ಮಂಗಳವಾರ, ಆಗಸ್ಟ್ 4, 2020
22 °C

ಸೆಲೆಬ್ರಿಟಿಗಳ ಲಂಚ್ ಹೋಂ

ಕೆ.ಎಂ.ಸತೀಶ್ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

ಸಾಗರ ಖಾದ್ಯಗಳಿಗೆಂದೇ ಮೀಸಲಾದ ವಿಶೇಷ ರೆಸ್ಟೋರೆಂಟ್ ನಗರದಲ್ಲಿ ಇಲ್ಲ ಎಂಬ ಸೀಫುಡ್ ಆಹಾರ ಪ್ರಿಯರ ಕೊರಗನ್ನು ನೀಗಿಸಲೆಂದೇ ಪ್ರಾರಂಭಗೊಂಡಿದೆ `ಮಹೇಶ್ ಲಂಚ್ ಹೋಂ'. ಕಳೆದ 25 ವರ್ಷಗಳಿಂದ ಮುಂಬೈ ಜನರಿಗೆ ಮೀನಿನ ರುಚಿ ಹತ್ತಿಸಿದ್ದ ಈ ರೆಸ್ಟೋರಾ ಈಗ ನಗರಕ್ಕೂ ಕಾಲಿರಿಸಿದೆ.ಈ ರೆಸ್ಟೋರೆಂಟ್‌ನಲ್ಲಿ ರುಚಿಕಟ್ಟಾದ ಸಾಗರ ಖಾದ್ಯಗಳ ವಿಶೇಷ ಭಂಡಾರವೇ ಇದೆ. ಬಾಯಲ್ಲಿ ನೀರೂರಿಸುವ ಮೀನಿನ ಖಾದ್ಯಗಳ ಬಗ್ಗೆ ರೆಸ್ಟೋರೆಂಟ್‌ನ ಮೇಲ್ವಿಚಾರಕ ಸದಾನಂದ ರೈ ಮಾತನಾಡಿದ್ದಾರೆ.ಬಾಲಿವುಡ್‌ನ ಸೆಲೆಬ್ರಿಟಿಗಳೆಲ್ಲಾ `ಮಹೇಶ್ ಲಂಚ್ ಹೋಂ'ನ ಕಾಯಂ ಗಿರಾಕಿಗಳು! `ನಟ ಗೋವಿಂದ ಅವರ ಮನೆಗೆ 365 ದಿನವೂ ಇಲ್ಲಿಂದ ಮೀನಿನ ಖಾದ್ಯಗಳು ಸರಬರಾಜಾಗುತ್ತದೆ. ಗೋವಿಂದ ಅವರಿಗೆ ಫಿಶ್ ಕರಿ ಅಂದರೆ ಪಂಚಪ್ರಾಣ. ಮೀನಿನಂತೆ ಬಳುಕೋ ಶಿಲ್ಪಾ ಶೆಟ್ಟಿ ಅವರು ಏಡಿ ಮಾಂಸ ಹಾಗೂ ಏಡಿಯಿಂದ ತಯಾರಾದ ಖಾದ್ಯಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆಕೆ ಎದುರಲ್ಲಿ ಏಡಿ ಖಾದ್ಯಗಳಿದ್ದರೆ ತಮ್ಮ ಡಯೆಟ್ ಎಲ್ಲಾ ಮರೆತುಹೋಗುತ್ತದೆ. ಇನ್ನು ಅಜಯ್ ದೇವಗನ್‌ಗೆ ರೋಸ್ಟೆಡ್ ಪಾಂಪ್ಲೆಟ್ ಮೋಹ. ಸೈಫ್ ಅಲಿಖಾನ್, ಸಲ್ಮಾನ್ ಖಾನ್ ಎಲ್ಲರೂ ನಮ್ಮ ಹೋಟೆಲ್‌ನ ಗಿರಾಕಿಗಳು...' ಸದಾನಂದ ರೈ ತಮ್ಮ ರೆಸ್ಟೋರಾ ಖ್ಯಾತಿಯನ್ನು ಹೀಗೆ ಒಂದೇ ಉಸಿರಿನಲ್ಲಿ ಬಣ್ಣಿಸುತ್ತಿದ್ದರೆ ಮನಸ್ಸಿನಲ್ಲಿ ಪ್ರಶ್ನೆ ಮೂಡಿತ್ತು.