ಶುಕ್ರವಾರ, ಜೂಲೈ 10, 2020
28 °C

ಸೂರ್ಯ ಜಳಕ ಭಕ್ತರ ಪುಳಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ಮಕರ ಸಂಕ್ರಾತಿ. ನಾಡಿನ ಎಲ್ಲೆಡೆ ಹಬ್ಬ. ಸಿಲಿಕಾನ್ ಸಿಟಿಯಲ್ಲಿ ಇನ್ನೂ ವಿಶೇಷ. ಬೆಳಕಿನ ಚಮತ್ಕಾರವೊಂದು ಕಣ್ಣಿಗೆ ಹಬ್ಬವಾಗುತ್ತದೆ. ಶಿವನೂ ಸೂರ್ಯನೂ ಒಂದೇ ಕಡೆ ಮುಖಾಮುಖಿಯಾಗುವ ಅಪೂರ್ವ ಕ್ಷಣ. ಈ ಕ್ಷಣಕ್ಕೆ ವೇದಿಕೆಯಾಗಲಿದೆ ಗವಿಪುರಂನ ಗವಿಗಂಗಾಧರೇಶ್ವರ ದೇವಸ್ಥಾನ.

ಸದಾ ಒತ್ತಡದಲ್ಲಿ ಬದುಕುವ ಬೆಂಗಳೂರಿನ ಜನತೆಗೆ ಮಕರ ಸಂಕ್ರಾಂತಿ ಎಂದರೆ ಬಹಳಷ್ಟು ವೈವಿಧ್ಯದಿಂದ ಕೂಡಿರುತ್ತದೆ. ಇದು ಎಲ್ಲೆಡೆಯಂತೆ ಎಳ್ಳು ಬೀರುವ ಸಂಭ್ರಮ ಅಷ್ಟೇ ಅಲ್ಲ. ಸೂರ್ಯನು ಗಂಗಾಧರನ ಪಾದ ಸ್ಪರ್ಶಿಸುವ ಅಪೂರ್ವ ಕ್ಷಣ. ಯಾಂತ್ರಿಕ ಬದುಕಿನ ನಡುವೆಯೂ ಪಾರಮಾರ್ಥಿಕತೆಯನ್ನು ಕೈಬಿಡದೆ, ದೈವಿಕ ಮತ್ತು ಪ್ರಾಕೃತಿಕ ಚಮತ್ಕಾರವನ್ನು ಕಣ್ತುಂಬಿಕೊಳ್ಳುವ ಪರಿಪಾಠವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.  

 ಮಕರ ಸಂಕ್ರಾಂತಿಯ ಮೊದಲು 10 ದಿನ ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಚಲಿಸುವ ಎಲ್ಲಾ ಲಕ್ಷಣಗಳು ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಕಾಣಸಿಗುತ್ತದೆ. ಆದರೆ ಮಕರ ಸಂಕ್ರಾಂತಿಯಂದು ಸೂರ್ಯಾಸ್ತ ಸಮಯದಲ್ಲಿ ಸೂರ್ಯನ ಕಿರಣಗಳು ದೇವಸ್ಥಾನದ ದಕ್ಷಿಣ ಕಿಟಿಕಿಯ ಮೂಲಕ ಹಾದು, ನಂದಿಯ ಕೋಡುಗಳ ಮಧ್ಯಭಾಗದಿಂದ ಶಿವನ ಪಾದವನ್ನು ನೇರವಾಗಿ ಸ್ಪರ್ಶಿಸುವ ಮೂಲಕ ಸಂಪೂರ್ಣವಾಗಿ ಪಥ ಬದಲಿಸುವುದನ್ನು ಕಾಣಬಹುದು. 

