ಬುಧವಾರ, ಮೇ 12, 2021
27 °C

ಸುಮಧುರ ಪ್ರಸ್ತುತಿಗಳ ಸುಖವು

ಡಾ. ಎಂ. ಸೂರ್ಯ ಪ್ರಸಾದ್ Updated:

ಅಕ್ಷರ ಗಾತ್ರ : | |

ಶ್ರೀ ಶೇಷಾದ್ರಿಪುರಂ ರಾಮಸೇವಾಸಮಿತಿಯ 64ನೆಯ ರಾಮನವಮಿ ಸಂಗೀತೋತ್ಸವದಲ್ಲಿ ಶನಿವಾರ ತಮ್ಮ ಕಲಾ ಸಂಪದ್ಭರಿತ ಗಾಯನದ ಮೂಲಕ ಯುವ ಗಾಯಕ ಎಸ್. ಸಾಕೇತರಾಮನ್ ಮನಸೂರೆಗೊಂಡರು. ಶ್ರೇಷ್ಠ ಪಿಟೀಲುವಾದಕರೂ ಕೃತಿಕಾರರೂ ಆಗಿರುವ ಲಾಲ್‌ಗುಡಿ ಜಯರಾಮನ್ ಅವರಿಂದ ತರಬೇತಿಗೊಂಡಿರುವ ಸಾಕೇತರಾಮನ್ ಗಾಯನದಲ್ಲಿ ಸೂಕ್ಷ್ಮ ವಿವರಗಳು ಸುಲಲಿತವಾಗಿ ಹೊಮ್ಮಿದವು.

 

ಅವರ ಅಭಿವ್ಯಕ್ತಿಯ ಶೈಲಿ ಮತ್ತು ಧ್ವನಿಯ ಏರಿಳಿತ ಅಥವಾ ಮಾರ್ಪಾಟುಗಳು ಒಂದೆರಡು ಬಾರಿ ಅಸಹಜ ಎಂದೆನಿಸಿದ್ದೂ ಉಂಟು. ಆದರೆ ಅದು ಒಟ್ಟಾರೆ ಕಛೇರಿಗೆ ಕಳಂಕಪ್ರಾಯವಾಗಲಿಲ್ಲ. ಹಾಡಲಾಗುವ ರಚನೆಗಳ ಸಾಹಿತ್ಯದ ಸ್ಪಷ್ಟತೆ ಹಾಗೂ ಅರ್ಥಪೂರ್ಣತೆಯ ಕಡೆಗೆ ಗಾಯಕರು ಮತ್ತಷ್ಟ ಗಮನ ಹರಿಸಿದರೆ ಒಳಿತು. ತಮ್ಮ ಯೌವನಾವಸ್ಥೆಯಲ್ಲೇ ಅವರು ಸಾಕಷ್ಟು ಪಾಂಡಿತ್ಯ, ಪರಿಣತಿ ಸಾಧಿಸಿದ್ದಾರೆ.ಅವರ ಗಾಯನದಲ್ಲಿ ಭಾವದ ಛಾಯೆಯನ್ನು ಹೃದಯಕ್ಕೆ ಕೊಂಡೊಯ್ಯಬಲ್ಲ ಶಕ್ತಿ ಇತ್ತು. ಅದೊಂದು ರಸ ಕಾಣಿಕೆ. ಉತ್ತಮ ಚಿಂತನದಿಂದ ವಿಸ್ತಾರಗೊಂಡು ನಮ್ಮನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತು. ಕಷ್ಟಸಾಧ್ಯವಾದ ರಾಗಗಳು ಮತ್ತು ಲಯ ವ್ಯವಹಾರಗಳ ಸತ್ವ ವೈಪುಲ್ಯಗಳನ್ನು ಅವರು ಸಮೀಕ್ಷಿಸಿದರು.