ಮಂಗಳವಾರ, ಸೆಪ್ಟೆಂಬರ್ 29, 2020
27 °C

ಸಿಹಿ ಸುದ್ದಿ! ಕೃಷ್ಣಜನ್ಮಾಷ್ಟಮಿಗೆ 10 ಸಾವಿರ ಲಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಹಿ ಸುದ್ದಿ! ಕೃಷ್ಣಜನ್ಮಾಷ್ಟಮಿಗೆ 10 ಸಾವಿರ ಲಾಡು

ವಾರಪೂರ್ತಿ ಕೆಲಸ ಮಾಡಿ ಕೊನೆಗೊಂದು ಭಾನುವಾರಕ್ಕೆ ಕಾಯುವ ನಗರದ ಕೆಲ ಉದ್ಯೋಗಸ್ಥ ಮಹಿಳೆಯರಿಗೆ ಹಬ್ಬಗಳು ಬಂತೆಂದರೆ ತಲೆ ನೋವು ಶುರುವಾಗಬಹುದು. ಕಾರಣ ಬಗೆಬಗೆಯ ತಿನಿಸುಗಳನ್ನು ಮಾಡಬೇಕು. ಅದಕ್ಕೆ ಸಮಯವೂ ಬೇಕು. ಹಾಗಂತ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ನಗರದ ಅನೇಕ ಕಡೆ ಮನೆ ರುಚಿಯ ರೀತಿ ನಿಮಗೆ ಬೇಕಾದ ಸಿಹಿ, ಖಾರ ತಿನಿಸುಗಳನ್ನು ಮಾಡಿಕೊಡುವ ಜನರಿದ್ದಾರೆ.ಮಲ್ಲೇಶ್ವರ 18ನೇ ಕ್ರಾಸ್‌ನಲ್ಲಿರುವ ಶ್ರೀಶೈಲನ್ ಎಂಬುವವರು 35 ವರ್ಷಗಳಿಂದ ತಿಂಡಿ ತಿನಿಸುಗಳನ್ನು ಮಾಡಿ ಮಾರುತ್ತಾರೆ. ವರಮಹಾಲಕ್ಷ್ಮಿ ವ್ರತ, ಗಣೇಶ ಚತುರ್ಥಿ, ಶ್ರೀಕೃಷ್ಣಜನ್ಮಾಷ್ಟಮಿ, ದೀಪಾವಳಿ... ಹೀಗೆ ವಿವಿಧ ಹಬ್ಬಗಳ ಸಂದರ್ಭದಲ್ಲಿ  ವಿಶೇಷ ತಿನಿಸುಗಳನ್ನು ಮಾಡುತ್ತಾರೆ.ಈ ಬಾರಿಯ ವರಮಹಾಲಕ್ಷ್ಮಿ ವ್ರತಕ್ಕಾಗಿ ಹೋಳಿಗೆ, ಕರಿಗಡುಬು, ಕದಂಬಂ, ಮನೋಹರ ಉಂಡೆ ಮಾಡಿದ್ದಾರೆ. ಶ್ರಾವಣ ಶನಿವಾರ ಹಾಗೂ ಗಣೇಶ ಚೌತಿ ವೇಳೆ ದೇವಸ್ಥಾನಗಳಿಗೂ ಇವರು ಸಿಹಿ ತಿನಿಸುಗಳನ್ನು ಮಾಡಿಕೊಡುತ್ತಾರೆ. ಪ್ರತಿ ಕೃಷ್ಣಜನ್ಮಾಷ್ಟಮಿಗೆ ಇಸ್ಕಾನ್‌ಗೆ ಸುಮಾರು 80 ಸಾವಿರ ಲಾಡುಗಳನ್ನು ಹಾಗೂ ಐದು ನೂರು ಕಿ.ಲೋ ಅಕ್ಕಿಯಿಂದ ಮಾಡಿದ ಕ್ಷೀರಾನ್ನವನ್ನೂ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ ಶ್ರೀಶೈಲನ್.