ಬುಧವಾರ, ಮೇ 25, 2022
30 °C

ಸುಳ್ಳದ ಬಳಿ ಬರಲಿದೆ ಹೊಸ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕಳೆದ ತಿಂಗಳು ನಗರದ ಜೈಲಿನಲ್ಲಿ ಕೈದಿಗಳ ಕದನ ನಡೆಯಿತು. ಇದರ ಪರಿಣಾಮ ಬಳ್ಳಾರಿ, ವಿಜಾಪುರ ಹಾಗೂ ಧಾರವಾಡ ಜೈಲುಗಳಿಗೆ 30 ಕೈದಿಗಳನ್ನು ಸಾಗಿಸಲಾಯಿತು. ಪ್ರತಿ ಬಾರಿ ವಿಚಾರಣೆಗೆ ಅಷ್ಟೊಂದು ದೂರದಿಂದ ಕರೆತರುವುದು ಪೊಲೀಸರಿಗೆ ಸಮಯ ಹಾಗೂ ವೆಚ್ಚ ದುಬಾರಿ. ಜೊತೆಗೆ ರಕ್ಷಣೆಗೆ ಸಂಬಂಧಿಸಿ ಆತಂಕವಿದ್ದೇ ಇರುತ್ತದೆ.ಇದಕ್ಕಾಗಿ ತಾಲ್ಲೂಕಿನ ಸುಳ್ಳದ ಬಳಿ ಹೊಸ ಜೈಲನ್ನು ಕಟ್ಟಬೇಕೆನ್ನುವ ಯೋಜನೆಗೆ ಜಿಲ್ಲಾಧಿಕಾರಿ ದರ್ಪಣ್ ಜೈನ್ ಮುಂದಾಗಿದ್ದಾರೆ. ಈ ಸಂಬಂಧ ಅವರು ಗುರುವಾರ ಸುಳ್ಳದ ಬಳಿ ಜಾಗ ಪರಿಶೀಲನೆ ನಡೆಸಿದರು. ‘ಅಲ್ಲಿ ಏಳು ಎಕರೆ ಸರ್ಕಾರದ ಜಾಗವಿದ್ದು, ಹೊಸ ಜೈಲು ಕಟ್ಟಲು ಸೂಕ್ತವಾಗಿದೆ. ಇದನ್ನು ಗೃಹ ಇಲಾಖೆಯ ಗಮನಕ್ಕೆ ತರಲಾಗುತ್ತದೆ. ಜೊತೆಗೆ ಪತ್ರ ಕೂಡಾ ಬರೆಯಲಾಗುತ್ತದೆ. ಆ ಇಲಾಖೆ ಪರಿಶೀಲಿಸಿದ ನಂತರ ಜಿಲ್ಲಾಡಳಿತ ಮೂಲಕ ಜಾಗವನ್ನು ಹಸ್ತಾಂತರಿಸಲಾಗುತ್ತದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‘ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ಗಮನಿಸಿಯೂ ಈ ಕ್ರಮ ಕೈಗೊಳ್ಳಲಾಗುತ್ತದೆ. ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಇದರೊಂದಿಗೆ ನಗರದಲ್ಲಿರುವ ಜೈಲು ಚಿಕ್ಕದು. ಜೊತೆಗೆ ನಗರದಲ್ಲಿ ಜೈಲು ಇರಬಾರದು ಎನ್ನುವುದು ಸರ್ಕಾರದ ನಿಯಮ ಕೂಡಾ. ನಗರದಲ್ಲಿರುವ ಜೈಲನ್ನು ಮೇಲ್ದರ್ಜೆಗೆ ಏರಿಸುವುದಕ್ಕಿಂತ ಹೊಸ ಜೈಲನ್ನು ಕಟ್ಟುವುದು ಸೂಕ್ತ. ಇದರಿಂದ ನಗರದಿಂದ ದೂರವಾದ ಹಾಗಾಗುತ್ತದೆ. ಸುಸಜ್ಜಿತ ಮತ್ತು ಆಧುನಿಕ ಜೈಲು ಕಟ್ಟಲು ಸಾಧ್ಯವಾಗುತ್ತದೆ. ಇದರಲ್ಲಿ ಹೆಚ್ಚಿನ ಕೈದಿಗಳನ್ನು ಇಡಬಹುದು.

