ಸೋಮವಾರ, ಮಾರ್ಚ್ 1, 2021
23 °C
ಫ್ರೆಂಚ್‌ ಓಪನ್‌ ಟೆನಿಸ್‌: ಜೆಕ್ ಗಣರಾಜ್ಯದ ಲೂಸಿ ಸಫರೋವಾಗೆ ನಿರಾಸೆ

ಸೆರೆನಾಗೆ 20ನೇ ಗ್ರ್ಯಾಂಡ್‌ಸ್ಲಾಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆರೆನಾಗೆ 20ನೇ ಗ್ರ್ಯಾಂಡ್‌ಸ್ಲಾಮ್‌

ಪ್ಯಾರಿಸ್ (ಎಎಫ್‌ಪಿ): ಅಮೆರಿಕದ ಸೆರೆನಾ ವಿಲಿಯಮ್ಸ್‌ ಶನಿವಾರ ಮತ್ತೊಮ್ಮೆ ಪಾರಮ್ಯ ಮೆರೆದರು. ರೋಲಾಂಡ್ ಗ್ಯಾರೋಸ್‌ನ ಮಣ್ಣಿನಂಕಂಣದಲ್ಲಿ ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಅವರು, ಒಟ್ಟು 20 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದರು. ವಿಶ್ವದ ಅಗ್ರಶ್ರೇಯಾಂಕದ ಆಟಗಾರ್ತಿ ಸೆರೆನಾ  6-3, 6-7(2), 6-2ರಿಂದ ಸಫರೋವಾ ಸವಾಲನ್ನು ಮೀರಿನಿಂತರು.  33 ವರ್ಷದ ಸೆರೆನಾ  ಪ್ರಶಸ್ತಿಯೊಂದಿಗೆ ₨ 12.6 ಕೋಟಿ ಬಹುಮಾನವನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.1999ರಿಂದ ಇಲ್ಲಿಯವರೆಗೆ ಅವರು ಯುಎಸ್‌ ಓಪನ್, ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ ಟೂರ್ನಿಗಳಲ್ಲಿ ಒಟ್ಟು 20 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ಧಾರೆ.ಫ್ರೆಂಚ್‌ ಓಪನ್ ಪ್ರಶಸ್ತಿಯನ್ನು ಅವರು ಮೂರನೇ ಬಾರಿ ಗೆದ್ದ ಸಾಧನೆಯನ್ನೂ ಇದೇ ಸಂದರ್ಭದಲ್ಲಿ ದಾಖಲಿಸಿದರು. ಇತ್ತೀಚೆಗಷ್ಟೆ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಜಯಿಸಿದ್ದರು. ಇನ್ನೊಂದೆಡೆ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್‌ ಟೆನಿಸ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಟ್ಟಿದ್ದ ಜೆಕ್ ಗಣರಾಜ್ಯದ ಲೂಸಿ ಸಫರೋವಾ ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಫೈನಲ್‌ ತಲುಪುವ ಹಾದಿಯಲ್ಲಿ ಅವರು ಅಗ್ರಶ್ರೇಯಾಂಕದ ಆಟಗಾರ್ತಿಯರಾದ ಮರಿಯಾ ಶರಪೋವಾ ಮತ್ತು ಅನಾ ಇವಾನೋವಿಚ್ ಅವರನ್ನು ಸೋಲಿಸಿದ್ದರು.ಆದರೆ, ಮಹಿಳಾ ಟೆನಿಸ್‌ನ ‘ರಾಣಿ’ ಸೆರೆನಾ ಅವರನ್ನು ಮಣಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮೊದಲ ಸೆಟ್‌ನ ಆರಂಭದಲ್ಲಿ ಸ್ವಲ್ಪ ಜಿಗುಟುತನದ ಆಟವನ್ನು ಸಫರೋವಾ ಪ್ರದರ್ಶಿಸಿದರು. ಆದರೆ, ಉತ್ತಮ ಸರ್ವ್‌ಗಳನ್ನು ಸಿಡಿಸಿದ ಸೆರೆನಾ 6–3ರಿಂದ ಗೆಲುವು ಸಾಧಿಸಿದರು.ಆದರೆ, ಎರಡನೇ ಸೆಟ್‌ ಗೆದ್ದು, ಪ್ರಶಸ್ತಿಗೆ ಮುತ್ತಿಡುವ ಅವರ ಉದ್ದೇಶ ಈಡೇರಲಿಲ್ಲ.  ಆ ಸೆಟ್‌ನಲ್ಲಿ ಆಕರ್ಷಕ ಆಟ ವಾಡಿದ ಸಫರೋವಾ 7–6ರಿಂದ ಮಿಂಚಿದರು. ಸೆಟ್‌ನ ಒಂದು ಹಂತದಲ್ಲಿ ಸೆರೆನಾ 2–7ರ ಹಿನ್ನಡೆ ಅನುಭವಿಸಿದ್ದರು. ಆಮೇಲೆ ಒಂದರ ಹಿಂದೆ ಒಂದರಂತೆ ನಾಲ್ಕು ಅಂಕಗಳನ್ನು ಗಳಿಸಿದರೂ ಸೆರೆನಾಗೆ ಸೆಟ್‌ ಗೆಲ್ಲಲು ಸಾಧ್ಯವಾಗಲಿಲ್ಲ. ಇದರಿಂದ ಆಟವು ಮೂರನೇ ಸೆಟ್‌ನಲ್ಲಿ ನಿರ್ಣಯವಾಯಿತು. ಕೊನೆಯ ಸೆಟ್‌ನಲ್ಲಿ ಸೆರೆನಾ ಅವರ ಶಕ್ತಿಶಾಲಿ ಸರ್ವ್‌ಗಳು, ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಸೊಬಗಿಗೆ ಸಫರೋವಾ ನಿರುತ್ತರರಾದರು.  ಅಮೆರಿಕದ ಆಟಗಾರ್ತಿಯ ಅನುಭವದ ಮುಂದೆ  13 ನೇ ಶ್ರೇಯಾಂಕದ ಲೂಸಿ ಸಫರೋವಾ ಮಂಕಾದರು. ಸೆರೆನಾ 6–2ರಿಂದ ಜಯಿಸಿದರು.  ಕೊನೆಯ ಪಾಯಿಂಟ್ ಕಲೆ ಹಾಕುತ್ತಿದ್ದಂತೆಯೇ,  ರ್‌್ಯಾಕೆಟ್‌ ಅನ್ನು ನೆಲಕ್ಕೆ ಚೆಲ್ಲಿದ ಅವರು,  ಪ್ರೇಕ್ಷಕರತ್ತ ಎರಡೂ ಕೈಗಳನ್ನು ಬೀಸಿ ಹರ್ಷವ್ಯಕ್ತಪಡಿಸಿದರು. ಟೂರ್ನಿಯ ಆರಂಭದಲ್ಲಿ ಸೆರೆನಾ ಶೀತಜ್ವರದಿಂದ ಬಳಲಿದ್ದರು. ನಂತರ ಚೇತರಿಸಿಕೊಂಡಿದ್ದ ಅವರು ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತು ಫೈನಲ್‌ ಪ್ರವೇಶಿಸಿದ್ದರು.ಸೆರೆನಾ ಗೆದ್ದಿರುವ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ

*ಫ್ರೆಂಚ್ ಓಪನ್  (2002, 2013, 2015)

ಆಸ್ಟ್ರೇಲಿಯನ್ ಓಪನ್

* (2003, 2005, 2007, 2009, 2010, 2015)

ವಿಂಬಲ್ಡನ್‌

* (2002, 2003, 2009, 2010, 2012)

ಯುಎಸ್ ಓಪನ್

* (1999, 2002, 2008, 2012, 2013, 2014)ಫೈನಲ್‌ಗೆ ಜೊಕೊವಿಚ್

ಪ್ಯಾರಿಸ್ (ಐಎಎನ್‌ಎಸ್): ವಿಶ್ವದ ಅಗ್ರಶ್ರೇಯಾಂಕದ ಆಟಗಾರ ನೋವಾಕ್ ಜೊಕೊವಿಚ್ ಶನಿವಾರ ಫ್ರೆಂಚ್ ಓಪನ್ ಟೆನಿಸ್‌ನ ಫುರುಷರ ಸಿಂಗಲ್ಸ್‌ನ ಫೈನಲ್‌ಗೆ ಲಗ್ಗೆ ಇಟ್ಟರು.

ಸೆಮಿಫೈನಲ್‌ನಲ್ಲಿ  ಜೊಕೊವಿಚ್ 6-3, 6-3, 5-7, 5-7, 6-1ರಿಂದ  ಆ್ಯಂಡಿ ಮರ್ರೆ ಅವರನ್ನು ಸೋಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.