ತುಂಬು ಹೊಳೆಯಂತೆ ಮೊರೆಯುವ, ಸಣ್ಣ ಕಾಲುವೆಯಂತೆ ಅಲ್ಲಲ್ಲಿ ನುಸುಳುವ ವಿವಿಧ ಲಯ ಮಾದರಿಗಳ ಸ್ವರಗಳು ರಸಾಸ್ವಾದವನ್ನು ಒದಗಿಸಿದವು. ಹಾಡಿದ ರಾಗಗಳು ಮತ್ತು ಕೃತಿಗಳ ಅಂತರ್ನಿಹಿತವಾದ ಶಕ್ತಿಯ ಪ್ರಭಾವ ಮತ್ತು ಅವರ ತೋಲನ ದಕ್ಷತೆಯಿಂದ ಕಲಾಪ್ರೇಮಿಗಳ ನಿರೀಕ್ಷೆ ಮೀರಿ ಯಶ ಸಾಧಿಸಿದರು.ರಾಗವನ್ನು ಸೃಜಿಸಿ ಅದು ಹರಿಯುವ ದಿಕ್ಕನ್ನು ಹರಿಯಬೇಕಾದ ದಾರಿಯನ್ನು ನಿರ್ಣಯಿಸುವ ಚೇತನಾ ಶಕ್ತಿ ಅವರಲ್ಲಿ ತುಂಬಿತ್ತು. ದರ್ಬಾರ್ ವರ್ಣದೊಂದಿಗೆ ಆರಂಭಗೊಂಡ ಅವರ ಗಾಯನ `ಸೀತಾಪತೆ~ (ಖಮಾಚ್) ಕೀರ್ತನೆಯಿಂದ ಕಳೆಗಟ್ಟಿತು. ಕಲ್ಪನಾಸ್ವರಗಳ ಮೂಲಕ ಈ ಕೀರ್ತನೆಯನ್ನು ಅಂದಗಾಣಿಸಿದರು. ಆ ಹಂತದಲ್ಲೇ ಮುಂದಿನ ರಸದೌತಣದ ಸುಳಿವು ಸಿಕ್ಕಿದ್ದು ಸಹಜವೇ.ಹಿಂದೋಳ ರಾಗದ ವಿಸ್ತಾರ ಮೆದುವಾದ ಕಂಠದಲ್ಲಿ ಚಾಚಿಕೊಂಡಿತು. ಆ ರಾಗದ ಸಕಲ ಸಾಧ್ಯತೆಗಳನ್ನೂ ಅವರು ಪರಿಚಯಿಸಿದರು. ಅರುಣಾಚಲ ಕವಿಯ ರಾಮನೆಕಮನ್ನನ್ ರಚನೆಯನ್ನು ಸ್ವರಗಳಿಂದ ಸಜ್ಜುಗೊಳಿಸಿದರು. ಅಪರೂಪವಾಗಿ ಕೇಳಿಬರುವ `ನೀಕೇ ತೆಲಿಯಕ~ (ಆನಂದಭೈರವಿ) ವಿಳಂಬದಲ್ಲಿ ಮನೋಜ್ಞವಾಗಿತ್ತು.ಜಂಟಿ, ದಾಟುವರಸೆಗಳು, ಸರ್ವಲಘು ಮಾದರಿಗಳು ವಾದಿ ಸಂವಾದಿ ಸ್ವರಗಳನ್ನು ಸ್ಪರ್ಶಿಸುತ್ತಾ ಬೆಳೆದು ನಿಂತ ಕಲ್ಯಾಣಿ ರೋಮಾಂಚಕವಾಗಿತ್ತು. ರಿಷಭದಿಂದ ರಿಷಭದವರೆಗೆ ಅವರು ಮಾಡಿದ ಗ್ರಹಭೇದ (ಶೃತಿಭೇದ) ಮತ್ತು ಅದರ ಪರಿಣಾಮವಾಗಿ ರೂಪುಗೊಂಡ ಮೋಹನ ರಾಗ ವಿಶಿಷ್ಟವಾಗಿತ್ತು.