ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಯಾಚಿನ್ ಸೇನಾ ಕಾವಲಿಗೆ ನಿತ್ಯ ₹5 ಕೋಟಿ ಖರ್ಚು!

ಒಂದು ತಂಡ 3 ತಿಂಗಳವರೆಗೆ ಮಾತ್ರ ಇರಬೇಕು
Last Updated 11 ಫೆಬ್ರುವರಿ 2016, 20:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಂದು ಬದಿಯಲ್ಲಿ ಪಾಕಿಸ್ತಾನ, ಮತ್ತೊಂದು ಬದಿಯಲ್ಲಿ ಚೀನಾದ ಸೈನಿಕರು ಭಾರತದ ಗಡಿಯನ್ನು ನುಸುಳಲು ಯತ್ನಿಸುತ್ತಲೇ ಇರುತ್ತಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಸೇನೆಯು 800 ಸೈನಿಕರನ್ನು ಸಿಯಾಚಿನ್‌ನಲ್ಲಿ ನಿಯೋಜಿಸಿದ್ದು, ಈ ಸೇನಾ ಶಿಬಿರ ನಿರ್ವಹಣೆಗೆ ನಿತ್ಯ ಮಾಡುವ ವೆಚ್ಚ ₹ 5 ಕೋಟಿ!

ಅಷ್ಟೊಂದು ಮೊತ್ತ ಏಕೆಂದರೆ, ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರವಿರುವ ಸಿಯಾಚಿನ್‌ ಸೇನಾ ನೆಲೆಯಲ್ಲಿ –50 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಒಂದು ಚಪಾತಿ ತಯಾರಿಸುವ ವೆಚ್ಚವೇ ₹ 125. ಒಂದು ಕಪ್‌ ಚಹಾ ಕಾಯಿಸಬೇಕೆಂದರೂ ಲೀಟರ್‌ಗಟ್ಟಲೇ ಸೀಮೆ ಎಣ್ಣೆ ಖರ್ಚಾಗುತ್ತದೆ. ಸೈನಿಕರನ್ನು ಬೆಚ್ಚಗಾಗಿಡಲು ದುಬಾರಿ ಮೊತ್ತದ ಬೂಟುಗಳು, ಕಾಲುಚೀಲಗಳು, ಏರ್‌ ಪ್ಯಾಕೆಟ್‌ಗಳು, ಫೈಬರ್‌ ಬ್ಯಾಗ್‌ಗಳು, ಸೆಟಲೈಟ್‌ ಫೋನ್‌ಗಳ ನಿರ್ವಹಣೆಗೆ ಇಷ್ಟೊಂದು ವೆಚ್ಚ ಮಾಡಲೇಬೇಕು ಎನ್ನುತ್ತಾರೆ ಕುಮಾಂವು ರೆಜಿಮೆಂಟ್‌ನಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿ ಲೆಫ್ಟಿನೆಂಟ್‌ ಜನರಲ್‌ ಆಗಿ ನಿವೃತ್ತಿ ಹೊಂದಿದ ಧಾರವಾಡದ ಶ್ರೀಕೃಷ್ಣ ಸರದೇಶಪಾಂಡೆ ಹಾಗೂ ನಿವೃತ್ತ ಏರ್‌ ಕಮಾಂಡರ್‌ ವಸಂತ ವಾಯಿ.

