ಭಾನುವಾರ, ಮೇ 16, 2021
24 °C
ರಸ್ತೆ, ನೀರು, ಸಾರಿಗೆ, ವಿದ್ಯುತ್, ಮೂಲ ಸೌಕರ್ಯ ಅಭಿವೃದ್ಧಿಗೆ ಕನಸು ತೇಲಿಬಿಟ್ಟ ಕೆಐಜಿ

`ಸುಂದರ ನಗರ' ರೂಪಿಸಲು ದಶ ಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸುಂದರ ನಗರ' ರೂಪಿಸಲು ದಶ ಸೂತ್ರ

ಬೆಂಗಳೂರು: ರಾಜಧಾನಿಯಲ್ಲಿ 2020ರ ವೇಳೆಗೆ `ನಮ್ಮ ಮೆಟ್ರೊ' (ಮೊದಲನೇ ಹಂತ, ಎರಡನೇ ಹಂತ, ಮೂರನೇ ಹಂತ) ಸಂಪರ್ಕ ಸೇವೆ 250 ಕಿ.ಮೀ. ವಿಸ್ತಾರಗೊಳ್ಳಬೇಕು. 3,000 ಹೆಚ್ಚುವರಿ ಬಸ್‌ಗಳನ್ನು ಖರೀದಿಸಿ ಬಿಎಂಟಿಸಿ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು. ಪ್ರಯಾಣಿಕ ರೈಲು (ಕಮ್ಯೂಟರ್ ರೈಲು) ಸೇವೆ ಮೂಲಕ ನಗರ ಹಾಗೂ ಸುತ್ತಮುತ್ತಲ ನಗರಗಳ ನಡುವೆ ಸಂಪರ್ಕ ಕಲ್ಪಿಸಬೇಕು.ಕರ್ನಾಟಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತಂಡ (ಕೆಐಜಿ 2020 ವರದಿ)ವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಇರುವ ಪ್ರಮುಖ ಅಂಶಗಳು. ಜನಸ್ನೇಹಿ ಕ್ರಮಗಳನ್ನು ಜಾರಿಗೊಳಿಸಿ ಕನಿಷ್ಠ ಶೇ 60 ಮಂದಿ ನಾಗರಿಕರು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಆಗಬೇಕು ಎಂದು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.ವರದಿಯಲ್ಲೇನಿದೆ?: ನಗರದಲ್ಲಿ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು. ನಗರದ ಟ್ಯಾಕ್ಸಿಗಳ ಸಾಮರ್ಥ್ಯ ವೃದ್ಧಿ ಮಾಡಬೇಕು. ಬೀದಿ ಬದಿ ಹಾಗೂ ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಹು ಮಾದರಿಯ ಸಾರಿಗೆ ಕೇಂದ್ರಗಳನ್ನು ಸೃಷ್ಟಿಸಬೇಕು.ನೀರಿನ ಸಂಪನ್ಮೂಲ: ನಗರಕ್ಕೆ ಪೂರೈಕೆಯಾಗುತ್ತಿರುವ ಕುಡಿಯುವ ನೀರಿನಲ್ಲಿ ಶೇ 56ರಷ್ಟು ಈಗ ಲೆಕ್ಕಕ್ಕೆ ಸಿಗದೆ ಪೋಲಾಗುತ್ತದೆ. ಈ ಪ್ರಮಾಣವನ್ನು ಶೇ 25ಕ್ಕೆ ಇಳಿಸಬೇಕು. ಈ ಮೂಲಕ ನಗರಕ್ಕೆ ಹೆಚ್ಚುವರಿಯಾಗಿ 200 ದಶಲಕ್ಷ ಲೀಟರ್ ಕುಡಿಯುವ ನೀರು ದೊರಕುತ್ತದೆ. ಸ್ಥಳೀಯ ವಲಯ ಅಧಿಕಾರಿಗಳಿಗೆ ಉತ್ತೇಜನ ನೀಡುವ ಮೂಲಕ ಶೇ 15 ಆಗುತ್ತಿರುವ ನೀರಿನ ವಾಣಿಜ್ಯ ನಷ್ಟಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಕೊಳಚೆ ನೀರಿನ ಪುನರ್ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು. ಶೇ 50ರಷ್ಟು ಸ್ಥಳೀಯ ಬಳಕೆಗೆ ಈ ನೀರನ್ನು ಬಳಸಬಹುದು. ಎಲ್ಲ ಹೊಸ ಅಭಿವೃದ್ಧಿಗಳು ಹಾಗೂ ಬಡಾವಣೆಗಳಿಗೆ ಎರಡು ಪೈಪ್‌ಗಳನ್ನು ಅಳವಡಿಸಿಕೊಳ್ಳಬೇಕು.ನಗರದ 400 ಕೆರೆಗಳು ಹಾಗೂ ನೀರಿನ ಮೂಲಗಳ ಪುನಶ್ಚೇತನ ಕಾರ್ಯ ಕೈಗೆತ್ತಿಕೊಳ್ಳಬೇಕು. ಪುನಶ್ಚೇತನದಿಂದ 200 ದಶಲಕ್ಷ ಲೀಟರ್ ನೀರು ದೊರಕಲಿದೆ. ನೀರು ಶುದ್ಧೀಕರಣ ಘಟಕ, ಕೊಳಚೆ ನೀರು ಶುದ್ಧೀಕರಣ ಘಟಕಗಳಿಗೆ ಜಾಗ ಗುರುತಿಸಬೇಕು. ನೀರಿನ ಗುಣಮಟ್ಟದ ಮೇಲ್ವಿಚಾರಣೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ನಗರದ ವಿವಿಧೆಡೆ 10 ನೀರಿನ ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಬೇಕು.ರಸ್ತೆಗಳ ಅಭಿವೃದ್ಧಿ: ಟೆಂಡರ್ ಶೂರ್ ಮಾರ್ಗಸೂಚಿ ಅನ್ವಯ ನಗರದ ರಸ್ತೆಗಳ ಅಭಿವೃದ್ಧಿ ಮಾಡಬೇಕು. ಎಲ್ಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳಿರಬೇಕು. ಪ್ರಮುಖ ರಸ್ತೆಗಳಲ್ಲಿ ಸ್ಕೈವಾಕ್ ವ್ಯವಸ್ಥೆ ಅಳವಡಿಸಬೇಕು. ಸಾರ್ವಜನಿಕ ಬೈಕ್ ವಿನಿಮಯ ವ್ಯವಸ್ಥೆ ಜಾರಿಗೆ ತರಬೇಕು. ಲಿಫ್ಟ್‌ಗಳು ಹಾಗೂ ಎಸ್ಕಲೇಟರ್‌ಗಳ ನೆರವಿನಿಂದ ಪಾದಚಾರಿಗಳಿಗೆ ರಸ್ತೆ ದಾಟಲು ಅನುವು ಮಾಡಿಕೊಡಬೇಕು.ಕಾರಿಡಾರ್‌ಗಳು: ಎರಡು ಹಂತಗಳಲ್ಲಿ ಫೆರಿಫೆರಲ್ ರಿಂಗ್ ರಸ್ತೆ (118 ಕಿ.ಮೀ)ಯನ್ನು ಪೂರ್ಣಗೊಳಿಸಬೇಕು. 28 ಕಿ.ಮೀ. ವ್ಯಾಪ್ತಿಯಲ್ಲಿ ನಗರದ ಹೃದಯ ಭಾಗದಲ್ಲಿ ಎತ್ತರಿಸಿದ ಹಾಗೂ ಸುರಂಗದ ಮೂಲಕ ರಿಂಗ್ ರೋಡ್ ನಿರ್ಮಿಸಬೇಕು. 11 ಸಂಪರ್ಕ ರಸ್ತೆಗಳನ್ನು ವಿಸ್ತರಣೆ ಮಾಡಬೇಕು. ಈ ಮಾರ್ಗದ ಒಟ್ಟು ವಿಸ್ತಾರ 165 ಕಿ.