ದಾಸರ `ನಂಬಿಕೆಟ್ಟವರಿಲ್ಲವೋ ಗರುಡಗಮನ~ ಎಂಬಲ್ಲಿ ನೆರೆವಲ್ ಮತ್ತು ಸ್ವರವಿನ್ಯಾಸದೊಂದಿಗೆ ಹೊಳೆಯಿತು. ರಿಮಗ, ಮದಮ, ದನಿದ ಮುಂತಾದ ಮಾದರಿಗಳಂತೂ ಕಿವಿಯಲ್ಲಿ ಅನುರಣಿಸಿದವು. ಮೃದಂಗ ಮತ್ತು ಘಟವಾದಕರ ತನಿ ಆವರ್ತನ ಕಳೆ ಕಟ್ಟಿತು.ತಮ್ಮ ಕಛೇರಿಯ ಪ್ರಧಾನ ಘಟ್ಟವಾಗಿ ಅಪೂರ್ವ ರಾಗ ಪ್ರಿಯದರ್ಶಿನಿಯಲ್ಲಿ ರಾಗ, ತಾನ ಮತ್ತು ಪಲ್ಲವಿಯನ್ನು ನಿರೂಪಿಸಲಾಯಿತು. ಕೀರವಾಣಿ ರಾಗದ ಜನ್ಯರಾಗವಾದ ಪ್ರಿಯದರ್ಶಿನಿ ರಾಗದ ತ್ರಿಸ್ಥಾಯಿ ವ್ಯಾಪ್ತಿಯ ವಿಸ್ತೃತಿ ಕೇಳುಗರಿಗೆ ಪ್ರಿಯವಾಯಿತು. ಪಲ್ಲವಿ (ರಘುರಾಮಂ ಯದುನಾಥಂ ಭಕ್ತ ಚಂದ್ರನಂ ಸದಾಭಜೇ ಸದಾಂಬುಜಂ)ಯನ್ನು ಸಂಕೀರ್ಣತ್ರಿಶ್ರ ತ್ರಿಪುಟ ತಿಶ್ರನಡೆಯಲ್ಲಿ ಕಾಲ, ಗತಿಭೇದಗಳೊಂದಿಗೆ ಸರಾಗವಾಗಿ ಹಾಡಿ ತಮ್ಮ ವೈದುಷ್ಯವನ್ನು ಗಾಯಕರು ಬಿಂಬಿಸಿದರು.ಅದಕ್ಕೆ ಒಗ್ಗರಣೆಯ ರೂಪದಲ್ಲಿ ಅವರು ಹಾಡಿದ ಆಹರಿ, ಶಹನ ಮತ್ತು ಬಂದಾವನಸಾರಂಗ ತ್ರಿರಾಗಮಾಲಿಕಾ ಸ್ವರಪ್ರಸ್ತಾರ ಶ್ರೋತಗಳನ್ನು ಬೇರೆಯದೇ ರಾಗಲೋಕಕ್ಕೆ ಕೊಂಡೊಯ್ಯಿತು. ಎಚ್.ಕೆ.ವೆಂಕಟರಾಂ (ಪಿಟೀಲು), ಎಚ್.ಎಸ್. ಸುಧೀಂದ್ರ (ಮೃದಂಗ) ಮತ್ತು ನಾರಾಯಣಮೂರ್ತಿ (ಘಟ) ಅವರ ಪಕ್ಕವಾದ್ಯ ಪರಿಭ್ರಮಣ ಪ್ರಧಾನ ಕಲಾವಿದರನ್ನು ಸೂಕ್ತವಾಗಿ ಅನುಸರಿಸಿತು.ಸುಮಧುರ ಪ್ರಸ್ತುತಿಗಳುಶ್ರೀ ಆವನೀ ಶೃಂಗೇರಿ ಮಠಾಧಿಪತಿಗಳಾದ ಅಭಿನವ ವಿದ್ಯಾಶಂಕರ ಭಾರತೀವರ್ಯರ 47ನೆಯ ವರ್ಧಂತಿ ಉತ್ಸವವನ್ನು ಬಸವೇಶ್ವರನಗರದ ಮಠದ ಆವರಣದಲ್ಲಿ ಬುಧವಾರದಿಂದ ಭಾನುವಾರದವರೆಗೆ ಐದು ದಿನಗಳ ಕಾಲ ಆಚರಿಸಲಾಯಿತು.