ನಗರದಲ್ಲಿ ಈ ರೆಸ್ಟೋರೆಂಟ್ ಶುರುವಾಗಿ ಒಂದು ವಾರ ಕಳೆದಿದೆ ಅಷ್ಟೇ. ಇಷ್ಟೆಲ್ಲಾ ಸೆಲೆಬ್ರಿಟಿಗಳು ಹೇಗೆ ನಿಮ್ಮ ಗಿರಾಕಿಗಳಾದರು ಎಂಬ ಪ್ರಶ್ನೆಯನ್ನು ಇಟ್ಟಾಗ ಅವರು ಉತ್ತರಿಸಿದ್ದು ಹೀಗೆ; `ಇದುವರೆಗೂ ನಾನು ಹೇಳಿದ್ದು ಬಾಂಬೆಯಲ್ಲಿರುವ ನಮ್ಮ ಔಟ್‌ಲೆಟ್ ಬಗ್ಗೆ. ಜುಹೂವಿನಲ್ಲಿರುವ ಬಿಗ್‌ಬಿ ಅಮಿತಾಬ್ ಬಂಗಲೆ ಎದುರಿನಲ್ಲಿಯೇ ನಮ್ಮ ರೆಸ್ಟೋರಾ ಇದೆ. ಬಾಂಬೆಯಲ್ಲಿ ನಮ್ಮ ರುಚಿಗೆ ಮನಸೋಲದವರೇ ಇಲ್ಲ. ಶ್ರೀಲಂಕಾ ಕ್ರಿಕೆಟ್ ತಂಡ ನಮ್ಮ ರೆಸ್ಟೋರೆಂಟ್‌ಗೆ ಬಂದ್ರೆ ಬರೋಬ್ಬರಿ ಇಪ್ಪತ್ತು ಕಿಲೋ ಮೀನಿನ ಖಾದ್ಯಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಾರೆ. ಇನ್ನು ದೆಹಲಿಯಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ಪ್ರತಿ ತಿಂಗಳು ನಮ್ಮ ರೆಸ್ಟೋರಾದ ಮೀನಿನ ಖಾದ್ಯಗಳು ಸರಬರಾಜಾಗುತ್ತವೆ' ಎನ್ನುತ್ತಾ ಗೊಂದಲ ನಿವಾರಿಸಿದರು ರೈ.ಅಷ್ಟರಲ್ಲಿ ವೇಟರ್ ಹಬೆಯಾಡುವ ಸೂಪ್ ತಂದು ಟೇಬಲ್ ಮೇಲಿಟ್ಟರು. ಆಗ ಸದಾನಂದ ಸೂಪ್‌ನ ವೈಶಿಷ್ಟ್ಯ ವಿವರಿಸತೊಡಗಿದರು. `ಇದು ನಮ್ಮ ರೆಸ್ಟೋರೆಂಟ್‌ನ ಸಿಗ್ನೇಚರ್ ಸೂಪ್. ಹೆಸರು ಸೀ ಫುಡ್ ಕಾಂಬಿನೇಷನ್ ಸೂಪ್. ಈ ಸೂಪ್ ಮೀನು, ಏಡಿ, ಸೀಗಡಿಯ ಸಣ್ಣ ಸಣ್ಣ ತುಣುಕುಗಳ ಮಿಶ್ರಣ ಹೊಂದಿದ್ದು, ರುಚಿ ಹೆಚ್ಚಿಸಲು ಸೂಪ್‌ಗೆ ಶುಂಠಿ, ಟಮೊಟೊ, ಮೆಣಸು ಹಾಗೂ ಹಸಿವು ಕೆರಳಿಸಲು ನೆರವಾಗುವಂತೆ ಸ್ವಲ್ಪ ನಿಂಬೆ ಸ್ವಾದವನ್ನು ಸೇರಿಸಲಾಗುತ್ತದೆ' ಎನ್ನುತ್ತಾ ಸೂಪ್ ಸವಿಯಲು ಹೇಳಿದರು. ಸೀಗಡಿ, ಮೀನು ಹಾಗೂ ಏಡಿ ಮಾಂಸದ ಸಣ್ಣ ತುಣುಕುಗಳಿದ್ದ ಸೂಪ್‌ನ ರುಚಿ ಅದ್ಭುತವಾಗಿತ್ತು.ಮುಖ್ಯ ಮೆನುವಿನಲ್ಲಿ ಫಿಶ್ ಕರಿ, ಕ್ರಾಬ್ಸ್ ಸುಕ್ಕಾ, ಪ್ರಾನ್ಸ್ ಗಸ್ಸಿ, ಪಾಂಫ್ರೆಟ್ ಕರಿ , ಕ್ರ್ಯಾಬ್ ಇನ್ ಬಟರ್ ಪೆಪ್ಪರ್ ಗಾರ್ಲಿಕ್ ಇಲ್ಲಿನ ಸಿಗ್ನೇಚರ್ ಡಿಶ್‌ಗಳಂತೆ. ಇವುಗಳ ರುಚಿ ವಿವರಿಸುವ ವೇಳೆಗೆ ವೈಟರ್ ಮತ್ತೊಂದು ತಟ್ಟೆಯಲ್ಲಿ ಗರಿ ಗರಿಯಾದ ಬಾಂಬೆ ಡಕ್ ತಂದಿಟ್ಟರು. ಹೆಸರು ಕೇಳಿ ಬಾತುಕೋಳಿ ಮಾಂಸ ಅಂದುಕೊಂಡು ಬಾಯಿಗಿಟ್ಟರೆ ಅದು ಮೀನಿನ ಖಾದ್ಯ. ಆಗ ಪೈ ಮತ್ತೆ ಮಾತಿಗೆ ಶುರುವಿಟ್ಟುಕೊಂಡರು. `ಹೆಸರು ಕೇಳಿ ಇದು ಬಾತುಕೋಳಿ ಮಾಂಸ ಅಂದುಕೊಳ್ಳಬೇಡಿ. ಆ ಮೀನಿನ ಹೆಸರೇ ಬಾಂಬೆ ಡಕ್ ಅಂತ. ಇದು ಬಾಂಬೆಯಲ್ಲಿ ಮಾತ್ರ ಸಿಗುತ್ತದೆ. ಈ ಖಾದ್ಯ ನಮ್ಮ ರೆಸ್ಟೋರಾದ ಸಿಗ್ನೇಚರ್ ಡಿಶ್.