ಮೀ ಆಗಬೇಕು. ಟೆಂಡರ್‌ಶೂರ್ ಮಾರ್ಗಸೂಚಿ ಅನ್ವಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಟೆಂಡರ್‌ಶೂರ್ ಮಾರ್ಗ ಸೂಚಿ ಅನ್ವಯ ನಗರದ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೈಸೂರು ನಡುವೆ ಹೈ ಸ್ಪೀಡ್ ರೈಲು ಸೇವೆ ವ್ಯವಸ್ಥೆ ಕಲ್ಪಿಸಬೇಕು. ಕೈಗೆಟಕುವ ದರದಲ್ಲಿ ಮನೆ: ನಗರದ ಎಲ್ಲರೂ ಕಡಿಮೆ ದರದಲ್ಲಿ ಮನೆ ಖರೀದಿ ಮಾಡುವಂತಾಗಬೇಕು. ಇಡಬ್ಲ್ಯೂಎಸ್/ಎಲ್‌ಐಜಿ ವರ್ಗಗಳಿಗೆ 7.50 ಲಕ್ಷ ಮನೆಗಳನ್ನು ನಿರ್ಮಿಸಬೇಕು. ಮನೆ ನಿರ್ಮಾಣಕ್ಕಾಗಿ ನಗರ ಹಾಗೂ ಸುತ್ತಮುತ್ತ 4,500 ಎಕರೆ ಗುರುತಿಸಬೇಕು. ಮನೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತಿತರ ಕಡೆಗಳಿಂದ ಸಬ್ಸಿಡಿ, ಅನುದಾನ ಪಡೆಯಲು ಕ್ರಮ ಕೈಗೊಳ್ಳಬೇಕು. ಫ್ಲ್ಯಾಟ್ ನಿರ್ಮಾಣದ ಭೂಮಿಯ ಬೆಲೆ ಕಡಿಮೆ ಆಗಲು ಎಫ್‌ಎಸ್‌ಐ ನಿಯಮಗಳಲ್ಲಿ ಸಡಿಲಿಕೆ ಮಾಡಬೇಕು. ಸಮಗ್ರ ಕೊಳೆಗೇರಿ ಪುನರ್ವಸತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.ಸಮಗ್ರ ಹಾಗೂ ಸುಸ್ಥಿರವಾಗಿರುವ ಸ್ಯಾಟಲೈಟ್ ನಗರಗಳನ್ನು ಅಭಿವೃದ್ಧಿಪಡಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಪ್ರವರ್ಧಮಾನಕ್ಕೆ ಬರುತ್ತಿರುವ ನಗರಗಳ ಅಭಿವೃದ್ಧಿಗೆ ಸಾಮಾಜಿಕ ಮೂಲಸೌಕರ್ಯ ಒದಗಿಸಿ ಉತ್ತೇಜನ ನೀಡಬೇಕು. ಅಂತರರಾಷ್ಟ್ರೀಯ ಗುಣಮಟ್ಟದ ಪ್ರಕಾರ 150 ಮಂದಿಗೆ ಒಂದು ಶೌಚಾಲಯ ಸ್ಥಾಪನೆ ಮಾಡಬೇಕು. ರಾಷ್ಟ್ರೀಯ ನಗರ ಸ್ವಚ್ಛತಾ ನೀತಿಯನ್ನು ಅನುಷ್ಠಾನಗೊಳಿಸಬೇಕು.ಅಗ್ನಿ ಸುರಕ್ಷತೆ: ಪ್ರಮುಖ ದುರಂತಗಳು ಸಂಭವಿಸಿದಾಗ ಮೂರು ನಿಮಿಷದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವಂತೆ ಮಾಡಲು ವೈಜ್ಞಾನಿಕವಾಗಿ ಅಗ್ನಿಶಾಮಕ ಕೇಂದ್ರಗಳನ್ನು ಸ್ಥಾಪಿಸಬೇಕು. ಎಲ್ಲಾ ಕಟ್ಟಡಗಳು ಎರಡು ವರ್ಷಕ್ಕೊಮ್ಮೆ ಅಗ್ನಿಶಾಮಕ ಇಲಾಖೆಯಿಂದ ನಿರಕ್ಷೇಪಣಾ ಪತ್ರವನ್ನು ನವೀಕರಣ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು. ಅಗ್ನಿಶಾಮಕ ಇಲಾಖೆಯಿಂದ ಕಟ್ಟಡಗಳಿಗೆ ನಿರಕ್ಷೇಪಣಾ ಪತ್ರ ನೀಡುವಾಗ ಚದರ ಅಡಿಗೆ 20 ರೂಪಾಯಿ ಶುಲ್ಕ ವಸೂಲಿ ಮಾಡಬೇಕು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗೆ ಹೆಚ್ಚಿನ ಮೂಲಸೌಕರ್ಯ ಹಾಗೂ ಅನುದಾನ ಒದಗಿಸಬೇಕು. ಈ ಇಲಾಖೆಯನ್ನು ಸದೃಢವನ್ನಾಗಿ ಮಾಡಬೇಕು.