ಬುಧವಾರ, ಮೇ 12, 2021
17 °C

ಸೇನೆಗೆ ಅಗತ್ಯವಾದ ಸಾಧನ-ಸಲಕರಣೆಗಳ ಖರೀದಿ:ಆಂಟನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೇನೆಗೆ ಅಗತ್ಯವಾದ ಶಸ್ತ್ರಾಸ್ತ್ರ, ವಾಹನ ಸೇರಿದಂತೆ ಸಾಧನ- ಸಲಕರಣೆಗಳನ್ನು ಸಂಗ್ರಹಿಸಲು ನಡೆಸುವ ಖರೀದಿ ಪ್ರಕ್ರಿಯೆಯಲ್ಲಿ ಹೆಚ್ಚಿನ ದಕ್ಷತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿರುವ ರಕ್ಷಣಾ ಸಚಿವ ಎ.ಕೆ. ಆಂಟನಿ, ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ ಅದಕ್ಕೆ ಸಂಬಂಧಿಸಿದವರೇ ಹೊಣೆಗಾರರು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.ಟಟ್ರಾ ಟ್ರಕ್ ಖರೀದಿ ಅವ್ಯವಹಾರದ ದೂರು ಮತ್ತು ಸೇನೆಯಲ್ಲಿ ಅತ್ಯಾಧುನಿಕ ಸಾಧನ- ಸಲಕರಣೆಗಳ ಸಂಗ್ರಹಣೆಯ ಕೊರತೆ ಇದೆ ಎಂದು ಭೂ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಅವರು ಸರ್ಕಾರಕ್ಕೆ ಬರೆದ ಗೋಪ್ಯ ಪತ್ರದ ಹಿನ್ನೆಲೆಯಲ್ಲಿ ಆಂಟನಿ ಈ ನಿರ್ದೇಶನ ನೀಡಿದ್ದಾರೆ.ಜನರಲ್ ವಿ.ಕೆ. ಸಿಂಗ್, ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಅವರು ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.  ಅಗತ್ಯ ಸಾಧನ- ಸಲಕರಣೆಗಳು, ಶಸ್ತ್ರಾಸ್ತ್ರಗಳನ್ನು ತ್ವರಿತ ಗತಿಯಲ್ಲಿ ಸಂಗ್ರಹಿಸಲು ಅನುಕೂಲವಾಗುವಂತೆ ಸೇನೆಗೆ ಹೆಚ್ಚಿನ ಮಟ್ಟದಲ್ಲಿ ಹಣಕಾಸು ನಿರ್ವಹಣೆ ಅಧಿಕಾರ ನೀಡಬೇಕು ಎಂಬ ಪ್ರಸ್ತಾವಕ್ಕೆ ಆಂಟನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.`ಸಾಧನ- ಸಲಕರಣೆಗಳ ಖರೀದಿ ಪ್ರಕ್ರಿಯೆಯು ದಕ್ಷತೆಯಿಂದ ಕೂಡಿರಬೇಕು. ಇದರಲ್ಲಿ ಲೋಪದೋಷಗಳಾದರೂ ಅದಕ್ಕೆ ಸಂಬಂಧಿಸಿದವರೇ ಹೊಣೆ ಹೊರುವಂತಹ ಕ್ರಮಗಳನ್ನು ಅನುಸರಿಸುವಂತೆ ರಕ್ಷಣಾ ಸಚಿವರು ಸೂಚಿಸಿದ್ದಾರೆ~ ಎಂದು ಅಧಿಕಾರಿಗಳು ಹೇಳಿದ್ದಾರೆ.`ಸಾಧನ- ಸಲಕರಣೆಗಳ ತಾಂತ್ರಿಕ ಗುಣಮಟ್ಟ ಪರಿಶೀಲನೆ ಮತ್ತು ಪ್ರಯೋಗಾರ್ಥ ಪರೀಕ್ಷೆಗಳಿಗೆ ತೆಗೆದುಕೊಳ್ಳುವ ಕಾಲಾವಕಾಶದ ಬಗ್ಗೆಯೂ ಪರಿಶೀಲನೆ ನಡೆಸುವಂತೆ ಅವರು  ನಿರ್ದೇಶನ ನೀಡಿದ್ದಾರೆ~ ಎಂದಿದ್ದಾರೆ.ಒಂದು ತಾಸು ನಡೆದ ಈ ಸಭೆಯು ಕಳೆದ ಸೆಪ್ಟೆಂಬರ್ ಮತ್ತು ಜನವರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಮುಂದುವರಿದ ಭಾಗ. ಇಂದಿನ ನಿರ್ಧಾರಗಳ ಮೇಲೆ ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಭೆಯಲ್ಲಿ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ಸೇರಿದಂತೆ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಟಟ್ರಾ ಟ್ರಕ್ ಖರೀದಿ ವ್ಯವಹಾರದಲ್ಲಿ ಲಂಚ ಆಮಿಷವೊಡ್ಡಿದ ಆಪಾದನೆ ಮತ್ತು ಸರ್ಕಾರಕ್ಕೆ ಬರೆದ ಗೋಪ್ಯ ಪತ್ರ ಸೋರಿಕೆ ಪ್ರಕರಣಗಳ ನಂತರ ಜನರಲ್ ವಿ.ಕೆ. ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಮೊದಲ ಬಾರಿಗೆ ಈ ಸಭೆಯಲ್ಲಿ ಮುಖಾಮುಖಿಯಾದರು.ಮುಖ್ಯಾಂಶಗಳು* ಖರೀದಿ ಪ್ರಕ್ರಿಯೆಯಲ್ಲಿ  ವಿಳಂಬವಾದರೆ ಸಂಬಂಧಿಸಿದವರೇ ಹೊಣೆಗಾರರು* ಸೇನೆಗೆ ಹೆಚ್ಚಿನ ಮಟ್ಟದ ಹಣಕಾಸು ನಿರ್ವಹಣೆ ಅಧಿಕಾರ: ಪ್ರಸ್ತಾವಕ್ಕೆ ಸಕಾರಾತ್ಮಕ ಸ್ಪಂದನೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.