ಮೇಲುಕೋಟೆಯಿಂದ ಬಂದ ಶ್ರೀಶೈಲನ್ ಹಬ್ಬಗಳ ಸಂದರ್ಭ ಹಾಗೂ ಮದುವೆಗಳಿಗೆ ತಿಂಡಿತಿನಿಸು ಮಾಡುವ ವೃತ್ತಿ ಆರಂಭಿಸಿದರು. `ಇಪ್ಪತ್ತೈದು ವರ್ಷಗಳ ಹಿಂದೆ ಒಂದು ರೂಪಾಯಿಗೆ ಒಂದು ಲಾಡು ಮಾರುತ್ತಿದ್ದೆವು. ಆದರೆ ಈಗ ಹದಿನೈದು ರೂಪಾಯಿಗೆ ಒಂದು ಲಾಡು. ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಗಾಗಿ ಬೆಲೆ ಹೆಚ್ಚಿಸಲೇಬೇಕು. ಆದರೂ ಹಬ್ಬಗಳು ಬಂತೆಂದರೆ ಜನ ತಮಗಿಷ್ಟದ ತಿನಿಸುಗಳನ್ನು ಆರ್ಡರ್ ಕೊಡುತ್ತಾರೆ. ಆರ್ಡರ್ ಕೊಡುವವರ ಸಂಖ್ಯೆ ಇಂದಿಗೂ ಕಡಿಮೆಯಾಗಿಲ್ಲ. ಹಬ್ಬಗಳಲ್ಲಷ್ಟೇ ಅಲ್ಲದೇ ಮದುವೆಗಳಿಗೂ ಆರ್ಡರ್ ಬರುತ್ತದೆ ಎಂದು ಮಾಹಿತಿ ನೀಡುತ್ತಾರೆ ಅವರು.ಗಣೇಶ ಚೌತಿಯಲ್ಲಿ ಒಬ್ಬರು ನೂರರಿಂದ ಐದು ನೂರರವರೆಗೆ ಲಾಡುಗಳಿಗೆ ಆರ್ಡರ್ ಕೊಡುತ್ತಾರೆ. 20ರಿಂದ 25 ಬಗೆಯ ತಿನಿಸುಗಳನ್ನು ಮಾಡುವ ಶ್ರೀಶೈಲನ್ ಅವರಲ್ಲಿ ಸದ್ಯಪ್ಪಂ, ಅತಿರಸಂ, ಎಳ್ಳುಗಾರಿಗೆ, ಹಿಸುಕುಲಡ್ಡು ಹಾಗೂ ಮನೋಹರದ ಉಂಡೆ, ಮುಚ್ಚೋರೆ ಹಾಗೂ ಸ್ಪೆಷಲ್ ಗರಿ ಲಾಡಿಗೆ ಹೆಚ್ಚು ಬೇಡಿಕೆ ಇದೆಯಂತೆ. ಜೊತೆಗೆ ತಂಬಿಟ್ಟನ್ನೂ ಮಾಡಿಸಿಕೊಂಡು ಹೋಗುತ್ತಾರೆ.ಏಳರಿಂದ ಎಂಟು ಮಂದಿ ಇವರ ಬಳಿ ಕೆಲಸ ನಿರ್ವಹಿಸುತ್ತಾರೆ. `ಹಬ್ಬಗಳ ಸಂದರ್ಭದಲ್ಲಿ ಕೆಲಸಕ್ಕೆ ಜನ ಸಿಗೋದಿಲ್ಲ. ಈ ಸಮಸ್ಯೆಗಳ ನಡುವೆಯೂ ಆರ್ಡರ್ ಕೊಟ್ಟಷ್ಟು ತಿನಿಸುಗಳನ್ನು ಮಾಡಿಕೊಡಬೇಕು~ ಎಂಬುದು ಶ್ರೀಶೈಲನ್ ಅವರ ಅನುಭವದ ಮಾತು.ಬೇಕರಿಗಳಲ್ಲಿ ಸಿಗದ ಮನೋಹರ ಉಂಡೆ, ಸಜ್ಜಪ್ಪ, ಅವಲಕ್ಕಿಪುರಿ ಉಂಡೆಯನ್ನೂ ಇವರು ಮಾಡುತ್ತಾರೆ. ಶ್ರೀಕೃಷ್ಣಜನ್ಮಾಷ್ಟಮಿಗೆ 45 ಸಾವಿರ ಚಕ್ಕುಲಿ, 10 ಸಾವಿರ ಲಾಡು ಮಾಡುವ ಗುರಿ ಹೊಂದಿದ್ದಾರೆ.ಎಂ.ಕೆ. ಶ್ರೀಶೈಲನ್ ಸಂಪರ್ಕ: 94481 74284.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.