ಪ್ರತಿದಿನ ಸಂಜೆ ಸಂಗೀತ ಕಾರ್ಯಕ್ರಮಗಳು ನಡೆದವು. ಶುಕ್ರವಾರ ಸಂಜೆ ಹಾಡಿದ ಡಾ.ವಿದ್ಯಾಭೂಷಣರು ತಮ್ಮ ಎಂದಿನ ಭಾವ, ಮಾಧುರ್ಯ ಮತ್ತು ವಿದ್ವತ್‌ಪೂರ್ಣ ಪ್ರಸ್ತುತಿಗಳಿಂದ ರಸಿಕರ ಮೆಚ್ಚುಗೆಗೆ ಪಾತ್ರರಾದರು. ಗೋವಿಂದಸ್ವಾಮಿ (ಪಿಟೀಲು), ಎಚ್.ಎಸ್.ಸುಧೀಂದ್ರ (ಮೃದಂಗ) ಮತ್ತು ಶ್ರೀಶೈಲ (ಘಟ) ಅವರ ಸಮುಚಿತ ಸಹಸ್ಪಂದನೆಯೊಂದಿಗೆ ಹಾಡಿದ ಗಾಯಕರು ಕಾಂಭೋಜಿರಾಗದಲ್ಲಿ ಉಗಾಭೋಗವನ್ನು ಹಾಡಿ `ಲಂಬೋದರಮವಲಂಬೆ~ ರಚನೆಯನ್ನು ಮಂಡಿಸಿದರು.

 

ಗಿರಿಜಾರಮಣ (ಗಂಭೀರನಾಟ, ಸ್ವರಗಳೊಂದಿಗೆ) ನನ್ನು ವಂದಿಸಿ ಕಲ್ಯಾಣಿ ರಾಗವನ್ನು ಸಮಗ್ರವಾಗಿ ಚಿತ್ರಿಸಿದರು. ಕನಕದಾಸರ `ವರವ ಕೊಡು ವಾಗ್ದೇವಿ~ಗೆ ಆರಂಭದಲ್ಲಿ ಉಗಾಭೋಗ (ಚತುರ್ವದನನರಾಣಿ) ಮತ್ತು ನಂತರ ಚಿಟ್ಟೆಸ್ವರಗಳನ್ನು ಹೆಣೆದರು.`ದಾರಿ ಯಾವುದಯ್ಯೊ~, `ಇನ್ನು ನಾಜನಿಸಲಾರೆ~ ಪಂಕ್ತಿ ನೆರೆವಲ್ ಮತ್ತು ಸ್ವರಗಳೊಂದಿಗೆ ಭೂಷಿಸಿತು. ಅಭೇರಿ (ನಗುಮೋಮು, ಜಗಮೆಲ್ಲ ಸಾಹಿತ್ಯ ಮತ್ತು ಸ್ವರವಿನ್ಯಾಸ), ಮೋಹನ (ಪಿಳ್ಳಂಗೋವಿಯ) ಮತ್ತು ದುರ್ಗಾ (ತಾಯೇದುರ್ಗಾಂಬೆ) ರಾಗಗಳು ಹಬ್ಬಿ ಪಸರಿಸಿದವು. ಮುಂದೆ ಅವರು ಹಾಡಿದ ದೇವರನಾಮಗಳು ವೈವಿಧ್ಯಮಯ ರಾಗಗಳು ಮತ್ತು ತಾಳಗಳಲ್ಲಿ ಆಪ್ತವೆನಿಸಿದವು. ಶ್ರೋತಗಳ ಕೋರಿಕೆಯ ಹಾಡುಗಳನ್ನೂ ಹಾಡಿ ಅವರು ಖುಷಿ ಕೊಟ್ಟರು.