲಿನ ನೀರು ಪೂರೈಕೆ, ಕುಸಿದ ಗೋಡೆಗಳ ಮೇಲೆ ಚಪ್ಪರ, ಅದರಲ್ಲೇ ಮಕ್ಕಳು, ಮಹಿಳೆಯರು, ವೃದ್ಧರ ವಾಸ... ಇದು ಕೆ.ಆರ್.ನಗರ ತಾಲ್ಲೂಕಿನ ಸಿದ್ದನಕೊಪ್ಪಲಿನ ಸದ್ಯದ ಸ್ಥಿತಿ.ತಾಲ್ಲೂಕು ಕೇಂದ್ರದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಈ ಗ್ರಾಮ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದೆ. ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇಲ್ಲಿ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ, ಹೆಚ್ಚಾಗಿ ಈ ಗ್ರಾಮದ ಮಕ್ಕಳು ಒಂದು ಕಿ.ಮೀ ದೂರದ ಹೆಬ್ಬಾಳು ಶಾಲೆಗೆ ಹೋಗುತ್ತಾರೆ. ಇದರಿಂದಾಗಿ ಗ್ರಾಮದ ಶಾಲೆ ಯಾವಾಗಲೂ ಖಾಲಿ ಖಾಲಿ.ಸಿದ್ದನಕೊಪ್ಪಲಿನ ಜನತೆಗೆ ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇಲ್ಲಿ ನೀರಿನ ಕೊರತೆ ಕಾಡುತ್ತಿದೆ. ಗ್ರಾಮದ ರಸ್ತೆಗಳನ್ನು ಮಾಡಿ ದಶಕವೇ ಕಳೆದಿದೆ. ಇಂದು ರಸ್ತೆಗಳೆಲ್ಲ ಕಿತ್ತುಹೋಗಿ ಗುಂಡಿಗಳಾಗಿವೆ. ಇದರಿಂದ ವಾಹನ ಸವಾರರು, ಎತ್ತಿನಗಾಡಿ, ದನಕರುಗಳ ಸಂಚಾರಕ್ಕೆ ಪ್ರಯಾಸ ಪಡಬೇಕಾಗಿದೆ. ಇದೇ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೆ. ಮತ್ತೆ ಕೆಲವರಿಗೆ ಜಾನುವಾರುಗಳನ್ನು ಕಟ್ಟಲು ಜಾಗ ಇಲ್ಲದೇ ರಸ್ತೆಯಲ್ಲೇ ಕಟ್ಟುತ್ತಾರೆ.ತಿಪ್ಪೆಗುಂಡಿಗಳ ಅವ್ಯವಸ್ಥೆ: ಇಲ್ಲಿ ಕಂಡುಬರುವ ಅಚ್ಚರಿ ಎಂದರೇ ಗ್ರಾಮದ ಮಧ್ಯದಲ್ಲೇ ಜನ ತಿಪ್ಪೆಗುಂಡಿಗಳನ್ನು ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರಾಮದ ಹೊರವಲಯದಲ್ಲಿ ತಿಪ್ಪೆಗುಂಡಿಗಳು ಇರುತ್ತವೆ. ಆದರೆ, ಇದಕ್ಕೆ ಸಿದ್ದನಕೊಪ್ಪಲು ಅಪವಾದದಂತಿದೆ. ಚರಂಡಿಯಲ್ಲಿ ಕಸ-ಕಡ್ಡಿ ಬಿದ್ದು ತ್ಯಾಜ್ಯ ಎಲ್ಲೆಂದರಲ್ಲಿ ಕಟ್ಟಿಕೊಂಡಿದೆ. ಇದರಿಂದ ಪರಿಸರ ಮಾಲಿನ್ಯವಾಗಿದೆ. ಬೀದಿ ದೀಪಗಳು ಆಗೊಮ್ಮೆ, ಈಗೊಮ್ಮೆ ಉರಿಯುತ್ತವೆ.ಇಡೀ ಗ್ರಾಮದಲ್ಲಿ ಹುಡುಕಿದರೂ ಒಂದೇ ಒಂದು ಶೌಚಾಲಯ ಇಲ್ಲ. ಎಲ್ಲರೂ ಬಯಲಿನಲ್ಲೇ ಶೌಚ ಮಾಡಬೇಕಿದೆ. ಇದರಿಂದ ಗ್ರಾಮಸ್ಥರು ರೋಗಗಳಿಂದ ಬಳಲುವಂತಾಗಿದೆ. ಇದೇ ಗ್ರಾಮದಲ್ಲಿ ಜನಪ್ರತಿನಿಧಿಗಳು ಇದ್ದರೂ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮದ ಅಭಿವೃದ್ಧಿಗೆ ಸ್ಪಂದಿಸಬೇಕು ಎಂಬುದು ಗ್ರಾಮದ ಮುಖಂಡ ಚಂದ್ರೇಗೌಡ ಮತ್ತು ಎಸ್.ಬಿ.ರಾಮಾಚಾರ್ಯ ಒತ್ತಾಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.