ವಿದ್ಯುತ್: ಡಿಸ್ಟ್ರಿಬ್ಯೂಷನ್ ಅಟೋಮೇಷನ್ ಸಿಸ್ಟಮ್ (ಡಿಎಎಸ್) ಯೋಜನೆಯನ್ನು ಅನುಷ್ಠಾನ ಮಾಡಬೇಕು. ಸ್ಮಾರ್ಟ್ ಗ್ರಿಡ್ ಪರಿಕಲ್ಪನೆಯನ್ನು ಜಾರಿಗೆ ತರಬೇಕು. ಗ್ರಿಡ್‌ಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಬೇಕು. ಎಲ್ಲ ಹೊಸ ಕಟ್ಟಡಗಳಲ್ಲಿ ಸೌರಶಕ್ತಿ ಪ್ಯಾನೆಲ್‌ಗಳ ಅಳವಡಿಕೆ ಕಡ್ಡಾಯ ಮಾಡಬೇಕು.ಪರಿಸರ ಸ್ವಚ್ಛತೆ: ನಗರ ವ್ಯಾಪ್ತಿಯ ಬಸ್‌ಗಳು, ರಿಕ್ಷಾಗಳು, ಟ್ಯಾಕ್ಸಿಗಳು ಹಾಗೂ ಕಂಪೆನಿಯ ವಾಹನಗಳು ಸೇರಿದಂತೆ ಎಲ್ಲ ಸಾರ್ವಜನಿಕ ವಾಹನಗಳಲ್ಲಿ ಸಿಎನ್‌ಜಿ ಬಳಕೆ ಕಡ್ಡಾಯ ಮಾಡಬೇಕು. ಹೆಚ್ಚಿನ ಸ್ಥಳಗಳಲ್ಲಿ ವಾಯು ಗುಣಮಟ್ಟ ನಿಗಾ ಕೇಂದ್ರಗಳನ್ನು ಸ್ಥಾಪಿಸಬೇಕು. ದೂಳುರಹಿತ ನಿರ್ಮಾಣ ತಂತ್ರಜ್ಞಾನಗಳನ್ನು ಅಳವಡಿಸಬೇಕು.ಸಮಾಜದ ಕ್ಷೇಮಾಭಿವೃದ್ಧಿ ಕಾರ್ಯಕ್ರಮಗಳು:

ಪ್ರಾಣಿಗಳ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಬೀದಿ ನಾಯಿಗಳು ಸೇರಿದಂತೆ ಪ್ರಾಣಿಗಳಿಗೆ ಸೂರು ಒದಗಿಸಬೇಕು. ನಾಗರಿಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿ ಬಡಾವಣೆಯಲ್ಲಿ ಆಟದ ಮೈದಾನಗಳು ಇರಬೇಕು. ಬಡಾವಣೆಗೊಂದು ಸ್ಮಶಾನ ಇರಬೇಕು.ನಗರದ ಉದ್ಯಾನಗಳ ಅಭಿವೃದ್ಧಿಪಡಿಸಿ ಸಮರ್ಪಕ ನಿರ್ವಹಣೆ ಮಾಡಬೇಕು. ಎಲ್ಲ ಹೊಸ ಬಡಾವಣೆಗಳಲ್ಲಿ ಉದ್ಯಾನ ಇರಬೇಕು. ನಗರೀಕರಣದಿಂದ ಉಂಟಾಗಿರುವ ಹಸಿರು ಮನೆ ಪರಿಣಾಮವನ್ನು ಕಡಿಮೆ ಮಾಡಲು ವೈಜ್ಞಾನಿಕವಾಗಿ ಹಾಗೂ ಸಮರೋಪಾದಿಯಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕುಕಸಮುಕ್ತ ನಗರ

