ಶನಿವಾರ, ಮೇ 28, 2022
31 °C
ರೈಲ್ವೆ ನೇಮಕಾತಿ ಹಗರಣ

ಸಿಬಿಐ ತಾರತಮ್ಯ; ಕೋರ್ಟ್ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ರೈಲ್ವೆ ನೇಮಕಾತಿ ಲಂಚ ಹಗರಣದ ಆರೋಪಿಗಳನ್ನು ಬಂಧಿಸುವಾಗ ತಾರತಮ್ಯ ಅನುಸರಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡಿದೆ.ಹಗರಣಕ್ಕೆ ಸಂಬಂಧಿಸಿದಂತೆ 10 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದರೂ, ಇಬ್ಬರನ್ನು ಇದುವರೆಗೆ ಬಂಧಿಸಿಲ್ಲ. ಸ್ವತಃ ಸಿಬಿಐ ನಿರ್ದೇಶಕರೇ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದರೂ ಆಪಾದಿತರ ಬಂಧನದಲ್ಲಿ ತಾರತಮ್ಯ ನಡೆದಿರುವುದು ದುರದೃಷ್ಟಕರ ಸಂಗತಿ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದೋಷಾರೋಪ ಪಟ್ಟಿಯಲ್ಲಿ ಇರುವ ಸಿ.ವಿ. ವೇಣುಗೋಪಾಲ್ ಮತ್ತು ಎಂ.ವಿ. ಮುರಳಿಕೃಷ್ಣನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿದ ನ್ಯಾಯಮೂರ್ತಿಗಳು ಸಿಬಿಐ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ಸಮಯದ ಅಭಾವದಿಂದ ಈ ಇಬ್ಬರನ್ನು ಇದುವರೆಗೆ ಬಂಧಿಸಲಾಗಿಲ್ಲ ಎಂಬ ಸಿಬಿಐ ಪರ ವಕೀಲರು ನೀಡಿರುವ ಕಾರಣ ನೋಡಿದರೆ ಸಿಬಿಐ ಕಾರ್ಯವೈಖರಿ ಏನು ಎಂಬುದು ಗೊತ್ತಾಗುತ್ತದೆ ಎಂದು ನ್ಯಾಯಾಧೀಶ ಸ್ವರ್ಣಕಾಂತಾ ಶರ್ಮಾ ತಿಳಿಸಿದ್ದಾರೆ.ಸಕಾಲದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂಬುದು ನಿಜ. ಅದೇ ಸಂದರ್ಭದಲ್ಲಿ ಆಪಾದಿತರಲ್ಲಿ ಇಬ್ಬರನ್ನು ಬಂಧಿಸದೆ ಲೋಪವೆಸಗಿರುವುದು ಸಿಬಿಐ ವೈಫಲ್ಯ ಎಂದು ಟೀಕಿಸಿದ್ದಾರೆ.ಸಿ.ವಿ. ವೇಣುಗೋಪಾಲ್ ಮತ್ತು ಎಂ.ವಿ. ಮುರಳಿಕೃಷ್ಣನ್ ಅವರನ್ನು ಬಂಧಿಸದೇ ಇರುವ ಬಗ್ಗೆ ಸಕಾರಣ ನೀಡಲು ಸಿಬಿಐ ವಿಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.ಮಾಜಿ ರೈಲ್ವೆ  ಸಚಿವ ಬನ್ಸಲ್ ಅವರ ಅಳಿಯ ವಿಜಯ್ ಸಿಂಗ್ಲಾ, ರೈಲ್ವೆ ಸಿಬ್ಬಂದಿ ಮಂಡಲಿಯ ಮಾಜಿ ಸದಸ್ಯ ಮಹೇಶ್ ಕುಮಾರ್, ಬೆಂಗಳೂರು ಮೂಲದ ಗಿ. ಗಿ. ಟ್ರಾನಿಕ್ಸ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ನಾರಾಯಣ ರಾವ್, ಮಧ್ಯವರ್ತಿ ಸಂದೀಪ್ ಗೋಯಲ್, ಸಮೀರ್ ಸಿಧೀರ್, ರಾಹುಲ್ ಯಾದವ್ ಮತ್ತು ಸುಶೀಲ್ ದಗಾ ಅವರನ್ನು ಸಿಬಿಐ ಈಗಾಗಲೇ ಬಂಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.