ಮಂಗಳವಾರ, ಏಪ್ರಿಲ್ 13, 2021
29 °C

ಸುನಿಲ್‌ಗೆ ಸುವರ್ಣಾವಕಾಶ

ಮಹಮ್ಮದ್ ನೂಮಾನ್ Updated:

ಅಕ್ಷರ ಗಾತ್ರ : | |

ಫಿಫಾ ಶ್ರೇಯಾಂಕದಲ್ಲಿ ಭಾರತದ ಈಗಿನ ಸ್ಥಾನ 163. ಯೂರೋಪಿನ ಫುಟ್‌ಬಾಲ್ ಶಕ್ತಿ ಎನಿಸಿರುವ ಪೋರ್ಚುಗಲ್ ತಂಡ ಶ್ರೇಯಾಂಕನಲ್ಲಿ ಐದನೇ ಸ್ಥಾನದಲ್ಲಿದೆ. ಈ ಎರಡು ದೇಶಗಳಲ್ಲಿ ಫುಟ್‌ಬಾಲ್ ಚಟುವಟಿಕೆ ಹೇಗಿದೆ ಎಂಬುದು ಫಿಫಾ ಶ್ರೇಯಾಂಕನಿಂದ ತಿಳಿಯಬಹುದು. ಕಳೆದ ವಾರ ನಡೆದ ಬೆಳವಣಿಗೆಯೊಂದರಲ್ಲಿ ಫುಟ್‌ಬಾಲ್ ಕ್ರೀಡೆಯಲ್ಲಿ ಭಾರತ ಹಾಗೂ ಪೋರ್ಚುಗಲ್ ನಡುವೆ ಕೊಂಡಿಯೊಂದು ಬೆಸೆದುಕೊಂಡಿತು.

ರಾಷ್ಟ್ರೀಯ ತಂಡದ ನಾಯಕ ಸುನಿಲ್ ಚೆಟ್ರಿ `ಸ್ಪೋರ್ಟಿಂಗ್ ಲಿಸ್ಬನ್ ಫುಟ್‌ಬಾಲ್ ಕ್ಲಬ್~ ಎಂದೇ ಪ್ರಸಿದ್ಧವಾಗಿರುವ ಪೋರ್ಚುಗಲ್‌ನ `ಸ್ಪೋರ್ಟಿಂಗ್ ಕ್ಲಬ್ ಡಿ ಪೋರ್ಚುಗಲ್~ ಪರ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಅವರು ಕ್ಲಬ್‌ನ `ಬಿ~ ತಂಡಕ್ಕಾಗಿ ಆಡುವರು. ಚೆಟ್ರಿ ವೃತ್ತಿಜೀವನದಲ್ಲಿ ಇದೊಂದು ಪುಟ್ಟ ಹೆಜ್ಜೆ ಎನ್ನಬಹುದು. ಆದರೆ ಭಾರತದ ಫುಟ್‌ಬಾಲ್ ಮಟ್ಟಿಗೆ ಇದು ಬಲುದೊಡ್ಡ ಸಾಧನೆ ಎಂದು ಬಣ್ಣಿಸಲಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲೂಯಿಸ್ ಫಿಗೊ ಅವರಂತಹ ಖ್ಯಾತ ಆಟಗಾರರಿದ್ದಂತಹ ಕ್ಲಬ್‌ಗೆ ಆಡುವ ಅವಕಾಶ ಚೆಟ್ರಿಗೆ ದೊರೆತಿದೆ. ಇತ್ತೀಚೆಗೆ ನಡೆದ ಯೂರೊ ಫುಟ್‌ಬಾಲ್ ಚಾಂಪಿಯನ್‌ಷಿಪ್ ವೇಳೆ ಪೋರ್ಚುಗಲ್ ತಂಡದಲ್ಲಿದ್ದ 23 ಆಟಗಾರರಲ್ಲಿ 11 ಮಂದಿ ಈ ಹಿಂದೆ ಲಿಸ್ಬನ್ ಕ್ಲಬ್ ಪರ ಆಡಿದ್ದವರು.