 

ಐತಿಹ್ಯ: ‘ಗೌತಮ ಋಷಿಯಿಂದ ಸ್ಥಾಪಿಸಲ್ಪಟ್ಟಿರುವ ಈ ಗುಹಾಂತರ ಶಿಲಾ ದೇವಾಲಯವು ಸಹಸ್ರಾರು ವರ್ಷಗಳ ಐತಿಹ್ಯ ಹೊಂದಿದೆ, ಈ ಗುಹಾಲಯದ ಒಂದೆಡೆ ಕಾಶಿಗೆ ದಾರಿ ಮಾಡಿಕೊಟ್ಟರೆ ಮತ್ತೊಂದೆಡೆ ಶಿವಗಂಗೆ ಪ್ರಯಾಣ ಬೆಳೆಸುತ್ತದೆ. ಗೌತಮ ಋಷಿ ಬೆಳಗಿನ ಸ್ನಾನವನ್ನು ಕಾಶಿಯಲ್ಲಿ ಮುಗಿಸಿ ಮಧ್ಯಾಹ್ನ ಗವಿಗಂಗಾಧರೇಶ್ವರ ಮತ್ತು ಸಂಜೆ ಶಿವಗಂಗೆಯಲ್ಲಿ ಪೂಜೆ ಸಲ್ಲಿಸುತ್ತಿದ್ದರೆಂದು ಪುರಾಣಗಳಲ್ಲಿ ಉಲ್ಲೇಖವಿದೆ’.

‘ಪ್ರಸ್ತುತ ಈ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು, ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ಧಾರವಾಯಿತು. ಸಾಮಾನ್ಯವಾಗಿ ಶಿವನ ಬಲಭಾಗದಲ್ಲಿ ಶ್ರೀದೇವಿಯಿದ್ದರೆ, ಇಲ್ಲಿ ಸ್ವಯಂ ಭೂ ಲಿಂಗದ ಎಡಭಾಗದಲ್ಲಿ ದೇವಿಯ ಮೂರ್ತಿಯಿದೆ. ಇಂತಹ ಸ್ಥಳ ಸಂಪೂರ್ಣ ಶಕ್ತಿಸ್ಥಳ’ ಎಂದು ಇಲ್ಲಿನ ಪ್ರಧಾನ ಅರ್ಚಕ ಎಸ್. ಸೋಮಸುಂದರ್ ದೀಕ್ಷಿತ್ ಹೇಳುತ್ತಾರೆ.

ನಿಯಂತ್ರಿತ ಪ್ರವೇಶ

ಈ ಬಾರಿ ಇಪ್ಪತ್ತು ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.  ‘ಅರ್ಚಕರು ಮತ್ತು ಮಾಧ್ಯಮದವರಿಗೆ ಮಾತ್ರ ಒಳಗೆ  ಅವಕಾಶವಿದೆ. ಶಿಫಾರಸ್ಸು ಪತ್ರ ಹಿಡಿದುಕೊಂಡು ಬರುವ ರಾಜಕಾರಣಿಗಳಿಗೂ ದೇವಸ್ಥಾನ ಒಳಗೆ ಪ್ರವೇಶ ಇರುವುದಿಲ್ಲ’ ಎಂದು ಅರ್ಚಕ ದೀಕ್ಷಿತರು ವಿವರಿಸುತ್ತಾರೆ.  ಸಂಕ್ರಾಂತಿ ದಿನ ವೀಕ್ಷಣೆ ಅವಕಾಶ ಲಭಿಸದೆ ಇರುವವರು ಬೇಸರ ಪಡಬೇಕಿಲ್ಲ. ಆ ನಂತರವೂ 4 ದಿನ ಕಾಲ ಸೂರ್ಯನ ಕಿರಣಗಳು ಲಿಂಗವನ್ನು ಸ್ಪರ್ಶಿಸುವ ವಿಸ್ಮಯವನ್ನು ನೋಡಬಹುದು.

ಸಾರ್ವಜನಿಕರಿಗೆ ಶನಿವಾರ ಬೆಳಿಗ್ಗೆ 11.30 ರಿಂದ ಸಂಜೆ 5.20 ರವರೆಗೆ ಪ್ರವೇಶ ಇರುವುದಿಲ್ಲ. ಸೂರ್ಯ ವಿಸ್ಮಯ ವೀಕ್ಷಿಸುವವರಿಗಾಗಿ ಹೊರಗೆ 10 ಸಿಸಿಟಿವಿ, 2 ದೊಡ್ಡ ಸ್ಕ್ರೀನ್ ಅಳವಡಿಸಲಾಗುತ್ತದೆ. ವೃದ್ಧರು, ಅಂಗವಿಕಲರಿಗೆ ಕುರ್ಚಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಗವಿಗಂಗಾಧರೇಶ್ವರ ಸ್ವಾಮಿ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವೆಂಕೋಬರಾವ್ ಸಿಂಧೆ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.