ಬಾಂಬೆ ಡಕ್ ಮೀನನ್ನು ಎಲೆ ಆಕಾರದಲ್ಲಿ ತೆಳುವಾಗಿ ಕತ್ತರಿಸಿ ಮೊದಲು ಅದನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ನಂತರ ಅದಕ್ಕೆ ಮಸಾಲೆ ಮಿಶ್ರಣ ಮಾಡಿದ ಪೇಸ್ಟ್ ಹಚ್ಚಿ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿಯಲಾಗುತ್ತದೆ. ಆನಂತರ ಮೀನಿನ ಮೇಲ್ಮೈಗೆ ರವೆಯನ್ನು ಲೇಪಿಸಲಾಗುತ್ತದೆ' ಎಂದು ಬಾಂಬೆ ಡಕ್ ಮಾಡುವ ವಿಧಾನ ವಿವರಿಸಿದರು.ಅಷ್ಟರಲ್ಲಿ ಮಹೇಶ್ ಲಂಚ್ ಹೋಂನ ವಿಶೇಷ ತಿನಿಸು `ಮಹೇಶ್ ಶೆಫ್ಸ್ ಸ್ಪೆಶಲ್ ಮಟನ್ ಕರಿ' ಜತೆಗೆ ಅಪ್ಪಂ ಹಾಗೂ ನೀರು ದೋಸೆ ಬಂತು. ರುಚಿ ಸವಿಯಲು ಅವಕಾಶ ಮಾಡಿಕೊಟ್ಟ ಸದಾನಂದ ಅವರು ಆನಂತರ ಒಂದರ ಹಿಂದೆ ಒಂದರಂತೆ ಸ್ಟಫ್ಡ್ ಪಾಂಫ್ರಿಟ್, ಪ್ರಾನ್ಸ್ ಗಸ್ಸಿಯ ರುಚಿಯನ್ನು ನೋಡಲು ತಿಳಿಸಿದರು. ಮೀನಿನ ಖಾದ್ಯಗಳ ರುಚಿಯ ಜತೆಗೆ ಕೊನೆಯಲ್ಲಿ ಟೆಂಡರ್ ಕೋಕನೆಟ್ ಪಾಯಸಂ ಸವಿ ಉಣಿಸಿದರು. ಊಟದ ಕೊನೆಯಲ್ಲಿ ಜೀರ್ಣಿಸಿಕೊಳ್ಳಲು ನೆರವಾಗುವ ವಿವಿಧ ಬಗೆಯ ಹಣ್ಣು ಹಾಗೂ ಮಿಂಟ್ ಸ್ವಾದದ ಐಸ್ ಟೀ ಕೊಟ್ಟರು. ಐಸ್ ಟೀ ಗುಟುಕರಿಸುತ್ತಾ ತಿನ್ನುವ ಕೆಲಸಕ್ಕೆ ವಿರಾಮ ಇಡಲಾಯಿತು.ಮೀನಿನ ಖಾದ್ಯಗಳನ್ನು ಇಷ್ಟಪಡುವ ನಟಿ ರಮ್ಯಾ ಕೂಡ ಈ ರೆಸ್ಟೋರೆಂಟ್‌ನ ರುಚಿಗೆ ಮನಸೋತಿದ್ದಾರಂತೆ. ನಿಮಗೂ ಸಾಗರ ಖಾದ್ಯಗಳನ್ನು ಸವಿಯುವ ಆಸೆಯಿದ್ದರೆ ಇಲ್ಲಿಗೆ ಭೇಟಿ ನೀಡಬಹುದು. ಸ್ಥಳ: ಮಹೇಶ್ ಲಂಚ್ ಹೋಂ, ಸಿಯರ್ಸ್‌ ಪ್ಲಾಜಾ, ಗ್ರೌಂಡ್ ಫ್ಲೋರ್, ರಿಚ್ಮಂಡ್ ಸರ್ಕಲ್. ಟೇಬಲ್ ಕಾಯ್ದಿರಿಸಲು: 080 4131 1101, 02, 03.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.