ಭಾನುವಾರ, ಮೇ 22, 2022
22 °C

ಸುಖಕರ ಪ್ರಯಾಣ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

‘ಮುಂಗಾರು ಮಳೆ’ಯಿಂದ ‘ಒಲವೇ ಮಂದಾರ’ದವರೆಗಿನ ಗೆದ್ದ ಚಿತ್ರಗಳ ಯಾದಿಯ ಮೇಲೆ ಕಣ್ಣಾಡಿಸಿದರೆ ಎದ್ದುಕಾಣುವ ಸಂಗತಿ ಪಯಣ ಅಥವಾ ಪ್ರಯಾಣ. ನಗರ ನಾಗರಿಕನಾದ ನಾಯಕ ಯಾವುದೋ ಹುಡುಕಾಟದಲ್ಲೋ, ನಾಯಕಿಯನ್ನು ಪಡೆಯಲೋ ಪ್ರಯಾಣ ಹೊರಡುವ ವಸ್ತು ಇತ್ತೀಚಿನ ಚಿತ್ರಗಳಲ್ಲಿ ವ್ಯಾಪಕವಾಗುತ್ತಿದೆ. ಕಥೆಗಿಂತ ಮುಖ್ಯವಾಗಿ ಕಥನಗಳನ್ನು ನೆಚ್ಚಿಕೊಂಡ ತಂತ್ರ ಇದಕ್ಕೆ ಕಾರಣವಿರಬಹುದು.‘ಮುಂಗಾರು ಮಳೆ’ಯನ್ನೇ ಉದಾಹರಣೆಯಾಗಿ ಪರಿಗಣಿಸೋಣ. ಅಲ್ಲಿ ನಾಯಕ ಪರಿಚಯಸ್ಥರ ಮನೆ ಹೆಣ್ಣುಮಗಳ ಮದುವೆಗೆಂದು ಅಮ್ಮನ ಜೊತೆ ಹೊರಡುತ್ತಾನೆ. ಮಾರ್ಗಮಧ್ಯೆಯೇ ಒಂದಿಷ್ಟು ಕಾಕತಾಳೀಯ ಘಟನೆಗಳು ನಡೆಯುತ್ತವೆ. ಅಮ್ಮನ ಜೊತೆಗಿನ ಅವನ ಓತಪ್ರೋತ ಮಾತು, ಹಾದಿಬದಿ ಸಿಗುವ ಮೊಲದೊಟ್ಟಿಗಿನ ಗೆಳೆತನ, ಪ್ರೇಮ, ವಿರಹ, ತಾಕಲಾಟ ಎಲ್ಲವೂ ಅವನ ಆ ಸಣ್ಣ ಪಯಣದ ಭಾಗವಾಗುತ್ತದೆ. ನಿರ್ದೇಶಕ ಯೋಗರಾಜ್ ಭಟ್‌ಗೂ ಪಯಣಕ್ಕೂ ದೊಡ್ಡ ನಂಟು. ಅವರ ‘ಗಾಳಿಪಟ’ದಲ್ಲಿ ಮುಂದುವರೆದಿದ್ದೂ ಇದೇ. ಆದರೆ, ಕಳೆದ ವರ್ಷ ತೆರೆಕಂಡ ‘ಪಂಚರಂಗಿ’ಯಲ್ಲಿ ಈ ಪಯಣದ ಭಿತ್ತಿ ಚಿಕ್ಕದಾಯಿತು. ಇಲ್ಲೂ ನಾಯಕ-ನಾಯಕಿಯ ನಡುವಿನ ಕಥನಕ್ಕೆ ಮದುವೆಯೇ ನೆಪವಾದರೂ ಸುತ್ತಮುತ್ತಲಿನ ಪಾತ್ರಗಳಲ್ಲಿ ನೀತಿ, ತತ್ವ, ಸಂದೇಶ, ತಮಾಷೆ ಎಲ್ಲವೂ ಹರಡಿಕೊಂಡಿದೆ. ಎಲ್ಲಕ್ಕೂ ಹರಿತ ವ್ಯಂಗ್ಯದ ಲೇಪ.