ಪೋರ್ಚುಗಲ್ ದೇಶದ  ಕ್ಲಬ್‌ವೊಂದು ಫಿಫಾ ಶ್ರೇಯಾಂಕನಲ್ಲಿ 163ನೇ ಸ್ಥಾನದಲ್ಲಿರುವ ದೇಶದ ಆಟಗಾರನ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ. ಭಾರತ ತಂಡದ ನಾಯಕ ಈ ಹಿಂದೆ ಕೊವೆಂಟ್ರಿ, ಕ್ವೀನ್ಸ್ ಪಾರ್ಕ್ ರೇಂಜರ್ಸ್ ಮತ್ತು ಗ್ಲಾಸ್ಗೋ ರೇಂಜರ್ಸ್ ತಂಡಗಳ ಟ್ರಯಲ್ಸ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಅವರಿಗೆ ನಿರೀಕ್ಷಿತ ಯಶಸ್ಸು ಲಭಿಸಿರಲಿಲ್ಲ.

ಚೆಟ್ರಿ 2009 ರಲ್ಲಿ ಪ್ರೀಮಿಯರ್ ಲೀಗ್ ತಂಡ ಕ್ವೀನ್ಸ್ ಪಾರ್ಕ್ ರೇಂಜರ್ಸ್ ಜೊತೆ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ವರದಿಯಾಗಿತ್ತು. ಆದರೆ ಬ್ರಿಟಿಷ್ ಸರ್ಕಾರ ಅವರಿಗೆ ಆಡಲು ಅನುಮತಿ ನಿರಾಕರಿಸಿತ್ತು. ಏಕೆಂದರೆ ಭಾರತ ಫಿಫಾ ಶ್ರೇಯಾಂಕನಲ್ಲಿ 70ರ ಒಳಗಿನ ಸ್ಥಾನದಲ್ಲಿಲ್ಲ ಎಂಬುದು ಇದಕ್ಕೆ ಕಾರಣ. ಇದರಿಂದ ಚೆಟ್ರಿ ನಿರಾಸೆ ಹೊಂದಿದ್ದರು.

ಅದೇ ರೀತಿ, 2010ರ ಮಾರ್ಚ್‌ನಲ್ಲಿ ಮೇಜರ್ ಲೀಗ್ ಸಾಕರ್ (ಎಂಎಲ್‌ಎಸ್) ತಂಡ ಕಾನ್ಸಾಸ್ ಸಿಟಿ ವಿಜಾರ್ಡ್ ಸೇರಿದ್ದರು. ಆದರೆ ಅವರಿಗೆ ಲೀಗ್‌ನ ಒಂದೂ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿರಲಿಲ್ಲ. ಇದೀಗ ವಿದೇಶದಲ್ಲಿ ಮತ್ತೊಮ್ಮೆ  ಸಾಮರ್ಥ್ಯ ತೋರಿಸುವ ಅವಕಾಶ 27ರ ಹರೆಯದ ಚೆಟ್ರಿಗೆ ಒಲಿದಿದೆ. `ಬಿ~ ತಂಡದಲ್ಲಿ ಒಂದು ವರ್ಷದ ಅವಧಿಯಲ್ಲಿ ಪ್ರಭಾವಿ ಪ್ರದರ್ಶನ ನೀಡಿದರೆ ಅವರನ್ನು ಕ್ಲಬ್‌ನ ಪ್ರಧಾನ ತಂಡಕ್ಕೆ ಪರಿಗಣಿಸುವ ಸಾಧ್ಯತೆಯಿದೆ.

ಲಿಸ್ಬನ್ ತಂಡ ಚೆಟ್ರಿಗೆ ಎಷ್ಟು ಸಂಭಾವನೆ ನೀಡಲಿದೆ ಎಂಬುದು ಬಹಿರಂಗವಾಗಿಲ್ಲ. ಐ-ಲೀಗ್ ತಂಡ ಮೋಹನ್ ಬಾಗನ್ ಜೊತೆಗಿನ ಒಪ್ಪಂದವನ್ನು ಚೆಟ್ರಿ ನವೀಕರಿಸಿರಲಿಲ್ಲ. ಈ ಕಾರಣ ಇಲ್ಲಿ `ಟ್ರಾನ್ಸ್‌ಫರ್ ಶುಲ್ಕ~ದ ಪ್ರಶ್ನೆ ಏಳುವುದಿಲ್ಲ. ಪೋರ್ಚುಗಲ್‌ನಲ್ಲಿ ಪ್ರಸಕ್ತ ಫುಟ್‌ಬಾಲ್ ಋತು ಜುಲೈ 15ಕ್ಕೆ ಆರಂಭವಾಗಲಿದೆ. ಈ ವೇಳೆಗೆ ಚೆಟ್ರಿ ತಂಡ ಸೇರಿಕೊಳ್ಳುವರು.

ಲಾಭ ಇದೆಯೇ?: ಚೆಟ್ರಿ ಪೋರ್ಚುಗಲ್ ಕ್ಲಬ್ ಪರ ಆಡಿದರೆ ಭಾರತದ ಫುಟ್‌ಬಾಲ್‌ಗೆ ಏನಾದರೂ ಲಾಭ ಇದೆಯೇ ಎಂಬ ಪ್ರಶ್ನೆ ಏಳುತ್ತದೆ. ಈ ಹಿಂದೆ ಬೈಚುಂಗ್ ಭುಟಿಯಾ ಇದೇ ರೀತಿ ವಿದೇಶದ ಕ್ಲಬ್‌ಗಳಿಗೆ ಆಡಿದ್ದರು. ಇದರಿಂದ ದೇಶದ ಫುಟ್‌ಬಾಲ್‌ಗೆ ಹೇಳಿಕೊಳ್ಳುವಂತಹ ಲಾಭ ಉಂಟಾಗಿಲ್ಲ.

ಭುಟಿಯಾ 1999 ರಿಂದ 2001ರ ವರೆಗೆ ಇಂಗ್ಲೆಂಡ್‌ನ ಗ್ರೇಟರ್ ಮ್ಯಾಂಚೆಸ್ಟರ್‌ನ `ಬರಿ~ ಕ್ಲಬ್‌ನ್ನು ಪ್ರತಿನಿಧಿಸಿದ್ದರು. ಆ ಮೂಲಕ ಯೂರೋಪಿನ ಕ್ಲಬ್ ಪರ ವೃತ್ತಿಪರ ಫುಟ್‌ಬಾಲ್ ಆಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಆದರೆ ಅವರಿಗೆ ಯಶಸ್ಸಿನ ಹಾದಿಯಲ್ಲಿ ಸಾಗಲು ಆಗಲಿಲ್ಲ. ಮತ್ತೆ ಭಾರತದಲ್ಲೇ ಆಡಬೇಕಾಯಿತು. 2003 ರಲ್ಲಿ ಮಲೇಷ್ಯದ ಪೆರಾಕ್ ಎಫ್‌ಎ ಪರ ಕೆಲಕಾಲ ಆಡಿದ್ದನ್ನು ಬಿಟ್ಟರೆ, ವಿದೇಶದ ಕ್ಲಬ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ.

ಚೆಟ್ರಿ ತಮಗೆ ಲಭಿಸಿದ ಅವಕಾಶವನ್ನು ಬಳಸಿಕೊಂಡು ಇನ್ನಷ್ಟು ಎತ್ತರಕ್ಕೇರಲು ಪ್ರಯತ್ನಿಸಬೇಕು. ಅದೇ ರೀತಿ ಭಾರತದ ಮತ್ತಷ್ಟು ಯುವ ಆಟಗಾರರಿಗೆ ಇಂತಹ ಅವಕಾಶ ಲಭಿಸಿದರೆ ಇನ್ನೂ ಒಳ್ಳೆಯದು.

ಭಾರತದ ಮಾರುಕಟ್ಟೆಯ ಮೇಲೆ ಕಣ್ಣು: ಸುನಿಲ್ ಚೆಟ್ರಿಗೆ ಪೋರ್ಚುಗಲ್ ಕ್ಲಬ್ ಪರ ಆಡುವ ಅವಕಾಶ ದೊರೆತದ್ದು ದೇಶದ ಫುಟ್‌ಬಾಲ್ ಪಂಡಿತರು ಹಾಗೂ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಫುಟ್‌ಬಾಲ್ ಅಭಿಮಾನಿಯೊಬ್ಬ `ಬ್ಲಾಗ್~ವೊಂದರಲ್ಲಿ, `ಪೋರ್ಚುಗಲ್ ತಂಡದ ಬಳಿ ಈಗ ಹಣವಿಲ್ಲ. ಕ್ರೀಡೆಯನ್ನು ಉತ್ತೇಜಿಸಲು ಅವರಿಗೆ ಹಣದ ಅಗತ್ಯವಿದೆ. ಪೋರ್ಚುಗೀಸರು ಹಿಂದೆ ಭಾರತದಲ್ಲಿ ವ್ಯಾಪಾರ ಮಾಡಿ ಸಾಕಷ್ಟು ಸಂಪತ್ತನ್ನು ತಮ್ಮ ದೇಶಕ್ಕೆ ಕೊಂಡೊಯ್ದಿದ್ದರು. ಇದೀಗ ಅಲ್ಲಿನ ಫುಟ್‌ಬಾಲ್ ಕ್ಲಬ್‌ಗಳು ಭಾರತದ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ~ ಎಂದು ಪ್ರತಿಕ್ರಿಯಿಸಿದ್ದಾನೆ.

ಈ ಅಭಿಪ್ರಾಯದಲ್ಲಿ ಸತ್ಯವೂ ಅಡಗಿದೆ. ಯೂರೋಪಿನ ಪ್ರಮುಖ ಕ್ಲಬ್‌ಗಳು ಏಷ್ಯಾವನ್ನು ಈಗಾಗಲೇ ತನ್ನ ಮಾರುಕಟ್ಟೆಯನ್ನಾಗಿಸಿವೆ. ಜಪಾನ್ ಮತ್ತು ಚೀನಾದಲ್ಲಿ ತನ್ನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿವೆ. ಲಿಸ್ಬನ್ ಕ್ಲಬ್ ಭಾರತದಲ್ಲಿ `ಮರ್ಚಂಡೈಸ್~ ಒಂದರ ಮೂಲಕವೇ ಸಾಕಷ್ಟು ಹಣ ಸಂಪಾದಿಸಲು ಸಾಧ್ಯ.

ಕಳೆದ ಋತುವಿನಲ್ಲಿ ಯೂರೋಪ್ ಲೀಗ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಸ್ಪೋರ್ಟಿಂಗ್ ಲಿಸ್ಬನ್ ನಷ್ಟದಲ್ಲಿದೆ. ಕ್ಲಬ್‌ನ ಅಧ್ಯಕ್ಷ ಲೂಯಿಸ್ ಗಾಡಿನೊ ಲೋಪೆಜ್ ಕಳೆದ ತಿಂಗಳು ಭಾರತಕ್ಕೆ ಆಗಮಿಸಿದ್ದರು. ಇಲ್ಲಿನ ಹೂಡಿಕೆದಾರರನ್ನು ಭೇಟಿ ಮಾಡುವುದು ಈ ಭೇಟಿಯ ಉದ್ದೇಶವಾಗಿತ್ತು ಎಂಬುದು ರಹಸ್ಯವಾಗಿ ಉಳಿದಿಲ್ಲ. ಭುಟಿಯಾ ವಿದಾಯ ಹೇಳಿರುವ ಕಾರಣ ಈಗ ಭಾರತದ  ಫುಟ್‌ಬಾಲ್‌ನ   `ಐಕಾನ್~ ಆಗಿ ಕಾಣುತ್ತಿರುವುದು ಚೆಟ್ರಿ ಮಾತ್ರ. ಆದ್ದರಿಂದ ಅವರ ನೆರವಿನಿಂದ ಲಿಸ್ಬನ್ ಕ್ಲಬ್ ಭಾರತದಲ್ಲಿ ವಾಣಿಜ್ಯಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಹಾಕಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.