 

ಕೇವಲ ವಿಚಾರಣಾಧೀನ ಕೈದಿಗಳಲ್ಲದೆ ಶಿಕ್ಷೆಗೊಳಗಾದ ಕೈದಿಗಳನ್ನೂ ಇರಿಸಲು ಸಾಧ್ಯವಾಗುತ್ತದೆ. ಬ್ಯಾರಕ್‌ಗಳಿದ್ದರೆ 100ಕ್ಕೂ ಅಧಿಕ ಕೈದಿಗಳನ್ನು ಇಡಬಹುದು. ಇಂಥ ಬ್ಯಾರಕ್‌ಗಳಲ್ಲಿ ನಿಷೇಧಿತ ವಸ್ತುಗಳನ್ನಿಡುವುದು ಕಷ್ಟಸಾಧ್ಯ. ಜೊತೆಗೆ ಕೈದಿಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಇದರೊಂದಿಗೆ ಜೈಲಿನ ಸಿಬ್ಬಂದಿಗೆ ಕಚೇರಿ, ವಸತಿಗೃಹ, ತೋಟಗಾರಿಕೆಯಿಂದ ಹಿಡಿದು ಕೈದಿಗಳು ವಿವಿಧ ಕೆಲಸ ಕೈಗೊಳ್ಳಲು ಸಾಧ್ಯವಾಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಯೋಗ, ಧ್ಯಾನ, ಸಭೆ, ಸಮಾರಂಭ ನಡೆಸಲು ಭವನ ಮೊದಲಾದ ಕಟ್ಟಡಗಳು ಇದರಲ್ಲಿ ಬರುತ್ತವೆ’ ಎಂದು ಅವರು ವಿವರಿಸಿದರು.‘1967ರಲ್ಲಿ ಆರಂಭಗೊಂಡ ಹುಬ್ಬಳ್ಳಿ ಜೈಲು ಹಳೆಯದಾಗಿದೆ. ಅಲ್ಲಿಯ ಬಾಗಿಲುಗಳು ಕಟ್ಟಿಗೆಯವು. ಕೀಲಿ, ಚಿಲಕಗಳಂತೂ ಭದ್ರವಲ್ಲ. ಇದರಿಂದ ಕೈದಿಗಳು ಸಂಘಟಿತರಾಗಿ ದಾಂಧಲೆ ನಡೆಸಿದರು. ನಡೆದಾಡಲು ಹಾಕಿದ ಪಾಟಿಕಲ್ಲುಗಳು ಹಳೆಯವು. ಅವುಗಳನ್ನು ಎಬ್ಬಿಸಿ ದಾಂಧಲೆಗೆ ಬಳಸಿದರು. ಇದನ್ನೆಲ್ಲ ಗಮನಿಸಿ ಹೊಸ ಜೈಲು ಕಟ್ಟುವುದು ಸೂಕ್ತ ಎನ್ನಿಸಿದೆ. ಅಲ್ಲದೆ ಮೂಲ ಸೌಲಭ್ಯಗಳ ಕೊರತೆಯಿದೆ. ಮುಖ್ಯವಾಗಿ ವಿಡಿಯೋ ಕಾನ್‌ಫರೆನ್ಸ್ ಇದ್ದ ಕೋಣೆಯ ಬಾಗಿಲನ್ನು ಒಡೆಯಲಾಗಿದೆ. 8-10 ಲಕ್ಷ ಮೌಲ್ಯದ ಡಿಜಿಟಲ್ ಕ್ಯಾಮೆರಾ ಹಾಗೂ ಡಿವಿಡಿಗಳನ್ನು ಹಾಳು ಮಾಡಲಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸುವುದರ ಜೊತೆಗೆ ಪರ್ಯಾಯ ಯೋಜನೆಯನ್ನು ಕೈಗೊಳ್ಳುವುದು ಮುಖ್ಯ. ಇದಕ್ಕಾಗಿ ಸುಳ್ಳದ ಬಳಿ ಜಾಗವನ್ನು ಗುರುತಿಸಲಾಗಿದೆ’ ಎಂದು ಅವರು ಹೇಳಿದರು.‘ಧಾರವಾಡ ಜೈಲು ಕೂಡಾ ನಗರದೊಳಗೇ ಇದೆ. ಅವುಗಳನ್ನು ಕಟ್ಟಿದಾಗ ಊರ ಹೊರಗೆ ಇರಬಹದು. ಆದರೆ ನಗರ ಬೆಳೆದಂತೆಲ್ಲ ಊರೊಳಗೇ ಆದಂತಾಗಿದೆ. ಇದಕ್ಕಾಗಿ ಈಗಿನ ಧಾರವಾಡ ಜೈಲನ್ನು ಕೂಡಾ ಬೇರೆಡೆ ಸ್ಥಳಾಂತರಿಸುವ ಅಂದರೆ ಹೊಸ ಜೈಲನ್ನು ನಿರ್ಮಿಸುವ ಯೋಜನೆಯಿದೆ. ಸೂಕ್ತ ಜಾಗದ ಪರಿಶೀಲನೆಯಲ್ಲಿ ಜಿಲ್ಲಾ ಆಡಳಿತವಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.