ಹಿಮದ ಬಂಡೆಗಳು ಕುಸಿದು ಜಿಲ್ಲೆಯ ಬೆಟದೂರ ಗ್ರಾಮದ ಹನುಮಂತಪ್ಪ ಸೇರಿದಂತೆ 10 ಸೈನಿಕರು ತೀರಿಕೊಂಡ ಹಿನ್ನೆಲೆಯಲ್ಲಿ ಸಿಯಾಚಿನ್‌ನ ವಾತಾವರಣ, ಅಲ್ಲಿ ಸೈನಿಕರ ಜೀವನ ವಿಧಾನ ಕುರಿತು ‘ಪ್ರಜಾವಾಣಿ’ಗೆ ಪ್ರತಿ ಕ್ರಿಯೆ ನೀಡಿದ ಇಬ್ಬರೂ ಹಿರಿಯ ಅಧಿಕಾ ರಿಗಳು, ‘ಸಿಯಾಚಿನ್‌ನಲ್ಲಿ ನಡೆಯುವ ಯುದ್ಧದಲ್ಲಿ ಮಡಿಯುವ ಯೋಧರು ಶೇ 20ರಷ್ಟು ಮಾತ್ರ. ಶೇ 80ರಷ್ಟು ಸೈನಿಕರು ಹಿಮ ಕಡಿತ, ಗ್ಯಾಂಗ್ರಿನ್‌, ಹಿಮ ಕುಸಿತದಿಂದಾಗಿಯೇ ಸಾವಿಗೀಡಾಗುತ್ತಾರೆ. ಈ ಘಟನೆ ನಡೆಯುವ ಕೆಲ ದಿನಗಳ ಮುನ್ನವೇ 138 ಜನ ಪಾಕಿಸ್ತಾನಿ ಸೈನಿಕರು ಹೀಗೆಯೇ ಸತ್ತು ಹೋದರು.

ಸಿಯಾಚಿನ್‌ ಎಂಬುದೇ ಒಂದು ದೊಡ್ಡ ಹಿಮನದಿ. ಪ್ರತಿವರ್ಷ 2 ಇಂಚಿನಷ್ಟು ಹಿಮ ಕುಸಿಯುತ್ತದೆ. ಇದೇ ಸಮಯವನ್ನು ಭಿಲಾ ಕೊಂಡ್ಲಾ ಬಳಿ ಸೇನಾ ಶಿಬಿರ ಹೊಂದಿರುವ ಪಾಕಿಸ್ತಾನ ಸೈನಿಕರು ಹಾಗೂ ಕಾರಾಕೋರಂ ಬಳಿ ತಮ್ಮ ನೆಲೆ ಹೊಂದಿರುವ ಚೀನಿ ಸೈನಿಕರು ಕಾಯುತ್ತಿರುತ್ತಾರೆ. ಯಾವುದೇ ಬೆಲೆ ತೆತ್ತಾದರೂ ಸರಿ ಸಿಯಾಚಿನ್‌ ಭಾಗವನ್ನು ಉಳಿಸಿಕೊಳ್ಳಬೇಕು’ ಎನ್ನುತ್ತಾರೆ ಸರದೇಶಪಾಂಡೆ.

ಹಳೆಯ ವಿಮಾನಗಳು! ಸಿಯಾಚಿನ್‌ನಂತಹ ಪ್ರಮುಖ ಸೇನಾ ನೆಲೆಗಳನ್ನು ನಿರ್ವಹಣೆ ಮಾಡುವ ಸಂದರ್ಭದಲ್ಲಿ 50 ವರ್ಷಗಳಷ್ಟು ಹಳೆಯದಾದ ಚೀತಾ ಹಾಗೂ ಮಿಗ್‌ 21 ವಿಮಾನಗಳನ್ನು ಬಳಸುತ್ತಿದ್ದೇವೆ. ಇಂತಹ ವಿಮಾನ ಬಳಸುವುದರಿಂದ ಇವುಗಳ ದಕ್ಷತೆಯೂ ಕಡಿಮೆಯಾಗುತ್ತದೆ. ಹಾಗಾಗಿ ಅತ್ಯಾಧುನಿಕ ವಿಮಾನಗಳ ಬಳಕೆ ರಕ್ಷಣಾ ಕ್ಷೇತ್ರದಲ್ಲಿ ಆಗಬೇಕಿದೆ. ಅಲ್ಲದೇ, ಜೀವ ಸುರಕ್ಷಾ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೈನಿಕರ ಸಾವಿನ ಪ್ರಮಾಣ ಕಡಿಮೆಯಾಗಿದೆ. ದೆಹಲಿಯ ಮಿಲಿಟರಿ ರೀಸರ್ಚ್ ಹಾಗೂ ರೆಫರೆಲ್‌ ಆಸ್ಪತ್ರೆಯು ಇಂತಹ ಸಂಕಷ್ಟದ ಸ್ಥಿತಿಯನ್ನು ಎದುರಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರಂತರ ಸಂಶೋಧನೆ ನಡೆಸಿದೆ ಎಂದು ವಸಂತ ವಾಯಿ ಹೇಳಿದರು.

