ಶುಕ್ರವಾರ, ಮೇ 7, 2021
26 °C

`ಸುಕ್ಕ' ದುಃಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಸುಕ್ಕ' ದುಃಖ

ತಮಗೆ ಅರಿವಿಲ್ಲದಂತೆಯೇ ರೌಡಿಸಂಗೆ ಇಳಿಯುವ ಹುಡುಗರು, ರಕ್ತಪಾತ, ಬಿಡುವಿನಲ್ಲಿ ಪ್ರೀತಿಯ ಸೆಳೆತ. ಈ ಬಗೆಯ ಕಥನ ಹೊಂದಿರುವ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ `ಸುಕ್ಕ'.`ಕರುನಾಡ ನವಸೇನೆ' ಎಂಬ ತಂಡ ಕಟ್ಟಿಕೊಂಡಿರುವ ಕಿಶೋರ್ ತಮ್ಮಂದಿಗಿರುವ ಹುಡುಗರಿಗಾಗಿ ಸಿನಿಮಾ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಬಯಸಿದ್ದವರು. ರಂಗ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದ 20 ಯುವಕರು ಅವರ ಜೊತೆಗಿದ್ದರು. ಅವರೆಲ್ಲರನ್ನೂ ಸಿನಿಮಾ ತೆರೆಮೇಲೆ ಒಟ್ಟಿಗೆ ತರಬೇಕೆಂಬ ಅವರ ಆಸೆ ಈ ಚಿತ್ರದ ಮೂಲಕ ಈಡೇರುತ್ತಿದೆ. ನಿರ್ಮಾಣ ಮಾತ್ರವಲ್ಲ, ಕಿಶೋರ್ ಚಿತ್ರದಲ್ಲಿ ಖಳನಾಯಕನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.ಆ್ಯಕ್ಷನ್ ಕಟ್ ಹೇಳುತ್ತಿರುವವರು `ಸಲಗ' ಮತ್ತು `ಇಷ್ಟಾರ್ಥ' ಎಂಬ ಇನ್ನೂ ಬಿಡುಗಡೆಯ ಭಾಗ್ಯ ಕಾಣದ ಚಿತ್ರಗಳನ್ನು ನಿರ್ದೇಶಿಸಿರುವ ಪ್ರಾಣ್. `ರೌಡಿಸಂಗೆ ಕಾಲಿಟ್ಟು, ಅದರಿಂದ ಹೊರಬರುವ ಪ್ರಯತ್ನದಲ್ಲಿ ಹೆಣಗಾಡುವ ಹುಡುಗರ ಕಥೆಯಿದು' ಎಂದರು ಪ್ರಾಣ್.ಬಜನ್ ಬೋಪಣ್ಣ, ಶಿವಕುಮಾರ್, ರೋಹಿತ್, ತ್ರಿಶೂಲ್ ಮತ್ತು ಕೃಷ್ಣ `ಸುಕ್ಕ'ದ ಐವರು ನಾಯಕರು. ಕೃಷ್ಣ ಅವರಿಗಿದು ಮೊದಲ ಅನುಭವ. ಉಳಿದ ನಟರು ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡವರು.ಐವರು ನಾಯಕರಿಗೆ ಮೂವರು ನಾಯಕಿಯರು. ಮಾನಸಿ ಮಧ್ಯಮವರ್ಗದ ಯುವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ಮೊಗ್ಗಿನ ಮನಸ್ಸು', `ನಾಗವಲ್ಲಿ', `ಶಿವಕಾಶಿ', `ಹಾಗೇ ಸುಮ್ಮನೆ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಮಾನಸಿ ಚಿತ್ರರಂಗದಲ್ಲಿ ಕಾಣಿಸಿಕೊಂಡದ್ದು ಕಡಿಮೆ. ಹೊಸ ಮುಖ ದೀಪಿಕಾ ದಾಸ್‌ರದ್ದು ಆಧುನಿಕ ಜೀವನಶೈಲಿಯ ಯುವತಿಯ ಪಾತ್ರ. ಮಮತಾ ರಾವತ್‌ವೇಶ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. `ದಂಡುಪಾಳ್ಯ' ಮತ್ತು `ಪರಾರಿ' ಚಿತ್ರಗಳಲ್ಲಿಯೂ ಅವರು ವೇಶ್ಯೆ ಪಾತ್ರಕ್ಕೆ ಬಣ್ಣಹಚ್ಚಿದ್ದರು.ಐದು ಹಾಡುಗಳು ಚಿತ್ರದಲ್ಲಿದ್ದು ಮಧುರ ನಾಯಿರಿ ಸಂಗೀತ ಹೊಸೆಯುತ್ತಿದ್ದಾರೆ. ಎಂ.ಎಸ್. ಶ್ಯಾಂ ಛಾಯಾಗ್ರಹಣ ಚಿತ್ರಕ್ಕಿದೆ. ಬೆಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸುವುದು ಚಿತ್ರತಂಡದ ಉದ್ದೇಶ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.