ಶುಕ್ರವಾರ, ಮೇ 20, 2022
21 °C

ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಬೆಂಗಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ/ಐಎಎನ್‌ಎಸ್): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಚಾಂಪಿಯನ್‌ಷಿಪ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೌತ್ ಆಸ್ಟ್ರೇಲಿಯಾ ರೆಡ್‌ಬ್ಯಾಕ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿ ಲೀಗ್‌ನ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇಟ್ಟಿದೆ. `ಕ್ವಾರ್ಟರ್ ಫೈನಲ್~ ಎಂದೇ ಪರಿಗಣಿತವಾಗಿದ್ದ ಬುಧವಾರದ ಪಂದ್ಯದಲ್ಲಿ 2 ವಿಕೆಟ್‌ಗಳಿಂದ ಬೆಂಗಳೂರು ತಂಡವು ಜಯಸಾಧಿಸಿ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.ಮೊದಲು ಬ್ಯಾಟ್ ಮಾಡಿದ ಸೌತ್ ಆಸ್ಟ್ರೇಲಿಯಾ ರೆಡ್‌ಬ್ಯಾಕ್ಸ್ ತಂಡವು ಡೇನಿಯಲ್ ಹ್ಯಾರಿಸ್ ಅವರ ಅಜೇಯ 108 ರನ್‌ಗಳ ನೆರವಿನಿಂದ 215 ರನ್‌ಗಳ ಕಠಿಣ ಸವಾಲನ್ನು ಒಡ್ಡಿತು. ಇದನ್ನು ಸಮರ್ಥವಾಗಿ ಬೆನ್ನಟ್ಟಿದ ರಾಯಲ್‌ಚಾಲೆಂಜರ್ಸ್ ತಂಡವು ಅಂತಿಮವಾಗಿ ಜಯ ಸಾಧಿಸಿತು. ಬೆಂಗಳೂರು ತಂಡದ ಪರ ದಿಲ್ಷಾನ್ 74 ಹಾಗೂ ವಿರಾಟ್ ಕೊಹ್ಲಿ ಅವರು 70 ರನ್ ಗಳಿಸಿ ವಿಜಯಕ್ಕೆ ಕಾರಣರಾದರು.ವಿರಾಟ್ ಕೊಹ್ಲಿ ಅವರು ಇಂತಹ ರೋಚಕ ಪಂದ್ಯವನ್ನು ತಾವು ಜೀವಮಾನದಲ್ಲೇ ಕಂಡಿಲ್ಲ ಎಂದು ಹೇಳಿದ್ದು, ಇದರ ರೋಚಕತೆಗೆ ಹಿಡಿದ ಕನ್ನಡಿಯಾಗಿದೆ. ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಕೊನೆಯ ಎರಡು ಚೆಂಡುಗಳಲ್ಲಿ ಗಳಿಸಬೇಕಾದ್ದು 7 ರನ್. ಶ್ರೀನಾಥ್ ಅರವಿಂದ್ ಅವರು ಒಂದು ರನ್ ಗಳಿಸಿ ಅರುಣ್ ಕಾರ್ತಿಕ್‌ಗೆ ಬ್ಯಾಟ್ ಮಾಡಲು ಅವಕಾಶವಿತ್ತರು. ಕೊನೆಯ ಚೆಂಡಿನಲ್ಲಿ ಗಳಿಸಿಬೇಕಾದ್ದು 6 ರನ್ !

 

ಅತ್ಯಂತ ಕೂತುಹಲ ಹಾಗೂ ರೋಚಕಭರಿತ ಕೊನೆಯ ಎಸೆತವನ್ನು ಇಡೀ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಉಸಿರುಗಟ್ಟಿ ನೋಡುತ್ತಿದ್ದಂತೆ ಅರುಣ್ ಅವರು ಸಿಕ್ಸರ್ ಗಳಿಸಿ ರಾಯಲ್‌ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೆಮಿಫೈನಲ್ ಹಂತಕ್ಕೆ ದಾಟಿಸಿದರು.36 ಚೆಂಡುಗಳಲ್ಲಿ 70 ರನ್ ಗಳಿಸಿದ ವಿರಾಟ್ ಕೋಹ್ಲಿ ಅವರು ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.