ಕಸದಿಂದಲೇ ರಾಜಧಾನಿಗೆ ಕುಖ್ಯಾತಿ ಬಂದಿದೆ. ಕಸ ವಿಲೇವಾರಿ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಂಡು ನಗರವನ್ನು ಕಸಮುಕ್ತವನ್ನಾಗಿ ಮಾಡಬೇಕು ಎಂದು ತಂಡವು ಆಶಿಸಿದೆ. ಇದಕ್ಕೆ ಅನೇಕ ಶಿಫಾರಸುಗಳನ್ನು ಮಾಡಿದೆ. ಲ್ಯಾಂಡ್‌ಫಿಲ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲು ಕಸದಿಂದ ಇಂಧನ ತಯಾರಿಸುವ ಘಟಕಗಳನ್ನು ಆರಂಭಿಸಬೇಕು. ಇದಕ್ಕೆ ದೀರ್ಘಕಾಲಿನ ಸುಸ್ಥಿರ ಯೋಜನೆಗಳನ್ನು ರೂಪಿಸಬೇಕು. ನಗರದಲ್ಲಿ ಉತ್ಪತ್ತಿಯಾಗುವ ಶೇ 80ರಷ್ಟು ಘನ ತ್ಯಾಜ್ಯ ಪುನರ್ ಬಳಕೆಯಾಗಬೇಕು.ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ವಿಕೇಂದ್ರೀಕರಣ ಆಗಬೇಕು. ಕೇಂದ್ರೀಕೃತ ವ್ಯವಸ್ಥೆಯಿಂದ ಕಸ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ. ವಲಯ ಮಟ್ಟದಲ್ಲಿ ನಿರ್ವಹಣೆ ಆಗಬೇಕು. ಹೋಟೆಲ್‌ಗಳು, ಬಡಾವಣೆಗಳು ಹಾಗೂ ಕಚೇರಿಗಳು ಸೇರಿದಂತೆ ಪ್ರಮುಖ ಕಸ ಉತ್ಪಾದಕರು ಮೂಲದಲ್ಲೇ ಕಸ ವಿಂಗಡಣೆ ಮಾಡಬೇಕು. ಕಸದಿಂದ ಇಂಧನ ತಯಾರಿಸುವ ಯೋಜನೆಗಳಿಗೆ ಉತ್ತೇಜನ ನೀಡಬೇಕು.ಸಂಚಾರ, ಸುರಕ್ಷತೆಗೆ ಆದ್ಯತೆ

ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಬೇಕು. ಜನರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಅನೇಕ ತುರ್ತು ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ವರದಿಯಲ್ಲಿ ಸೂಚಿಸಲಾಗಿದೆ.ಸಂಚಾರ ದಟ್ಟಣೆ ಕಡಿಮೆ ಮಾಡಿ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡಲು ನಗರದ 900ಕ್ಕೂ ಅಧಿಕ ವೃತ್ತಗಳನ್ನು ಸುಧಾರಣೆ ಮಾಡಬೇಕು. ಹೊಸ 360 ವೃತ್ತಗಳಲ್ಲಿ ಪರಿಣಾಮಕಾರಿಯಾಗಿ ಸಿಗ್ನಲ್ ವ್ಯವಸ್ಥೆ ಜಾರಿಗೆ ತರಬೇಕು. 180 ವೃತ್ತಗಳಲ್ಲಿ ವಿಚಕ್ಷಣಾ ಕ್ಯಾಮೆರಾಗಳನ್ನು ಅಳವಡಿಸಬೇಕು. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವುದಕ್ಕೆ ಕಡಿವಾಣ ಹಾಕುವುದಕ್ಕೆ ಎಲ್ಲ ಹೆದ್ದಾರಿಗಳಲ್ಲಿ ಕ್ಯಾಮೆರಾ ಅಳವಡಿಸಬೇಕು. ರಸ್ತೆ ಶಿಸ್ತಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಂಚಾರ ಪೊಲೀಸರ ನಿರ್ವಹಣೆ ಹಾಗೂ ಕಾರ್ಯಾಚರಣೆಗೆ ಅಗತ್ಯ ಅನುದಾನ ನೀಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.