ಶುಕ್ರವಾರ, ಜೂಲೈ 3, 2020
21 °C

ಸುನಾಮಿಯಿಂದ ಬದುಕಿ ಬಂದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುನಾಮಿಯಿಂದ ಬದುಕಿ ಬಂದವರು

ಬೆಂಗಳೂರು: ‘ಕುಸಿದು ಬಿದ್ದ ನನ್ನ ಮನೆಯಲ್ಲಿದ್ದ ಪಾಸ್‌ಪೋರ್ಟ್ ತೆಗೆದುಕೊಂಡು ಹೊರಗೆ ಬಂದೆ. ಭೂಕಂಪದಿಂದ ಎಲ್ಲವನ್ನೂ ಕಳೆದುಕೊಂಡ ಸುಮಾರು ಅರವತ್ತು ವರ್ಷ ವಯಸ್ಸಿನ ಮಹಿಳೆ ಏಕಾಂಗಿಯಾಗಿ ಕುಳಿತು ತನ್ನ ತಲೆಯನ್ನು ನೆಲಕ್ಕೆ ಬಡಿದುಕೊಳ್ಳುತ್ತಿದ್ದಳು. ಆ ದೃಶ್ಯವನ್ನು ನನ್ನ ಜೀವನದಲ್ಲಿ ಮರೆಯಲಾರೆ’ ಹೀಗೆಂದು ಅನುಭವ ಹೇಳಿಕೊಂಡವರು ಸುನಾಮಿಪೀಡಿತ ಜಪಾನ್‌ನಿಂದ ಸುರಕ್ಷಿತವಾಗಿ ಮನೆಗೆ ಮರಳಿರುವ ದಿನೇಶ್.ಹಾಸನ ಜಿಲ್ಲೆ ಹಿರೀಸಾವೆ ಸಮೀಪದ ಜಿನ್ನೇನಹಳ್ಳಿಯ ದಿನೇಶ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.2000ನೇ ಇಸವಿಯಲ್ಲಿ ಅವರು ಟೋಕಿಯೊದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ಮೈಸೂರು ವಿಶ್ವವಿದ್ಯಾಲಯ ಮತ್ತು ಜಪಾನ್‌ನ ವಿ.ವಿಯಿಂದ ಅವರು ಒಟ್ಟು ಎರಡು ಪಿಎಚ್.ಡಿ ಪಡೆದಿದ್ದಾರೆ. ಎಂ.ಎಸ್ಸಿ ಪದವೀಧರೆ ನವ್ಯಾರಾಣಿ ಅವರನ್ನು 2005ರಲ್ಲಿ ವಿವಾಹವಾಗಿದ್ದ ದಿನೇಶ್, ಜಪಾನ್‌ನ ಸೆಂಡೈನಲ್ಲಿ ನೆಲೆಸಿದ್ದರು. ದಂಪತಿಗೆ ಹತ್ತು ತಿಂಗಳ ಮಗಳಿದ್ದಾಳೆ.‘ಐದು ಅಂತಸ್ತಿನ ನನ್ನ ಮನೆ ಕಚೇರಿಯಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಜಪಾನ್‌ನಲ್ಲಿ ಭೂಕಂಪನ ಸಾಮಾನ್ಯ ಆದರೂ ದುರ್ಘಟನೆ ನಡೆಯುವ ಮೂರು ದಿನಗಳಿಂದ ಉಂಟಾಗುತ್ತಿದ್ದ ಕಂಪನದಿಂದ ಪತ್ನಿ ಭಯಭೀತಳಾಗಿದ್ದಳು. ಮುಂದೆ ಏನೂ ಆಗಬಹುದು ಎಂದು ಆಕೆ ಮೊದಲೇ ಗ್ರಹಿಸಿದಂತಿತ್ತು. ಇದೆಲ್ಲ ಸಾಮಾನ್ಯ ಎಂದು ಭಾವಿಸಿ ನಾನು ಸುಮ್ಮನಿದ್ದೆ’ ಎಂದು ದಿನೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.