ಭಾನುವಾರ, ಮೇ 9, 2021
19 °C

ಸಿಬಿಐಗೆ ಸಂಸ್ಕೃತಿಯಿಲ್ಲ: ರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ~ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿಯನ್ನು ಸಿಬಿಐ ಬಂಧಿಸಿರುವುದು ರಾಜಕೀಯ ಪಿತೂರಿಯಾಗಿದೆ~ ಎಂದು ಮಾಜಿ ಸಚಿವ ಬಿ.ಶ್ರೀರಾಮಲು ಸೋಮವಾರ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ~ಸೆಂಟರ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್ (ಸಿಬಿಐ) ಈಗ ಕಾಂಗ್ರೆಸ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್ ಆಗಿದೆ. ಅಲ್ಲದೆ ಚೋರ್ ಬಚಾವೋ ಸಂಸ್ಥೆಯೂ ಆಗಿದ್ದು, ಕೇಂದ್ರ ಸರ್ಕಾರದ ಅಣತಿಯಂತೆ ನಡೆಯುತ್ತಿದೆ~ ಎಂದು ಪದೇ ಪದೇ ವಾಗ್ದಾಳಿ ನಡೆಸಿದರು.~ನನ್ನ ಗೆಳೆಯ ಜನಾರ್ದನ ರೆಡ್ಡಿ ಅಮಾಯಕ, ಪ್ರಾಮಾಣಿಕ. ಆದರೆ ಕೇಂದ್ರ ಸರ್ಕಾರದ ರಾಜಕೀಯ ದುರುದ್ದೇಶದಿಂದ ಅವರನ್ನು ಬಂಧಿಸಲಾಗಿದೆ. ನಾವು ಗಣಿಗಾರಿಕೆಯಲ್ಲಿ ಪ್ರಾಮಾಣಿಕವಾಗಿ ಗಳಿಸಿದ ಹಣದಿಂದ ಬಿಜೆಪಿಯನ್ನು ಬೆಂಬಲಿಸಿದೆವು. ಜನಾರ್ದನ ರೆಡ್ಡಿ ಬಂಧನ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ~ ಎಂದರು.ಸೋನಿಯಾ ಕಾರಣ: ~1977 ರಲ್ಲಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಈಗ ಸೊಸೆ ಸೋನಿಯಾಗಾಂಧಿ ಸಿಬಿಐ ಬಳಸಿಕೊಂಡು ಅಂತಹದೇ ಪರಿಸ್ಥಿತಿಗೆ ಕಾರಣವಾಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಹೊರತು ಪಡಿಸಿ ಬೇರೆ ಯಾವ ಪಕ್ಷಗಳು ಆಡಳಿತ ನಡೆಸಬಾರದು ಎನ್ನುವುದು ಇವರ ಉದ್ದೇಶ.ಮಗಳು ಅಳುತ್ತಾಳೆ: ~ಬೆಳಿಗ್ಗೆ ಸಿಬಿಐನವರು ನನ್ನ ಮನೆಯ ಮೇಲೂ ದಾಳಿ ನಡೆಸಿದ್ದಾರೆ. ಕದವನ್ನು ಬಡಿದು ಒಳನುಗ್ಗಿದ್ದಾರೆ. ಹೆಂಗಸರು, ಮಕ್ಕಳೊಂದಿಗೆ ಕೆಟ್ಟದಾಗಿ  ನಡೆದುಕೊಂಡಿದ್ದಾರೆ. 9 ನೇ ತರಗತಿಯಲ್ಲಿ ಓದುತ್ತಿರುವ ಮಗಳು ಶಾಲೆಗೆ ಹೊರಟರೆ ಆಕೆಯ ಬ್ಯಾಗ್ ಸಹ ತಪಾಸಣೆ ಮಾಡಿದ್ದಾರೆ. ಇದರಿಂದ ನೊಂದ ಮಗಳು ಫೋನ್ ಮಾಡಿ ಗೋಳಾಡಿದಳು. ಸಿಬಿಐನವರಿಗೆ ಸಂಸ್ಕೃತಿ ಎನ್ನುವುದೇ ಇಲ್ಲ. ನಮ್ಮನ್ನು ಕಳ್ಳರ ರೀತಿ ನೋಡುತ್ತಿದ್ದಾರೆ~ ಎಂದು ನೊಂದುಕೊಂಡರು.ಬಿಜೆಪಿಯಲ್ಲಿಯೇ ಇದ್ದೇನೆ: ~ನೀವು ಈಗ ಯಾವ ಪಕ್ಷದಲ್ಲಿದ್ದೀರಿ~ ಎನ್ನುವ ಪತ್ರಕರ್ತರ ಪ್ರಶ್ನೆಗೆ, ~ನಾನು ಈಗ, ಇನ್ನು ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ~ ಎಂದು  ಉತ್ತರಿಸಿದರು. ~ಹಾಗಿದ್ದರೆ ರಾಜೀನಾಮೆ ಕೊಡುವ ಅಗತ್ಯವೇನಿತ್ತು~ ಎನ್ನುವ ಮತ್ತೊಂದು ಪ್ರಶ್ನೆಗೆ ~ಎಲ್ಲಕ್ಕೂ ಕಾಲವೇ ಉತ್ತರ ಹೇಳುತ್ತದೆ~ಎಂದು ಮಾತು ಮುಗಿಸಿದರು. ಪತ್ರಿಕಾಗೋಷ್ಠಿಯ ನಂತರ ಬಿ.ಶ್ರೀರಾಮುಲು ಮೆಟ್ಟಿಲುಗಳ ಮೂಲಕ ಚಾಮುಂಡಿ ಬೆಟ್ಟವನ್ನ ಹತ್ತಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.