ಅರ್ಥಪೂರ್ಣ ಅಭಿನಯನುರಿತ ಭರತನಾಟ್ಯ ಗುರು ನಾಗಭೂಷಣ್ ಅವರ ಶಿಷ್ಯೆ ಯಮುನಾ ಭಾಗವತ್ ತಮ್ಮ ಸೊಗಸಾದ ಭರತನಾಟ್ಯ ಕಾರ್ಯಕ್ರಮವನ್ನು ಪ್ರತಿ ಬುಧವಾರ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಡಿಯಲ್ಲಿ ನಯನ ಸಭಾಂಗಣದಲ್ಲಿ ನೀಡಿದರು.ನಿರೂಪಿಸಿದ ಹಾಡುಗಳು ಅಭಿವ್ಯಕ್ತಿಸುವ ಭಾವನೆಗಳಿಗೆ ತಕ್ಕ ಹಸ್ತ, ಪಾದ ಮತ್ತು ಮುಖಚಲನೆಗಳು ಗಮನಸೆಳೆದವು. `ಗಜವದನ ಬೇಡುವೆ~ಯ ಮೂಲಕ ವಿಘ್ನರಾಜನನ್ನು ಸ್ತುತಿಸಿ ಬಿರುಸಿನ ಚಲನೆಗಳಿದ್ದ `ಮಹಾದೇವ ಶಿವ~ (ರೇವತಿ)ನನ್ನು ತಮ್ಮ ಸುಂದರ ಅಭಿನಯದಲ್ಲಿ ಕಾಣಿಸಿದರು.`ಶ್ರೀಚಾಮುಂಡೇಶ್ವರಿ~ಯ ಬೆಡಗು ಮತ್ತು ಲೀಲೆಗಳನ್ನು ಅರ್ಥಪೂರ್ಣವಾಗಿ ಅಭಿನಯಿಸಲಾಯಿತು. ಅವರ ನೃತ್ತ ಮತ್ತು ನೃತ್ಯ ಭಾಗಗಳು ಪ್ರಶಂಸಾರ್ಹವಾಗಿತ್ತಾದರೂ ಅರ್ಧಮಂಡಳಿಗಳ ಕಡೆಗೆ ಇನ್ನೂ ಹೆಚ್ಚಿನ ಗಮನ ಕೊಡುವುದು ಲೇಸೆನಿಸಿತು. `ಯಮನೆಲ್ಲಿ ಕಾಣನೆಂದು~ (ಶಿವರಂಜಿನಿ) ಮತ್ತು `ಇಂದು ಎನಗೆ ಗೋವಿಂದ~ (ಭೈರವಿ) ಯಮುನಾ ಅವರ ಭಾವದಿಂದ ದೀಪ್ತವಾದ ಅಭಿನಯದಿಂದ ಶ್ರೀರಾಮನ ಹಿರಿಮೆ ಮತ್ತು ಗುಣ ವಿಶೇಷಗಳ ಪುನರನುಭವ ಸಾಧ್ಯವಾಯಿತು.ಅಭಿನಯದಲ್ಲಿ ನರ್ತಕಿಯು ನವ ಲಾವಣ್ಯದಿಂದ ಕಂಗೊಳಿಸಿದರು. ಗುರು ನಾಗಭೂಷಣ್ (ನಟುವಾಂಗ ಮತ್ತು ಗಾಯನ), ವಿವೇಕ್(ಕೊಳಲು) ಮತ್ತು ಬೆಟ್ಟವೆಂಕಟೇಶ್ (ಮೃದಂಗ) ಅವರ ಪಕ್ಕವಾದ್ಯ ಸಹಕಾರ ನೃತ್ಯದ ಶೋಭೆಯನ್ನು ದ್ವಿಗುಣಗೊಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.