‘ನನ್ನ ಕಚೇರಿ ಮೂರನೇ ಮಹಡಿಯಲ್ಲಿದೆ. ಘಟನೆ ನಡೆದ ದಿನ ಕಚೇರಿಯ ಕಟ್ಟಡ ಕಂಪಿಸಲಾರಂಭಿಸಿತು. ಕೆಲವೇ ಕ್ಷಣಗಳಲ್ಲಿ ಸಹೋದ್ಯೋಗಿಗಳೆಲ್ಲ ಕಟ್ಟಡದಿಂದ ಕೆಳಗೆ ಬಂದರು. ಸುಮಾರು ಒಂದು ಸಾವಿರ ಜನರು ರಸ್ತೆಯ ಮೇಲಿದ್ದರು. ಭಾರತ ಮೂಲದ ನನ್ನ ಸಹೋದ್ಯೋಗಿಯೊಬ್ಬ ಕಂಪನದಿಂದ ಭಯಗೊಂಡು ಕುರ್ಚಿಯ ಕೆಳಗೆ ಅವಿತಿದ್ದ. ಕೆಳಗೆ ಬಂದಾಗ ಭೂಕಂಪನದ ತೀವ್ರತೆ ಗೊತ್ತಾಯಿತು’ ಎಂದು ಅವರು ಘಟನೆಯನ್ನು ನೆನಪಿಸಿಕೊಂಡರು.‘ಆಗ ಪತ್ನಿಯನ್ನು ಸಂಪರ್ಕಿಸಲು ಯತ್ನಿಸಿದೆ, ಆದರೆ ಸಂಪರ್ಕ ಸಾಧನಗಳೆಲ್ಲ ಕೆಟ್ಟು ಹೋಗಿದ್ದರಿಂದ ಸಾಧ್ಯವಾಗಲಿಲ್ಲ. ಆ ನಂತರ ಕಷ್ಟಪಟ್ಟು ಮನೆಯ ಸಮೀಪ ಬಂದೆ. ನೂರಾರು ಮಂದಿ ರಸ್ತೆಯಲ್ಲಿ ಕುಳಿತಿದ್ದರು. ಅವರ ಜತೆ ಪತ್ನಿಯು ಕುಳಿತಿದ್ದಳು.ಆಕೆ ಕಾಲಿಗೆ ಚಪ್ಪಲಿಯನ್ನೂ ಹಾಕಿರಲಿಲ್ಲ. ನನ್ನ ಪುಟ್ಟ ಕಂದಮ್ಮನ ಮೈ ಮೇಲೆ ಸರಿಯಾಗಿ ಬಟ್ಟೆ ಇರಲಿಲ್ಲ. ಪತ್ನಿಗೆ ನನ್ನ ಜಾಕೆಟ್ ನೀಡಿದೆ. ಬಳಿಕ ಮಗಳಿಗೆ ರಸ್ತೆಯಲ್ಲೇ ಹಾಲುಣಿಸಬೇಕಾಯಿತು. ಆ ವೇಳೆಗಾಗಲೇ ಅನಾಹುತದ ಬಗ್ಗೆ ಸರ್ಕಾರ ಅಧಿಕೃತ ಘೋಷಣೆ ಮಾಡಿತ್ತು’ ಎಂದರು.‘ಮೊದಲು ನಮ್ಮನ್ನು ನಿರಾಶ್ರಿತರ ಕೇಂದ್ರದಲ್ಲಿಟ್ಟಿದ್ದರು. ಭಾರತೀಯ ರಾಯಭಾರ ಕಚೇರಿ ಬಹಳ ತಡವಾಗಿ ನಮಗೆ ಸ್ಪಂದಿಸಿತು. ನಾಲ್ಕು ದಿನಗಳ ನಂತರ ನಮ್ಮನ್ನು ಅವರು ಹೋಟೆಲ್‌ವೊಂದಕ್ಕೆ ಕರೆದೊಯ್ದರು. ಆ ನಂತರ ನಾವು ಭಾರತಕ್ಕೆ ಬಂದೆವು’ ಎಂದು ದಿನೇಶ್ ಹೇಳಿದರು.‘ಭವಿಷ್ಯದಲ್ಲಿ ಜಪಾನ್‌ಗೆ ಹೋಗಬಹುದು. ಆದರೆ ಅಲ್ಲಿ ನೆಲೆಸುವ ಉದ್ದೇಶವಿಲ್ಲ. ಹೈದರಾಬಾದ್‌ನಲ್ಲಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೇರಿದ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವ ಇಚ್ಛೆ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.