ಭಟ್ಟರ ಗೆಳೆಯ ಸೂರಿ ಕೂಡ ಪ್ರಯಾಣಪ್ರಿಯ. ಅವರ ‘ದುನಿಯಾ’ ಚಿತ್ರದ ನಾಯಕನ ಬದುಕೇ ಘಾಟ್ ರಸ್ತೆಯ ತಿರುವಿನ ಪ್ರಯಾಣದಂತಿದೆ. ಕಳೆದ ವರ್ಷ ಬಿಡುಗಡೆಯಾಗಿ ಸಾಕಷ್ಟು ಯಶಸ್ಸು ಕಂಡಿರುವ ‘ಜಾಕಿ’ಯಲ್ಲಿ ಈ ಪಯಣದ ವೇಗ ಇನ್ನೂ ಹೆಚ್ಚಾಗಿದೆ.‘ಸಿನಿಮಾದಲ್ಲಿ ಜರ್ನಿ ಇದ್ದರೆ ಮಜವಾಗಿರುತ್ತದೆ. ನಾವು ಮೈಸೂರಿಗೆ ಹೋಗಿ ಗೆಳೆಯನಿಗೆ ಹಣ ಕೊಟ್ಟು ಬರಲು ಹೊರಡುತ್ತೇವೆ ಎಂದಿಟ್ಟುಕೊಳ್ಳಿ. ನಮ್ಮ ಗುರಿ ಹಣ ಕೊಟ್ಟು ಬರುವುದಷ್ಟೇ ಆಗಿದ್ದರೂ ಪ್ರಯಾಣದ ನಡುವೆ ಅನೇಕ ಅನಿರೀಕ್ಷಿತಗಳು ಎದುರಾಗಬಹುದು. ಅಪರಿಚಿತರು ಪರಿಚಿತರಾಗಬಹುದು. ಯಾರೋ ತುಂಬಾ ಹಚ್ಚಿಕೊಳ್ಳಬಹುದು.ದಿಢೀರನೆ ಯಾವುದೋ ಘಟನೆ ನಡೆದು ಬದುಕಿನ ದಿಕ್ಕೇ ಬದಲಾಗಬಹುದು. ಹಾಗಾಗಿ ಗುರಿಯ ಮಧ್ಯೆ ಬಂದುಹೋಗುವ ಅನಿರೀಕ್ಷಿತ ಸಂಗತಿಗಳು ಪ್ರಯಾಣವನ್ನು ಮಜವಾಗಿಸುತ್ತವೆ. ನಾವು ಸಿನಿಮಾ ಮಾಡುವಾಗಲೂ ಈ ಅನಿರೀಕ್ಷಿತಗಳನ್ನು ನೆಚ್ಚಿಕೊಂಡೇ ಕಥೆ ಹೆಣೆಯುತ್ತೇವೆ. ಜರ್ನಿ ಇಟ್ಟುಕೊಂಡು ಅನೇಕ ಸಿನಿಮಾಗಳು ಬಂದಿವೆ. ಅವುಗಳಲ್ಲಿ ಕೆಲವು ಕ್ಲೀಷೆ ಎನಿಸುವಂತೆ ಮೂಡಿರುವುದೂ ಉಂಟು. ಆದರೆ, ಲವಲವಿಕೆಯಿಂದ ಜರ್ನಿ ಸಿನಿಮಾ ಮಾಡುವುದು ಸವಾಲೇ ಹೌದು’ ಅಂತಾರೆ ಸೂರಿ.ಜೇಕಬ್ ವರ್ಗೀಸ್ ನಿರ್ದೇಶಿಸಿದ ‘ಸವಾರಿ’ ಚಿತ್ರದ ಪ್ರಯಾಣದ ಸುಖವನ್ನು ಆಗ ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಬೋರ್ಡ್ ಮುಖ್ಯಸ್ಥರಾಗಿದ್ದ ಚಂದ್ರಶೇಖರ್ ಕೂಡ ಇಷ್ಟಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.