ಆಮ್ಲಜನಕ ಪ್ರಮಾಣ ಶೇ 10 ಮಾತ್ರ!
ಸಿಯಾಚಿನ್‌ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ. ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರವಿರುವ ಈ ಪ್ರದೇಶದಲ್ಲಿ ಆಮ್ಲಜನಕ ಪ್ರಮಾಣ ಶೇ 10ರಷ್ಟು ಮಾತ್ರ ಇರುತ್ತದೆ. ಈ ಕನಿಷ್ಠ ಮಟ್ಟದ ಆಮ್ಲಜನಕ ಪಡೆದೂ ಬದುಕುಳಿಯಲು ಸೈನಿಕರಿಗೆ ತಿಂಗಳುಗಟ್ಟಲೇ ತರಬೇತಿ ಕೊಡಲಾಗಿರುತ್ತದೆ.

ಬೇಸ್‌ ಕ್ಯಾಂಪ್‌ನಿಂದ ನೇರವಾಗಿ ಮೇಲ್ಮಟ್ಟಕ್ಕೆ ಹೆಲಿಕಾಪ್ಟರ್‌ ಮೂಲಕ ಈ ಸೈನಿಕರನ್ನು ಒಯ್ಯುವುದಿಲ್ಲ. ಹಾಗೆ ಕರೆದೊಯ್ದರೆ ಕೆಲವೇ ದಿನಗಳಲ್ಲಿ ಆ ಸ್ಥಿತಿಗೆ ಹೊಂದಿಕೊಳ್ಳಲಾಗದೇ (ಅಕ್ಲೆಮೆಟೈಜೇಷನ್‌) ಸಾವಿಗೀ ಡಾಗುವ ಸಂಭವವೂ ಇರುತ್ತದೆ. ಅದರ ಬದಲು ನಡೆದುಕೊಂಡೇ ಆ ಎತ್ತರವನ್ನು ತಲುಪಲು ಸೈನಿಕ ರಿಗೆ ಒಂದು ತಿಂಗಳು ಕಾಲಾವಕಾಶ ಬೇಕು. ಇಷ್ಟೆಲ್ಲ ಹೊಂದಿಕೊಳ್ಳಲು ಸೈನಿಕರಿಗೆ ಸಾಕಷ್ಟು ತರಬೇತಿ ನೀಡಲಾಗು ತ್ತದೆ. ಅಷ್ಟಾಗಿಯೂ ಆ ಸೈನಿಕರನ್ನು 3 ತಿಂಗಳ ಕಾಲ ಮಾತ್ರ ಅಲ್ಲಿ ನಿಯೋಜಿಸಲಾಗುತ್ತದೆ ಎನ್ನುತ್ತಾರೆ ನಿವೃತ್ತ ಏರ್‌ ಕಮಾಂಡರ್‌ ವಸಂತ ವಾಯಿ.

* 1971ರ ಜನವರಿಯಲ್ಲಿ ಅರುಣಾಚಲ ಪ್ರದೇಶದ ಸೇಲಾ ಪಾಸ್‌ ಬಳಿ ನನ್ನ ತುಕ ಡಿಯ 7 ಸೈನಿಕರು ಹಿಮ ಬಂಡೆಯಡಿ ಸಿಲುಕಿ ಸಾವಿಗೀಡಾದರು. ಆಗ ಅತ್ಯಾ ಧುನಿಕ ರಡಾರ್‌ಗಳಿರಲಿಲ್ಲ. ಗುದ್ದಲಿ, ಸಲಿಕೆ ಬಳಸಿಯೇ ಸತತ 28 ಗಂಟೆಗಳ ಕಾಲ ಹಿಮ ಕಡಿದು ಮೃತದೇಹ ಹೊರತೆಗೆದೆವು
-ಶ್ರೀಕೃಷ್ಣ  ಸರದೇಶಪಾಂಡೆ
ನಿವೃತ್ತ ಲೆಫ್ಟಿನೆಂಟ್‌ ಜನರಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT