ಭಾನುವಾರ, ಫೆಬ್ರವರಿ 28, 2021
30 °C

ಸುಪ್ರೀಂ ಕೋರ್ಟ್ ತೀರ್ಪಿಗೆ ವಿಷಾದ ಕನ್ನಡ ಮಾಧ್ಯಮ ಕಡ್ಡಾಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್ ತೀರ್ಪಿಗೆ ವಿಷಾದ ಕನ್ನಡ ಮಾಧ್ಯಮ ಕಡ್ಡಾಯವಿಲ್ಲ

ಕೋಲಾರ: ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೇ ನೀಡಬೇಕು ಎಂದು ಹೇಳಿದ್ದ ರಾಜ್ಯ ಸರ್ಕಾರದ ಭಾಷಾ ಮಾಧ್ಯಮ ನೀತಿಯನ್ನು ರದ್ದುಗೊಳಿಸಿದ್ದ ರಾಜ್ಯ ಹೈಕೋರ್ಟ್‌ ತೀರ್ಪನ್ನು ಮಾನ್ಯ ಮಾಡಿ ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ತೀರ್ಪಿಗೆ ಜಿಲ್ಲೆಯಲ್ಲಿ ವಿಷಾದ ವ್ಯಕ್ತವಾಗಿದೆ.ಭಾಷಾ ಮಾಧ್ಯಮ ನೀತಿಯನ್ನು ಖಾಸಗಿ ಶಾಲೆಗಳ ಮೇಲೆ ಹೇರಲು ಬರುವುದಿಲ್ಲ. ಕನ್ನಡದಲ್ಲೇ ಶಿಕ್ಷಣ ನೀಡಬೇಕು ಎಂಬ ಸರ್ಕಾರದ ಆದೇಶ ಸರಿಯಲ್ಲ ಎಂದು ರಾಜ್ಯ ಹೈಕೋರ್ಟ್ 2008ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ. ಮಕ್ಕಳ ಶಿಕ್ಷಣ ಮಾಧ್ಯಮ­ವನ್ನು ನಿರ್ಧರಿಸುವುದು ಪೋಷಕರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದೆ.ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ರಾಜ್ಯ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಗಳ ವಿಚಾರಣೆ ನಡೆಸಿದ ಸಾಂವಿಧಾನಿಕ ಪೀಠವು ಕನ್ನಡ ಭಾಷೆ ಕಡ್ಡಾಯವಲ್ಲ ಎಂದು ತೀರ್ಪು ನೀಡಿದೆ.ವಿಷಾದನೀಯ: ಭಾಷಾ ನೀತಿ ಬಗೆಗಿನ ತೀರ್ಪು ಕನ್ನಡಿಗರಿಗೆ ವಿಷಾದನೀಯ ಘಟನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.ರಾಜ್ಯ ಸರ್ಕಾರ ಕನ್ನಡ ಭಾಷೆ ಬಗೆಗಿನ ಕಾಳಜಿಯನ್ನು ಗಟ್ಟಿಗೊಳಿಸ­ಬೇಕಾಗಿದೆ. ತಮಿಳುನಾಡಿನ ಭಾಷಾ ಪ್ರೇಮವನ್ನು ಮಾದರಿಯನ್ನಾಗಿಸಿ­ಕೊಳ್ಳ­ಬೇಕಾಗಿದೆ ಎಂದಿದ್ದಾರೆ.ಮುಚ್ಚುತ್ತಿರುವ ಕನ್ನಡ ಶಾಲೆಗಳು ಉಳಿಯಬೇಕಾದರೆ ಪ್ರಥಮ ಭಾಷೆ ಕನ್ನಡ­ವನ್ನು 1ರಿಂದ 7ನೇ ತರಗತಿ­ವರೆಗೂ ಓದುವವರಿಗೆ ಉದ್ಯೋಗ ಮೀಸ­ಲಾತಿಯಲ್ಲಿ ಶೇಕಡ 50 ರಷ್ಟು ನೀಡಬೇಕು ಎಂದು ಅವರು ಆಗ್ರಹಿ­ಸಿದ್ದಾರೆ.ಜನಪ್ರತಿನಿಧಿಗಳಿಗೆ ತಾಕತ್ತಿಲ್ಲವೇ?:  1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆಯಿತು. ಅದು ಗಣರಾಜ್ಯದ ಉದಯ. ನಂತರದ ಹೆಜ್ಜೆ ಭಾಷಾ­ವಾರು ಶಿಕ್ಷಣ ಮಾಧ್ಯಮವಾಗಬೇಕಿತ್ತು. ಆಯಾ ರಾಜ್ಯದಲ್ಲಿ ಆಯಾ ರಾಜ್ಯ­ಭಾಷೆಯಲ್ಲಿ ಶಿಕ್ಷಣ ದೊರಕುವ ವ್ಯವಸ್ಥೆ ರೂಪುಗೊಳ್ಳಬೇಕಿತ್ತು. ಇದುವರೆಗೂ ಅಂಥ ವ್ಯವಸ್ಥೆ ಜಾರಿಗೆ ಬಂದಿರಲಿಲ್ಲ. ಸುಪ್ರೀಂ ಕೋರ್ಟಿನ ಆದೇಶದಿಂದ ಈ ವ್ಯವಸ್ಥೆ ಜಾರಿಗೆ ಬಾರದೆ ಹೋಗುವ ಸನ್ನಿವೇಶ ನಿರ್ಮಾಣವಾಗಿದೆ ಎನ್ನು­ತ್ತಾರೆ ವಿಮರ್ಶಕ ಡಾ.ಚಂದ್ರಶೇಖರ ನಂಗಲಿ.ಭಾಷಾವಾರು ಪ್ರಭುತ್ವದ ಒಂದು ಅಂಗವಾದ ಶಿಕ್ಷಣ ಮಾಧ್ಯಮಕ್ಕೆ ಆದ್ಯತೆ ದೊರಕಬೇಕು. ಭಾಷೆ ಜ್ಯೋತಿಯಾಗು­ವುದು ಎಂದರೆ ಜನತಾಶಕ್ತಿ­ಯಾಗುವುದು ಎಂದೇ ಅರ್ಥ.ತಮಿಳುನಾಡಿನ ಜನಪ್ರತಿನಿಧಿಗಳಿಗೆ ಇರುವ ತಾಕತ್ತು ಕನ್ನಡ ನಾಡಿದ ಜನಪ್ರತಿನಿಧಿಗಳಿಗೆ ಇಲ್ಲವೇ? ಇವರೆಲ್ಲರೂ ಸೇರಿ ಒಂದು ಖಚಿತ, ಗಟ್ಟಿ ನಿಲುವನ್ನು ಪ್ರಕಟಿಸಲು ಸಾಧ್ಯವಿಲ್ಲವೇ? ತಮಿಳುನಾಡಿನಲ್ಲಿ ದ್ವಿಭಾಷಾ ಸೂತ್ರದ ಅಡಿ ಮಕ್ಕಳು ತಮಿಳು ಮತ್ತು ಇಂಗ್ಲಿಷ್‌ ಮಾತ್ರ ಕಲಿಯುತ್ತಾರೆ. ಆದರೆ ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದಡಿ ಅಂಥ ವಾತಾವರಣವೇ ಇಲ್ಲ ಎಂಬುದು ಅವರ ನುಡಿ. ಒಂದೇ ಸಂವಿಧಾನವಿರುವ ದೇಶದಲ್ಲಿ ಎರಡು ರಾಜ್ಯಗಳಲ್ಲಿ ಭಿನ್ನಭಾಷಾ ಸೂತ್ರ ಇರುವುದು ಯಾವ ನ್ಯಾಯ ಎನ್ನುತ್ತಾರೆ ಅವರು.ತೀರ್ಪು ಸಂವಿಧಾನಬದ್ಧವೇ?: ಸುಪ್ರೀಂ ಕೋರ್ಟ್ ಸಂವಿಧಾನಬದ್ಧವಾಗಿ ತೀರ್ಪು ಕೊಟ್ಟಿದೆಯೇ ಎಂಬುದನ್ನು ಈ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾಗಿದೆ. ತಮಿಳುನಾಡು ರಾಜ್ಯ ಭಾಷೆ ತಮಿಳು. ಆದರೆ ಕರ್ನಾಟಕದಲ್ಲಿ ರಾಜ್ಯಭಾಷೆ ಕನ್ನಡವಾದರೂ ಜನರ ಭಾಷೆ ಸಂಪೂರ್ಣವಾಗಿ ಕನ್ನಡ ಆಗಿಲ್ಲ. ಕನ್ನಡ ನುಡಿ ಎಂಬುದು ಜನ ಸಮುದಾಯದ ಭವಿಷ್ಯದ ಬೆಳಕಾಗಬೇಕು. ಅದಾಗ­ದಿದ್ದರೆ ಈ ದೇಶವನ್ನು ತೊರೆದು ನಾವು ಬೇರೆ ಕಡೆ ಹೋಗಬೇಕಾದ ಸನ್ನಿವೇಶ ನಿರ್ಮಾಣವಾಗುವ ಆತಂಕವೂ ನಿರ್ಮಾಣವಾಗಬಲ್ಲುದು ಎನ್ನುತ್ತಾರೆ ವಿಮರ್ಶಕ ಡಾ.ಡಿ.ಡಾಮಿನಿಕ್.ಕನ್ನಡ ಎಂಬುದು ಇಂಗ್ಲಿಷ್‌ಗೆ ಒತ್ತೆ ಇಟ್ಟ ಭಾಷೆಯೇ? ಅಕ್ಕ ಪಕ್ಕದ ತೆಲುಗು, ತಮಿಳು ಭಾಷೆಯ ಜೊತೆಗೆ ನಂಟು ಏರ್ಪಡದಿದ್ದರೆ ಕನ್ನಡ, ಇಂಗ್ಲಿಷ್‌ ಜೊತೆ ಹೇಗೆ ನಂಟು ನಿರ್ಮಾಣವಾಗುತ್ತದೆ ಎಂಬುದು ಅವರ ಪ್ರಶ್ನೆ.ಸುಪ್ರೀಂ ಕೋರ್ಟಿನ ತೀರ್ಪು ನಿಜಕ್ಕೂ ಬೇಸರದ ಸಂಗತಿ. ಯಾವುದೇ ರಾಜ್ಯದಲ್ಲಿ ಅಲ್ಲಿನ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಅಲ್ಲಿನ ಮಕ್ಕಳ ಬೆಳವಣಿಗೆ ಉತ್ತಮವಾಗಿರುತ್ತದೆ. ಭಾಷಾ ಪ್ರಭುತ್ವ ಎಂಬುದಕ್ಕೂ ನಿಜ­ವಾದ ಅರ್ಥ ದೊರಕುತ್ತದೆ ಎನ್ನುತ್ತಾರೆ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ.ಶಿಕ್ಷಣ ಮಾಧ್ಯಮದ ಕುರಿತ ಈ ಪ್ರಕರಣ ಇಡೀ ದೇಶದಲ್ಲೇ ಅನನ್ಯ­ವಾದದ್ದು. ರಾಜ್ಯಮಟ್ಟದ ಸಮ್ಮೇಳನ­ವನ್ನು ಕೋಲಾರದಲ್ಲಿ ಇತ್ತೀಚೆಗೆ ಎಸ್‌ಎಫ್‌ಐ ನಡೆಸಿದ್ದ ಸಂದರ್ಭದಲ್ಲೇ, ಮಾತೃಭಾಷೆಯಲ್ಲೇ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಲು ನಿರ್ಣಯಿಸಲಾಗಿತ್ತು. ಈಗ ಸುಪ್ರೀಂ ಕೋರ್ಟ್ ತೀರ್ಪು ನಿರಾಶೆ ಮೂಡಿಸಿದೆ. ಈಗಲೂ ಸರ್ಕಾರ ಸುಪ್ರೀಂ ಕೋರ್ಟಿನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮನವಿ ಸಲ್ಲಿಸಬೇಕು ಎಂಬುದು ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಾಸುದೇವರೆಡ್ಡಿ ಅವರ ಆಗ್ರಹ.ಕರ್ನಾಟಕದಲ್ಲಿ ಕನ್ನಡದ ಪರವಾಗಿ ಮಾತನಾಡುವುದು ಎಂದರೆ ಎಲ್ಲ ಭಾರತೀಯ ಭಾಷೆಗಳ ಬಗ್ಗೆ ಮಾತನಾಡುವುದು ಎಂದೇ ಅರ್ಥ. ಸರ್ಕಾರ ಕೂಡಲೇ ಭಾಷಾ ತಜ್ಞರು, ಲೇಖಕರು, ಹೋರಾಟಗಾರರೊಂದಿಗೆ ಚರ್ಚಿಸಬೇಕು. ಇದೇ ವೇಳೆ, ಭಾಷಾ ಮಾಧ್ಯಮದ ಕುರಿತು ರಾಷ್ಟ್ರೀಯ ನೀತಿಯನ್ನು ರೂಪಿಸಿಕೊಳ್ಳುವುದು ಅಗತ್ಯ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಎಂಬುದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ಅವರ ಅಭಿಪ್ರಾಯ,ತೀರ್ಪನ್ನು ಮತ್ತೆ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಬೇಕು. ಇದೇ ವೇಳೆ ಕನ್ನಡ ಭಾಷಾ ಮಾಧ್ಯಮ ಪರವಾದ ಹೋರಾಟವೂ ನಡೆಯಬೇಕು ಎನ್ನುತ್ತಾರೆ ಅವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.