ಭಾನುವಾರ, ಜನವರಿ 19, 2020
20 °C

ಸಿದ್ದರಾಮಯ್ಯ ಆಡಳಿತದಿಂದ ಭ್ರಮನಿರಸನ: ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜನಪರ ಆಡಳಿತ ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ವಿಫಲರಾಗಿದ್ದು, ಸರ್ಕಾರದ ಬಗ್ಗೆ ಜನರಿಗೆ ಕೇವಲ 6 ತಿಂಗಳಲ್ಲೇ ಭ್ರಮನಿರಸನವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು.ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದ ಮೇಲೆ ರಾಜ್ಯದ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಯಾವ ಸಮಸ್ಯೆಗೂ ಸ್ಪಂದಿಸದೆ, ನಿರ್ಲಕ್ಷ್ಯ ತಾಳುತ್ತಿರುವುದರಿಂದ 6 ತಿಂಗಳಲ್ಲೇ ಎಲ್ಲರಿಗೂ ನಿರಾಸೆಯಾಗಿದೆ ಎಂದು ದೂರಿದರು.ಕಬ್ಬಿನ ಬೆಲೆ ನಿಗದಿ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ರೈತನ ಆತ್ಮಹತ್ಯೆ ನಡೆಯಿತು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಕಡಿಮೆ ಬೆಲೆಯ ಮದ್ಯ, ಮೂಢನಂಬಿಕೆ ನಿಷೇಧ ಹಾಗೂ ಮುಸ್ಲಿಂ ಬಾಂಧವರಿಗೆ ಶಾದಿಭಾಗ್ಯ ಯೋಜನೆಗಳನ್ನು ಜಾರಿಗೆ ತಂದು ತಮ್ಮ ಪಕ್ಷದವರಿಂದಲೇ ಟೀಕೆಗೆ ಗುರಿಯಾಗಿದ್ದಾರೆ ಎಂದು ಆರೋಪಿಸಿದರು.ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಉಳಿಯುವುದು ಕಷ್ಟ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಪಕ್ಷದ ಸಂಘಟನೆ ಮಾಡಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮೋದಿ ಪ್ರಧಾನಿಯಾಗಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.ಪಕ್ಷ ಬಲಿಷ್ಠವಾಗಿದ್ದು, ಈ ಬಾರಿ ರಾಜ್ಯದಲ್ಲಿ ಬಿಜೆಪಿ ಕನಿಷ್ಠ 20 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ ಎಂದರು.ಸಭೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆಯನೂರು ಮಂಜುನಾಥ, ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಆರಗ ಜ್ಞಾನೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಮಹೇಂದ್ರನಾಥ, ಮುಖಂಡ ರಾದ ಎಚ್. ಸಿ.ಬಸವರಾಜಪ್ಪ, ಎನ್‌.ಜೆ. ರಾಜಶೇಖರ್, ಅರವಿಂದ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)